ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಅವರೇ ಕಾರಣವೆಂದು ಈ ಹಿಂದೆ ದೂಷಿಸಲಾಗಿತ್ತು. ಆದರೆ, ಇದೀಗ ಅವರ ತಾಯಿಯದ್ದು ಎನ್ನಲಾದ ಆಡಿಯೋವೊಂದು, ನಟನ ಅನುಮಾನ ಮತ್ತು ಸರ್ವಾಧಿಕಾರಿ ಮನಸ್ಥಿತಿಯೇ ಸಂಬಂಧ ಮುರಿಯಲು ಕಾರಣ ಎಂದು ಬಹಿರಂಗಪಡಿಸಿದೆ.

ಬೆಂಗಳೂರು (ಮಾ.10): ಸ್ಯಾಂಡಲ್‌ವುಡ್‌ನ ಅತೀ ದೊಡ್ಡ ಸುದ್ದಿಯೊಂದು ಈಗ ಸ್ಫೋಟಗೊಂಡಿದೆ. ಸುಮಾರು ಎಂಟು ವರ್ಷಗಳ ಹಿಂದೆ ಇಡೀ ಕರ್ನಾಟಕವೇ ಮೆಚ್ಚಿಕೊಂಡಿದ್ದ 'ಕರುನಾಡ ಕ್ರಶ್' ರಶ್ಮಿಕಾ ಮಂದಣ್ಣ ಮತ್ತು ಖ್ಯಾತ ನಟನೊಂದಿನ ಅವರ ಪ್ರೇಮಕಥೆ ಮುರಿದುಬಿದ್ದಾಗ, ಎಲ್ಲರೂ ಬೆರಳು ತೋರಿಸಿದ್ದು ರಶ್ಮಿಕಾ ಕಡೆಗೆ. ರಶ್ಮಿಕಾ ನಂಬಿಕೆ ದ್ರೋಹಿ, ಆಕೆ ಮೋಸಗಾತಿ ಎಂಬ ಹಣೆಪಟ್ಟಿ ಹಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ಟ್ರೋಲ್ ಮಾಡಲಾಗಿತ್ತು. ಆದರೆ, ಈ ಬ್ರೇಕಪ್‌ಗೆ ಅಸಲಿ ಕಾರಣ ರಶ್ಮಿಕಾ ಅಲ್ಲ, ಬದಲಾಗಿ ನಟನ ಅತಿಯಾದ ಅನುಮಾನ, ಅಸೂಯೆ ಮತ್ತು 'ಹಿಟ್ಲರ್' ಮನಸ್ಥಿತಿ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅದಕ್ಕೆ ಕಾರಣ, ರಶ್ಮಿಕಾ ಅವರ ತಾಯಿಯದ್ದು ಎನ್ನಲಾದ ಆಡಿಯೋ..

Add Asianetnews Kannada as a Preferred SourcegooglePreferred

ಹಿರಿಯ ಸಿನಿಮಾ ಪತ್ರಕರ್ತ ಮಹೇಶ್‌ ದೇವಿಶೆಟ್ಟಿ ತಮ್ಮ ಯೂಟ್ಯೂಬ್‌ ಚಾನೆಲ್‌ 'ಕೊನೆ ಆಟ ಯಾರನ್ನು ಬಿಡಲ್ಲ'ದಲ್ಲಿ ಇಡೀ ಬ್ರೇಕಪ್‌ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅದರೊಂದಿಗೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣ ಅವರದ್ದು ಎನ್ನಲಾದ ಆಡಿಯೋವನ್ನು ರಿಲೀಸ್‌ ಮಾಡಿದ್ದಾರೆ. ಇದರಲ್ಲಿ ನಟನ ಅವರ ಸರ್ವಾಧಿಕಾರಿ ವರ್ತನೆಯನ್ನು ಎಳೆಎಳೆಯಾಗಿ ಅವರು ಬಿಚ್ಚಿಟಟಿದ್ದಾರೆ.

ರಶ್ಮಿಕಾ ಮಾಡೆಲಿಂಗ್ ಲೋಕದಲ್ಲಿದ್ದಾಗ ಆಕೆಯನ್ನು ಚಿತ್ರರಂಗಕ್ಕೆ ಕರೆತಂದಿದ್ದು ಇದೇ ನಟ. ಆದರೆ ಪ್ರೀತಿ ಬೆಳೆದಂತೆ ನಟನಲ್ಲಿ Possessiveness ಅತಿಯಾಯಿತು. ಆಕೆ ಎಲ್ಲಿ ಹೋಗಬೇಕು, ಯಾರ ಜೊತೆ ಇರಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಿದ್ದ. ಆಕೆ ಕುಳಿತರೂ ತಪ್ಪು, ನಿಂತರೂ ತಪ್ಪು ಎನ್ನುವಂತಹ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

