Garuda Gamana Vrishabha Vahana: ಗರುಡಗಮನನಿಗೆ ಮರುಳಾದ ರಾಜೇಂದ್ರ ಸಿಂಗ್ ಬಾಬು
ಇದೀಗ ಬಿರ್ದುದ ಕಂಬಳ ಎಂಬ ತುಳು ಚಿತ್ರ ಮಾಡುತ್ತಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಗರುಡಗಮನ ವೃಷಭವಾಹನ ಚಿತ್ರದ ನೆಪದಲ್ಲಿ ಕನ್ನಡ ಚಿತ್ರರಂಗದ ಕುರಿತು ವಿಸ್ತಾರವಾಗಿ ಗ್ರಹಿಸಿ ಬರೆದಿದ್ದಾರೆ. ನಮ್ಮ ಸರಿತಪ್ಪುಗಳನ್ನು ಅವಲೋಕಿಸಿದ್ದಾರೆ. ಮುಂದೇನು ಎನ್ನುವ ಮುಂದಾಗಣಿಕೆಯನ್ನೂ ಮುಂದಿಟ್ಟಿದ್ದಾರೆ.
-ಎಸ್ ವಿ ರಾಜೇಂದ್ರ ಸಿಂಗ್ ಬಾಬು
ಮೊನ್ನೆ ಮೊನ್ನೆಯಷ್ಟೇ ನಾನು ನಿರ್ದೇಶನ ಮಾಡಲಿಕ್ಕೆ ಹೊರಟಿರುವ ತುಳು ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆ ಮುಗಿಸಿ ಮುಂದಿನ ಕಾರ್ಯಗಳತ್ತ ಮನಸ್ಸು ಹರಿಸಿದ್ದೆ. ನನಗೆ ಚಿತ್ರಕತೆ ಸಂಭಾಷಣೆಯಲ್ಲಿ ನೆರವಾದವರು ವಿಜಯಕುಮಾರ್ ಕೊಡಿಯಾಲ್ ಬೈಲು. ದಕ್ಷಿಣ ಕನ್ನಡದ ಜನಪ್ರಿಯ ಕ್ರೀಡೆ ಕಂಬಳ ಕುರಿತು ಕನ್ನಡ ಮತ್ತು ತುಳು- ಎರಡೂ ಭಾಷೆಯಲ್ಲಿ ಸಿನಿಮಾ ಮಾಡುವುದು ನನ್ನ ಉದ್ದೇಶವಾಗಿತ್ತು. ವೀರ ಕಂಬಳ ಎಂದು ಹೆಸರಿಟ್ಟ ಆ ಚಿತ್ರದ ಬಗ್ಗೆ ನನಗೆ ಖುಷಿಯಿತ್ತು. ಚಿತ್ರೀಕರಣಕ್ಕೆ ಕೆಲವು ದಿನಗಳಿದ್ದುದರಿಂದ ಕಳೆದ ವಾರ ನಾನು ‘ಗರುಡಗಮನ ವೃಷಭವಾಹನ’ ಸಿನಿಮಾ ನೋಡಿದೆ. ಒಬ್ಬ ನಿರ್ದೇಶಕನಾಗಿ ನನ್ನನ್ನು ಅಲ್ಲಾಡಿಸಿದ ಸಿನಿಮಾ ಅದು. ಎಲ್ಲ ಸೂತ್ರಗಳನ್ನೂ ಧೂಳೀಪಟ ಮಾಡಿದ ಆ ಸಿನಿಮಾ ನನ್ನೆಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಿತ್ತು.
ಸಿನಿಮಾ ನೋಡಿ ಬಂದವನೇ ಮೌನವಾಗಿ ಕೂತುಬಿಟ್ಟೆ. ನನಗೆ ನನ್ನ ತಾರುಣ್ಯದ ದಿನಗಳು ನೆನಪಾದವು. ನಾನು ನೋಡಿದ ಮೆಚ್ಚಿದ ದೇಶವಿದೇಶಗಳ ಸಿನಿಮಾಗಳು ನೆನಪಿಗೆ ಬಂದವು. ಗರುಡಗಮನ ವೃಷಭವಾಹನ ನೋಡಿದ ನಂತರ ನನ್ನ ಲೆಕ್ಕಾಚಾರ ಬದಲಾದದ್ದಂತೂ ನಿಜ. ನಾವು ನೋಡುವ ಕ್ರಮವೇ ಬದಲಾಗಬೇಕು ಅನ್ನಿಸಿದ್ದೂ ಹೌದು. ತಕ್ಷಣವೇ ನಾನು ರಾಜ್ ಶೆಟ್ಟಿಗೆ ಫೋನ್ ಮಾಡಿ ಸುದೀರ್ಘವಾಗಿ ಮಾತಾಡಿದೆ.
