ಅದು 1985-86ರ ಕಾಲಘಟ್ಟ. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ರಾಘವೇಂದ್ರ ಚಿತ್ರವಾಣಿಯ ಪ್ರಚಾರಕರ್ತರಾಗಿದ್ದ ನಮ್ಮ ಚಿಕ್ಕಪ್ಪ ಡಿವಿ ಸುಧೀಂದ್ರ ಅವರ ಜತೆಯಲ್ಲಿ ಸಿನಿಮಾ ಪ್ರಚಾರದಲ್ಲಿ ಕೆಲಸ ಮಾಡುತ್ತಿದ್ದೆ. ಅದಾಗಲೇ ಮಸ್ತಾನ್‌ ಎಂಬ ಹೆಸರು ಚಿತ್ರರಂಗದವರ ಬಾಯಲ್ಲಿ ನಲಿಯುತ್ತಿತ್ತು. ಡಿಸೈನಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದರವರು. 

-ಪಿಆರ್‌ಒ ಸುಧೀಂದ್ರ ವೆಂಕಟೇಶ್‌

ನಿರ್ಮಾಪಕ, ನಿರ್ದೇಶಕರ ಜತೆಗೆ ಎಷ್ಟೊಂದು ನಂಟಿತ್ತೋ ಅಷ್ಟೇ ನಂಟು ನಮ್ಮ ಅವರ ನಡುವೆಯೂ ಇತ್ತು. ಚಿಕ್ಕಪ್ಪ ನಮ್ಮ ಮನೆಯಲ್ಲಿ ಕಾಲ ಕಳೆದಿದ್ದಕ್ಕಿಂತ ಅವರ ಮನೆಯಲ್ಲಿ ಇದ್ದಿದ್ದೇ ಹೆಚ್ಚು. ಏಕೆಂದರೆ, ಆ್ಯಡ್‌ ಏಜೆನ್ಸಿ ನಮ್ಮದೇ ಆಗಿದ್ದರಿಂದ, ಚಿತ್ರತಂಡದವರು ಜಾಹೀರಾತು ವಿನ್ಯಾಸವನ್ನು ನಮಗೇ ಒಪ್ಪಿಸಿ ಬಿಡುತ್ತಿದ್ದರು. ಆರಂಭದಲ್ಲಿ ಚೆನ್ನೈಯಿಂದಲೇ ಡಿಸೈನ್‌ ಮಾಡಿ ಕಳುಹಿಸುತ್ತಿದ್ದರು. ಮಾಡರ್ನ್‌ ಟ್ರಾವೆಲ್ಸ್‌ ಮೂಲಕ ಡಿಸೈನ್‌ಗಳನ್ನು ಕಳುಹಿಸುತ್ತಿದ್ದರು. ಈಗಿನ ಥರ ಕೊರಿಯರ್‌, ಮೇಲ್‌ ಇರಲಿಲ್ಲ. ಎಲ್ಲವೂ ಹ್ಯಾಂಡ್‌ವರ್ಕ್ನಲ್ಲಿಯೇ ಆಗುತ್ತಿತ್ತು. ಅವರ ಆ ಕ್ರಿಯೇಟಿವ್‌ ಕೆಲಸವೇ ಎಲ್ಲ ನಿರ್ದೇಶಕರ, ನಿರ್ಮಾಪಕರಿಗೆ ಬೇಕಿತ್ತು. ಒಂದು ಡಿಸೈನ್‌ ಕೇಳಿದರೆ, ನಮ್ಮ ಮುಂದೆ ಏಳೆಂಟು ಆಯ್ಕೆಗಳನ್ನು ಅವರು ಇಡುತ್ತಿದ್ದರು. ಅವುಗಳನ್ನು ರೆಡಿಮಾಡಿಸೋವರೆಗೂ ನಾವು ಅವರ ಮನೆಯಲ್ಲಿಯೇ ಠಿಕಾಣಿ ಹೂಡುತ್ತಿದ್ದೆವು.

