'ಬಾಸ್' ಚಿತ್ರದ ಬಿಡುಗಡೆಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ದರ್ಶನ್ ಮತ್ತು ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯ ಮೇರೆಗೆ, ಚಿತ್ರಮಂದಿರ, ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರು: ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧಾರಿತ ಎನ್ನಲಾದ ಕನ್ನಡದ ‘ಬಾಸ್’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ.
ಬಾಸ್ ಚಿತ್ರ ಬಿಡುಗಡೆ ಮಾಡದಂತೆ ಚಿತ್ರದ ನಿರ್ಮಾಪಕರು, ನಿರ್ದೇಶಕರು, ವಿತರಕರು ಮತ್ತು ಪ್ರದರ್ಶಕರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ ನಗರದ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದೆ.
ವಿವಾದಿತ ಚಿತ್ರ ಬಿಡುಗಡೆಗೆ ನಿರ್ಬಂಧ
ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಧರಿಸಿದ ಅಥವಾ ದಾವೆದಾರರ ಜೀವನ ಉಲ್ಲೇಖಿಸುವಂತಹ ಅಥವಾ ಅವರ ಜೀವನಕ್ಕೆ ಸಂಬಂಧಿಸಿದ, ಅವರ ಕುಟುಂಬ ಮತ್ತು ಗೌರವಕ್ಕೆ ತೇಜೋವಧೆ ಉಂಟು ಮಾಡುವಂತಹ ವಿವಾದಿತ ಚಿತ್ರವನ್ನು(ಬಾಸ್) ಚಿತ್ರಮಂದಿರ ಅಥವಾ ಒಟಿಟಿ ಮೂಲಕ ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ನಂತರ ಬಾಸ್ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಸಮನ್ಸ್ ಜಾರಿಗೊಳಿಸಿ ದಾವೆಯ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.
ಇದನ್ನೂ ಓದಿ: ನಟ ದರ್ಶನ್ ಭೇಟಿಗೆ ಕೋರ್ಟ್ ಅಸ್ತು; ಇನ್ನೋರ್ವ ಆರೋಪಿಗೆ ಭಾರಿ ದಂಡ- ಆದೇಶದ ಡಿಟೇಲ್ಸ್ ಇಲ್ಲಿದೆ
ಏ.14ರಂದು ರಿಲೀಸ್ ಆಗಬೇಕಿದ್ದ ಚಿತ್ರ
ಬಾಸ್ ಚಿತ್ರವು 2026ರ ಏ.14 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ, ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ. ಚಿತ್ರ ಬಿಡುಗಡೆಯಾದರೆ ತಮ್ಮ ಘನತೆ ಮತ್ತು ಗೌರವವಕ್ಕೆ ಧಕ್ಕೆಯಾಗಲಿದೆ. ಮೇಲಾಗಿ ಪ್ರಕರಣಕ್ಕೆ ಸಂಬಂಧಿಸಿದ ಸೆಷನ್ಸ್ ನ್ಯಾಯಾಯದಲ್ಲಿ ವಿಚಾರಣೆಗೆ ಅಡ್ಡಿ ಉಂಟಾಗಲಿದೆ. ಇದರಿಂದ ಬಾಸ್ ಚಿತ್ರವನ್ನು ಬಿಡುಗಡೆ ಮಾಡದಂತೆ ಆದೇಶಿಸಬೇಕು ಎಂದು ಕೋರಿ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದಾಸನ ಫ್ಯಾನ್ಸ್‌ಗೆ ಕಿಚ್ಚನ ಫ್ಯಾನ್ಸ್ ಪೈಪೋಟಿ..! ಚಾರ್ಜ್ ಶೀಟ್ನಲ್ಲಿ ಸುದೀಪ್ ಫ್ಯಾನ್ಸ್ ಹೆಸರು?


