ಲಾಕ್‌ಡೌನ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವಗಳನ್ನು ಕಟ್ಟಿಕೊಡುತ್ತಿದೆ. ನಮ್ಮ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮನೆಯಲ್ಲಿ ಕುಳಿತು ತರಹೇವಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾರ್ಯಾರು ಏನೇನು ಮಾಡುತ್ತಿದ್ದಾರೆ ನೋಡಿ!

1. ತಂಡವಾಗಿ ಕೆಲಸ ಮಾಡಲು ಕಲಿತೆ
ನೀತೂ ಶೆಟ್ಟಿ

ನನಗೆ ವೈಯಕ್ತಿಕವಾಗಿ ಕಲಿಯುವುದಕ್ಕೆ ಸಮಯ ಸಿಗಲಿಲ್ಲ. ಕೋವಿಡ್ -19 ವಾರಿಯರ್ ತಂಡ ಮಾಡಿಕೊಂಡು ಕಷ್ಟದಲ್ಲಿರುವವರಿಗೆ ನೆರವಾಗುವ ಕೆಲಸಕ್ಕೆ ಮುಂದಾಗಿದ್ವಿ. ಆದರೆ, ನಮ್ಮದಲ್ಲದ ಕ್ಷೇತ್ರದಲ್ಲಿ ಒಂದು ತಂಡವಾಗಿ ಕೆಲಸ ಮಾಡುವುದು ಹೇಗೆ, ಹಾಗೆ ಕೆಲಸ ಮಾಡಿದರೆ ಅದರಿಂದ ಎಂಥ ಪ್ರತಿಲ ಸಿಗುತ್ತದೆ ಎಂಬುದನ್ನು ನಾನು ಕಲಿತೆ. ಯಾಕೆಂದರೆ ನಾವು ಸ್ಲಂ ಪ್ರದೇಶಗಳಿಗೆ ಹೋದಾಗ ಅಲ್ಲಿನ ಜನ ನಮ್ಮನ್ನು ಪ್ರೀತಿಯಿಂದ ಕಂಡಿದ್ದನ್ನು ನೋಡಿದೆ. ಹೀಗೆ ವಿಪತ್ತುಗಳನ್ನು ಬಂದರೆ ಜನ ಹೇಗೆ ಕಷ್ಟಕ್ಕೆ ಈಡಾಗುತ್ತಾರೆ ಎಂಬುದನ್ನು ಹತ್ತಿರದಿಂದ ನೋಡುವಂತಾಯಿತು.

2. ಆನ್‌ಲೈನ್‌ನಲ್ಲಿ ಕಥಕ್ ಕಲಿಯುತ್ತಿದ್ದೇನೆ
ಅನುಷಾ ರಂಗನಾಥ್

ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತೆ. ಜತೆಗೆ ಸಿನಿಮಾ ಎಂದುಕೊಂಡಿದ್ದವಳಿಗೆ ಬೇರೆಯ ಚಟುವಟಿಕೆಗಳಲ್ಲೂ ತೊಡಗುವಂತೆ ಮಾಡಿತು. ವಿಶೇಷವಾಗಿ ನಟನೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡೆ. ಆರೋಗ್ಯದ ಕಾಳಜಿ ಬಗ್ಗೆ ಹೆಚ್ಚಿನ ಗಮನ ಕೊಡುವುದು ಹೇಗೆಂದು ಕಲಿತೆ. ಆನ್‌ಲೈನ್‌ನಲ್ಲಿ ಕಥಕ್ ನೃತ್ಯ ತರಗತಿಗಳನ್ನು ಅಟೆಂಡ್ ಮಾಡುತ್ತಿದ್ದೇನೆ. ನಮ್ಮ ಎಲ್ಲಾ ಬ್ಯುಸಿ ಕೆಲಸಗಳ ನಡುವೆಯೂ ಅತ್ಯುತ್ತಮವಾದ ಜೀವನ ಹೇಗೆ ರೂಪಿಸಿಕೊಳ್ಳಬಹುದು ಎಂಬುದನ್ನು ಈ ಲಾಕ್ ಡೌನ್ ಕಲಿಸಿದೆ.

ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ

3. ರಂಗೋಲಿ ಹಾಕುವ ಖುಷಿ ಸಿಕ್ಕಿದೆ
ಮಯೂರಿ

ಪ್ರತಿಯೊಂದು ಕೆಲಸಕ್ಕೂ ಬೇರೊಬ್ಬರನ್ನು ಅವಲಂಬಿಸದೆ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದನ್ನು ಕಲಿಸಿಕೊಟ್ಟಿದೆ. ಅಂದರೆ ಮನೆ ಜೀವನ ಹೇಗಿರುತ್ತದೆ, ಮನೆ ಕೆಲಸಗಳು ಏನು ಎಂಬುದನ್ನು ತಿಳಿದುಕೊಂಡೆ. ಪ್ರತಿ ದಿನ ಎದ್ದು ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡುತ್ತಿದ್ದೆ. ಆದರೆ, ದೀಪ ಹಚ್ಚುವ ಮೊದಲು ಮನೆ ಮುಂದೆ ನೀರು ಹಾಕಿ ಕ್ಲೀನ್ ಮಾಡಬೇಕು, ರಂಗೋಲಿ ಹಾಕಬೇಕು, ಮನೆ ಗುಡಿಸಬೇಕು ಎನ್ನುವ ತಾಪತ್ರಯ ಇರುತ್ತಿರಲಿಲ್ಲ. ಯಾಕೆಂದರೆ ಆ ಕೆಲಸಗಳನ್ನು ಬೇರೆಯವರು ಮಾಡುತ್ತಿದ್ದರು. ಈಗ ನಾವೇ ಮಾಡಿಕೊಳ್ಳಬೇಕಿದೆ. ಹೀಗಾಗಿ ನಾನು ಮನೆ ಜೀವನ ಹೇಗಿರುತ್ತದೆ ಅಂತ ಕಲಿಯುತ್ತಿದ್ದೇನೆ.

