ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. 

ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದಕ್ಕೆ ಕೆಜಿಎಫ್, ಕಾಂತಾರ ಸಿನಿಮಾಗಳೇ ಸಾಕ್ಷಿ. ಅದರಲ್ಲೂ ಕಾಂತಾರ ಹವಾ ಇನ್ನೂ ಕಡಿಮೆ ಆಗಿಲ್ಲ. ದಾಖಲೆ ಮೇಲೆ ದಾಖಲೆ ಬರೆದಿರುವ ಕಾಂತಾರ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಸಿದ್ಧವಾದ ಕಾಂತಾರ ಕೋಟಿ ಕೋಟಿ ಗಳಿಕೆ ಮಾಡುವ ಮೂಲಕ ಭಾರತೀಯ ಸಿನಿಮಾರಂಗವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಕಾಂತಾರ ಓಟ ಇನ್ನು ನಿಂತಿಲ್ಲ. ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಕಾಂತಾರ ಇದೀಗ ಕೆಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ರಿಷಬ್​ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಮಾಡಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಅವರೇ ಬಹಿರಂಗ ಪಡಿಸಿದ್ದಾರೆ. 

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಕನ್ನಡ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡು, ಹಾಡಿಹೊಗಳಿದ ಬಳಿಕ ಬೇರೆ ಬೇರೆ ಭಾಷೆಯ ಪ್ರೇಕ್ಷರಿಂದ ಬೇಡಿಕೆ ಹೆಚ್ಚಾಯಿತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ ಮಾಡಿ ರಿಲೀಸ್​ ಮಾಡಲಾಯಿತು. ಎಲ್ಲಾ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಭರ್ಜರಿ ಕಲೆಕ್ಷನ್ ಕೂಡ​ ಆಯಿತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್​ ವರ್ಷನ್​ ಕೂಡ ರಿಲೀಸ್​ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಆಗುತ್ತಿದೆ. 

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ. ‘ಈ ವಿಷಯ ತಿಳಿಸಲು ನಮಗೆ ತುಂಬಾ ಖುಷಿಯಾಗಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಎಡಿಟ್​ ಮಾಡಲಾಗುತ್ತಿದೆ’ ಎಂದು ಇಟಾಲಿಯನ್​ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್​ ಟ್ವೀಟ್​ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಬಹಿರಂಗ ಪಡಿಸುತ್ತಿದ್ದಂತೆ ಜಪಾನಿ ಭಾಷೆಯಲ್ಲೂ ರಿಲೀಸ್​ ಮಾಡಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

'ಕಾಂತಾರ' ನಂತರ ಕಾಡಂಚಿನ ಜನರ ಬೆಂಬಲಕ್ಕೆ ನಿಂತ ರಿಷಬ್ ಶೆಟ್ಟಿ

‘ಕಾಂತಾರ’ ಸಿನಿಮಾದ ಬಳಿಕ ರಿಷಬ್​ ಶೆಟ್ಟಿ ​ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಇತ್ತೀಚೆಗಷ್ಟೆ ರಿಷಬ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಜೆನಿವಾದಲ್ಲೂ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿತ್ತು. ಈ ಮೂಲಕ ರಿಷಬ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಉಳಿದಂತೆ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದರು.

Scroll to load tweet…

ಸಿನಿಮಾ ಮೂಲಕ ಪರಿಸರ ರಕ್ಷಣೆ ಜಾಗೃತಿ: ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಕರೆ

ಕಾಂತಾರ ಸೂಪರ್ ಸಕ್ಸಸ್ ಆದ ಬಳಿಕ ಕಾಂತಾರ-2 ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿತ್ತು. ಕೊನೆಗೂ ರಿಷಬ್ ಶೆಟ್ಟಿ ಅಂಡ್ ಟೀಂ ಕಾಂತಾರ 2 ಅನೌನ್ಸ್ ಮಾಡಿದ್ದು ಸದ್ಯ ಪಾರ್ಟ್-2ಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಕಾಂತಾರ-2 ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ. ಪಾರ್ಟ್-2 ಹೇಗಿರಲಿದೆ, ಯಾವ ವಿಚಾರ ಹೇಳಲಿದ್ದಾರೆ, ಯಾರೆಲ್ಲ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.