Varsha Bollamma First Look: ದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ ಅವರು ಬಹುನಿರೀಕ್ಷಿತ 'ಮಹಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ ಅವರು ಬಹುನಿರೀಕ್ಷಿತ 'ಮಹಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಆಕಾಶ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ನಿರ್ದೇಶಕ ಪಿ.ಸಿ. ಶೇಖರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವರಾದ ವರ್ಷ ಬೊಳ್ಳಮ್ಮ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ. ಇದೀಗ ತಮ್ಮ ತಾಯ್ನಾಡಿನ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ವಿಶೇಷವಾಗಿದೆ.

ಚಿತ್ರದಲ್ಲಿ ವರ್ಷ ಬೊಳ್ಳಮ್ಮ 'ದುರ್ಗಾ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಫಸ್ಟ್ ಲುಕ್ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ. ಶೇಖರ್, 'ದುರ್ಗಾ' ಕೇವಲ ನಾಯಕಿಯ ಪಾತ್ರವಲ್ಲ, ಇಂದಿನ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ಸಾಮರ್ಥ್ಯ ಮತ್ತು ನಾಯಕತ್ವವನ್ನು ಪ್ರತಿಬಿಂಬಿಸುವ ಶಕ್ತಿಯುತ ವ್ಯಕ್ತಿತ್ವ ಎಂದು ವಿವರಿಸಿದರು.

"ದುರ್ಗಾ ವಿದ್ಯಾವಂತೆ, ಆತ್ಮವಿಶ್ವಾಸಿ ಹಾಗೂ ಪ್ರಗತಿಪರ ರೈತೆ. ಆಧುನಿಕ ತಂತ್ರಜ್ಞಾನವನ್ನು ಪ್ರಕೃತಿಯೊಂದಿಗೆ ಸಮತೋಲನಗೊಳಿಸಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಹೊಸ ತಲೆಮಾರಿನ ಮಹಿಳೆಯ ಪ್ರತೀಕ ಈ ಪಾತ್ರ. ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಯುವಜನರನ್ನು ಕೃಷಿಯತ್ತ ಸೆಳೆಯುವ ಮಹತ್ವದ ಸಂದೇಶವನ್ನು ಈ ಪಾತ್ರ ಹೊತ್ತು ತರುತ್ತದೆ," ಎಂದು ಅವರು ಹೇಳಿದರು.

ಅವರು ಮುಂದುವರಿದು, ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಈ ಪಾತ್ರವನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕೃಷಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದರೂ ಅವರಿಗೆ ಸಲ್ಲಬೇಕಾದ ಗೌರವ ಇನ್ನೂ ಸಂಪೂರ್ಣವಾಗಿ ದೊರಕಿಲ್ಲ. ಆ ಕೊರತೆಯನ್ನು ನೆನಪಿಸುವ ಜೊತೆಗೆ ವಿದ್ಯಾವಂತ ಯುವತಿಯರು ಕೃಷಿಯಲ್ಲೂ ನಾಯಕತ್ವ ವಹಿಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನವನ್ನು 'ದುರ್ಗಾ' ಪಾತ್ರ ಮಾಡಲಿದೆ ಎಂದು ಶೇಖರ್ ಅಭಿಪ್ರಾಯಪಟ್ಟರು.

ಕನ್ನಡ ಚಿತ್ರರಂಗ ಪ್ರವೇಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ವರ್ಷ ಬೊಳ್ಳಮ್ಮ, "ಇಲ್ಲಿಯವರೆಗೆ ನನಗೆ ಹೆಚ್ಚಾಗಿ ಪರಭಾಷೆಯ ಸಿನಿಮಾಗಳಲ್ಲೇ ಅವಕಾಶಗಳು ಸಿಕ್ಕಿದ್ದವು. ಈಗ ನನ್ನ ತಾಯ್ನಾಡಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ತುಂಬಾ ಹೆಮ್ಮೆಯ ಕ್ಷಣ. ಅದರಲ್ಲೂ ಶಿವರಾಜಕುಮಾರ್ ಹಾಗೂ ವಿಜಯ್ ರಾಘವೇಂದ್ರ ಅವರಂತಹ ಅದ್ಭುತ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ನನಗೆ ದೊಡ್ಡ ಸಂತೋಷ. 'ಮಹಾನ್' ಚಿತ್ರದಲ್ಲಿನ ನನ್ನ ಪಾತ್ರ ನನ್ನ ವೃತ್ತಿಜೀವನದ ವಿಶೇಷ ಪಾತ್ರಗಳಲ್ಲಿ ಒಂದಾಗಲಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಅವಕಾಶ ನೀಡಿದ ನಿರ್ದೇಶಕ ಪಿ.ಸಿ. ಶೇಖರ್ ಹಾಗೂ ನಿರ್ಮಾಣ ಸಂಸ್ಥೆ ಆಕಾಶ ಪಿಕ್ಚರ್ಸ್‌ಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ," ಎಂದು ಹೇಳಿದರು.

ಒಂದೇ ವೇದಿಕೆಯಲ್ಲಿ ಸೇರಿಸಿದ್ದೇವೆ

ಚಿತ್ರದ ನಿರ್ಮಾಪಕ ಪ್ರಕಾಶ್ ಎಸ್. ಬೂದೂರು ಮಾತನಾಡಿ, 'ಮಹಾನ್' ಕೇವಲ ಸಿನಿಮಾ ಅಲ್ಲ, ದೇಶದ ಅನ್ನದಾತರಿಗೆ ಸಲ್ಲಿಸುವ ಗೌರವದ ನಮನ ಎಂದು ಹೇಳಿದರು. "ಸಿನಿಮಾ ಸಮಾಜವನ್ನು ಪ್ರೇರೇಪಿಸುವ ಪ್ರಬಲ ಮಾಧ್ಯಮ. ರೈತರ ಪರಿಶ್ರಮ, ಹೋರಾಟ ಮತ್ತು ಬದುಕನ್ನು ಪ್ರಾಮಾಣಿಕವಾಗಿ ಪ್ರೇಕ್ಷಕರ ಮುಂದೆ ತರುವ ಉದ್ದೇಶದಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ. ಅತ್ಯುತ್ತಮ ಕಥೆಗೆ ತಕ್ಕಂತೆ ಕನ್ನಡ ಚಿತ್ರರಂಗದ ಅನುಭವಿ ಕಲಾವಿದರು ಹಾಗೂ ಪ್ರತಿಭಾವಂತ ತಾಂತ್ರಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದೇವೆ," ಎಂದು ಅವರು ತಿಳಿಸಿದರು.

'ಮಹಾನ್' ಚಿತ್ರದಲ್ಲಿ ಶಿವರಾಜಕುಮಾರ್, ವಿಜಯ್ ರಾಘವೇಂದ್ರ, ರಾಧಿಕಾ ಚೇತನ್, ಕಿರಣ್ ಶ್ರೀನಿವಾಸ್, ದೇವರಾಜ್, ರಂಗಾಯಣ ರಘು, ಮಿತ್ರ, ಶರತ್ ಲೋಹಿತಾಶ್ವ, ಅವಿನಾಶ್, ನಮ್ರತಾ ಗೌಡ ಮತ್ತು ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದು, ವರ್ಷ ಬೊಳ್ಳಮ್ಮ ಅವರ ಕನ್ನಡ ಪ್ರವೇಶ ಚಿತ್ರವಾಗಿರುವುದರಿಂದ ಈ ಸಿನಿಮಾದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.