ಹೊಸ ವರ್ಷಕ್ಕೂ ಮುನ್ನವೇ ಅಭಿಮಾನಿಗಳಿಗೆ ಬರ್ತಡೇ ಸಂದೇಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಜನ್ಮದಿನದಂದು ಆಡಂಬರ, ಪ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಕೋರಿದ್ದಾರೆ. ಜೊತೆಗೆ ಈ ಮುಖ್ಯ ಸಂದೇಶ ನೀಡಿದ್ದಾರೆ.
ಬೆಂಗಳೂರು (ಡಿ.30): ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಒಂದು ದಿನಕ್ಕೂ ಮುನ್ನವೇ ಜನ್ಮ ದಿನಾಚರಣೆಯ ಸಂದೇಶವನ್ನು ನೀಡಿದ್ದಾರೆ. ಅದರಲ್ಲಿ ಕಳೆದ ವರ್ಷದ ನನ್ನ ಬರ್ತಡೇ ಆಚರಣೆ ಮಾಡುವಾಗ ಕಟೌಟ್ ನಿಲ್ಲಿಸಲು ಹೋಗಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಬಾರಿ ಅಂತಹ ಅವಘಡಗಳಿಗೆ ಅವಕಾಶ ನೀಡಬೇಡಿ. ನಾನು ಈ ಬಾರಿ ಜನ್ಮದಿನದ ವೇಳೆ (ಜ.8ರಂದು) ಊರಿನಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಹೀಗೆ ಬರೆದುಕೊಂಡಿದ್ದಾರೆ. 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.
ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್' ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಜನವರಿ 8ರಂದು.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ. ನಿಮ್ಮ ಪ್ರೀತಿಯ ಯಶ್ ಎಂದು ಮತ್ತೊಂದು ಪೋಸ್ಟರ್ ಸಿದ್ಧಪಡಿಸಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರೆಕಾರ್ಡ್ ಬುಕ್ನಲ್ಲಿ ಯಶ್ ಮತ್ತೊಂದು ಮೈಲುಗಲ್ಲು; ವಿಲನ್ ಆಗೋಕೆ 150 ಕೋಟಿ ಸಂಭಾವನೆ?