Garuda Gamana Vrishabha Vahana: ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ ರಕ್ಷಿತ್ ಶೆಟ್ಟಿಸ್ತ್ರೀ ಪಾತ್ರವಿಲ್ಲದ, ನಾಯಕ ಪಾತ್ರವಿಲ್ಲದ, ಹಾಸ್ಯ ಸನ್ನಿವೇಶಗಳಿಲ್ಲದ, ಹಾಡುಗಳಿಲ್ಲದ, ಅನಗತ್ಯ ದೃಶ್ಯಗಳೇ ಇಲ್ಲದ ಒಂದು ಚಿತ್ರವನ್ನು ಒಬ್ಬ ನಿರ್ದೇಶಕ ಮಾಡಿ ಪ್ರೇಕ್ಷಕರ ಮುಂದಿಡುತ್ತಾನೆ ಅಂದರೆ ಅವನಿಗೆ ತನ್ನ ಕಥೆಯ ಮೇಲೆ ಎಷ್ಟು ನಂಬಿಕೆ ಇರಬೇಕು ಅನ್ನುವುದು ನನ್ನನ್ನು ಕಾಡಲಾರಂಭಿಸಿತು. ಹಾಗೆಯೇ ನಾನು ಕನ್ನಡ ಚಿತ್ರರಂಗದ, ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಸುತ್ತ ಯೋಚಿಸುತ್ತಾ ಕೂತೆ.
ಗರುಡಗಮನ ವೃಷಭವಾಹನ ನಾನು ಆಲೋಚಿಸುವ ದಿಕ್ಕನ್ನು ಬದಲಾಯಿಸಿದೆ. ಅದನ್ನು ನೋಡಿದ ನಂತರ ನಾನು ವಿಜಯಕುಮಾರ್ ಕೊಡಿಯಾಲ್‌ಬೈಲ್‌ಗೆ ಫೋನ್ ಮಾಡಿ, ನಮ್ಮ ಚಿತ್ರಕತೆಯನ್ನು ಮತ್ತೆ ತಿದ್ದಿ ಬರೆಯೋಣ ಅಂತ ಹೇಳಿದೆ. ಅವರೂ ಅದಕ್ಕೆ ಒಪ್ಪಿಕೊಂಡರು. ನಾವೆಷ್ಟೇ ಕಲಿತರೂ ಕಲಿಕೆಯೆಂಬುದು ಮುಗಿಯುವುದಿಲ್ಲ ಅನ್ನುವುದನ್ನು ತೋರಿಸಿಕೊಟ್ಟ ಚಿತ್ರ ಅದು. ಅದರಿಂದ ನಾನು ಗ್ರಹಿಸಿದ ಸಂಗತಿಗಳು ಇಷ್ಟು:
1. ಒಂದು ಬಹುದೊಡ್ಡ ಬದಲಾವಣೆಗಾಗಿ ಚಿತ್ರರಂಗ ಕಾಯುತ್ತಿದೆ. ಆ ಬದಲಾವಣೆ ಈಗಾಗಲೇ ಅರ್ಧದಾರಿಯಲ್ಲಿದೆ. ನಮ್ಮ ನೋಡುವ ಕ್ರಮ ಮಾತ್ರ ಬದಲಾಗಿಲ್ಲ, ಸಿನಿಮಾ ಮಾಡುವ ಕ್ರಮವೂ ಬದಲಾಗಬೇಕಿದೆ. ಮತ್ತೆ ಅದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬಿದ್ದರೆ ಯಾರಿಗೂ ಉಳಿಗಾಲ ಇಲ್ಲ.
