ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂಥದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಈಗಾಗಲೇ ಕನ್ನಡದಲ್ಲಿ 'ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು' ಬಂದಿವೆ. ಆದರೆ ಇದರಲ್ಲಿ ಕೌಟುಂಬಿಕ ಕಥೆಯನ್ನು ರೌಡಿಸಂ ಟಚ್ ಕೊಟ್ಟು ಹೇಳಿದ್ದಾರೆ.

ಬಿಡುಗಡೆಯಾಗಿದೆ ರಕ್ಕಿ ಸಿನಿಮಾ; ಏನಂತಿದೆ ಸೋಷಿಯಲ್ ಮೀಡಿಯಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಕ್ಕಿ ಸುರೇಶ್ ನಟನೆ, ಸುರೇಶ್ ಸಾಲಿಗ್ರಾಮ ನಿರ್ಮಾಣದ ರಕ್ಕಿ (Rukky) ಸಿನಿಮಾ ಮೊನ್ನೆ ಅಂದರೆ 10 ಜುಲೈ 2026ರಂದು ರಾಜ್ಯದಲ್ಲಿ ಬಿಡುಗಡೆ ಆಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಡು ಬಿಡುಗಡೆಗೆ ಬಂದು ಆಶೀರ್ವದಿಸಿದ್ದ 'ರಕ್ಕಿ' ಇದೀಗ ಪ್ರೇಕ್ಷಕರ ಮುಂದೆ ಪರೀಕ್ಷೆಗೆ ಒಳಗಾಗಿದೆ. 'ಹಚ್ಚಿಟ್ಟಿರೋ ಪಟಾಕಿ' ಸೇರಿದಂತೆ ಹಲವು ಹಾಡುಗಳ ಮೂಲಕ ಸಖತ್ ಸೌಂಡ್ ಮಾಡಿದ್ದ ರಕ್ಕಿ, ಇದೀಗ ಕೆಲವು ಡೈಲಾಗ್‌ಗಳು ಮೂಲಕ ಸದ್ದು ಮಾಡುತ್ತಿದೆ. ರಕ್ಕಿ ಸುರೇಶ್ (Rakky Suresh) ಅಭಿನಯ ಹಾಗೂ ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರವು ಅಪರಾಧದ ಹಿನ್ನೆಲೆ ಹೊಂದಿದ್ದರೂ ಎಲ್ಲಿಯೂ ರಕ್ತಪಾತವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಸಾಕಷ್ಟು ಪಾಸಿಟಿವ್ ಟಾಕ್ ಇದೆ.

ಹೇಗಿದೆ ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್?

"ಸರಸ್ವತಿ ಅಂದ್ರೆ ಟ್ಯಾಲೆಂಟ್, ಲಕ್ಷ್ಮಿ ಅಂದ್ರೆ ಎಂಟರ್‌ಟೈನ್‌ಮೆಂಟ್..." ಎನ್ನುವ ಡೈಲಾಗ್ ಸೇರಿದಂತೆ ಸಿನಿಮಾದಲ್ಲಿ ಕೆಲವು ಡೈಲಾಗಗಳು ಥಿಯೇಟರ್‌ನಿಂದ ಹೊರಬಂದ ಮೇಲೆ ಕೂಡ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಿದೆ. ಲೋಕಿ ತವಸ್ಯರ "ವೈಬ್ ಆಗಿದೆ.." ಮತ್ತು "ನೀನು ನನಗಂತ ಬರೆದ ಭಗವಂತ" ಎಂಬ ಎರಡು ಮಧುರ ಹಾಡುಗಳು ಸಿನಿಮಾ ನೋಡಿ ಹೊರಬಂದ ಮೇಲೂ ಗುನುಗುವಂತಿದೆ. ಇಂಟ್ರೋ ಹಾಡು, ರೌಡಿ ಹಾಡು ಮತ್ತು ಫ್ಯಾಮಿಲಿ ಹಾಡು "ಹೇಟ್ ಯು ಡ್ಯಾಡಿ ಹೇಟ್ ಯು ಮಮ್ಮಿ..." ಸಹ ನೆನಪಿನ ಗಂಟಲ್ಲಿ ಉಳಿಯುವಂತಿದೆ. ಆಕ್ಷನ್ ಓರಿಯಂಟೆಡ್ ಸಿನಿಮಾ ಆಗಿದ್ದರೂ ಹೆಚ್ಚಾಗಿ ಹಿಂಸೆಯ ವೈಭವೀಕರಣ ಇಲ್ಲ. ಹೊಸಬರ, ಹೊಸತನದ ಸಿನಿಮಾಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರಿಂದ ತಕ್ಕಮಟ್ಟಿಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ಮುಂದೆ ಉತ್ತಮ ರೆಸ್ಪಾನ್ಸ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ 'ರಕ್ಕಿ' ಚಿತ್ರತಂಡ.

