Asianet Suvarna News Asianet Suvarna News

ವೈಯಕ್ತಿಕ ಟೀಕೆ: ಟೇಶಿ ವಿರುದ್ಧ ರೂಪಾ ಅಯ್ಯರ್‌ 1 ಕೋಟಿ ಮಾನನಷ್ಟ ಕೇಸ್‌

* ನನ್ನ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಟೇಶಿ: ಐಯ್ಯರ್‌
* ನಿರ್ದೇಶಕರ ಸಂಘಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಉಪಾಧ್ಯಕ್ಷೆ ಆಗಿದ್ದೇನೆ
* ನಿರ್ದೇಶಕರ ಸಂಘದ ಹಣದ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್‌ ಆದೇಶ
 

Roopa Iyer Defamation Case Against Teshi Venkatesh grg
Author
Bengaluru, First Published Jul 11, 2021, 12:10 PM IST

ಬೆಂಗಳೂರು(ಜು.11):  ವೈಯಕ್ತಿಕ ಬದುಕಿನ ಕುರಿತು ಟೀಕೆ ಮಾಡಿದ ಕಾರಣಕ್ಕೆ ನಿರ್ದೇಶಕ ಟೇಶಿ ವೆಂಕಟೇಶ್‌ ಅವರ ವಿರುದ್ಧ 1 ಕೋಟಿ ರು. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಈ ಕೇಸ್‌ನಲ್ಲಿ ಗೆದ್ದಾಗ ಸಿಗುವ 1 ಕೋಟಿ ರು.ಗಳನ್ನೂ ನಿರ್ದೇಶಕರ ಸಂಘಕ್ಕೆ ನೀಡಲು ತೀರ್ಮಾನಿಸಿದ್ದೇನೆ ಎಂದು ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್‌ ತಿಳಿಸಿದ್ದಾರೆ.

ಬೆಂಗಳೂರಿನ ರೇಣುಕಾಂಬಾ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದ ಉಪಾಧ್ಯಕ್ಷೆ ರೂಪಾ ಅಯ್ಯರ್‌, ‘ನಿರ್ದೇಶಕರ ಸಂಘಕ್ಕೆ ಟೇಶಿ ವೆಂಕಟೇಶ್‌ ಅವರ ಆಯ್ಕೆಯೇ ನ್ಯಾಯಬದ್ಧವಾಗಿ ನಡೆದಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನಿರ್ದೇಶಕರ ಸಂಘಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಉಪಾಧ್ಯಕ್ಷೆ ಆಗಿದ್ದೇನೆ’ ಎಂದರು.

ನಿರ್ದೇಶಕಿ ರೂಪಾ ಅಯ್ಯರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ facts!

‘ಈ ಹಿಂದಿನ ಅಧ್ಯಕ್ಷರು ಸ್ಥಾನ ತೆರವು ಮಾಡುವ ಮೊದಲೇ ಟೇಶಿ ವೆಂಕಟೇಶ್‌ ಅವರು ತಾವೇ ಅಧ್ಯಕ್ಷರು ಎಂದು ಘೋಷಿಸಿದರು. ಇದಕ್ಕಾಗಿ ಯಾವ ಎಲೆಕ್ಷನ್‌ ಸಹ ನಡೆದಿಲ್ಲ. ಪ್ರಶ್ನಿಸಿದ್ದಕ್ಕೆ ಹಳೆಯ ನಿರ್ದೇಶಕರ ಸಂಘ ವಿಸರ್ಜಿಸಿ ಹೊಸದಾಗಿ ನಿರ್ದೇಶಕರ ಸಂಘದ ಅಧ್ಯಕ್ಷರ ಆಯ್ಕೆ ನಡೆದಿದೆ ಎಂದರು. ಇದು ಕಾನೂನಿಗೆ ವಿರುದ್ಧ ಎಂಬ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಹಣದ ಅವ್ಯವಹಾರವನ್ನೂ ನಡೆಸಿದರು. ಪ್ರಶ್ನಿಸಿದಾಗ ನಿಮಗೆ ಉತ್ತರ ಕೊಡಬೇಕಾಗಿಲ್ಲ ಎಂದರು. ಇದನ್ನು ಪ್ರಶ್ನಿಸಿ ಎರಡು ವರ್ಷಗಳ ಕೆಳಗೆ ಕೋರ್ಟ್‌ಗೆ ಹೋದೆವು. ಕೆಲವು ದಿನಗಳ ಹಿಂದೆ ನಮ್ಮ ಪರವಾಗಿ ತೀರ್ಪು ಬಂದಿದೆ. ನಿರ್ದೇಶಕರ ಸಂಘದ ಹಣದ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್‌ ಆದೇಶಿಸಿದೆ. ಇದರಿಂದ ವಿಚಲಿತರಾದ ಟೇಶಿ ವೆಂಕಟೇಶ್‌ ನನ್ನ ವೈಯಕ್ತಿಕ ಬದುಕಿನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ’ ಎಂದು ರೂಪಾ ಅಯ್ಯರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್‌ ಬಾಬು, ಭಗವಾನ್‌, ಹಿರಿಯ ನಟ ಶಿವರಾಂ ಮತ್ತಿತರರು ಪಾಲ್ಗೊಂಡಿದ್ದರು.
 

Follow Us:
Download App:
  • android
  • ios