ಏರಿಳಿತದ ಹಾದಿಯ ಏಕಾಂಗಿ ಪಯಣಿಗ ದ್ವಾರಕೀಶ್..!
ಸಾಹಸ, ದಿಟ್ಟತನ, ಹಠಮಾರಿತನ, ಪ್ರತಿಭೆ ಇವೆಲ್ಲದರ ಸಂಗಮದಂತೆ ಇದ್ದವರು ದ್ವಾರಕೀಶ್. ಅವರು ತನ್ನನ್ನು ಕರ್ನಾಟಕದ ಕುಳ್ಳ ಅಂತಲೇ ಕರೆದುಕೊಳ್ಳುತ್ತಿದ್ದರು. ಆದರೆ ಎಲ್ಲರಿಗಿಂತ ಎತ್ತರಕ್ಕೆ ಬೆಳೆದು ನಿಂತರು. ಮಹಾನ್ ನಟರ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಕನ್ನಡ ಚಿತ್ರರಂಗದ ಸಾಧ್ಯತೆಗಳನ್ನು ತೋರಿಸಿದರು.
ಜೋಗಿ
ಬೆಂಗಳೂರು(ಏ.17): ಈ ಕುಳ್ಳನಿಗೆ ಸಂಪಾದಿಸೋದೂ ಗೊತ್ತು, ಕಳಕೊಳ್ಳೋದೂ ಗೊತ್ತು!ಈ ಮಾತನ್ನು ದ್ವಾರಕೀಶ್ ಪ್ರತಿ ಭಾಷಣದಲ್ಲೂ ಹೇಳುತ್ತಿದ್ದರು. ಹೀಗೆ ಹೇಳುವ ಹೊತ್ತಿಗೆ ಅವರು ಒಂದೋ ಗಳಿಸಿರುತ್ತಿದ್ದರು. ಇಲ್ಲವೇ ಕಳಕೊಂಡಿರುತ್ತಿದ್ದರು. ಚಿತ್ರರಂಗವೇ ಹಾವುಏಣಿಯಾಟ ಅಂದುಕೊಂಡಿದ್ದವರು ಅವರು. ಇಲ್ಲಿ ಸಂಪಾದಿಸಿದ್ದನ್ನು ಅವರು ಬೇರೆಲ್ಲಿಗೂ ಒಯ್ಯಲಿಲ್ಲ. ಗಾಂಧೀನಗರದ ದುಡ್ಡನ್ನು ಗಾಂಧೀನಗರಕ್ಕೇ ಚೆಲ್ಲಿದರು.
ಸಾಹಸ, ದಿಟ್ಟತನ, ಹಠಮಾರಿತನ, ಪ್ರತಿಭೆ ಇವೆಲ್ಲದರ ಸಂಗಮದಂತೆ ಇದ್ದವರು ದ್ವಾರಕೀಶ್. ಅವರು ತನ್ನನ್ನು ಕರ್ನಾಟಕದ ಕುಳ್ಳ ಅಂತಲೇ ಕರೆದುಕೊಳ್ಳುತ್ತಿದ್ದರು. ಆದರೆ ಎಲ್ಲರಿಗಿಂತ ಎತ್ತರಕ್ಕೆ ಬೆಳೆದು ನಿಂತರು. ಮಹಾನ್ ನಟರ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಕನ್ನಡ ಚಿತ್ರರಂಗದ ಸಾಧ್ಯತೆಗಳನ್ನು ತೋರಿಸಿದರು.
