Valentine's Day Special: 'ಓಲ್ಡ್ ಮಾಂಕ್' ಚಿತ್ರದ ರೀಲ್ ಜೋಡಿಯ ರಿಯಲ್ ಪ್ರೇಮ ಕತೆ!
ಶ್ರೀನಿ ನಿದೇಶಿಸಿ, ನಟಿಸಿರುವ ‘ಓಲ್ಡ್ ಮಾಂಕ್’ ಸಿನಿಮಾ ಇದೇ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಹಾಡುಗಳ ಮೂಲಕ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವ ಈ ಚಿತ್ರದ ನಾಯಕ ಶ್ರೀನಿ ಹಾಗೂ ನಾಯಕಿ ಅದಿತಿ ಪ್ರಭುದೇವ ಅವರು ತಮ್ಮ ನಿಜ ಜೀವನದ ಪ್ರೇಮ ಕತೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಇದು ಪ್ರೇಮಿಗಳ ದಿನದ ವಿಶೇಷ.
ಶ್ರೀನಿ ನಿದೇಶಿಸಿ, ನಟಿಸಿರುವ ‘ಓಲ್ಡ್ ಮಾಂಕ್’ ಸಿನಿಮಾ ಇದೇ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಹಾಡುಗಳ ಮೂಲಕ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವ ಈ ಚಿತ್ರದ ನಾಯಕ ಶ್ರೀನಿ ಹಾಗೂ ನಾಯಕಿ ಅದಿತಿ ಪ್ರಭುದೇವ ಅವರು ತಮ್ಮ ನಿಜ ಜೀವನದ ಪ್ರೇಮ ಕತೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಇದು ಪ್ರೇಮಿಗಳ ದಿನದ ವಿಶೇಷ.
12 ವರ್ಷಗಳ ಸ್ನೇಹ ಪ್ರೀತಿಗೆ ದಾರಿ ಮಾಡಿಕೊಟ್ಟಿತು: ಶ್ರೀನಿ
ನಾನು ಮತ್ತು ಶ್ರುತಿ 12 ವರ್ಷ ಸ್ನೇಹಿತರು. ನಾನು ಸಿನಿಮಾ ನಿರ್ದೇಶಕ. ಶ್ರುತಿ ಸಿನಿಮಾ ಪತ್ರಕರ್ತೆ ಆಗಿದ್ದಾಗ ಹುಟ್ಟಿಕೊಂಡ ಸ್ನೇಹ. ಆಗ ನಾನು ಕೈಲಾಸಂ ಅವರ ನಾಟಕವನ್ನು ಆಧರಿಸಿ ‘ಸಿಂಪ್ಲಿ ಕೈಲಾಸಂ’ ಎನ್ನುವ ಕಿರುಚಿತ್ರ ಮಾಡಿದ್ದೆ. ಅದನ್ನು ಯೂಟ್ಯೂಬ್‌ನಲ್ಲಿ ನೋಡಿದ ಶ್ರುತಿ ಅವರು ಆ ಚಿತ್ರದ ಬಗ್ಗೆ ನನ್ನ ಸಂದರ್ಶನ ಮಾಡಲು ನನ್ನ ಭೇಟಿ ಮಾಡಿದರು. ಹೀಗೆ ನಮ್ಮ ಮೊದಲ ಭೇಟಿ ವೃತ್ತಿಯ ಭಾಗವಾಗಿ ನಡೆಯಿತು. ನನ್ನ ಕಾಲೇಜು ಸಹಪಾಠಿ ವಿವೇಕ್ ಅಂತಿದ್ದರು. ಆತ ನನ್ನ ಅಕ್ಕ ಸಿನಿಮಾ ಪತ್ರಕರ್ತೆ. ನಿನಗೆ ಪರಿಚಯ ಮಾಡಿಸುತ್ತೇನೆ ಎಂದಾಗಲೇ ಗೊತ್ತಾಗಿದ್ದು ಶ್ರುತಿ ಅವರು ನನ್ನ ಕ್ಲಾಸ್‌ಮೆಂಟ್ ವಿವೇಕ್ ಅವರ ಕಸಿನ್ ಅಂತ.