2. ಪ್ರೇಕ್ಷಕರನ್ನು ಇನ್ನು ಮುಂಬರುವ ದಿನಗಳಲ್ಲಿ ಚಿತ್ರಮಂದಿರಕ್ಕೆ ಸೆಳೆಯುವುದು ಸ್ಟಾರುಗಳಲ್ಲ, ಹೀರೋಗಳಲ್ಲ. ಬ್ಯಾನರ್‌ಗಳು. ಒಂದು ಕಾಲದಲ್ಲಿ ನಿರ್ಮಾಣ ಸಂಸ್ಥೆಯ ಹೆಸರಿನ ಮೇಲೆಯೇ ಸಿನಿಮಾ ಓಡುತ್ತಿತ್ತು. ಯಾರು ನಾಯಕ ಪಾತ್ರದಲ್ಲಿ ನಟಿಸಿದ್ದಾನೆ ಅನ್ನುವುದನ್ನು ಪ್ರೇಕ್ಷಕ ನೋಡುತ್ತಲೇ ಇರಲಿಲ್ಲ. ಈ ಸಂಸ್ಥೆಯ ಸಿನಿಮಾ ಆದರೆ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿಂದಲೇ ಜನ ಬರುತ್ತಿದ್ದರು. ಇನ್ನು ಮುಂದೆಯೂ ಅದೇ ಆಗಲಿದೆ. ನಿರ್ದೇಶಕ ಮತ್ತು ನಿರ್ಮಾಣ ಸಂಸ್ಥೆಯ ಹೆಸರಲ್ಲೇ ಸಿನಿಮಾ ಓಡುವ ದಿನಗಳು ದೂರವಿಲ್ಲ.
ಭೂಗತ ಜಗತ್ತಿನ 'ಗರುಡಗಮನ ವೃಷಭವಾಹನ' ಸಿನಿಮಾ ಮೆಚ್ಚಿದ ಸಿನಿರಸಿಕರು3. ನಾಯಕನಟನನ್ನು ವೈಭವೀಕರಿಸುವ ಚಿತ್ರಗಳಿಗೆ ಇನ್ನು ಅವಕಾಶ ಇರಲಿಕ್ಕಿಲ್ಲ ಅಂತ ನನಗೆ ಅನ್ನಿಸುತ್ತದೆ. ಕಾಸ್ಮೋಪಾಲಿಟನ್ ವ್ಯವಸ್ಥೆಯಲ್ಲಿ ಯಾರೂ ಯಾರಿಗೂ ಆರಾಧ್ಯದೈವ ಆಗಲು ಸಾಧ್ಯವೇ ಇಲ್ಲ. ನಾವು ಕೊನೆಗೂ ಮೆಚ್ಚುವುದು, ಮನಸ್ಸಲ್ಲಿಟ್ಟು ಆರಾಧಿಸುವುದು ಪಾತ್ರವನ್ನೇ ಹೊರತು, ಪಾತ್ರಧಾರಿಯನ್ನಲ್ಲ. ಅದ್ಯಾವುದೋ ಪರಭಾಷೆಯ ಮಾದರಿಯನ್ನು ಅನುಸರಿಸಲು ಹೋಗಿ ನಾವು ಪಾತ್ರಧಾರಿಯನ್ನೂ ಮೆಚ್ಚಲು ಆರಂಭಿಸಿದೆವು. ರಾಜ್‌ಕುಮಾರ್ ಸಿನಿಮಾ ಮಾಡುತ್ತಿದ್ದ ಕಾಲದಲ್ಲಿ ಪಾತ್ರದಷ್ಟೇ ಪಾತ್ರಧಾರಿಯೂ ಸರಳವಾಗಿದ್ದುದರಿಂದ ಆ ತಾದಾತ್ಮ್ಯ ಸಾಧ್ಯವಾಯಿತೆಂದು ಹೇಳಬಹುದು. ಆದರೆ ಇನ್ನು ಮುಂದೆಯೂ ಅದೇ ಆಗುತ್ತದೆ ಎಂದು ನಿರೀಕ್ಷೆ ಮಾಡಬಾರದು.