Breaking: ದ್ವಾರಕೀಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ನನಗೆ ಗೆಲ್ಲುವ ಆಸೆಯಿಲ್ಲ, ಸಾಧಿಸುವ ಆಸೆ ಮಾತ್ರ ಇದೆ. ನಾನಿರುವುದೇ ಸಾಧಿಸಿ ತೋರಿಸುವುದಕ್ಕೆ. ನೀವು ಆಗೋದಿಲ್ಲ ಅಂತ ಹೇಳಿದ್ದನ್ನು ನಾನು ಆಗುತ್ತದೆ ಅಂತ ಮಾಡಿ ತೋರಿಸುತ್ತೇನೆ ಅನ್ನುತ್ತಿದ್ದ ದ್ವಾರಕೀಶ್, ಯಾರ ಮಾತನ್ನೂ ಕೇಳುತ್ತಿರಲಿಲ್ಲ. ತನ್ನ ಮನಸ್ಸು ಹೇಳಿದ್ದನ್ನು ಮಾಡದೇ ಬಿಡುತ್ತಿರಲಿಲ್ಲ. ಅದರಿಂದಾಗಿ ಅವರು ದುಡ್ಡು ನೋಡಿದರೂ ಶ್ರೀಮಂತಿಕೆ ನೋಡಲಿಲ್ಲ. ಗೆದ್ದರೂ ಸಿಂಹಾಸನ ಏರಲಿಲ್ಲ. ಮಾಡಿದ್ದನ್ನೇ ಮಾಡಲು ಹೋಗಲಿಲ್ಲ. ಪ್ರಯೋಗಶೀಲತೆ ಎಂಬ ಪದಕ್ಕೆ ಅರ್ಥ ಬಂದದ್ದೇ ದ್ವಾರಕೀಶ್ ಅವರಿಂದ. ಅವರ ಪ್ರತಿಯೊಂದು ಪ್ರಯತ್ನವೂ ಪ್ರಯೋಗವೇ ಆಗಿತ್ತು.
ದ್ವಾರಕೀಶ್ ತನ್ನ ಘನತೆಯನ್ನು ಬಲ್ಲವರಾಗಿದ್ದರು. ಬೇರೆಲ್ಲ ಹಾಸ್ಯನಟರು ಹಾಸ್ಯನಟರಾಗಿಯೇ ಇದ್ದ ದಿನಗಳಲ್ಲಿ ದ್ವಾರಕೀಶ್ ಸ್ಟಾರ್ ಆದರು. ತಾನು ಕೂಡ ನಾಯಕ ನಟನ ಸಮಾನ ಅನ್ನುವ ಸ್ವಾಭಿಮಾನಿಯಾಗಿದ್ದವರು ದ್ವಾರಕೀಶ್. ಅವರ ಹೆಸರು ಕೂಡ ಚಿತ್ರದ ಶೀರ್ಷಿಕೆಯಲ್ಲೇ ಬರುತ್ತಿತ್ತು. ಸಿಂಗಾಪುರದಲ್ಲಿ ರಾಜಾಕುಳ್ಳ ಚಿತ್ರದಲ್ಲಿ ಕುಳ್ಳ ಅಂದರೆ ದ್ವಾರಕೀಶ್, ಕಿಟ್ಟು ಪುಟ್ಟು ಚಿತ್ರದಲ್ಲಿ ಪುಟ್ಟು ದ್ವಾರಕೀಶ್, ಕಳ್ಳ-ಕುಳ್ಳದಲ್ಲಿಯೂ ಅವರೇ, ಹೊಸಕಳ್ಳ ಬಂದರೂ ಅವರೇ ಹಳೇ ಕುಳ್ಳ.
ಚಿತ್ರರಂಗದ ಅಂತರಂಗ ದ್ವಾರಕೀಶ್‌ಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರು ಇದನ್ನು ಮಾಯೆ ಎಂದೇ ಕರೆಯುತ್ತಿದ್ದರು. ಹೊಗಳಿಕೆಯನ್ನು ಯಾವತ್ತು ನಂಬುತ್ತಿರಲಿಲ್ಲ. ಹಿಂದಿನಿಂದ ಮಾತಾಡುವವರನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಯಾರ ಒತ್ತಾಯಕ್ಕೂ ಮಣಿಯುತ್ತಿರಲಿಲ್ಲ. ಸೋಲಾಗಲೀ ಗೆಲುವಾಗಲೀ ತನ್ನದೇ ನಿರ್ಧಾರ.