ಅಲ್ಲಿಂದ ನಮ್ಮಿಬ್ಬರ ಸ್ನೇಹ ಮತ್ತಷ್ಟು ಹತ್ತಿರವಾಯಿತು. ನಾನು ಏನಾದರೂ ಸಿನಿಮಾ ಮಾಡಿದರೆ ಶ್ರುತಿ ಅವರನ್ನು ಸಲಹೆ ಕೇಳುತ್ತಿದ್ದೆ. ಅವರೂ ಕೂಡ ನನ್ನ ಬಳಿ ಸಿನಿಮಾಗಳ ಕುರಿತು ಚರ್ಚೆ ಮಾಡುತ್ತಿದ್ದರು. ನಮ್ಮಿಬ್ಬರ ಸ್ನೇಹ ಪ್ರೀತಿ ಆಗುವುದಕ್ಕೆ ನಾನೇ ಕಾರಣ ಆದೆ. ಅಂದರೆ ನಾನೇ ಮೊದಲು ಪ್ರಪೋಸ್ ಮಾಡಿದೆ. ಶ್ರುತಿ ಅವರು ನೋ ಎನ್ನದೆ ಒಪ್ಪಿಕೊಂಡಿದ್ದು ಪ್ರೀತಿ ಮೇಲಿನ ನನ್ನ ನಂಬಿಕೆ ಮತ್ತಷ್ಟು ಹೆಚ್ಚಿಸಿತು. ಮುಂದೆ ಲವ್ ಕಂ ಅರೇಂಜ್ ಮ್ಯಾರೇಜ್ ಆದ್ವಿ. ನನ್ನ ಪ್ರಕಾರ ಪ್ರೀತಿ ಎಂದರೆ ನಂಬಿಕೆ. ಇದರಲ್ಲಿ ಯಾವುದೇ ಗೊಂದಲ ಇರಬಾರದು.
ನಮ್ಮ ಎಲ್ಲ ಸಂಬಂಧಗಳಿಗೂ ಹಾಗೂ ಪ್ರೀತಿ ಹುಟ್ಟಿಕೊಳ್ಳುವುದಕ್ಕೂ ನಂಬಿಕೆಯೇ ಬುನಾದಿ. ಹೊಂದಾಣಿಕೆ ತುಂಬಾ ಮುಖ್ಯ. ಪರಸ್ಪರ ಇಬ್ಬರು ವೃತ್ತಿಗಳನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡರೆ ಅದಕ್ಕಿಂತ ಸುಂದರವಾದ ಪ್ರೇಮ ಕತೆ ಬೇರೆ ಎಲ್ಲೂ ನೋಡಲಾಗದು. ನಮ್ಮ ಜೀವನದಲ್ಲೇ ನೋಡುತ್ತೇವೆ ಎನ್ನುವುದಕ್ಕೆ ನಾನು ಮತ್ತು ಶ್ರುತಿಯೇ ಸಾಕ್ಷಿ. ನಿರ್ದೇಶಕ ಮತ್ತು ಪತ್ರಕರ್ತರ ಸಂಬಂಧ ಗಂಡ ಹೆಂಡತಿ ಥರಾ ಅಂತಾರೆ. ನಾವು ನಿಜ ಜೀವನದಲ್ಲೇ ಗಂಡ ಹೆಂಡತಿ ಆಗಿರುವುದು ವಿಶೇಷ. ನನ್ನ ಪತ್ನಿ ಶ್ರುತಿಯೇ ನನ್ನ ಚಿತ್ರಗಳ ಮೊದಲ ವಿಮರ್ಶಕಿ.
Valentine's Day 2022- ವಿದೇಶಿಯರ ಮದುವೆಯಾದ ನಟಿಯರು!