35 ವರ್ಷದ ವ್ಯಕ್ತಿಗೆ ಮಗಳನ್ನು ಕೊಟ್ಟಿದ್ದೇ ದೊಡ್ಡತನ

ಬ್ರೇಕಪ್ ಸಮಯದಲ್ಲಿ ರಶ್ಮಿಕಾಗೆ ಕೇವಲ 21 ವರ್ಷ, ಆದರೆ ನಟನಿಗೆ 35 ವರ್ಷ ವಯಸ್ಸು. "21 ವರ್ಷದ ಹುಡುಗಿಯನ್ನು 35 ವರ್ಷದ ಹುಡುಗನಿಗೆ ಕೊಟ್ಟಿದ್ದೇ ನನ್ನ ದೊಡ್ಡತನ" ಎಂದು ರಶ್ಮಿಕಾ ತಾಯಿ ನೋವಿನಿಂದ ಹೇಳಿಕೊಂಡಿದ್ದಾರೆ. ಇಷ್ಟಿದ್ದರೂ ಈ ಖ್ಯಾತ ನಟ ಸಣ್ಣಪುಟ್ಟ ವಿಷಯಕ್ಕೂ ರಶ್ಮಿಕಾ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ, ಆಕೆಯ ಮೇಲೆ ಸವಾರಿ ಮಾಡಲು ನೋಡುತ್ತಿದ್ದ ಎಂದು ಆಡಿಯೋದಲ್ಲಿ ದೂರಲಾಗಿದೆ.

ಕೊನೇ ಸಿನಿಮಾ ಎಂದು ಟ್ವೀಟ್‌ ಮಾಡು ಎಂದಿದ್ದ ನಟ

ರಶ್ಮಿಕಾ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾದ ದರ್ಶನ್, ಧ್ರುವ ಸರ್ಜಾ, ಗಣೇಶ್ ಅವರೊಂದಿಗೆ ನಟಿಸಿ ಬೆಳೆಯುತ್ತಿರುವುದು ನಟನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ರಶ್ಮಿಕಾಗೆ ತೆಲುಗಿನ 'ಗೀತಾ ಗೋವಿಂದಂ' ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ನಟ ಹಾಗೂ ಆತನ ಗ್ಯಾಂಗ್ ಆಕೆಯ ಮೇಲೆ ಸಿನಿಮಾ ಬಿಟ್ಟುಬಿಡುವಂತೆ ಅತಿಯಾದ ಒತ್ತಡ ಹೇರಿತು ಎಂದಿದ್ದಾರೆ. "ನಾನು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ ವೃತ್ತಿಜೀವನ ಅಂತ್ಯಗೊಳಿಸು" ಎಂದು ಆಕೆಗೆ ಹೇಳಲಾಗಿತ್ತು ಎಂದು ರಶ್ಮಿಕಾ ಅವರ ತಾಯಿ ಆಡಿಯೋದಲ್ಲಿ ಹೇಳಿದ್ದಾರೆ.

ಗೀತಾ ಗೋವಿಂದಂ ಸಿನಿಮಾದ ಕಿಸ್ಸಿಂಗ್‌ ಸೀನ್‌ಗೆ ಆಗಿತ್ತು ಗಲಾಟೆ

ಇನ್ನು ಗೀತಾ ಗೋವಿಂದಂ ಸಿನಿಮಾದಲ್ಲಿ ಕಥೆಯ ಅಗತ್ಯಕ್ಕೆ ತಕ್ಕಂತೆ ಕಿಸ್ಸಿಂಗ್ ಸೀನ್ ಒಂದರಲ್ಲಿ ರಶ್ಮಿಕಾ ನಟಿಸಿದ್ದರು. ಇದಕ್ಕೆ ಮೊದಲೇ ಆಕೆಯ ತಾಯಿ ಅನುಮತಿ ನೀಡಿದ್ದರು. ಆದರೆ ಈ ದೃಶ್ಯ ವೈರಲ್ ಆದ ತಕ್ಷಣ ನಟ ಸಂಪೂರ್ಣವಾಗಿ ಬದಲಾಗಿಬಿಟ್ಟ. ರಶ್ಮಿಕಾಳನ್ನು ಸಿನಿಮಾದಿಂದ ಬಿಡಿಸಿ, ಮದುವೆ ಮಾಡಿಕೊಂಡು ಮನೆಯೊಳಗೆ ಕೂಡಿಹಾಕಬೇಕು ಎಂಬುದು ಆತನ ಗ್ಯಾಂಗ್‌ನ ಪ್ಲ್ಯಾನ್ ಆಗಿತ್ತು ಎಂದು ಅವರ ತಾಯಿ ಆಡಿಯೋದಲ್ಲಿ ಹೇಳಿದ್ದಾರೆ