ದ್ವಾರಕೀಶ್ ಬರಿಯ ಹೆಸರಲ್ಲ, ಒಂದು ಸಂಸ್ಥೆ ಅನ್ನುವುದನ್ನೂ ಅವರು ತೋರಿಸಿಕೊಟ್ಟರು. ಒಬ್ಬ ಹಾಸ್ಯನಟ ಐವತ್ತು ಚಿತ್ರಗಳನ್ನು ನಿರ್ಮಾಣ ಮಾಡಿದ ಉದಾಹರಣೆಯೇ ಇರಲಿಲ್ಲ. ಅವರ ನಿರ್ದೇಶನದ ಚಿತ್ರಗಳು ಕೂಡ ದೊಡ್ಡ ಯಶಸ್ಸು ಕಂಡಿದ್ದವು. ಆಫ್ರಿಕಾದಲ್ಲಿ ಶೀಲಾ ಸೋತರೆ, ಆಪ್ತಮಿತ್ರ ಗೆಲ್ಲುತ್ತಿತ್ತು. ನೀ ಬರೆದ ಕಾದಂಬರಿ ಗೆದ್ದರೆ ನೀ ತಂದ ಕಾಣಿಕೆ ಸೋಲುತ್ತಿತ್ತು.
ದ್ವಾರಕೀಶ್ ನಿರ್ಮಿಸಿದ ಚಿತ್ರಗಳಲ್ಲಿ ಹೆಚ್ಚಿನವು ರಿಮೇಕ್‌ಗಳೇ ಆಗಿದ್ದವು. ಆದರೆ ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಕಲಾತ್ಮಕವಾಗಿ ಅಳವಡಿಸಿಕೊಳ್ಳುವ ಜಾಣ್ಮೆ ಅವರಿಗೆ ಸಿದ್ಧಿಸಿತ್ತು. ಹಾಗೆಯೇ ಯಾವ ನಟನನ್ನು ಯಾವ ಪಾತ್ರಕ್ಕೆ ಹಾಕಿಕೊಳ್ಳಬೇಕು ಅನ್ನುವುದು ಕೂಡ ಗೊತ್ತಿತ್ತು.
ನಟರು ಮುನಿಸಿಕೊಂಡು ಹೋದಾಗೆಲ್ಲ ದ್ವಾರಕೀಶ್ ತಾನೇ ಹೀರೋ ಆಗುತ್ತಿದ್ದರು. ಪೆದ್ದಗೆದ್ದ, ಅದೃಷ್ಟವಂತ, ಕುಳ್ಳಕುಳ್ಳಿ, ಪ್ರಚಂಡ ಕುಳ್ಳ, ಪೋಲಿಸ್ ಪಾಪಣ್ಣ, ಮಂಕುತಿಮ್ಮ- ಹೀಗೆ ದ್ವಾರಕೀಶ್ ನಾಯಕನಟರಾಗಿ ಗೆದ್ದ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. ಅವರು ನಿರ್ಮಾಣ ಮಾಡಿದ ನ್ಯಾಯ ಎಲ್ಲಿದೆ ಚಿತ್ರ ಆ ಕಾಲದ ಅತ್ಯಂತ ಯಶಸ್ವಿ ಚಿತ್ರ ಎಂದು ಕರೆಸಿಕೊಂಡಿತ್ತು.
ದ್ವಾರಕೀಶ್ ಜಗಳಗಳು ಕೂಡ ಸುಪ್ರಸಿದ್ಧವಾಗಿದ್ದವು. ವಿಷ್ಣುವರ್ಧನ್ ಜತೆ ಮುನಿಸಿಕೊಂಡು ಅವರು ಹಲವಾರು ವರ್ಷ ಬೇರೆ ಹೊಸಬರ ಜತೆ ಸಿನಿಮಾ ಮಾಡಿದರು. ಕಳ್ಳ-ಕುಳ್ಳ ಚಿತ್ರದ ನೆನಪಲ್ಲಿ ಹೊಸ ಕಳ್ಳ-ಹಳೇ ಕುಳ್ಳ ಅನ್ನುವ ಚಿತ್ರ ನಿರ್ಮಿಸಿದರು. ಕೊನೆಗೆ ಒಂದಾದಾಗ ಕಾಲ ಮತ್ತೊಮ್ಮೆ ನಮಗಾಗಿ ಬಂತು ಎಂದು ಹಾಡಿದರು. ಹೀಗೆ ಅವರ ಪ್ರೀತಿ, ಜಗಳಗಳೆಲ್ಲ ಸಿನಿಮಾಗಳಲ್ಲೂ ಒಂದಲ್ಲ ಒಂದು ರೂಪದಲ್ಲಿ ಪ್ರತ್ಯಕ್ಷವಾಗುತ್ತಿದ್ದವು.
