Asianet Suvarna News Asianet Suvarna News

ನನಗೆ ಶ್ರುತಿ ಎಂಬ ಹೆಸರು, ಜನಪ್ರೀತಿ ಕೊಟ್ಟ ದ್ವಾರಕೀಶ್ ಅಣ್ಣ: ನಟಿ ಶ್ರುತಿ

ದ್ವಾರಕೀಶ್‌ ಅವರು ಹೇಳಿಕೊಟ್ಟ ನೀತಿಗಳೇ ನನ್ನ ನಿಜ ಜೀವನದಲ್ಲಿ ಕೈಹಿಡಿಯಿತು. ನನಗೆ ಸಾಕಷ್ಟು ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಲೆಜೆಂಡ್‌ ಅವರು. ಕನ್ನಡ ಚಿತ್ರರಂಗದಲ್ಲಿ ಏನೆಲ್ಲ ಪಡೆದುಕೊಳ್ಳಹುದು, ಏನೆಲ್ಲ ಕಳೆದುಕೊಳ್ಳಬಹುದು ಎಂಬುದಕ್ಕೆ ಗ್ರೇಟ್‌ ಉದಾಹರಣೆ ಎಂದರೆ ದ್ವಾರಕೀಶ್‌. ನಾನು ಅವರನ್ನ ದ್ವಾರಕೀಶ್‌ ಅಣ್ಣ ಅಂತಲೇ ಕರೆಯತ್ತಿದ್ದೆ: ನಟಿ ಶ್ರುತಿ

Sandalwood Actress Shruti talks Over Dwarakish grg
Author
First Published Apr 17, 2024, 11:14 AM IST

ಬೆಂಗಳೂರು(ಏ.17): ಶ್ರುತಿ ಚಿತ್ರಕ್ಕಾಗಿ ಅವರು ಹೊಸಬರನ್ನು ಹುಡುಕುತ್ತಿದ್ದರು. ಆಗ ನಾನು ಯಾವ ಚಿತ್ರದಲ್ಲೂ ನಟಿಸಿಲ್ಲವೆಂದು ಸುಳ್ಳು ಹೇಳಿ ಶ್ರುತಿ ಚಿತ್ರಕ್ಕೆ ನಾಯಕಿ ಆದೆ. ಯಾಕೆಂದರೆ ನಾನು ಅಷ್ಟೊತ್ತಿಗೆ ‘ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ನಟಿಸಿದ್ದೆ. ಹೀಗಾಗಿ ಹೊಸ ನಟಿಯಾಗಿ ಪರಿಚಯ ಆಗಬೇಕು ಎನ್ನುವ ಕಾರಣಕ್ಕೆ ಗಿರಿಜಾ ಎಂಬ ನನ್ನ ಹೆಸರನ್ನು ಶ್ರುತಿ ಎಂದು ಬದಲಾಯಿಸಿದರು.

ಅಲ್ಲದೆ ನನ್ನ ಹೆಸರನ್ನು ಬದಲಾಯಿಸುವುದಕ್ಕೆ ಮತ್ತೊಂದು ಕಾರಣವೂ ಇತ್ತು. ‘ಶ್ರುತಿ’ ಎಂಬುದು ಮಹಿಳಾ ಪಾತ್ರದಿಂದಲೇ ಶುರುವಾಗುವ ಸಿನಿಮಾ. ಹೀಗಾಗಿ ಚಿತ್ರಕ್ಕೆ ‘ಶ್ರುತಿ’ ಎಂಬ ಹೆಸರು ಇತ್ತು. ನನ್ನ ಹೆಸರು ಗಿರಿಜಾ ಎನ್ನುವುದು ದ್ವಾರಕೀಶ್‌ ಅವರಿಗೆ ಸೂಕ್ತ ಅನ್ನಿಸಲಿಲ್ಲ. ಜತೆಗೆ ಗಿರಿಜಾ ಎನ್ನುವ ಹೆಸರಿನಲ್ಲಿ ಸೌಂಡಿಂಗ್‌ ಇಲ್ಲ ಎಂದು ‘ಸಿನಿಮಾ ಹೆಸರೊಂದು ನಿನ್ನ ಹೆಸರೊಂದು ಇದ್ದರೆ ಚೆನ್ನಾಗಿರಲ್ಲ ಮರಿ’ ಎಂದು ಹೇಳಿ ಚಿತ್ರದ ಟೈಟಲ್‌ ಅನ್ನೇ ನನ್ನ ಹೆಸರಾಗಿ ನಾಮಕರಣ ಮಾಡಿದರು.

ಏರಿಳಿತದ ಹಾದಿಯ ಏಕಾಂಗಿ ಪಯಣಿಗ ದ್ವಾರಕೀಶ್..!