4. ಮಕ್ಕಳ ಜತೆಗೆ ಆಟದಲ್ಲಿ ಮಜವಿದೆ
ಶರಣ್

ಪೋನ್ ನಲ್ಲೇ ಕತೆಗಳನ್ನು ಕೇಳುವುದು, ಸಿನಿಮಾ ನೋಡುವುದೇ ಆಗೋಗಿದೆ. ಅದರ ಜತೆಗೆ ಮಕ್ಕಳ ಜತೆ ಮಕ್ಕಳಾಗಿ ಆಟ ಆಡುವುದು, ಅವರು ಹೇಳಿದಂತೆ ಕುಣಿಯುವುದು ಇದೆಯಲ್ಲ, ಅದು ಯಾರೂ ಕಲಿಸಿಲ್ಲ. ಮಕ್ಕಳು ಮಾತ್ರ ಕಲಿಸಿಕೊಡುತ್ತಾರೆ. ಈ ಲಾಕ್‌ಡೌನ್ ನನಗೆ ಮಕ್ಕಳ ಆಟ- ಪಾಠಗಳನ್ನು ನೇರವಾಗಿ ತೋರಿಸಿ ಕಲಿಸಿ ಕೊಟ್ಟಿತು. ಒಟ್ಟಿಗೆ ಕೂತು ಗೇಮ್ ಆಡುವುದು, ಅವರು ಶಾಲೆಯಲ್ಲಿ ಮಾಡಿದ ಸ್ಪರ್ಧೆಗಳನ್ನು ಮನೆಯಲ್ಲಿ ಮಾಡುತ್ತಾರೆ. ಅದರಲ್ಲಿ ನಾನೂ ಭಾಗವಹಿಸುವುದು. ಇವರು ಏನ್ ಮಾಡುತ್ತಿದ್ದಾರೆ ಅಂತ ನೋಡುವುದು. ಮಕ್ಕಳ ಲೋಕ ಖುಷಿ ಮತ್ತು ಸಂಭ್ರಮ ದಕ್ಕಿಸಿಕೊಳ್ಳುವ ಆಟ-ಪಾಠಗಳನ್ನು ಕಲಿತಿದ್ದೇನೆ.

ಮನೆ ಕೆಲಸ ಮಾಡಿ, ಹೆಂಡತಿಗೆ ಕಾಫಿ ಮಾಡಿಕೊಟ್ಟ ಸೂಪರ್ ಸ್ಟಾರ್ ಗುರುತಿಸಬಲ್ಲೀರಾ?

5. ಹಾಡು ಮತ್ತು ಅಡುಗೆ ಕಲಿಯುತ್ತಿರುವೆ
- ಹಿತಾ ಚಂದ್ರಶೇಖರ್

ಹೊಸ ಹೊಸ ಅಡುಗೆಗಳು ಮತ್ತು ದಿನಾ ಒಂದೊಂದು ಹಾಡು ಹಾಡೋದಕ್ಕೆ ಕಲಿಯುತ್ತಿದ್ದೇನೆ. ಅಡುಗೆಯಲ್ಲಿ ನನ್ನ ಅಪ್ಪನೇ ಮುಖ್ಯ ಗುರು. ನಮ್ಮಪ್ಪ ದಿನಾ ಒಂದೊಂದು ರೀತಿಯ ದೊಸೆ ಮಾಡುತ್ತಿದ್ದಾರೆ. ನಾನು ಅವರಿಂದ ಎರಡು ರೀತಿಯ ಹೊಸ ಬಗೆಯ ದೋಸೆ ಮಾಡುವುದು ಕಲಿತಿರುವೆ. ದಾಲ್ ಕಿಚಡಿ, ರಾಜ್ಮಾ, ಟೊಮೆಟೋ ತಂಬುಳಿ, ಕಡಾಯಿ ಪನ್ನೀರ್ ಹೀಗೆ ವಿವಿ‘ ಬಗೆಯ ರೆಸಿಪಿ ಕಲಿತುಕೊಂಡಿದ್ದೇನೆ. ಮಾಡುತ್ತಿದ್ದೇನೆ ಕೂಡ. ಜೊತೆಗೆ ಮೊನ್ನೆಯಿಂದ ದಿನಕ್ಕೆ ಒಂದೊಂದು ಹಾಡು ಕಲಿತು ಅದನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದೇನೆ. ಇದರಿಂದ ನನಗೆ ಎರಡು ಅನುಕೂಲ. ಒಂದು ಹಾಡುಗಳನ್ನು ಕಲಿತಹಾಗೆ ಆಗುತ್ತೆ, ಇನ್ನೊಂದು ಇವನ್ನೆಲ್ಲಾ ಶೇರ್ ಮಾಡುವುದರಿಂದ ನನಗೆ ಕಾನ್ಫಿಡೆನ್ಸ್ ಬರುತ್ತದೆ. ಹೀಗೆ ನನ್ನ ಹೋಮ್ ಕ್ವಾರಂಟೈನ್ ಟೈಮ್‌ನಲ್ಲಿ ಕಲಿಕೆ ಸಾಗುತ್ತಿದೆ.