ಬಯಲುಸೀಮೆ ಸಿನಿಮಾದ ಆಡಿಯೋ ಲಾಂಚ್. ಹೇಗಿತ್ತು ಕಾರ್ಯಕ್ರಮ, ಏನೆಲ್ಲಾ ಸ್ಪೆಷಲ್ ಇತ್ತು? ಈ ಸುದ್ದಿ ಓದಿ
ವರುಣ್ ಕಟ್ಟಿಮನಿ ನಿರ್ದೇಶನದ ‘ಬಯಲುಸೀಮೆ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆಯಿತು. ಹಿರಿಯ ಕಲಾವಿದರಾದ ರವಿಶಂಕರ್, ನಾಗಾಭರಣ ಹಾಜರಿದ್ದರು. ಆದರೆ ನಿರೂಪಕರು ಅತ್ಯುತ್ಸಾಹದಿಂದ ಮಾತನಾಡಿಸಿದವರನ್ನೇ ಮತ್ತೆ ಮತ್ತೆ ಮಾತನಾಡಿಸುತ್ತಿದ್ದ ಕಾರಣ, ಜೊತೆಗೆ ತಾವೂ ಮಾತನಾಡುತ್ತಿದ್ದ ಕಾರಣ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿರುವ ಅರ್ಚನಾ ಕೊಟ್ಟಿಗೆ ಅವರಿಗೆ ಮಾತನಾಡಲು ಸಮಯವಿರಲಿಲ್ಲ.
ಸಂಗೀತ ನಿರ್ದೇಶಕಿ ಮಾನಸ ಹೊಳ್ಳ, ಈ ಸಿನಿಮಾದ ಮ್ಯೂಸಿಕ್ ಮಾಡಲು ಹರಸಾಹಸ ಪಟ್ಟಬಗ್ಗೆ ವಿವರಿಸಿದರು. ಸಂಯುಕ್ತಾ ಹೊರನಾಡು ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಉತ್ತರ ಕರ್ನಾಟಕದ ಮಂದಿಯ ಪ್ರೀತಿ ಹೇಗೆ ತನ್ನನ್ನು ಸೆಳೆಯಿತು ಎಂದು ವಿವರಿಸಿದರು. ಅಲ್ಲಿ ಸೀರೆ ನೂಲಲು ಕಲಿತು ತಾಯಿ ಬತ್‌ರ್‍ಡೇಗೆ ತಾನೇ ಸೀರೆ ನೇಯ್ದು ಕೊಟ್ಟಕ್ಷಣದ ಖುಷಿಯನ್ನು ಬಿಚ್ಚಿಟ್ಟರು. ಇದರಲ್ಲಿ ಅಕ್ಕಮ್ಮ ಅನ್ನುವ ವಿಧವೆ ಪಾತ್ರವನ್ನು ಅವರು ಮಾಡಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ವಿಶೃತ್‌ಗೆ ಸನ್ಮಾನ!
ಡಿಓಪಿ ಸುಜಯ್, ಗೀತರಚನಕಾರ ನಾಗೇಂದ್ರ ಪ್ರಸಾದ್, ನಿರ್ಮಾಪಕರಾದ ಲಕ್ಷ್ಮಣ್ ಎಸ್ ಎ, ಶ್ರೀಧರ್ ಬಿದರಳ್ಳಿ ಹಾಗೂ ಚಿತ್ರತಂಡದವರು ಹಾಜರಿದ್ದರು. ಎಆರ್‌ಸಿ ಮ್ಯೂಸಿಕ್ ಕನ್ನಡ ಯೂಟ್ಯೂಬ್‌ನಲ್ಲಿ ಈ ಚಿತ್ರದ ಹಾಡುಗಳನ್ನು ಕೇಳಬಹುದು.
ಡಬ್ಬಿಂಗ್‌ನಲ್ಲಿ ಯಾವತ್ತೂ ಇಷ್ಟುಕಷ್ಟಅನುಭವಿಸಿರಲಿಲ್ಲ: ರವಿಶಂಕರ್
‘ಈವರೆಗೆ 4000ಕ್ಕೂ ಅಧಿಕ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದೀನಿ. ಆದರೆ ಈ ‘ಬಯಲುಸೀಮೆ’ ಚಿತ್ರದ ಡಬ್ಬಿಂಗ್‌ನಷ್ಟುಯಾವುದೂ ಕಷ್ಟವಾಗಿರಲಿಲ್ಲ’ ಎಂದು ನಟ ರವಿಶಂಕರ್ ಹೇಳಿದ್ದಾರೆ. ಅವರಿಗೆ ಈ ಮಟ್ಟಿಗೆ ಕಷ್ಟವಾಗಲು ಕಾರಣ ಉತ್ತರ ಕರ್ನಾಟಕ ಸೊಗಡಿನ ಭಾಷೆ.
‘ಬಹಳ ವೇಗವಾಗಿ ಡಬ್ಬಿಂಗ್ ಮುಗಿಸೋ ಅಭ್ಯಾಸ ನನ್ನದು. ಆದರೆ ನನ್ನ ಈವರೆಗಿನ ಡಬ್ಬಿಂಗ್ ಕೆರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ‘ಬಯಲುಸೀಮೆ’ ಚಿತ್ರದ ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಲು ನಾಲ್ಕು ದಿನ ತೆಗೆದುಕೊಳ್ಳುತ್ತಿದ್ದೇನೆ. ಇಲ್ಲಿನ ಉತ್ತರ ಕರ್ನಾಟಕ ಭಾಷೆಯ ಫಿನಿಷಿಂಗ್ ಕಷ್ಟ, ಅಷ್ಟೇ ಸುಂದರ. ಅದಕ್ಕಾಗಿ ಕಷ್ಟಪಡುತ್ತಿದ್ದೇನೆ. ಈ ಚಿತ್ರದಲ್ಲಿ ನನ್ನದು ಆರ್ಭಟವಿಲ್ಲದ, ನಾಗಾಭರಣ ಅವರ ಎದುರಾಳಿ ಶಂಕರ್ ಅಣ್ಣಾವರ್ ಎಂಬ ಪಾತ್ರ’ ಎನ್ನುತ್ತಾರೆ ರವಿಶಂಕರ್.
ರಾಜಿ,ಮೇಲೊಬ್ಬ ಮಾಯಾವಿ, ಶೋಕಿವಾಲ ಸಿನಿಮಾ ಇಂದು ರಿಲೀಸ್!
‘ಬಯಲು ಸೀಮೆ’ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಇಡೀ ಚಿತ್ರವನ್ನು ಉತ್ತರ ಕರ್ನಾಟಕದ ಗಜೇಂದ್ರಗಡದ ಕೋಟೆ, ಊರಿನಲ್ಲಿ ಚಿತ್ರೀಕರಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ವರುಣ್ ಕಟ್ಟೀಮನಿ, ನಿರ್ಮಾಪಕ ಶ್ರೀಧರ್ ಬಿದರಳ್ಳಿ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಹಾಗೂ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.

