Paraak Kannada Movie: ಸ್ಯಾಂಡಲ್​ವುಡ್‌ನ ಬಹುಬೇಡಿಕೆಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ.

ಸ್ಯಾಂಡಲ್​ವುಡ್‌ನ ಬಹುಬೇಡಿಕೆಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ. 'ಬಘೀರ' ಚಿತ್ರದ ಯಶಸ್ಸಿನ ಬಳಿಕ ಶ್ರೀಮುರಳಿ ಗ್ರೀನ್ ಸಿಗ್ನಲ್ ನೀಡಿದ್ದ ಈ ಸಿನಿಮಾ ಕಳೆದ ವರ್ಷವೇ ಚಿತ್ರೀಕರಣ ಆರಂಭಿಸಿತ್ತು. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದರೂ ಚಿತ್ರತಂಡ ಯಾವುದೇ ದೊಡ್ಡ ಅಪ್‌ಡೇಟ್ ನೀಡಿರಲಿಲ್ಲ. ಇದೀಗ ಬಿಡುಗಡೆಯಾದ ಟೀಸರ್ ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ 'ಪರಾಕ್' ಟೀಸರ್ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಹಾಲೇಶ್ ಕೋಗುಂಡಿ, "ಇದು ಕೇವಲ ಟೀಸರ್ ಮಾತ್ರ. ಸಿನಿಮಾದಲ್ಲಿ ಇನ್ನೂ ಅನೇಕ ಅಚ್ಚರಿಗಳು ಅಡಗಿವೆ. ಶ್ರೀಮುರಳಿ ಅವರಂತಹ ನಟರೊಂದಿಗೆ ಕೆಲಸ ಮಾಡುವುದು ದೊಡ್ಡ ಅನುಭವ. ಪ್ರೇಕ್ಷಕರು ಇದೇ ರೀತಿಯ ಬೆಂಬಲ ನೀಡಬೇಕು," ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಶ್ರೀಮುರಳಿ, "ಈ ಟೀಸರ್ ಹಿಂದೆ ಅಪಾರ ಪರಿಶ್ರಮವಿದೆ. ಇದನ್ನು ಸಿದ್ಧಪಡಿಸಲು ಎರಡೂವರೆ ವರ್ಷ ಬೇಕಾಯಿತು. ಕಥೆಯ ಅಭಿವೃದ್ಧಿಗೆ ಮಾತ್ರ ಮೂರುವರೆ ವರ್ಷ ಸಮಯ ಕೊಟ್ಟಿದ್ದೇವೆ. ಹೊಸ ನಿರ್ಮಾಪಕರು ಮತ್ತು ಹೊಸ ತಂಡದ ಜೊತೆ ಸಿನಿಮಾ ಮಾಡಿರುವುದು ಅವರ ಆಲೋಚನೆ, ಉತ್ಸಾಹ ಮತ್ತು ನಂಬಿಕೆಯ ಕಾರಣ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದನ್ನು ನಾನು ಸದಾ ಇಷ್ಟಪಡುತ್ತೇನೆ. 'ಪರಾಕ್' ನಮ್ಮೆಲ್ಲರ ಕನಸಿನ ಪ್ರಯತ್ನ. ಇನ್ನೂ ಚಿತ್ರೀಕರಣ ಬಾಕಿಯಿದ್ದು, ಚಿತ್ರದ ಬಗ್ಗೆ ಉಳಿದ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳುತ್ತೇವೆ," ಎಂದರು.

ಟೀಸರ್‌ನಲ್ಲಿ ಶ್ರೀಮುರಳಿ ಫಿಟ್ ಹಾಗೂ ರಗಡ್ ಲುಕ್‌ನಲ್ಲಿ ಮಿಂಚಿದ್ದು, ಆ್ಯಕ್ಷನ್ ದೃಶ್ಯಗಳಲ್ಲಿ ತಮ್ಮ ಸಿಗ್ನೇಚರ್ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ, ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಹಾಗೂ ನಿರ್ದೇಶಕರ ದೃಶ್ಯ ನಿರೂಪಣೆ ಟೀಸರ್‌ಗೆ ಮತ್ತಷ್ಟು ಭವ್ಯತೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. "ಕನ್ನಡ ಸಿನಿಮಾಗಳು ಯಾವ ರೀತಿಯ ಗುಣಮಟ್ಟದ ಕಥೆಗಳನ್ನು ಪ್ರೇಕ್ಷಕರು ಬಯಸುತ್ತಾರೆ ಎಂಬುದನ್ನು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿವೆ," ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಮತ್ತೊಬ್ಬರು "ಇದೇ ರೀತಿಯ ಕ್ವಾಲಿಟಿ ಕಂಟೆಂಟ್‌ಗಾಗಿ ನಾವು ಕಾಯುತ್ತಿದ್ದೆವು" ಎಂದು ಬರೆದುಕೊಂಡಿದ್ದಾರೆ. "ಶ್ರೀಮುರಳಿ ಈಸ್ ಬ್ಯಾಕ್" ಎಂಬ ಕಾಮೆಂಟ್‌ಗಳೂ ಅಭಿಮಾನಿಗಳ ಉತ್ಸಾಹವನ್ನು ಪ್ರತಿಬಿಂಬಿಸುತ್ತಿವೆ.

ಯುವ ನಿರ್ದೇಶಕ ಹಾಲೇಶ್ ಕೋಗುಂಡಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದ ತಾಂತ್ರಿಕ ಬಳಗದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಎಂ.ಆರ್., ಛಾಯಾಗ್ರಾಹಕ ಸಂದೀಪ್ ವಲ್ಲೂರಿ, ಸಂಕಲನಕಾರ ರಕ್ಷಿತ್ ಕಾಪ್, ಸಾಹಸ ನಿರ್ದೇಶಕ ಡಾ. ಕೆ. ರವಿವರ್ಮ ಸೇರಿದಂತೆ ಅನುಭವಿ ತಂಡ ಕೆಲಸ ಮಾಡುತ್ತಿದೆ. ಸಂಭಾಷಣೆಯನ್ನು ಮಂಜುನಾಥ್ ಟಿ, ಮೋಹನ್ ಕೆ.ಓ ಹಾಗೂ ಹಾಲೇಶ್ ಕೋಗುಂಡಿ ಬರೆದಿದ್ದಾರೆ.

ಭರದಿಂದ ಸಾಗುತ್ತಿದೆ ಶೂಟಿಂಗ್

ಸದ್ಯ ಚಿತ್ರದ ಸುಮಾರು 35 ಶೇಕಡಾ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಳನ್ನು ಚಿತ್ರತಂಡ ಪ್ರಕಟಿಸುವ ನಿರೀಕ್ಷೆಯಿದೆ. ಇನ್ನು 'ಉಗ್ರಂ', 'ಮಫ್ತಿ', 'ಭರಾಟೆ' ಹಾಗೂ 'ಬಘೀರ' ಮೊದಲಾದ ಯಶಸ್ವಿ ಚಿತ್ರಗಳ ಮೂಲಕ ಶ್ರೀಮುರಳಿ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ಈಗ 'ಪರಾಕ್' ಆ ಸಾಲಿಗೆ ಮತ್ತೊಂದು ಬಲಿಷ್ಠ ಸೇರ್ಪಡೆಯಾಗುವ ವಿಶ್ವಾಸ ಅಭಿಮಾನಿಗಳಲ್ಲಿದೆ. ಟೀಸರ್ ಮೂಡಿಸಿರುವ ಹೈಪ್‌ಗೆ ತಕ್ಕಂತೆ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.