ವಿಷ್ಣುವರ್ಧನ್ ಜೊತೆಗೆ ಬಿರುಕು ಮೂಡಿದ್ಯಾಕೆ? ದಾದಾ ಬಗ್ಗೆ ದ್ವಾರಕೀಶ್ ನಿಜವಾಗ್ಲೂ ಆ ಮಾತು ಹೇಳಿದ್ರಾ!
ಡಾ, ರಾಜ್‌ಕುಮಾರ್ ಕಟ್ಟಾಭಿಮಾನಿ ಆಗಿದ್ದ ದ್ವಾರಕೀಶ್ ತಮ್ಮ ಆರಂಭದ ಚಿತ್ರಗಳಲ್ಲಿ ರಾಜ್‌ಕುಮಾರ್ ಫೋಟೋ, ಸಂಭಾಷಣೆ ಕೂಡ ಬಳಸುತ್ತಿದ್ದರು. ಚಿತ್ರರಂಗದ ಬಹುತೇಕ ನಟರ ಜತೆ ಏಕವಚನದಲ್ಲಿ ಮಾತಾಡುವ ಸಲಿಗೆ ಹೊಂದಿದ್ದರು. ಪತ್ರಕರ್ತರ ಜತೆಗೂ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದ ದ್ವಾರಕೀಶ್, ಚಿತ್ರರಂಗದ ರಹಸ್ಯಗಳನ್ನು ಕೂಡ ಆಗಾಗ ಹೇಳುತ್ತಿದ್ದರು.
ಆಯುಷ್ಮಾನ್ ಭವ ಅವರ ನಿರ್ಮಾಣದ ಕೊನೆಯ ಚಿತ್ರ. ಅದು ಆಪ್ತಮಿತ್ರದಂತೆ ಬಹಳ ದೊಡ್ಡ ಗೆಲುವು ಕಾಣುತ್ತದೆ ಅಂತಲೇ ಅವರು ನಂಬಿದ್ದರು. ಆ ಚಿತ್ರ ಸೋತಾಗ ಬಹಳ ಖಿನ್ನರಾಗಿದ್ದರು. ನಿಜಕ್ಕೂ ಸೋತು ಹೋಗಿದ್ದರು.
'''' ಚಿತ್ರರಂಗ ಮೊದಲಿನ ಹಾಗಿಲ್ಲ. ಇನ್ನು ನನ್ನ ಅಗತ್ಯ ಈ ಚಿತ್ರರಂಗಕ್ಕೆ ಇಲ್ಲ '''' ಅಂದಿದ್ದರು. ಅದಾದ ನಂತರ ಅವರು ಚಿತ್ರಗಳ ಬಗ್ಗೆ ಹೆಚ್ಚು ಮಾತಾಡುತ್ತಿರಲೂ ಇಲ್ಲ. ದ್ವಾರಕೀಶ್ ಚಿತ್ರರಂಗಕ್ಕೆ ಬರುವ ಹೊತ್ತಿಗೆ ಹೇಗಿದ್ದರೋ, ಹೊರಟು ಹೋಗುವಾಗಲೂ ಹಾಗೆಯೇ ಇದ್ದರು. ಬರುವಾಗ ಹೆಸರಲ್ಲಿ ಬಂಗ್ಲೆ ಇತ್ತು. ನಿರ್ಗಮನದ ಹೊತ್ತಲ್ಲಿ ಹೆಸರಲ್ಲಿ ಕೂಡ ಬಂಗ್ಲೆ ಇರಲಿಲ್ಲ.