ಮಿಡ್‌ನೈಟ್‌ನಲ್ಲಿ ಕಾರ್‌ ಕಳಿಸಿ ಹೈದರಾಬಾದ್‌ನಿಂದ ಬಾ ಎಂದಿದ್ದ

ರಶ್ಮಿಕಾ ತಾಯಿ ವಿವರಿಸಿದ ಮತ್ತೊಂದು ಘಟನೆ ನಟನ ವರ್ತನೆಗೆ ಸಾಕ್ಷಿ ಎನ್ನುವಂತಿದೆ. "ಗೀತಾ ಗೋವಿಂದಂ" ಸಿನಿಮಾ ಬಿಡುಗಡೆಯ ಮುನ್ನಾದಿನ ರಾತ್ರಿ ಎರಡು ಗಂಟೆಗೆ ನಟ ಮತ್ತು ಆತನ ಮ್ಯಾನೇಜರ್ ರಶ್ಮಿಕಾಗೆ ಫೋನ್ ಮಾಡಿ, "ಈ ಕೂಡಲೇ ಇನ್ನೋವಾ ಕಾರ್ ಹತ್ತಿ ಬೆಂಗಳೂರಿಗೆ ಬಾ, ನಟನನ್ನು ನೋಡಿ ಬೆಳಿಗ್ಗೆ 8 ಗಂಟೆಗೆ ವಾಪಸ್ ಹೋಗು" ಎಂದು ಹಠ ಹಿಡಿದಿದ್ದರಂತೆ. ಪ್ರೆಸ್ ಮೀಟ್ ಮತ್ತು ಸಿನಿಮಾ ಬಿಡುಗಡೆಯ ಒತ್ತಡದಲ್ಲಿದ್ದ ರಶ್ಮಿಕಾಳ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಯೋಚಿಸದೆ ಆತ ವರ್ತಿಸಿದ್ದ ಎಂದು ತಾಯಿ ಕಿಡಿಕಾರಿದ್ದಾರೆ.

ಕುಟುಂಬದವರಿಂದ ಸಾರಿ ಕೇಳುವ ಡಿಮ್ಯಾಂಡ್

ಇನ್ನು ನಟ, ತನ್ನ ತಾಯಿ ಮತ್ತು ಅಣ್ಣನ ಹೆಂಡತಿಯ ಮೂಲಕ ರಶ್ಮಿಕಾ ತಾಯಿಗೆ ಫೋನ್ ಮಾಡಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ರಶ್ಮಿಕಾ ತಾಯಿ ಬಂದು ನಟನ ತಾಯಿಗೆ 'ಸಾರಿ' ಕೇಳಬೇಕು ಎಂಬ ವಿಚಿತ್ರ ಡಿಮ್ಯಾಂಡ್ ಇಡಲಾಗಿತ್ತು. "ನಾನು ಹತ್ತು ಜನರಿಗೆ ಸಹಾಯ ಮಾಡಿದವಳು, ತಪ್ಪು ಮಾಡದೆ ಸಾರಿ ಕೇಳುವ ಅವಶ್ಯಕತೆ ಇಲ್ಲ" ಎಂದು ರಶ್ಮಿಕಾ ಅವರ ತಾಯಿ ಆಡಿಯೋದಲ್ಲಿ ಹೇಳಿದ್ದಾರೆ.

ಇಷ್ಟು ದಿನ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಜನರು, ಆಕೆಯನ್ನು ಪ್ರಾಣಿಗಳಿಗೆ ಹೋಲಿಸಿ ಟ್ರೋಲ್ ಮಾಡಿದ್ದವರು ಈಗ ಆಕೆಯ ಮೌನದ ಹಿಂದಿನ ನೋವನ್ನು ಅರ್ಥಮಾಡಿಕೊಳ್ಳಬೇಕಿದೆ. ಸ್ಕ್ರೀನ್ ಮೇಲೆ 'ಲವರ್ ಬಾಯ್' ಆಗಿ, ಎಮೋಷನಲ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಹೀರೋಗಳ ನಿಜ ಜೀವನದ ಮುಖವಾಡ ಇಷ್ಟು ಭಯಾನಕವಾಗಿರುತ್ತದೆಯೇ? ಪ್ರೀತಿಯ ಹೆಸರಿನಲ್ಲಿ ಗುಲಾಮಗಿರಿ ನಡೆಸಿದವರು ಯಾರು? ಎಂಬ ಪ್ರಶ್ನೆ ಈಗ ಮೂಡಿದೆ.