ಕೆಲವು ಸಿನಿಮಾಗಳು ನಿಮ್ಮ ನೀವೇ ಮರೆತಿರುವ ಹಳೆಯ ನೆನಪಿನ ಪೆಟ್ಟಿಗೆಯನ್ನು ಥಟ್ಟನೆ ತೆರೆದು ಬಿಡುತ್ತದೆ. ನನಗೆ ಅಂತಹದೇ ಅನುಭವ ಕೊಟ್ಟ ಸಿನಿಮಾ ಮಿಥ್ಯ. ಹೀಗೆ ಬರೆದುಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.
ಕೆಲವು ಸಿನಿಮಾಗಳು ನಿಮ್ಮ ನೀವೇ ಮರೆತಿರುವ ಹಳೆಯ ನೆನಪಿನ ಪೆಟ್ಟಿಗೆಯನ್ನು ಥಟ್ಟನೆ ತೆರೆದು ಬಿಡುತ್ತದೆ. ನನಗೆ ಅಂತಹದೇ ಅನುಭವ ಕೊಟ್ಟ ಸಿನಿಮಾ ಮಿಥ್ಯ. ಹೀಗೆ ಬರೆದುಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿ ಪೋಸ್ಟ್ನಲ್ಲೇನಿದೆ?: ಸಿನಿಮಾ ಪ್ರಿಯರಿಗೆ, ಕೆಲವು ಸಿನಿಮಾಗಳು ನಿಮ್ಮ ಅಂತರಂಗದೊಳಗೆ ಬಚ್ಚಿಟ್ಟು, ನೀವೇ ಮರೆತಿರುವ ಹಳೆಯ ನೆನಪಿನ ಪೆಟ್ಟಿಗೆಯನ್ನು ಥಟ್ಟನೆ ತೆರೆದು ಬಿಡುತ್ತದೆ. ನನಗೆ ಅಂತಹುದೇ ಅನುಭವ ಕೊಟ್ಟ ಸಿನಿಮಾ ಮಿಥ್ಯ. 2021 ರಲ್ಲಿ ಸ್ಕ್ರಿಪ್ಟ್ ಓದಿ ಮುಗಿಸಿದಾಗ ಆದ ಅನುಭವ ನಿಖರವಾಗಿ ಬಣ್ಣಿಸುವುದು ಕಷ್ಟ. ಅಪರೂಪದ ಮುಗ್ಧತೆ, ಪ್ರಾಮಾಣಿಕತೆ.. ತೀರಾ ಸರಳ ಎಂದೆನಿಸಿದರೂ ಘಾಡವಾದ ಪಾತ್ರಗಳು!
ಈ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬುದರಲ್ಲಿ ನನಗೆ ಸಂಶಯವೇ ಇರಲಿಲ್ಲ. ಸುಮಂತ್ ಹಾಗೂ ನನ್ನ ಗೆಳೆತನ ಹಳೆಯದು. ಶಾರ್ಟ್ ಫಿಲ್ಮ್ಗಳನ್ನು ಮಾಡುತ್ತಾ, ಸಿನಿಮಾದ ಸೂಕ್ಷ್ಮತೆಗಳನ್ನು ಒಟ್ಟಿಗೆ ಕಲಿತವರು ನಾವು. ಒಬ್ಬ ಕಥೆಗಾರನಾಗಿ ಅವನ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದೇನೆ. ಸಂಬಂಧಗಳನ್ನು ಅನ್ವೇಷಿಸುವ ಕಥೆಗಳಿಗೆ ಇರುವ ಅವನ ಒಲವೇ ಅವನ ಬಲ. ಅವನು ನಿರ್ದೇಶಿಸಿದ ವೆಬ್ ಸೀರಿಸ್ 'ಏಕಂ'ನಲ್ಲೂ ನೀವು ಅದನ್ನು ಕಾಣಬಹುದು. ಅಂತಹದೇ ಮತ್ತೊಂದು ಕಥೆ ಮಿಥ್ಯ. ಒಂದು ಹುಡುಗನ ಕಥೆ. ಅವನ ಹುಡುಕಾಟದ ಕಥೆ. ಆದರೆ, ಅವನ ಈ ಹುಡುಕಾಟದಲ್ಲಿ ನಮಗೇ ಅರಿವಿಲ್ಲದ ಹಾಗೆ, ನಮ್ಮಲ್ಲಿ ನಾವೇ ಏನೋ ಪಡೆದುಕೊಳ್ಳುತ್ತೇವೆ.