ಸ್ಯಾಂಡಲ್‌ವುಡ್ ಸಿನಿಮಾ ಪೋಸ್ಟರ್ ಡಿಸೈನರ್ ಕೊರೋನಾದಿಂದ ಸಾವು 

ವ್ಯಕ್ತಿಯಾಗಿ ನೋಡುವುದಾದರೆ ಗರ್ವ ಇರದ ಮನುಷ್ಯ. ಕೆಲಸ ಇರಲಿ, ಇರದೇ ಇರಲಿ ಅದೇ ಅಭಿಮಾನ ಇರುತ್ತಿತ್ತು. ಕೆಲಸ ಅಂತ ಬಂದಾಗ ತುಂಬ ಕಟ್ಟುನಿಟ್ಟು. ಆಗಿನ ಎಲ್ಲ ಸಿನಿಮಾಗಳಿಗೂ ಇವರೇ ಬೇಕು. ಅಷ್ಟೊಂದು ಬಿಜಿಯಾಗಿದ್ದರು, ಆ ಮನುಷ್ಯ ಮಾತ್ರ ದುಡ್ಡಿನ ಹಿಂದೆ ಬೀಳಲಿಲ್ಲ! ಇಷ್ಟುಕೊಡು, ಅಷ್ಟುಕೊಡು ಎಂದು ಯಾವತ್ತೂ ಯಾರನ್ನೂ ಕೇಳಿಲ್ಲ. ಎಷ್ಟುಕೊಡುತ್ತಿದ್ದರೂ ಅಷ್ಟುಪಡೆದುಕೊಳ್ಳುತ್ತಿದ್ದರು. ಅವರ ಆಫೀಸ್‌ಗೆ ಹೋದರೆ, ಅವರ ಶ್ರಮವನ್ನು ನೋಡುತ್ತಿದ್ದೆವು. ಅಂದಿನ ಹನುಮಂತನಗರದ ಆಫೀಸಿನಲ್ಲೇ ಕೊನೆಯವರೆಗೂ ಕೆಲಸ ಮಾಡುತ್ತಿದ್ದರು. ಆಫೀಸ್‌ನ ಹಾಲ್‌ನಲ್ಲಿ ಪೇಪರ್‌ ಕಟಿಂಗ್‌, ಕತ್ತರಿ, ಪೇಂಟಿಂಗ್‌- ಹೀಗೆ ರಾಶಿ ರಾಶಿ ಬಿದ್ದಿರುತ್ತಿತ್ತು. ಹತ್ತಾರು ಹುಡುಗರು ಅಲ್ಲಿ ಕೆಲಸ ಕಲಿಯುತ್ತಿದ್ದರು. ಈಗಿನ ಥರ ಸಿಸ್ಟಮ್ಯಾಟಿಕ್‌ ಟೇಬಲ್‌ಗಳೆಲ್ಲ ಆಗ ಇರಲಿಲ್ಲ. ಎಲ್ಲವೂ ನೆಲದ ಮೇಲೆಯೇ ಕುಳಿತು ಕೆಲಸ ಮಾಡುತ್ತಿದ್ದರು.

ಈ ಪೋಸ್ಟರ್‌, ಡಿಸೈನಿಂಗ್‌, ಪ್ರಚಾರ ಕಲೆಯ ಕೆಲಸದ ಜತೆಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ಅದರಂತೆ ಶುಕ್ಲಾಂಬರದರಂ, ಕಲ್ಲೇಶಿ ಮಲ್ಲೇಶಿ, ಸಿತಾರಾ- ಹೀಗೆ ಮೂರು ಸಿನಿಮಾ ಮಾಡಿದ್ರು. ಸುಧೀಂದ್ರ ಅವರೇ ನಮ್ಮ ಚಿತ್ರಕ್ಕೂ ನಿಮ್ಮ ಸಹಕಾರ ಇರಲಿ ಎಂದರು. ತುಂಬು ಹೃದಯದಿಂದ ಅವರ ಸಿನಿಮಾಗಳನ್ನು ಮಾಡಿಕೊಟ್ಟೆವು. ಅವರು ನೀಡಿದನ್ನೇ ಪಡೆದೆವು. ಅದೇ ರೀತಿ ನಮ್ಮ ಚಿಕ್ಕಪ್ಪ ಪಾಲುದಾರಿಕೆಯಲ್ಲಿ ಸಿನಿಮಾ ಮಾಡಿದಾಗಲೂ ಮಸ್ತಾನ್‌ ನಮ್ಮೊಂದಿಗಿದ್ದರು. ಗಣೇಶನ ಮದುವೆ, ನಗನಗುತಾ ನಲಿ, ಗುಂಡನ ಮದುವೆ, ಪಟ್ಟಣಕ್ಕೆ ಬಂದ ಪುಟ್ಟ- ಹೀಗೆ ಸಾಕಷ್ಟುನಮ್ಮ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಾವು ಕೊಟ್ಟಷ್ಟುದುಡ್ಡು ಪಡೆದುಕೊಂಡಿದ್ದಾರೆ. ಯಾವತ್ತೂ ಕೈ ಎತ್ತಿ ಬೇಡಿದವರಲ್ಲ.

