ಡಾ. ರಾಜ್‌ಕುಮಾರ್ ಅಭಿನಯದ 1972ರ ಕ್ಲಾಸಿಕ್ ಸಿನಿಮಾ 'ಜಗಮೆಚ್ಚಿದ ಮಗ' 54 ವರ್ಷಗಳ ಬಳಿಕ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಲರ್‌ನಲ್ಲಿ ಮರುಬಿಡುಗಡೆಯಾಗುತ್ತಿದೆ. ನವೆಂಬರ್ 1ರಂದು ತೆರೆಕಾಣಲಿರುವ ಈ ಚಿತ್ರವನ್ನು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ವೈಡ್‌ಸ್ಕ್ರೀನ್ ಮತ್ತು 5.1 ಸೌಂಡ್‌ನೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ.

ಕಾಲ ಎಷ್ಟೇ ಬದಲಾದರೂ, ಡಾ.ರಾಜ್​ಕುಮಾರ್​ಅವರ ಸಿನಿಮಾಗಳು ಮಾತ್ರ ಎವರ್​ಗ್ರೀನ್​. ಇಂದಿನ ಎಷ್ಟೋ ಸಿನಿಮಾಗಳು ರಿಲೀಸ್​ ಆಗಿ ಒಂದಷ್ಟು ತಿಂಗಳೋ, ವರ್ಷನೋ ಹಿಟ್​ ಲಿಸ್ಟ್​ನಲ್ಲಿ ಇದ್ದರೂ, ಕೊನೆಗೆ ಜನ ಅದನ್ನು ಮರೆತು ಬಿಡುತ್ತಾರೆ. ಆದರೆ ಅಣ್ಣಾವ್ರ ಸಿನಿಮಾ ಮಾತ್ರ ಎಲ್ಲ ಕಾಲಕ್ಕೂ ತಕ್ಕಂಥದ್ದೇ ಆಗಿದೆ. ಅದು ಬ್ಲ್ಯಾಕ್​ ಆ್ಯಂಡ್ ವೈಟ್​ ಯುಗದಿಂದ ಹಿಡಿದು ಕಲರ್​ ಯುಗದವರೆಗೂ ಆ ಸಿನಿಮಾದ ಹಾಡುಗಳು ಕೂಡ ಎವರ್​ಗ್ರೀನ್​. ಅರ್ಥವೇ ಇಲ್ಲದ ಇಂದಿನ ಸಿನಿಮಾ ಹಾಡುಗಳ ನಡುವೆ, ಡಾ.ರಾಜ್​ ಅವರ ಸಿನಿಮಾಕ್ಕೆ ಇರುವ ಪ್ರಾಮುಖ್ಯತೆ ಅಂಥದ್ದು. ಇದೀಗ, 1972ರಲ್ಲಿ ತೆರೆಕಂಡಿದ್ದ ಡಾ. ರಾಜ್‌ಕುಮಾರ್‌ ಅಭಿನಯದ ಕ್ಲಾಸಿಕ್ ಚಿತ್ರ ‘ಜಗಮೆಚ್ಚಿದ ಮಗ’ ಬರೋಬ್ಬರಿ 54 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದೆ. ಬರುವ ನವೆಂಬರ್​ 1ರ ಕನ್ನಡ ರಾಜ್ಯೋತ್ಸವದಂದು ಅಂದಿನ ಕಪ್ಪು-ಬಿಳುಪು ಚಿತ್ರವನ್ನು ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಲರ್‌ನಲ್ಲಿ ಮರುಸಿದ್ಧಪಡಿಸಲಾಗಿದೆ.

ಏನಿದೆ ವಿಶೇಷತೆ?

ಈ ಕುರಿತು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಸಿನಿಮಾ ವಿತರಕರಾಗಿರುವ ಉದಯ್​ ಶಂಕರ್​ ಅವರು ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಕಲರ್​ಫುಲ್​ ಆಗಿ ಮಾಡುವುದಕ್ಕೆ ಒಂದು ಕೋಟಿಗೂ ಅಧಿಕ ವೆಚ್ಚವಾಗಿದೆ ಎಂದಿದ್ದಾರೆ. ಬಜೆಟ್​ ಬಗ್ಗೆ ಮಾತನಾಡುವುದೇ ಬೇಡ. ಕೊಟ್ಟು ಕಳೆದುಕೊಂಡಿದ್ದೇ ಸುಮಾರಾಗಿದೆ ಎನ್ನುತ್ತಲೇ ಈ ವಿಷಯ ತೆರೆದಿಟ್ಟರು. ಆದರೆ, ಅಣ್ಣಾವ್ರ ಸಿನಿಮಾವನ್ನು ತುಂಬಾ ಚೆನ್ನಾಗಿ ತರುವ ಹಿನ್ನೆಲೆಯಲ್ಲಿ ಇಷ್ಟು ಖರ್ಚು ಮಾಡಲಾಗಿದೆ. ವೈಡ್‌ಸ್ಕ್ರೀನ್ ಸಿನಿಮಾಸ್ಕೋಪ್ ಹಾಗೂ 5.1 ಸರೌಂಡ್ ಸೌಂಡ್‌ನಲ್ಲೂ ಚಿತ್ರವನ್ನು ಅಪ್‌ಗ್ರೇಡ್ ಮಾಡಲಾಗಿದೆ. ಇದರ ಹಿಂದೆ ತುಂಬಾ ಶ್ರಮವಿದೆ ಎಂದಿದ್ದಾರೆ.