ಸಿನಿಮಾಗಳಲ್ಲಿ ನೋಡುವ ಪ್ರೇಮ ಕತೆಗೂ ನಿಜ ಜೀವನದ ಪ್ರೇಮ ಕತೆಗಳಿಗೂ ತುಂಬಾ ವ್ಯತ್ಯಾಸಗಳು ಇರಲ್ಲ. ಮಣಿರತ್ನಂ ಅವರ ನಿರ್ದೇಶನದ ಸಿನಿಮಾಗಳು ನೋಡಿದರೆ ನಮ್ಮದೇ ಲವ್ ಸ್ಟೋರಿ ಹೇಳುತ್ತಿದ್ದಾರೆ ಅನಿಸುತ್ತದೆ. ಕನ್ನಡದಲ್ಲಿ ನನ್ನ ಅಚ್ಚುಮೆಚ್ಚಿನ ಪ್ರೇಮ ಕತೆಯ ಚಿತ್ರ ಎಂದರೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ನಟನೆಯ ‘ಬಂಧನ’. ಆ ನಂತರ ‘ದಿಯಾ’, ‘ಮುಂಗಾರು ಮಳೆ’, ಹಿಂದಿಯ ‘ಡಿಡಿಎಲ್‌ಜೆ’ ಚಿತ್ರಗಳು. ನಮ್ಮ‘ಓಲ್ಡ್ ಮಾಂಕ್’ ಚಿತ್ರದಲ್ಲೂ ಅದ್ಭುತವಾದ ಮೆಚೂರಿಟಿ ಪ್ರೇಮ ಕತೆ ಇದೆ. ಇಡೀ ಕುಟುಂಬವೇ ಕೂತು ನೋಡುವ ಪ್ರೇಮ ಕತೆಯನ್ನು ಹೇಳಿದ್ದೇವೆ. ಅದು ಫನ್ ಮೂಲಕ ಎಂಬುದು ವಿಶೇಷ.
ನನ್ನ ಸಿಂಪಲ್ ಆಲೋಚನೆಗಳಿಗೆ ಹತ್ತಿರ ಇದ್ದ ಹುಡುಗನೇ ಸಿಕ್ಕ: ಅದಿತಿ ಪ್ರಭುದೇವ
ನನ್ನ ಆಲೋಚನೆಗಳಿಗೆ ಹತ್ತಿರವಾಗಿರುವ, ನನ್ನಷ್ಟೇ ಸಿಂಪಲ್ಲಾಗಿ ಜೀವನ ಮಾಡುವ, ತುಂಬಾ ಭಾವುಕತೆಯಲ್ಲಿ ಸಂಬಂಧಗಳನ್ನು ನೋಡುವ ಹುಡುಗನೇ ಜೀವನ ಸಂಗಾತಿಯಾಗಿ ಸಿಕ್ಕಿದ್ದಾರೆ ಎಂಬುದೇ ಈ ವರ್ಷದ ಪ್ರೇಮಿಗಳ ದಿನದ ಖುಷಿಯ ವಿಚಾರ. ನಾನು ಸಿನಿಮಾ ನಟಿಯಾದರೂ ನನ್ನ ಆಸಕ್ತಿ, ನನ್ನ ಕನಸುಗಳ ಬಗ್ಗೆ ಮೊದಲೇ ತಿಳಿದುಕೊಂಡು, ಆ ನಂತರ ನಮ್ಮ ಮನೆಗೆ ಬಂದು ಸಂಬಂಧ ಬೆಳೆಸಿದರು. ಹುಡುಗನನ್ನು ಒಂದು ಸಲ ನೋಡಿ ನಿನ್ನ ಅಭಿಪ್ರಾಯ ಹೇಳು ಎಂದು ಮನೆಯಲ್ಲಿ ಹೇಳಿದಾಗ ಒಂದು ಸಲ ನೋಡೋಣ ಅಂತ ಮಾತ್ರ ಹೋದವಳಿಗೆ ಮೊದಲ ನೋಟದಲ್ಲೇ ಇಂಪ್ರೆಸ್ ಮಾಡಿದ್ದು, ಯಶಸ್.