ಹಿರಿಯ ವಿನ್ಯಾಸಕಾರ, ಪ್ರಚಾರಕಲೆಯ ಗಂಗಾಧರ್‌, ಅವರ ಜತೆ ಅಸಿಸ್ಟಂಟ್‌ ಇದ್ದಾಗಿನಿಂದಲೂ ನೋಡಿದ್ದೇನೆ. ಸಹೃದಯಿ. ಡಿಸೈನ್‌ ಲೋಕಕ್ಕೆ ಒಂದು ಭಾಷ್ಯ ಬರೆÜದವರು. ಈಗಿನಂತೆ ಫೋಟೋಶಾಪ್‌ ಇರಲಿಲ್ಲ. ಎಲ್ಲವೂ ತಲೆ ಉಪಯೋಗಿಸಿ ಕ್ರಿಯೇಟಿವ್‌ ಆಗಿಯೇ ಮಾಡಬೇಕಿತ್ತು. ಒಂದು ಡಿಸೈನ್‌ ಹೇಳಿದರೆ ಹತ್ತು ಥರ ಟೈಟಲ್‌ ಮಾಡಿಕೊಡುವವರು. ಅದರಲ್ಲಿ ಒಂದು ಸೆಲೆಕ್ಟ್ ಆಗುವುದು. ಕಥೆ ಕೇಳಿ ಅದರ ಫೀಲ್‌ ನೋಡಿ ಡಿಸೈನ್‌ ಮಾಡುತ್ತಿದ್ದರು. ನಾವೇ ನಿರ್ಮಿಸಿದ ಗಣೇಶನ ಮದುವೆ ಸಿನಿಮಾ ಎಷ್ಟುದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತೋ ಅದರಲ್ಲಿ ಮಸ್ತಾನ್‌ ಅವರ ಕ್ರಿಯೇಟಿವ್‌ ಡಿಸೈನಿಂಗ್‌ ಶ್ರಮವೂ ಅಷ್ಟೇ ಇದೆ. ಅನಂತ್‌ನಾಗ್‌ ಅವರನ್ನು ತೋರಿಸಿದ ರೀತಿ, ವಿನಯಾಪ್ರಸಾದ್‌ ಕನ್ನಡಕ ಹಾಕಿಕೊಂಡು ಅವರನ್ನು ಚಿತ್ರಿಸಿದ ರೀತಿ ಚಿತ್ರಕ್ಕೆ ದೊಡ್ಡ ಮೈಲೇಜ್‌ ತಂದುಕೊಡ್ತು.