4. ಗರುಡಗಮನ ಚಿತ್ರದ ಪರಿಸರ ಹೊಸತು, ಅದರಲ್ಲಿ ಬಳಕೆಯಾಗಿರುವ ಕನ್ನಡವೂ ಹೊಸದು. ಅಷ್ಟು ಸಾಲದೆಂಬಂತೆ ಅಲ್ಲಿ ತುಳು ಭಾಷೆಯ ಸಂಭಾಷಣೆಗಳೂ ಇವೆ. ಅವನ್ನೆಲ್ಲ ಜನ ಮೆಚ್ಚುತ್ತಿದ್ದಾರೆ. ತುಳು ಭಾಷೆಯ ಮಾತು ಬಂದಾಗಲೂ ಚಪ್ಪಾಳೆ ಹೊಡೆಯುತ್ತಾರೆ. ಅಂದರೆ, ಜನ ನಮ್ಮ ನಮ್ಮ ಪ್ರದೇಶದ ಕತೆಗಾಗಿ ಹಾತೊರೆಯುತ್ತಿದ್ದಾರೆ. ನಮ್ಮ ಪ್ರಾಂತ್ಯದ ಕತೆಯನ್ನು ಕೇಳುತ್ತಿದ್ದಾರೆ. ನಮಗೆ ಯಾವುದೋ ಭಾಷೆಯ ರೀಮೇಕ್ ತಂದು ಹಾಕಬೇಡಿ, ನಿಮ್ಮ ಕತೆಯನ್ನು ಹೇಳಿ ಎಂದು ಕಾದು ಕುಳಿತಿದ್ದಾರೆ.
5. ನಮ್ಮಲ್ಲೇ ಎಷ್ಟೊಂದು ಕತೆಗಳಿವೆ. ಎಷ್ಟೊಂದು ವೈವಿಧ್ಯಮಯ ಸನ್ನಿವೇಶಗಳು ನಮ್ಮ ಎದುರಿಗಿವೆ ಅನ್ನುವುದು ನನಗೆ ಈಗ ಹೊಳೆಯುತ್ತಿದೆ.ಕತೆಯಿಲ್ಲ ಅನ್ನುವ ಮಾತಿಗೆ ಅರ್ಥವೇ ಇಲ್ಲ. ಇಲ್ಲಿ ಪ್ರತಿಯೊಂದು ಊರೂ ಹತ್ತಿಪ್ಪತ್ತು ಕತೆಗಳನ್ನು ಧಾರಾಳವಾಗಿ ಕೊಡಬಲ್ಲದು. ಆ ಕತೆಯನ್ನು ಆ ಊರಿನ ಪರಿಸರದಲ್ಲಿ, ಭಾಷೆಯಲ್ಲಿ ಹೇಳಿದಾಗಲೇ ಅದಕ್ಕೆ ಆ ಸೌಂದರ್ಯ ಬರುವುದು. ಅಂಥ ಸಿನಿಮಾಗಳನ್ನೇ ಪ್ರೇಕ್ಷಕ ಬಯಸುವುದು.
'ಗರುಡಗಮನ ವೃಷಭವಾಹನ': ವಿಶೇಷ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ6. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕರು ಕೋಟಿ ಕೋಟಿ ಕಳೆದುಕೊಳ್ಳುತ್ತಿರುವುದನ್ನು ನಾವೇ ನೋಡುತ್ತಿದ್ದೇವೆ. ಒಂದು ಸಿನಿಮಾದಲ್ಲಿ ಕಳಕೊಂಡದ್ದನ್ನು ಮತ್ತೊಂದು ಸಿನಿಮಾದಲ್ಲಿ ಸಂಪಾದನೆ ಮಾಡುತ್ತೇವೆ ಅನ್ನುವುದು ಹಳೆಯ ಕಾಲ. ಇನ್ನು ಅದೇ ಮಾತು ಹೇಳುವುದು ಕಷ್ಟ. ಈಗ ಕಳಕೊಂಡದ್ದು ಹೋಯಿತು ಅಂತಲೇ ಲೆಕ್ಕ.