ಹೀಗೆ ಗಿರಿಜಾ ಆಗಿ ಚಿತ್ರರಂಗಕ್ಕೆ ಬಂದ ನಾನು, ಶ್ರುತಿ ಹೆಸರಿನಲ್ಲಿ ಮನೆಮಾತಾಗುವುದಕ್ಕೆ ದ್ವಾರಕೀಶ್‌ ಅವರು ಕಾರಣರಾದರು. ಸಿನಿಮಾನೇ ಉಸಿರಾಡುತ್ತಿದ್ದ ವ್ಯಕ್ತಿ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಅವರ ಗರಡಿಯಲ್ಲಿ ಪಳಗುವ ಅವಕಾಶ ಸಿಕ್ಕಿದ್ದು ನನಗೆ ದೇವರು ಕೊಟ್ಟ ವರ.

ದ್ವಾರಕೀಶ್‌ ಅವರು ಹೇಳಿಕೊಟ್ಟ ನೀತಿಗಳೇ ನನ್ನ ನಿಜ ಜೀವನದಲ್ಲಿ ಕೈಹಿಡಿಯಿತು. ನನಗೆ ಸಾಕಷ್ಟು ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಲೆಜೆಂಡ್‌ ಅವರು. ಕನ್ನಡ ಚಿತ್ರರಂಗದಲ್ಲಿ ಏನೆಲ್ಲ ಪಡೆದುಕೊಳ್ಳಹುದು, ಏನೆಲ್ಲ ಕಳೆದುಕೊಳ್ಳಬಹುದು ಎಂಬುದಕ್ಕೆ ಗ್ರೇಟ್‌ ಉದಾಹರಣೆ ಎಂದರೆ ದ್ವಾರಕೀಶ್‌. ನಾನು ಅವರನ್ನ ದ್ವಾರಕೀಶ್‌ ಅಣ್ಣ ಅಂತಲೇ ಕರೆಯತ್ತಿದ್ದೆ.

ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಅತ್ಯಂತ ದುಬಾರಿ ಚಿತ್ರಗಳನ್ನು ಮಾಡಿದ ದ್ವಾರಕೀಶ್‌ ಅವರ ಸಿನಿಮಾ ಪಯಣವೇ ಒಂದು ದೊಡ್ಡ ಇತಿಹಾಸ. ಸ್ಟಾರ್‌ ನಟ, ನಟಿಯರ ಜತೆಗೆ ಸಿನಿಮಾ ಮಾಡಿ ಹಣ ಮಾಡುತ್ತಿದ್ದ ದಿನಗಳಲ್ಲಿಯೂ ದ್ವಾರಕೀಶ್‌ ಅವರು ಹೊಸಬರ ಜತೆಗೆ ಸಿನಿಮಾ ಮಾಡಿ ಗೆಲ್ಲುತ್ತಿದ್ದರು. ಆ ಮೂಲಕ ಅವರು ನಿಜವಾಗಲೂ ಟ್ರೆಂಡ್‌ ಸೆಟ್ಟರ್‌ ಆಗಿದ್ದರು. ಹೀಗೆ ಹೊಸಬರಿಗೆ ಅವಕಾಶ ಕೊಡುವ ಮೂಲಕ ಚಿತ್ರರಂಗದ ಅಭಿವೃದ್ಧಿಗೆ ಕಾರಣವಾಗುತ್ತಿದ್ದರು.

ನನ್ನ ಪ್ರಕಾರ ದ್ವಾರಕೀಶ್‌ ಅವರಿಗೆ ವಯಸ್ಸಾಗಿತ್ತೇ ಹೊರತು, ಅವರ ಕನಸುಗಳಿಗೆ ವಯಸ್ಸಾಗಿರಲಿಲ್ಲ. ಇತ್ತೀಚೆಗೆ ಅವರು ಸಿಕ್ಕಾಗ ‘ನನಗೆ ಈಗಲೂ ಸಿನಿಮಾಗಳನ್ನು ಮಾಡುವ ಆಸೆ. ಆದರೆ, ಆರೋಗ್ಯ ಸಹಕರಿಸುತ್ತಿಲ್ಲ ಮರಿ. ಈಗ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಎಂಥ ಚಿತ್ರಗಳನ್ನು ಮಾಡಬಹುದು ಗೊತ್ತಾ’ ಎಂದು ಬೆರಗಿನಿಂದ ಹೇಳುತ್ತಿದ್ದರು. ಹೀಗಾಗಿ ಅವರ ಸಿನಿಮಾ ಕನಸುಗಳಿಗೆ ಎಂದಿಗೂ ಸಾವಿಲ್ಲ.

Follow Us:
Download App:
  • android
  • ios