ರವಿಚಂದ್ರನ್‌ ಅವರ ಈಶ್ವರಿ ಪ್ರೊಡಕ್ಷನ್ಸ್‌ಗೆ ನಾವು ಖಾಯಂ ಪಿಆರ್‌ಓ ಆಗಿದ್ದೆವೋ ಅದೇ ರೀತಿ ಖಾಯಂ ವಿನ್ಯಾಸಕಾರರಾಗಿ ಮಸ್ತಾನ್‌ ಕೆಲಸ ಮಾಡುತ್ತಿದ್ದರು. ರಣಧೀರ, ಪ್ರೇಮಲೋಕ, ಶಾಂತಿಕ್ರಾಂತಿ- ಹೀಗೆ ಈಶ್ವರಿಯ ಎಲ್ಲ ಸಿನಿಮಾಗಳ ವಿನ್ಯಾಸ ಅವರದ್ದೇ. ಡಾ. ರಾಜಕುಮಾರ್‌ ಅವರ ಸಿನಿಮಾಗಳಿಗೆ ಗಂಗಾಧರ್‌ ಕೆಲಸ ಮಾಡುತ್ತಿದ್ದರೆ, ಇನ್ನುಳಿದ ಸಿನಿಮಾಗಳಿಗೆ ಮಸ್ತಾನ್‌ ಬೇಕಾಗಿದ್ದರು. ಕಾಂಪಿಟೇಟರ್‌ಗಳೇ ಇರಲಿಲ್ಲ ಎಂದರೂ ತಪ್ಪಿಲ್ಲ. ರಣಭೇರಿ 400ನೇ ಸಿನಿಮಾ ಆಗಿದ್ದರಿಂದ ಇಡೀ ಇಂಡಸ್ಟ್ರಿ 30 ಪುಟಕ್ಕೂ ಅಧಿಕ ಜಾಹೀರಾತು ನೀಡಿತ್ತು. ಆ ಚಿತ್ರದ ಸಂಪೂರ್ಣ ಪ್ರಚಾರಕಲೆ ಅವರದ್ದಾಗಿತ್ತು. ಅವರ ಸಿನಿಮಾ ಪೋಸ್ಟರ್‌ ವಿನ್ಯಾಸ ನೋಡಿದರೆ, ಒಂದೊಂದು ಪೋಸ್ಟರ್‌ಗಳೇ ಒಂದೊಂದು ಕಥೆ ಹೇಳುತ್ತಿದ್ದವು. ಅವರು ಆಯ್ಕೆ ಮಾಡಿದ ಫೋಟೋ ರಾಜ್ಯಾದ್ಯಂತ ಕಟೌಟ್‌ ಆಗುತ್ತಿತ್ತು. ಆಗೆಲ್ಲ ಬಟ್ಟೆಗಳಲ್ಲಿ ಪ್ರಿಂಟ್‌ ಮಾಡಲಾಗುತ್ತಿತ್ತು. ಹೋಲ್ಡಿಂಗ್ಸ್‌, ಫೋಟೋ ಕಾರ್ಡ್ಸ್, ಬ್ಯಾನರ್‌-ಎಲ್ಲದರ ಜವಾಬ್ದಾರಿ ಅವರದ್ದೇ ಆಗಿತ್ತು. ಹಾಗೇ ಗತವೈಭವದ ದಿನಗಳನ್ನು ನೋಡಿದ್ದ ಮಸ್ತಾನ್‌, ನಿಧಾನಕ್ಕೆ ಅದರಿಂದ ಮರೆಯಾಗುತ್ತ ಬಂದರು. ಕಾಲವೂ ಬದಲಾಯಿತು. ಕಂಪ್ಯೂಟರ್‌ ಬಂತು. ಅವರ ಕೆಲಸ ನಿಧಾನವಾಗಿ ಕಡಿಮೆಯೂ ಆಯಿತು. ಕಾಂಪಿಟೀಟರ್‌ಗಳ ಸಂಖ್ಯೆಯೂ ಹೆಚ್ಚಾಯಿತು. ಕಂಪ್ಯೂಟರ್‌ ಕಲಿಯುವುದಕ್ಕೆ ಕ್ಲಾಸ್‌ಗೂ ಹೋದರು. ಇತ್ತೀಚಿನ ದಿನಗಳಲ್ಲಿ ಕೆಲಸ ಇತ್ತಾದರೂ, ಮೊದಲಿನ ಗತ್ತು, ಆ ಒಲವು ಉಳಿದಿರಲಿಲ್ಲ. ಏನಿಲ್ಲ ಅಂದರೂ 2000ಕ್ಕೂ ಅಧಿಕ ಸಿನಿಮಾಗಳಲ್ಲಿ ಮಸ್ತಾನ್‌ ಕೆಲಸ ಮಾಡಿದ್ದಾರೆ. ಇದೀಗ ಅವರಿಲ್ಲ ಎಂಬುದೇ ನಮಗೆ ನೋವಿನ ಸಂಗತಿ. ಅವರೊಂದಿಗೆ ಕಳೆದ ದಿನಗಳು, ಅವರ ಕೆಲಸವನ್ನು ಕಣ್ತುಂಬ ನೋಡಿದ ನಾವೇ ಧನ್ಯರು. ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ಹೋಗಿ ಬನ್ನಿ ಮಸ್ತಾನ್‌ ಭಾಯ್‌!...