Raj B Shetty Breaks Silence on Rishab Shetty Missing His Name ಸ್ಯಾಂಡಲ್‌ವುಡ್‌ನ ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿತ್ತು. '45' ಸಿನಿಮಾ ಕುರಿತು ರಿಷಬ್ ಶೆಟ್ಟಿ ಮಾಡಿದ ಟ್ವೀಟ್‌ನಲ್ಲಿ ರಾಜ್ ಬಿ ಶೆಟ್ಟಿ ಹೆಸರು ಪ್ರಸ್ತಾಪಿಸದಿದ್ದದ್ದು ಇದಕ್ಕೆ ಕಾರಣವಾಗಿತ್ತು.
ಸ್ಯಾಂಡಲ್‌ವುಡ್‌ನಲ್ಲಿ ಈಗ ಅಕ್ಷರಶಃ RRR ಹವಾ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ. ವಿಶಿಷ್ಟ ಶೈಲಿನ ನಿರೂಪಣೆ, ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿಸಿದ್ದ ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು ಮೂಡಿದ್ಯಾ ಎನ್ನುವ ಅನುಮಾನ ಶುರುವಾಗಿದೆ. ಒಂದೆಡೆ, ಕಿರಿಕ್ ಪಾರ್ಟಿ, ಚಾರ್ಲಿ 777ನಂಥ ಸೂಪರ್‌ಹಿಟ್ ಸಿನಿಮಾ ಕೊಟ್ಟಿದ್ದ ರಕ್ಷಿತ್ ಶೆಟ್ಟಿ ಅಜ್ಞಾತವಾಸಕ್ಕೆ ಇಳಿದು ವರ್ಷಗಳೇ ಆಗಿವೆ. ಇನ್ನೊಂದೆಡೆ, ಕಾಂತಾರದಿಂದ ಯಶಸ್ಸು ಕಂಡಿದ್ದ ರಿಷಬ್ ಶೆಟ್ಟಿ, ಕಾಂತಾರ-1 ಸಿನಿಮಾ ಮೂಲಕವೂ ದೊಡ್ಡ ಯಶಸ್ಸು ಕಂಡಿದ್ದಾರೆ. ಆದರೆ, ಕಾಂತಾರ ಸಿನಿಮಾದ ವೇಳೆ ಥಿಯೇಟರ್‌ನಲ್ಲಿಯೇ ಸಿನಿಮಾ ನೋಡಿ ಸಂಭ್ರಮಿಸಿದ್ದ ರಕ್ಷಿತ್ ಶೆಟ್ಟಿ, ಕಾಂತಾರ-1 ಸಿನಿಮಾ ವೇಳೆ ಅಂಥ ಯಾವುದೇ ಉತ್ಸಾಹ ತೋರಿರಲಿಲ್ಲ.
ಇನ್ನೊಂದೆಡೆ ಗರುಡ ಗಮನ, ವೃಷಭ ವಾಹನ ಹಾಗೂ ಸು ಫ್ರಂ ಸೋ ಸಿನಿಮಾ ಮೂಲಕ ಯಶಸ್ಸಿನ ರುಚಿ ಕಂಡಿದ್ದ ರಾಜ್ ಬಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ನಡುವೆ ವೈಮನಸ್ಯ ಉಂಟಾಗಿರುವುದು ಈಗ ನೇರನೋಟಕ್ಕೆ ಕಾಣುವಷ್ಟು ಸ್ಪಷ್ಟವಾಗಿದೆ. ಕಾಂತಾರ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಾಜ್ ಬಿ ಶೆಟ್ಟಿ, ಕಾಂತಾರ-1 ಸಿನಿಮಾದ ಕೆಲಸದಿಂದ ಹೊರಗುಳಿದಿದ್ದರು. ಇದರ ಬಗ್ಗೆ ಸ್ವತಃ ಅವರೇ ಮಾತನಾಡಿದ್ದರು.
ಈಗ ರಾಜ್ ಬಿ ಶೆಟ್ಟಿ ಅವರೂ ಕೂಡ ನಟಿಸಿರುವ ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾಗೆ ರಿಷಬ್ ಶೆಟ್ಟಿ ಕೂಡ ವಿಶ್ ಮಾಡಿದ್ದರು. ಈ ವೇಳೆ ಅವರು ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಅವರ ಹೆಸರನ್ನು ಮಾತ್ರವೇ ತೆಗೆದುಕೊಂಡಿದ್ದಾರೆ. ಸ್ನೇಹಿತ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದರೂ ಅದರ ಬಗ್ಗೆ ಏನೂ ಮಾತನಾಡಿರಲಿಲ್ಲ. ಇದೇ ಈಗ ವಿವಾದದ ಮೂಲವಾಗಿದೆ. ಕಾಂತಾರ-1 ಸಿನಿಮಾದಲ್ಲಿ ಕೆಲಸ ಮಾಡದ ಕಾರಣಕ್ಕಾಗಿ ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ ಕುರಿತಾಗಿ ಮುನಿಸಿಕೊಂಡಿರಬಹುದು ಎನ್ನುವ ವರದಿಗಳು ಪ್ರಕಟವಾಗಿದೆ.