ವಿಭಿನ್ನ ಬಗೆಯ ರೌಡಿಸಂ ಚಿತ್ರ-ರಕ್ಕಿ

ಸದಾ ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂಥದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಈಗಾಗಲೇ ಕನ್ನಡದಲ್ಲಿ 'ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು' ಬಂದಿವೆ. ಆದರೆ ಕೌಟುಂಬಿಕ ಕಥೆಯನ್ನು ಕೂಡ ರೌಡಿಸಂ ಟಚ್ ಕೊಟ್ಟೂ ಕೊಡದೇ ಇಷ್ಟು ಚೆನ್ನಾಗಿ ಹೇಳಬಹುದು ಎನ್ನವುದನ್ನು ಸಾಬೀತು ಮಾಡಿರುವ ಚಿತ್ರ ರಕ್ಕಿ. ಚಿತ್ರದ ಕೇಂದ್ರ ಪಾತ್ರ ರಿಕ್ಕಿಯ ವಿಚಾರಕ್ಕೆ ಬರುವುದಾದರೆ ಯುವನಟರ ಸಾಲಿಗೆ ಸೇರಿಸಬಹುದಾದ ಪ್ರತಿಭಾವಂತ ಕಲಾವಿದ ರಿಕ್ಕಿ ಎಂಬುದನ್ನು ಅವರು ನಟನೆ ಮಾತ್ರವಲ್ಲದೆ ಆ್ಯಕ್ಷನ್ ದೃಶ್ಯಗಳಲ್ಲಿಯೂ ಪ್ರೂವ್ ಮಾಡಿದ್ದಾರೆ.

ಕಥೆ:

ರಕ್ಕಿ (ರಕ್ಕಿ ಸುರೇಶ್) ಎತ್ತರವಾದ, ಸುಂದರವಾದ ರೌಡಿ! ಆತ ಅಂಡರ್‌ವರ್ಲ್ಡ್ ಆಪರೇಟರ್ ಡ್ಯಾನಿ (ಬಿ. ಸುರೇಶ) ಕೈ‌ಕೆಳಗೆ ಕೆಲಸ ಮಾಡುತ್ತಾನೆ. ಬಾಸ್ ಹೇಳಿದಂತೆ ರಕ್ಕಿ ಎಲ್ಲಾ ಕೆಲಸಗಳನ್ನು ಮಾಡುತ್ತಾನೆ. ಆದರೆ ಡ್ಯಾನಿಯ ಮಗಳು ಸಿರಿ (ಪಲ್ಲವಿ) ಅವನನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಾಳೆ. ಮೊದಲಿಗೆ ರಕ್ಕಿ ಅವಳ ಪ್ರೀತಿಯನ್ನು ತಿರಸ್ಕರಿಸಿದರೂ, ಆನಂತರ ಒಪ್ಪಿಕೊಳ್ಳುತ್ತಾನೆ. ಸಿರಿ ರಕ್ಕಿ ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟುಬಿಡಬೇಕೆಂದು ಬಯಸುತ್ತಾಳೆ. ಆದರೆ ಶಾಸಕ ಸ್ಥಾನದ ಚುನಾವಣಾ ಟಿಕೆಟ್ ಆಕಾಂಕ್ಷಿಯೊಬ್ಬನನ್ನು ಮುಗಿಸಲು ಡ್ಯಾನಿ ಕೈಗೊಂಡ ದೊಡ್ಡ ಡೀಲ್‌ನಿಂದ ಹಲವಾರು ಅನಿರೀಕ್ಷಿತ ಬೆಳವಣಿಗೆಗಳು ಆಗುತ್ತವೆ.

