ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಇದೀಗ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ನೀಡಿರುವ ಹೇಳಿಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಇದೀಗ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ನೀಡಿರುವ ಹೇಳಿಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಈ ಸಿನಿಮಾ ಬಿಡುಗಡೆಯಾದಾಗ ಕನ್ನಡ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ರಿಚರ್ಡ್ ಆ್ಯಂಟನಿ' ಘೋಷಣೆಯಾದ ದಿನದಿಂದಲೇ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ. ಆದರೆ, ಚಿತ್ರದ ಬಗ್ಗೆ ಅಧಿಕೃತ ಅಪ್‌ಡೇಟ್‌ಗಳು ಹೆಚ್ಚು ಹೊರಬಾರದ ಕಾರಣ, ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದಂದು ದೊಡ್ಡ ಘೋಷಣೆ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾದರೂ, ಚಿತ್ರದ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿರಲಿಲ್ಲ.
ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು ಮಾಡಲಿದೆ
ಇದೀಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರದ ಪ್ರಗತಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ರೆಡಿಯಾಗಿದ್ದೇನೆ, ರಕ್ಷಿತ್ ಶೆಟ್ಟಿ ಕೂಡ ಸಜ್ಜಾಗಿದ್ದಾರೆ. ಇಡೀ ಚಿತ್ರತಂಡ ಶೂಟಿಂಗ್ ಆರಂಭಿಸಲು ಸಿದ್ಧವಾಗಿದೆ. ಅಭಿಮಾನಿಗಳು ಕಾಯುತ್ತಿರುವ ದಿನಗಳು ಹೆಚ್ಚು ದೂರದಲ್ಲಿಲ್ಲ," ಎಂದು ಅವರು ತಿಳಿಸಿದ್ದಾರೆ. ಅದೇ ವೇಳೆ ಚಿತ್ರದ ಬಗ್ಗೆ ತಮ್ಮ ಅಪಾರ ವಿಶ್ವಾಸವನ್ನು ವ್ಯಕ್ತಪಡಿಸಿದ ಅಜನೀಶ್, "'ರಿಚರ್ಡ್ ಆ್ಯಂಟನಿ' ಕೇವಲ ಒಂದು ಸಿನಿಮಾ ಆಗುವುದಿಲ್ಲ. ಅದು ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು ಮಾಡಲಿದೆ. ರಕ್ಷಿತ್ ಶೆಟ್ಟಿ ಅತ್ಯಂತ ವಿಭಿನ್ನ ಕಥೆ ಮತ್ತು ಅದ್ಭುತ ಪ್ರೆಸೆಂಟೇಶನ್ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಚಿತ್ರೀಕರಣ?
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಕ್ಷಿತ್ ಶೆಟ್ಟಿ ಅವರ ಕರಿಯರ್‌ನ ಬಹುಮುಖ್ಯ ಪ್ರಾಜೆಕ್ಟ್ ಎನ್ನಲಾಗುತ್ತಿರುವ 'ರಿಚರ್ಡ್ ಆ್ಯಂಟನಿ' ಕನ್ನಡ ಮಾತ್ರವಲ್ಲದೆ ದೇಶಾದ್ಯಂತ ಗಮನ ಸೆಳೆಯುವ ಸಿನಿಮಾ ಆಗಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ. ಸದ್ಯ ಪೂರ್ವ ತಯಾರಿಯ ಕೆಲಸಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಚಿತ್ರದ ಶೂಟಿಂಗ್, ಪಾತ್ರವರ್ಗ ಹಾಗೂ ಬಿಡುಗಡೆ ದಿನಾಂಕ ಸೇರಿದಂತೆ ಇನ್ನಷ್ಟು ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