ಈ ಬಗ್ಗೆ ಮಾತನಾಡಿದ ರಾಜ್ ಬಿ ಶೆಟ್ಟಿ, "ನಾನು ಈ ಸಿನಿಮಾ ಬಗ್ಗೆ ಮಾತನಾಡುವಾಗಲೂ ಮೊದಲು ಶಿವಣ್ಣ, ಆಮೇಲೆ ಉಪ್ಪಿ ಸರ್ ಹಾಗೂ ಅರ್ಜುನ್ ಜನ್ಯ ಅವರ ಹೆಸರನ್ನೇ ಹೇಳುತ್ತೇನೆ. ನಾನು ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೇನೆ ಅಷ್ಟೇ. ಮಾತನಾಡುವ ಭರದಲ್ಲಿ ಅಥವಾ ಫ್ಲೋನಲ್ಲಿ ಕೆಲವೊಮ್ಮೆ ಹೆಸರುಗಳು ನೆನಪಿಗೆ ಬಾರದಿರಬಹುದು. ಅಂದು ಮೈಕ್ ಸಮಸ್ಯೆಯೂ ಇತ್ತು ಎಂದು ಕೇಳಿದ್ದೇನೆ, ಹಾಗಾಗಿ ಆ ಗೊಂದಲದಲ್ಲಿ ಹೆಸರು ಮಿಸ್ ಆಗಿರಬಹುದು. ಇದಕ್ಕೆ ಹರ್ಟ್ ಆಗುವ ಅವಶ್ಯಕತೆ ನನಗಿಲ್ಲ" ಎಂದು ತಿಳಿಸಿದ್ದಾರೆ.
"ರಿಷಬ್ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಾರೆ ಎಂದು ನಾನು ನಂಬುವುದಿಲ್ಲ. ಒಂದು ವೇಳೆ ಯಾರಾದರೂ ನನ್ನನ್ನು ಚುಚ್ಚಬೇಕು ಎಂಬ ಕಾರಣಕ್ಕೆ ಹೆಸರು ಬಿಟ್ಟಿದ್ದರೂ, ಅದು ನನಗೆ ತಾಗುವುದಿಲ್ಲ. ನನ್ನ ಕಡೆಯಿಂದ ಯಾವುದೇ ಮನಸ್ತಾಪವಿಲ್ಲ. ಇದನ್ನು ಇಷ್ಟಕ್ಕೇ ಬಿಡುವುದು ಒಳ್ಳೆಯದು. ಅತಿಯಾಗಿ ಸೀರಿಯಸ್ ಆಗಿ ತೆಗೆದುಕೊಳ್ಳುವ ಅಗತ್ಯವಿಲ್ಲ" ಎನ್ನುವ ಮೂಲಕ ರಾಜ್ ಬಿ ಶೆಟ್ಟಿ ಈ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದಾರೆ.
ರಿಷಬ್ ಶೆಟ್ಟಿಯವರ ಮುಂದಿನ ಸಿನಿಮಾಗಳಲ್ಲಿ ಕೆಲಸ ಮಾಡುವ ಬಗ್ಗೆ ಉತ್ತರಿಸಿದ ರಾಜ್, "ರಿಷಬ್ ಅವರ ಸಿನಿಮಾಗೆ ನಾನು ಬೇಕು ಎಂದರೆ ಖಂಡಿತವಾಗಿಯೂ ಹೋಗುತ್ತೇನೆ. ಮುನಿಸು ಅಥವಾ ಸಿಟ್ಟು ಮಾಡಿಕೊಳ್ಳಲು ನಾವೇನು ಚಿಕ್ಕ ಮಕ್ಕಳಲ್ಲ. ನನಗೆ 38 ವರ್ಷ, ಅವರಿಗೆ 39 ವರ್ಷ ಇರಬಹುದು. ಜಗಳವಾಡುವುದು, ಹೊಡೆದಾಡುವುದನ್ನೆಲ್ಲಾ ನಾವು ಡಿಗ್ರಿ ಕಾಲೇಜಿನಲ್ಲೇ ಮುಗಿಸಿದ್ದೇವೆ. ಈಗ ನಾವು ವೃತ್ತಿಪರರು" ಎಂದು ತಿಳಿಸಿದ್ದಾರೆ.
ರಿಚರ್ಡ್ ಆಂಟೋನಿ ಸಿನಿಮಾಗೆ ಅಗತ್ಯಬಿದ್ದರೆ ಕೆಲಸ ಮಾಡುವೆ
ಕೇವಲ ರಿಷಬ್ ಮಾತ್ರವಲ್ಲದೆ, ರಕ್ಷಿತ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ 'ರಿಚರ್ಡ್ ಆಂಟೋನಿ' ಚಿತ್ರಕ್ಕೂ ಬೆಂಬಲ ವ್ಯಕ್ತಪಡಿಸಿದ ರಾಜ್, "ರಕ್ಷಿತ್ ಅವರ ಸಿನಿಮಾ ಕೆಲಸಗಳು ಶುರುವಾದಾಗ ನಾನು ಮತ್ತು ನನ್ನ ತಂಡ ಯಾವ ರೀತಿ ಸಹಾಯ ಮಾಡುವುದಕ್ಕೂ ಸಿದ್ಧರಿದ್ದೇವೆ. ಅದೇ ರೀತಿ ಅರ್ಜುನ್ ಜನ್ಯ ಅವರ '45' ಚಿತ್ರಕ್ಕೂ ನಮ್ಮ ಕಡೆಯಿಂದ ಏನು ಸಾಧ್ಯವೋ ಆ ಎಲ್ಲಾ ಸಹಕಾರ ನೀಡುತ್ತಿದ್ದೇವೆ" ಎನ್ನುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶ ರವಾನಿಸಿದ್ದಾರೆ.