ಡ್ಯಾನಿ ಕೆಲಸವನ್ನು ಮುಗಿಸಲು ರಕ್ಕಿ ಮತ್ತು ಗಣೇಶ್ (ಸಂಪತ್) 130 ಕಿಲೋಮೀಟರ್ ಪ್ರಯಾಣ ಮಾಡ ಬೇಕಾಗುತ್ತದೆ. ಈ ಹಂತದಲ್ಲಿ ಕೆಲವು ಅಚ್ಚರಿಯ ಸತ್ಯಗಳು ಬಹಿರಂಗವಾಗಿ ಕ್ಲೈಮ್ಯಾಕ್ಸ್‌ಗೆ ಹೊಸ ಆಶಯ ನೀಡುತ್ತವೆ. ಇಲ್ಲಿ ಚಾಂದಿನಿ (ಆಶಿಕಾ) ಮತ್ತು ಒಬ್ಬ ರಾಜಕಾರಣಿಯೂ ಇದ್ದಾರೆ. ಈ ಸಮಯದಲ್ಲಿ ರಕ್ಕಿ ಮತ್ತು ಚಾಂದಿನಿಯ ಕಥೆಯನ್ನು ಹೇಳುವ ಫ್ಲ್ಯಾಶ್‌ಬ್ಯಾಕ್ ಬರುತ್ತದೆ.

ಆ ಡೀಲ್ ರಕ್ಕಿ ಮತ್ತು ಗಣೇಶ್‌ನಿಂದ ಮುಗಿಯುತ್ತದೆಯಾ? ಅವನ ಇಂದಿನ ಮತ್ತು ಹಿಂದಿನ ಪ್ರೀತಿಗೆ ಏನಾಗುತ್ತದೆ? ರಕ್ಕಿ ಜೀವನದಲ್ಲಿ ಹೇಗೆ ನೆಲೆ ಕಂಡುಕೊಳ್ಳುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೀವು ರಕ್ಕಿ ಚಿತ್ರವನ್ನು ನೋಡಬಹುದು.

ರಕ್ಕಿ ಹೀರೋಗೆ ಭವಿಷ್ಯದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಾಯಕರಾಗುವ ಎಲ್ಲಾ ಲಕ್ಷಣ ಇದೆ. ಚೊಚ್ಚಲ ಚಿತ್ರದಲ್ಲೇ ರಕ್ಕಿ ಸುರೇಶ್ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಚಿತ್ರದ ಇಬ್ಬರು ನಾಯಕಿಯರಾದ ಪಲ್ಲವಿ ಮತ್ತು ಆಶಿಕಾ ಉತ್ತಮ ಅಭಿನಯ ನೀಡಿದ್ದಾರೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಮತ್ತು ಬಾಲರಾಜ್‌ ವಾಡಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಕಥೆಗೆ ವಿಭಿನ್ನ ಆಯಾಮ ನೀಡುವಂಥ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ಇನ್ನುಳಿದಂತೆ, ಛಾಯಾಗ್ರಾಹಕ ಐಸಾಕ್ ಪ್ರಭಾಕರ್ ಅತ್ಯಂತ ಸುಂದರವಾದ ದೃಶ್ಯ ಅನುಭವ ನೀಡಿದ್ದಾರೆ. ಆಕ್ಷನ್ ನಿರ್ದೇಶಕ ಟೈಗರ್ ಶಿವು ಕೆಲವು ಉತ್ತಮ ಆಕ್ಷನ್ ಸನ್ನಿವೇಶಗಳನ್ನು ತೋರಿಸಿದ್ದಾರೆ. ಸಂಭಾಷಣೆ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು ಎಂಬ ಅಭಿಪ್ರಾಯ ಪ್ರೇಕ್ಷಕರ ವಲಯ ಹೇಳುತ್ತಿದೆ. ಹೊಸಬರ, ಹೊಸತನದ ಚಿತ್ರ ನೋಡಿ ಬೆನ್ನುತಟ್ಟುವ ಪ್ರೇಕ್ಷಕರು ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿಕೊಂಡು ಬರಬಹುದು.