ಹೀಗೆ ಕಳೆಯುತ್ತಾ ಹೋದರೆ ನಿರ್ಮಾಪಕರು ಬದುಕುವುದಾದರೂ ಹೇಗೆ? ನಾನು ಇತ್ತೀಚೆಗೆ ಇಂಡಿಯನ್ ಪನೋರಮಾ ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದೆ. ಆಗ ಮರಾಠಿ, ಮಲಯಾಳಂ, ಬೆಂಗಾಲಿ ಮತ್ತು ಅಸ್ಸಾಮ್ ಭಾಷೆಯ ಸುಮಾರು 180 ಸಿನಿಮಾಗಳನ್ನು ನೋಡಿದೆ. ಒಂದಕ್ಕಿಂತ ಒಂದು ಅತ್ಯುತ್ತಮ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ನನಗೆ ನಿರಾಸೆ ಮಾಡಿದ್ದು ಕನ್ನಡ ಚಿತ್ರಗಳು. ನಮ್ಮ ಸಿನಿಮಾಗಳನ್ನು ನೋಡುವಾಗ ಮಿಕ್ಕ ತೀರ್ಪುಗಾರರು ಚಪ್ಪಾಳೆ ಹೊಡೆದು ಅರ್ಧಕ್ಕೇ ಸಿನಿಮಾ ನಿಲ್ಲಿಸಲಿಕ್ಕೆ ಹೇಳುತ್ತಿದ್ದರು. ಅಷ್ಟು ಕೆಟ್ಟ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ್ದವು. ಕರ್ನಾಟಕದ ಮೂವತ್ತು ಜಿಲ್ಲೆಗಳೂ ವೈವಿಧ್ಯಮಯ ಜನಜೀವನ, ಭಾಷಾವೈವಿಧ್ಯಕ್ಕೆ ಹೆಸರಾದವು. ಹಾಗಿದ್ದರೂ ನಾವು ತೆಲುಗು ಮತ್ತು ತಮಿಳು ಶೈಲಿಯನ್ನು ಕತೆಗಳನ್ನು ಕದ್ದೋ ಎರವಲು ತಂದೋ ಸಿನಿಮಾ ಮಾಡುತ್ತಿದ್ದೇವೆ.
ಇದನ್ನು ಕೂಡಲೇ ನಿಲ್ಲಿಸಿ ಕನ್ನಡತನದತ್ತ ಹೊರಳಿಕೊಂಡು 1970ರಿಂದ 1994ರ ತನಕ ಕನ್ನಡ ಚಿತ್ರರಂಗ ಕೊಟ್ಟಂಥ ಸಿನಿಮಾ ಮಾಡದೇ ಹೋದರೆ ಅಪಾಯ ಕಾದಿದೆ. ನಾವು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಇದೇ ಸಕಾಲ. ಇದನ್ನು ನಿರ್ಮಾಪಕರು ಮಾತ್ರವಲ್ಲ, ನಾಯಕ ನಟರೂ ಮಾಡಬೇಕಿದೆ. ಅವರೂ ಒಳ್ಳೆಯ ಕತೆಗಳತ್ತ ಗಮನ ಹರಿಸಬೇಕಾಗಿದೆ. ನಾನು ವಿಶ್ವದ ಅನೇಕ ಭಾಷೆಗಳ ಸಿನಿಮಾ ನೋಡಿದ್ದೇನೆ. ಬ್ರೆಜಿಲ, ಆಸ್ಟ್ರಿಯಾ, ಇರಾನ್ ಸಿನಿಮಾಗಳ ಸೊಬಗನ್ನು ಗರುಡಗಮನ ವೃಷಭವಾಹನ ಚಿತ್ರದಲ್ಲೂ ನೋಡಿದೆ. ಒಬ್ಬ ನಿರ್ದೇಶಕ ಕಲಾತ್ಮಕವಾಗಿದ್ದಾಗಲೂ ಆರ್ಥಿಕವಾಗಿ ಲಾಭ ತಂದುಕೊಡಬಲ್ಲ ಸಿನಿಮಾ ಮಾಡುವುದು ಸಾಧ್ಯ ಅನ್ನುವುದನ್ನು ಕೂಡ ರಾಜ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಇಡೀ ತಂಡದ ಪ್ರತಿಭೆಗೆ ನನ್ನ ದೊಡ್ಡ ನಮಸ್ಕಾರ. ಇದು ಮತ್ತಷ್ಟು ನಿರ್ದೇಶಕರನ್ನು ಮತ್ತು ಇಡೀ ಚಿತ್ರರಂಗವನ್ನು ಪ್ರೇರೇಪಿಸಲಿ ಅನ್ನುವುದು ನನ್ನ ಆಸೆ.