ಆ ಮೊದಲ ಭೇಟಿಯನ್ನು ನಾನು ಮರೆಯಲಾರೆ. ಅದು ಪ್ರೇಮಿಗಳ ದಿನ ಮಾತ್ರವಲ್ಲ, ಪ್ರತಿ ದಿನ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನಾವು ಇಷ್ಟಪಡೋರಿಗಿಂತ ನಮ್ಮನ್ನು ಇಷ್ಟಪಡೋರು ಸಿಕ್ಕರೆ ಜೀವನ ಎಷ್ಟು ಅದ್ಭುತವಾಗಿರುತ್ತದೆ ಎಂಬುದುನ್ನು ಈಗೀಗ ಕಾಣುತ್ತಿದ್ದೇನೆ. ಯಶಸ್, ಐ ಲವ್ ಯೂ ಎಂದು ಪ್ರತಿ ದಿನ ಹೇಳುವಷ್ಟು ಸ್ವಚ್ಚವಾದ ಪ್ರೇಮ ಕತೆ ನಮ್ಮದು. ಪ್ರೀತಿ ಅನ್ನೋದು ಪ್ರತಿ ದಿನ ಕಟ್ಟುವಂತಹುದು ಎಂಬುದು ನಾನು ಕಂಡುಕೊಂಡಿದ್ದೇನೆ. ದೊಡ್ಡವರು ಒಪ್ಪಿಕೊಂಡ ಮೇಲೆ ನಿಶ್ಚಿತಾರ್ಥ ಮಾಡಿಕೊಂಡ್ವಿ. ಈಗ ಪ್ರೇಮಿಗಳಾಗಿದ್ದೇವೆ. ನನ್ನ ಪ್ರಕಾರ ಪ್ರತಿ ದಿನವೂ ಪ್ರೇಮಿಗಳ ದಿನವೇ ಆಗಬೇಕು.
Valentine's Dayಯಂದು ಸಪ್ತಪದಿ ತುಳಿದ ಸೆಲೆಬ್ರೆಟಿ ಕಪಲ್ಸ್!
ಪ್ರೀತಿಗೆ ಹೆತ್ತವರ ಒಪ್ಪಿಗೆ ಸಿಕ್ಕರೆ ಪ್ರೇಮಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಮತ್ತು ಅದೇ ನಿಜವಾದ ಪ್ರೀತಿ ಕೂಡ ಆಗುತ್ತದೆ. ‘ಓಲ್ಡ್ ಮಾಂಕ್’ ಸಿನಿಮಾ ಮಾಡುವಾಗ ನಾನು ಚಿತ್ರದ ನಾಯಕ ಶ್ರೀನಿ ಅವರು ನಿಜ ಜೀವನದ ಪ್ರೇಮ ಕತೆ ಕೇಳಿ ತುಂಬಾ ಥ್ರಿಲ್ಲಾಗಿದ್ದೆ. ನನಗೂ ಒಂದು ಹುಡುಗನನ್ನು ಹುಡುಕಿ ಕೋಡಿ ಎಂದು ಶ್ರೀನಿ ಅವರನ್ನು ರೇಗಿಸುತ್ತಿದ್ದೆ. ಅಷ್ಟರ ಮಟ್ಟಿಗೆ ಅವರ ಪ್ರೇಮ ಕತೆ ನನಗೆ ಸ್ಫೂರ್ತಿ. ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಇದೇ ರೀತಿಯ ಒಂದು ಬ್ಯೂಟಿಫುಲ್ಲಾದ ಪ್ರೇಮ ಕತೆ ಇದೆ. ಅದನ್ನು ನೀವು ತೆರೆ ಮೇಲೆ ನೋಡಿ ಆನಂದಿಸಬೇಕು. ಅಂದಹಾಗೆ ‘ನಾ ನಿನ್ನ ಮರೆಯಲಾರೆ’ ನನ್ನ ಇಷ್ಟದ ಪ್ರೇಮ ಕತೆಯ ಸಿನಿಮಾ.