ಬಾಲಿವುಡ್​ ನಟ ಸಂಜಯ್​ ದತ್​ ದಕ್ಷಿಣ ಇಂಡಸ್ಟ್ರಿಯಲ್ಲಿ ಬೇರೂರಲು ಸಿದ್ಧತೆ ನಡೆಸಿದ್ದು, ಕೆಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್​ ವೇಳೆ ಅವಘಡ ಸಂಭವಿಸಿದೆ.  

ಸದ್ಯ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನ್ನಡದ ಪ್ಯಾನ್-ಇಂಡಿಯಾ (Pan India) ಸಿನಿಮಾ 'ಕೆಡಿ' ಚಿತ್ರೀಕರಣ ನಡೆಸುತ್ತಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಸಂಜಯ್ ದತ್ ಅವರು ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ನಡೆದಿದೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಮತ್ತೊಂದು ಸಿನಿಮಾ ಕೆಡಿಯಲ್ಲಿ ಸಂಜಯ್ ದತ್ (Sanjay Datt) ನಟಿಸುತ್ತಿದ್ದು, ಸದ್ಯ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ.ಬಾಂಬ್ ಸ್ಫೋಟದ ಸರಣಿಯ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ಬಾಂಬ್ ಬ್ಲಾಸ್ಟಿಂಗ್ ಸಮಯದಲ್ಲಿ ಸಂಜಯ್​ ಅವರಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಚಿತ್ರೀಕರಣ ವೇಳೆ ಈ ಅವಘಡ ನಡೆದಿದೆ. ಆಕ್ಷನ್ ಸನ್ನಿವೇಶಕ್ಕಾಗಿ ಸಣ್ಣ ಮಟ್ಟದ ಬಾಂಬ್ ಬ್ಲಾಸ್ಟ್ ನಡೆಸಲಾಗುತ್ತಿತ್ತು. ಈ ವೇಳೆ ಗ್ಲಾಸ್ ಪೀಸ್ ಸಂಜಯ್ ದತ್ ಕಣ್ಣಿನ ಕೆಳಭಾಗದಲ್ಲಿ ಬಿದ್ದು ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ವರದಿಯಾಗಿದೆ. ಗಾಯವಾದ ಕಾರಣ ಕೆಡಿ ಚಿತ್ರತಂಡ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಫೈಟ್ ಮಾಸ್ಟರ್ ಡಾ. ರವಿವರ್ಮ ಚಿತ್ರಕ್ಕೆ ಫೈಟ್ ಕಂಪೋಸ್ (Compose) ಮಾಡುತ್ತಿದ್ದರು. ಘಟನೆ ಈಗ ಬೆಳಕಿಗೆ ಬಂದಿದ್ದು, ಘಟನೆಯ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗಳಿಂದ ಸಂಜಯ್ ದತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರರಂಗದ ಮೂಲಗಳು ವಿವರಿಸಿವೆ. ಕೆಜಿಎಫ್ ಅಧ್ಯಾಯ 1 ಮತ್ತು 2ರ ನಂತರ, ಆ್ಯಕ್ಷನ್ ಹೀರೋ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

'ಕೆಡಿ' ಚಿತ್ರ ತಂಡದ ಜತೆ ಸಂಜಯ್ ದತ್ ಪಾರ್ಟಿ: ಧ್ರುವ ಸರ್ಜಾ ಗೈರಾಗಿದ್ದು ಯಾಕೆ?

ಮಾಹಿತಿ ಪ್ರಕಾರ ಸಂಜಯ್ ದತ್ ಅವರಿಗೆ ಗಂಭೀರ ಗಾಯವಾಗಿಲ್ಲ. ಸದ್ಯ ಸಂಜಯ್ ದತ್ ಮುಂಬೈಗೆ ವಾಪಸ್ ತೆರಳಿದ್ದಾಗಿ ತಿಳಿದುಬಂದಿದೆ. ಮಂಗಳವಾರ ಸಾಯಂಕಾಲ ಘಟನೆ ನಡೆದಿದ್ದು ಫ್ಯಾನ್ಸ್ ಆತಂಕಗೊಂಡಿದ್ದಾರೆ. ಇಂದು ಎಚ್ ಎಮ್ ಟಿಯಲ್ಲಿ ಕೇಡಿ ಚಿತ್ರತಂಡ ಮತ್ತೆ ಶೂಟಿಂಗ್ ಮುಂದುವರೆಸಿದೆ. ಜೋಗಿ ಪ್ರೇಮ್‌ ನಿರ್ದೇಶನದ 'KD' ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗ್ತಿದ್ದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಪ್ರೇಮ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ರಿಲೀಸ್ (Teaser)ಆಗಿ ಧೂಳೆಬ್ಬಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರ್ತಿದೆ.