ಈ ಸಿನಿಮಾ ನಿಮ್ಮನ್ನು ನಗಿಸುತ್ತದೆ, ಅಳುವಂತೆ ಮಾಡುತ್ತದೆ ಮತ್ತು ಕೊನೆಯಲ್ಲಿ ನಿಮ್ಮೊಳಗೆ ಬದುಕಿನ ಬಗ್ಗೆ ಒಂದಿಷ್ಟು ಭರವಸೆಯನ್ನು ಮೂಡಿಸುತ್ತದೆ. ಅಷ್ಟು ಸುಲಭದಲ್ಲಿ ನೀವು ಈ ಸಿನಿಮಾವನ್ನಾಗಲಿ ಅಥವಾ ಈ ಸಿನಿಮಾ ನಿಮ್ಮನ್ನಾಗಲಿ ಬಿಡುವುದಿಲ್ಲ! ಸಿನಿಮಾ ಮುಗಿದ ಎಷ್ಟೋ ಹೊತ್ತಿನ ನಂತರವೂ ಮಳೆಯ ಗುಂಗು. ಮಳೆ ಮಿಥುನನ ಪಯಣದ ಮೂಕ ವೀಕ್ಷಕನಂತೆ. ಮತ್ತು ಈ ಸಿನಿಮಾದ ಸಂಗೀತ! ಆ ಹುಡುಗನ ಮನಸ್ಸಿನ ತಳಮಳ, ನೋವು, ಹತಾಶೆ... ಒಟ್ಟಾರೆ ಅವನ ಭಾವನೆಗಳೇ ನಮ್ಮೊಂದಿಗೆ ಮಾತನಾಡಿದಂತೆ.
ಇವೆಲ್ಲವನ್ನೂ ಮೀರಿ, ಸಿನಿಮಾ ಮತ್ತು ಬದುಕಿನ ನಡುವೆ ಇರುವ ರೇಖೆಯನ್ನೇ ಅಳಿಸುವಂತಿರುವ ಪ್ರತಿ ಪಾತ್ರದ ನಟನೆ... ಅದೆಷ್ಟು ನೈಜ್ಯ, ಅದೆಷ್ಟು ಸರಳ, ಅದೆಷ್ಟು ಜಟಿಲ!. ಮಿಥ್ಯ ನಿಮ್ಮೊಳಗೆ, ನಿಮ್ಮ ಮನದೊಳಗೆ ಮನೆ ಮಾಡುತ್ತದೆ. ನನ್ನನ್ನು ಕಾಡಿದಂತೆ ನಿಮ್ಮನ್ನು ಕಾಡುತ್ತದೆ. ಇಂತಿ ನಿಮ್ಮ ಪ್ರೀತಿಯ ರಕ್ಷಿತ್ ಶೆಟ್ಟಿ. ಇನ್ನು ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿರುವ, ಸುಮಂತ್ ಭಟ್ ನಿರ್ದೇಶನದ 'ಮಿಥ್ಯ' ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಆತಿಶ್ ಶೆಟ್ಟಿ, ಪ್ರಕಾಶ್ ತುಮಿನಾಡು, ರೂಪಾ ವರ್ಕಾಡಿ ನಟಿಸಿರುವ ಈ ಸಿನಿಮಾ ಒಬ್ಬ ಬಾಲಕನ ಬದುಕಿನ ಪ್ರಯಾಣವನ್ನು ವಿವಿಧ ರೂಪಕಗಳ ಮೂಲಕ ಕಾಡುವಂತೆ ಚಿತ್ರಿಸಿದೆ.