ಮೊದಲಿಗೆ ಅದರ ನಿರ್ಮಾಪಕರ ಕುಟುಂಬಸ್ಥರನ್ನು ಹುಡುಕುವುದೇ ದೊಡ್ಡ ಸಾಹಸವಾಯಿತು. ಏಕೆಂದರೆ ನಿರ್ಮಾಪಕರು ಈಗ ಇಲ್ಲ. ಅವರ ಕುಟುಂಬದವರು ಚದುರಿ ಹೋಗಿದ್ದಾರೆ. ಇದಕ್ಕಾಗಿ ಐದು ವರ್ಷ ಅಲೆದಾಟ ಮಾಡಿದೆ. ಕೊನೆಗೂ ಮೂಲ ಪ್ರಿಂಟ್​ ಸಿಕ್ಕಿತು ಎಂದು ತಮ್ಮ ತಂಡ ಪಟ್ಟಿರುವ ಸಾಹಸದ ಕುರಿತು ಹೇಳಿದ್ದಾರೆ. ಈ ಹಿಂದೆ ಕಸ್ತೂರಿ ನಿವಾಸ ಮಾಡಿದ್ದೆವು. ಮುಂದೆ ಮಂತ್ರಾಲಯ ಮಹಾತ್ಮೆನೂ ಕಲರ್​ನಲ್ಲಿ ಮಾಡುವ ಪ್ಲ್ಯಾನ್​ ಇದೆ ಎಂದ ಅವರು, ಈಗ ಜಗ ಮೆಚ್ಚಿದ ಮಗ ಸಿನಿಮಾವನ್ನೇ ಆಯ್ಕೆ ಮಾಡಿದ್ದೇಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಈ ಸಿನಿಮಾ ಬಹಳಷ್ಟು ಸಿನಿಮಾಕ್ಕಿಂತ ಡಿಫರೆಂಟ್​ ಅನ್ನಿಸಿತು. ಅದಕ್ಕಾಗಿ ಆಯ್ಕೆ ಮಾಡಿದೆ. ಇವತ್ತಿನ ಟೆಕ್ನಾಲಜಿನಲ್ಲಿ ಏನಿದೆ ಎಫೆಕ್ಟ್ ಟ್ರಾಕ್ ಅದೆಲ್ಲ ಹಾಕಿದ್ದೇವೆ. ಐದು ದಶಕಗಳಷ್ಟು ಹಳೆಯದಾದ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ಗುಣಮಟ್ಟಕ್ಕೆ ತಕ್ಕಂತೆ ಪರಿವರ್ತಿಸುವುದು ಅತ್ಯಂತ ಸವಾಲಿನ ತಾಂತ್ರಿಕ ಪ್ರಕ್ರಿಯೆ. ಕಳೆದ 18 ತಿಂಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ರಿಸ್ಟೋರೇಷನ್ ಮತ್ತು ಕಲರ್ ಗ್ರೇಡಿಂಗ್ ಕೆಲಸ ನಡೆದಿದೆ ಎಂದಿದ್ದಾರೆ.

ಡಾ.ರಾಜ್​ ಅವರನ್ನು ನೋಡಿದಾಗ...

ನಮ್ಮ ತಂದೆ ಸಿನಿಮಾ ಮಾಡೋ ಕಾಲದಲ್ಲಿ ನಾನು ರಾಜಕುಮಾರ್ ನೋಡಬೇಕು ಅಂತ ಅಂದುಕೊಂಡಿದ್ದೆ. ಆಗಿನ ಮದ್ರಾಸ್​ನಲ್ಲಿ ಕೃಷ್ಣ ರುಕ್ಮಿಣಿ ಸತ್ಯಭಾಮ ಶೂಟಿಂಗ್ ನಡೀತಾ ಇತ್ತು. ಅಲ್ಲಿಗೆ ಹೋಗಿ ಡಾ.ರಾಜ್​ ದರ್ಶನವಾದಾಗ ಮಾತೇ ಬರಲಿಲ್ಲ. ದೇವರೇ ಇಲ್ಲಿ ಎಲ್ಲಿಗೋ ಬಂದುಬಿಟ್ಟಿದ್ದಾನೆ ಎಂದುಕೊಂಡೆ. ಅಂಥ ಅನುಭವ ಆಗಿತ್ತು. ಈಗ ಅವರ ಸಿನಿಮಾ ಕಲರ್​ ಮಾಡುತ್ತಿರುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ.

ಹಿರಿಯ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ್ದ ‘ಜಗಮೆಚ್ಚಿದ ಮಗ’ ಚಿತ್ರವನ್ನು ಮೂಲತಃ ಭವನಾರಾಯಣ್ ನಿರ್ಮಿಸಿದ್ದರು. ಡಾ. ರಾಜ್‌ಕುಮಾರ್‌ ಜೊತೆಗೆ ಭಾರತಿ, ಕೆ.ಎಸ್. ಅಶ್ವತ್ಥ್, ಎಂ.ವಿ. ರಾಜಮ್ಮ ಹಾಗೂ ಹಾಸ್ಯನಟರ ಸಾಮ್ರಾಟ್‌ ನರಸಿಂಹರಾಜು ಸೇರಿದಂತೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.