‘ಕೆಜಿಎಫ್ ಚಾಪ್ಟರ್ 2’ (KGF Chapter 2) ಭರ್ಜರಿ ಯಶಸ್ಸು ಕಂಡಿರುವುದು ಎಲ್ಲರಿಗೂ ತಿಳಿದೇ ಇರುವ ವಿಷಯ. ವಿಶ್ವಾದ್ಯಂತ ಇದು ಅಪಾರ ಮೆಚ್ಚುಗೆ ಗಳಿಸಿರುವುದು ಮಾತ್ರವಲ್ಲದೇ, ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರ ಭರ್ಜರಿ ಗೆಲುವಿಗೂ ಕಾರಣವಾಗಿದೆ. ಹಲವು ವರ್ಷಗಳಿಂದ ಯಶಸ್ಸನ್ನು ಕಾಣದಿದ್ದ ಸಂಜಯ್​ ದತ್​ ಅವರಿಗೆ ಈ ಚಿತ್ರದಲ್ಲಿನ ಅಧೀರ ಪಾತ್ರ ಬಹಳ ಪ್ರಸಿದ್ಧಿ ತಂದುಕೊಟ್ಟಿತ್ತು. ಇದರಿಂದ ಖುದ್ದು ಸಂಜಯ್​ ದತ್​ ಅವರು ಫುಲ್​ ಖುಷ್​ ಆಗಿದ್ದಾರೆ. ‘ಈ ಚಿತ್ರ ನನ್ನ ಸಾಮರ್ಥವನ್ನು ನನಗೆ ಮತ್ತೆ ನೆನಪಿಸಿದೆ. ವೃತ್ತಿಜೀವನದಲ್ಲಿ ಕೆಲವೊಂದು ಚಿತ್ರಗಳು ಬೇರೆಲ್ಲಾ ಚಿತ್ರಗಳಿಗಿಂತ ವಿಶೇಷವಾಗಿರುತ್ತವೆ. ಪ್ರತಿ ಬಾರಿ ನನ್ನನ್ನು ನಾನು ಕಂಫರ್ಟ್ ಜೋನ್​ನಿಂದ ಹೊರತರುವ ಚಿತ್ರಗಳನ್ನು ಹುಡುಕುತ್ತಿರುತ್ತೇನೆ. ಕೆಜಿಎಫ್ 2 ಅಂತಹ ಚಿತ್ರವಾಗಿತ್ತು’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ‘ಜೀವನದಲ್ಲಿ ಉತ್ತಮವಾಗಿದ್ದು ಮಾಡಲು ಇನ್ನೂ ಇದೆ ಎನ್ನುವುದನ್ನು ಚಲನಚಿತ್ರವು ನನಗೆ ನೆನಪಿಸುತ್ತದೆ’ ಎಂದು ಬರೆದುಕೊಂಡಿದ್ದರು. 

ಕೊನೆಗೂ ದಳಪತಿ ವಿಜಯ್ 'ಲಿಯೋ' ಸೆಟ್ ಸೇರಿದ ಸಂಜಯ್ ದತ್; ಫೋಟೋ ವೈರಲ್

2022 ರಲ್ಲಿ ನಾಲ್ಕು ಚಿತ್ರಗಳನ್ನು ಸಂಜಯ್​ ದತ್​ ಮಾಡಿದ್ದರು. ಅವುಗಳಲ್ಲಿ ಮೂರು ಬಾಲಿವುಡ್​ ಚಿತ್ರಗಳು. ಅವುಗಳೆಂದರೆ 'ತುಳಸಿದಾಸ್ ಜೂನಿಯರ್', 'ಸಾಮ್ರಾಟ್ ಪೃಥ್ವಿರಾಜ್' (Samrat Prathwiraj) ಮತ್ತು 'ಶಂಶೇರಾ' ಬಾಲಿವುಡ್ (bollywood) ಚಲನಚಿತ್ರಗಳು ಮತ್ತು ಎಲ್ಲಾ ಮೂರು ಚಿತ್ರಗಳು ಫ್ಲಾಪ್ ಎಂದು ಸಾಬೀತಾಯಿತು. ಆದರೆ ಕನ್ನಡ ಚಿತ್ರ 'ಕೆಜಿಎಫ್ ಚಾಪ್ಟರ್ 2' ಬ್ಲಾಕ್ಬಸ್ಟರ್ ಆಗಿತ್ತು, ಸುಮಾರು 1255 ಕೋಟಿ ರೂ ಸಂಗ್ರಹಿಸಿತ್ತು. ಇದೀಗ ಕೆಡಿಗೆ ರೆಡಿಯಾಗಿದ್ದಾರೆ.