ನಟ ಶಿವ ರಾಜ್‌ಕುಮಾರ್ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿ ಮರಳಿದ್ದಾರೆ. ಟಾಕ್ಸಿಕ್ ಚಿತ್ರೀಕರಣದಲ್ಲಿ ನಿರತರಾಗಿದ್ದ ನಟ ಯಶ್, ಬಿಡುವು ಮಾಡಿಕೊಂಡು ಶಿವಣ್ಣನವರ ಆರೋಗ್ಯ ವಿಚಾರಿಸಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಶಿವಣ್ಣನವರನ್ನು ಭೇಟಿ ಮಾಡಿ, ಆರೋಗ್ಯದ ಬಗ್ಗೆ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಚಿತ್ರೀಕರಣದ ಒತ್ತಡದಿಂದ ತಡವಾಗಿ ಬಂದಿದ್ದಾಗಿ ಯಶ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಈ ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ.

ಬೆಂಗಳೂರು (ಮಾ.18): ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅವರು ಅಮೇರಿಕಾಗೆ ಹೋಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ವಾಪಸ್ ತಾಯ್ನಾಡಿಗೆ ಬಂದಿದ್ದಾರೆ. ಆದರೆ, ಈವರೆಗೆ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ತುಂಬಾ ಬ್ಯೂಸಿಯಾಗಿದ್ದ ನಟ ಯಶ್ ಬಿಡುವು ಮಾಡಿಕೊಂಡು ಬಂದು ಇದೀಗ ಶಿವಣ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ.

ನಟ ಶಿವ ರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಕಾಯಿಲೆಯಿದ್ದು ಚಿಕಿತ್ಸೆ ಪಡೆಯುವುದಕ್ಕೆ ಗೀತಾ ಶಿವ ರಾಜ್‌ಕುಮಾರ್ ಅವರೊಂದಿಗೆ ಅಮೇರಿಕಾಗೆ ಹೋಗಿದ್ದರು. ಅಲ್ಲಿ ಕೆಲವು ದಿನಗಳು ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದಾರೆ. ಜೊತೆಗೆ, ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಖದಲ್ಲಿ ಮೊದಲಿನಂತೆ ತೇಜಸ್ಸು ಇಲ್ಲದಿದ್ದರೂ ಅವರ ಗತ್ತು ಮಾತ್ರ ಕುಂದಿಲ್ಲ. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದಾರೆ. ಇದೀಗ ಶಿವಣ್ಣ ಅವರ ಮನೆಗೆ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಆಗಮಿಸಿದ್ದು, ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಶಿವಣ್ಣ ಅವರ ಮನೆಗೆ ದಿಢೀರನೆ ಬಂದ ಯಶ್ ದಂಪತಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಅವರೊಂದಿಗೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಶಿವ ರಾಜ್‌ಕುಮಾರ್ ಪತ್ನಿ ನಿರ್ಮಾಪಕಿ ಗೀತಾ ಅವರು ಕೂಡ ಇದ್ದರು. ಆರೋಗ್ಯದ ಬಗ್ಗೆ ವಿಚಾರಿಸಿ ಶೀಘ್ರವೇ ಸಿನಿಮಾಗೆ ಮೊದಲಿನಂತೆ ಭರ್ಜರಿಯಾಗಿ ಎಂಟ್ರಿ ಕೊಡುವಂತೆ ಹಾರೈಕೆ ಮಾಡಿದ್ದಾರೆ. ಜೊತೆಗೆ, ಆರೋಗ್ಯ ವಿಚಾರಿಸಲು ತಡವಾಗಿ ಬಂದಿದ್ದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ನಿಮಿತ್ತು ಬ್ಯೂಸಿ ಆಗಿದ್ದರಿಂದ ನಿಮ್ಮ ಮನೆಗೆ ಬರುವುದು ತಡವಾಯಿತು ಎಂದು ಹೇಳಿದರು.

ಇದನ್ನೂ ಓದಿ: A ಯಿಂದ Z ವರೆಗಿನ ತಮ್ಮ ಸಿನಿಮಾವನ್ನು ಪಟಪಟಾ ಹೇಳಿದ ಶಿವಣ್ಣ! ಇದ್ರಲ್ಲಿ ನಿಮಗೆಷ್ಟು ಗೊತ್ತು?

ಶಿವ ರಾಜ್‌ಕುಮಾರ್ ಅವರು ಅಮೇರಿಕಾಗೆ ಚಿಕಿತ್ಸೆ ಪಡೆಯುವುದಕ್ಕೆ ಹೋಗುವ ಮುನ್ನವೇ ಸುದೀಪ್ ಸೇರಿ ಅನೇಕ ನಟರು ಮನೆಗೆ ಹೋಗಿ ಆರೋಗ್ಯ ವಿಚಾರಿಸಿ ಮಾತನಾಡಿಸಿಕೊಂಡು ಬಂದಿದ್ದರು, ಹಲವರು ಫೋನ್ ಕರೆ ಮಾಡಿ ಮಾತನಾಡಿದ್ದರು. ಚಿಕಿತ್ಸೆ ಪಡೆದು ಬಂದ ನಂತರವೂ ಹಲವು ನಟರು ಶಿವ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಯಶ್ ದಂಪತಿ ಶಿವಣ್ಣನ ಮನೆಗೆ ಬಂದು ಹೋಗಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಕಡಿಮೆಯಾಗಿ ಕಂಡುಬರದ ಅಪರೂಪದ ಬಾಂಧವ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿದೆ. ಯಾವುದೇ ನಟರು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಎಲ್ಲರೂ ಬಂದು ಭೇಟಿ ಮಾಡಿ ಚೇತರಿಕೆಗೆ ಹಾರೈಸುತ್ತಾರೆ. ಇನ್ನು ಬಡ ಕಲಾವಿದರು ಆಗಿದ್ದರೆ, ಅವರಿಗೆ ಕೆಲವೊಬ್ಬ ದೊಡ್ಡ ನಟರು ಸಹಾಯವನ್ನೂ ಮಾಡಿರುತ್ತಾರೆ. ಕೆಲವರು ಸಹಾಯ ಮಾಡಿದ್ದು, ಬೆಳಕಿಗೆ ಬರುತ್ತದೆ, ಇನ್ನು ಕೆಲವರ ಸಹಾಯ ಬೆಳಕಿಗೆ ಬರುವುದೇ ಇಲ್ಲ. ಆದರೆ, ಕಷ್ಟದಲ್ಲಿದ್ದವರು ಅದರಿಂದ ಪಾರಾದರೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಇದನ್ನೂ ಓದಿ: ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!