Bandhana 2: ಡಿ.10ರಂದು ಮುಹೂರ್ತದಲ್ಲಿ ಸುಹಾಸಿನಿ, ಆದಿತ್ಯ ಭಾಗಿ!
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ಅವರು 'ಬಂಧನ 2' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಡಿ.10ರಂದು ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದಾರೆ. ತುಂಬಾ ವರ್ಷಗಳ ನಂತರ ಅಣಜಿ ನಾಗರಾಜ್ ಈ ಚಿತ್ರಕ್ಕಾಗಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.
37 ವರ್ಷಗಳ ಹಿಂದೆ ಆಗಿನ ಕಾಲಕ್ಕೆ ಬ್ಲಾಕ್ ಬಸ್ಟರ್ ಆಗಿದ್ದ 'ಬಂಧನ' (Bandhana) ಸಿನಿಮಾ ವಿಷ್ಣುವರ್ಧನ್ (Vishnuvardhan) ಕರಿಯರ್‌ನಲ್ಲಿ ಅತ್ಯುತ್ತಮ ಚಿತ್ರ. ಇಂದಿಗೂ ಆ ಸಿನಿಮಾವನ್ನು ಸಿನಿಮಂದಿ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅದರಲ್ಲಿನ ಪ್ರೇಮಕಥೆ ಮನಮುಟ್ಟುವಂತಿದೆ. ಕೌಟುಂಬಿಕ ಪ್ರೇಕ್ಷಕರನ್ನು ಭರಪೂರ ಸೆಳೆದುಕೊಂಡ ಆ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಸುಹಾಸಿನಿ (Suhasini), ಜೈ ಜಗದೀಶ್ (Jai Jagadish) ಮೊದಲಾದವರು ಅಭಿನಯಿಸಿದ್ದರು. ವಿಷ್ಣುವರ್ಧನ್ ಅವರು ಡಾಕ್ಟರ್ ಹರೀಶ್ ಪಾತ್ರದಲ್ಲಿ ಹಾಗೂ ಸುಹಾಸಿನಿ ಡಾ. ನಂದಿನಿ ಪಾತ್ರದಲ್ಲಿ ನಟಿಸಿದ್ದರು ಹಾಗೂ ಎಂ. ರಂಗರಾವ್ (M.Rangarao) ಸಂಗೀತ ನಿರ್ದೇಶನ ಮಾಡಿದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಅಂದು 'ಬಂಧನ' ನಿರ್ದೇಶಿಸಿದ್ದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರೇ ಈಗ 'ಬಂಧನ 2' (Bandhana 2) ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಹೌದು! ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ಅವರು 'ಬಂಧನ 2' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಡಿಸೆಂಬರ್ 10ರಂದು ಚಿತ್ರಕ್ಕೆ ಮುಹೂರ್ತ (Muhurta) ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ (Anaji Nagaraj) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ತುಂಬಾ ವರ್ಷಗಳ ನಂತರ 'ಬಂಧನ 2' ಚಿತ್ರಕ್ಕಾಗಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಗರುಡಗಮನನಿಗೆ ಮರುಳಾದ ರಾಜೇಂದ್ರ ಸಿಂಗ್ ಬಾಬು
'ಬಂಧನ' ಸೀಕ್ವೆಲ್ ಮಾಡುವುದು ನನ್ನ ಮೇಲೆ ಅತಿ ಹೆಚ್ಚು ಜವಾಬ್ದಾರಿಯಿದೆ. ಈ ಸಿನಿಮಾ ಉಷಾ ನವರತ್ನರಾಮ್ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. 1984ರಲ್ಲಿ ಉತ್ತಮ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಮೈಲಿಗಲ್ಲಾಗಿತ್ತು. ಅದಾದ ನಂತರ ತಮಿಳಿಗು ಸಿನಿಮಾ ರಿಮೇಕ್ ಆಗಿತ್ತು ಎಂದು ರಾಜೇಂದ್ರ ಸಿಂಗ್‌ಬಾಬು ಹೇಳಿದ್ದಾರೆ.
ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ತಮ್ಮ ಪುತ್ರ ಆದಿತ್ಯರನ್ನು (Aditya) ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಹಳೇ 'ಬಂಧನ'ದಲ್ಲಿ ನಂದಿನಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಸುಹಾಸಿನಿ ಹಾಗೂ ಜೈ ಜಗದೀಶ್ ಭಾಗ-2ರಲ್ಲಿಯೂ ನಟಿಸುತ್ತಿದ್ದಾರೆ. 'ಬಂಧನ 2' ಮಾಡಬೇಕು ಎಂದು ನಿರ್ಧರಿಸಿದಾಗ ಹಲವು ವರ್ಷನ್‌ಗಳ ಕಥೆ ಬರೆದಿಟ್ಟೆ. ಈಗ ಫೈನಲ್ ಮಾಡಬೇಕು. 37 ವರ್ಷಗಳ ಹಿಂದೆ ಆ ಪ್ರೇಮ ಕಥೆಯನ್ನು ನೋಡಿ ಆ ಜನರೇಷನ್‌ನ ಜನ ಅತ್ಯುತ್ತಮ ತೀರ್ಪು ಕೊಟ್ಟಿದ್ದರು. ಈಗ ಮತ್ತೊಂದು ಜನರೇಷನ್ ಇದ್ದು, ಈಗಿನ ಜನರೇಷನ್‌ಗೆ ಹೊಂದುವಂತಹ ಮತ್ತು ಅವರು ಇಷ್ಟಪಡುವಂತಹ ಕಥೆ ಮಾಡುತ್ತಿದ್ದೇನೆ ಎಂದು ರಾಜೇಂದ್ರ ಸಿಂಗ್‌ಬಾಬು ಈ ಹಿಂದೆ ತಿಳಿಸಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ತುಳು ಸಿನಿಮಾ ಬಿರ್ದ್‌ದ ಕಂಬಳ!
ಇನ್ನು ಅಂಗಡಿ ಶಾಂತಪ್ಪ (Angadi Shantappa) 'ಬಂಧನ 2' ಚಿತ್ರಕ್ಕೆ ಕತೆ ಬರೆದರೆ, ಧರ್ಮ ವಿಶ್ (Dharma Vish) ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿಂತನ್.ಎ.ವಿ (Chintan.A.V) ಸಂಭಾಷಣೆ ಬರೆಯುತ್ತಿದ್ದಾರೆ. ಇದು ಹಳೆಯ ಕತೆಯ ಮುಂದುವರಿದ ಭಾಗವೇ ಎಂಬುದು ಸದ್ಯದ ಕುತೂಹಲ. ಗುರುರಾಜ್ ಹೊಸಕೋಟೆ, ಸಾಧು ಕೋಕಿಲ, ಗೋವಿಂದೇಗೌಡ ಸೇರಿದಂತೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಸದ್ಯ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನೇ ಮುಖ್ಯ ಕಥಾವಸ್ತುವಾಗಿಟ್ಟುಕೊಂಡ ಮೊತ್ತ ಮೊದಲ ಬಹುನಿರೀಕ್ಷಿತ ತುಳು, ಕನ್ನಡ ಚಲನಚಿತ್ರ 'ಬಿರ್ದ್‌ದ ಕಂಬಳ' ಮತ್ತು 'ವೀರ ಕಂಬಳ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.