ರಾಜ್ ಬಿ. ಶೆಟ್ಟಿ ಅವರು ಕರಾವಳಿ ಹಿನ್ನೆಲೆಯ ಹೊಸ ಥ್ರಿಲ್ಲರ್ ಸಿನಿಮಾವೊಂದನ್ನು ಸದ್ದಿಲ್ಲದೆ ನಿರ್ದೇಶಿಸುತ್ತಿದ್ದು, ಮಂಗಳೂರಿನಲ್ಲಿ ಈಗಾಗಲೇ 30 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಪರಭಾಷೆಗಳಲ್ಲೂ ಬ್ಯುಸಿಯಾಗಿರುವ ಅವರು, ಈ ಹೊಸ ಚಿತ್ರದ ಶೀರ್ಷಿಕೆ ಮತ್ತು ತಾರಾಗಣದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ.
ಬೆಂಗಳೂರು: ಅತ್ಯಂತ ಕಡಿಮೆ ಬಜೆಟ್ನಲ್ಲಿ, ಯಾವುದೇ ಧೂಮ್ ಧಾಮ್ ಇಲ್ಲದೇ, ಯಾವುದೇ ಸ್ಟಾರ್ ನಟ-ನಟಿಯರನ್ನು ಹಾಕಿಕೊಳ್ಳದೇ, ಪ್ರಚಾರಕ್ಕೆಂದೇ ಕೋಟಿ ಕೋಟಿ ಹಣ ಸುರಿಯದೇ, ಲಾಂಗು, ಮಚ್ಚು, ರಕ್ತಪಾತ, ಅತಿಯಾದ ಅಶ್ಲೀಲತೆ ಯಾವುದೂ ಇಲ್ಲದೇ ಚಿತ್ರವೊಂದು ಗೆಲ್ಲಬಹುದು ಎಂದು ತೋರಿಸಿಕೊಟ್ಟಿರುವ ಸ್ಯಾಂಡಲ್ವುಡ್ನ ಬೆರಳೆಣಿಕೆ ಚಿತ್ರಗಳಲ್ಲಿ ಒಂದು ರಾಜ್ ಬಿ.ಶೆಟ್ಟಿ ನಿರ್ದೇಶನದ ಹಾಗೂ ಅವರೇ ನಟಿಸಿದ್ದ ಸು ಫ್ರಮ್ ಸೋ (Su From So). ಈ ಸಿನಿಮಾದ ಮೂಲಕ ನಟನ ಲಕ್ ಖುಲಾಯಿಸಿದೆ. ಸು ಫ್ರಮ್ ಸೋ ಸಿನಿಮಾ ನೂರು ಕೋಟಿ ಕ್ಲಬ್ ಸೇರ್ತಿದಂತೆ , ರಿಲೀಸ್ ರೆಡಿ ಇರುವ ರಾಜ್ ಬಿ. ಶೆಟ್ಟಿ ಅಭಿನಯದ ಚಿತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಈಗ ಇತಿಹಾಸ. ಭರ್ಜರಿ ಮೊತ್ತಕ್ಕೆ ರಾಜ್ ಬಿ ಶೆಟ್ಟಿಯ ರಕ್ಕಸ ಪುರದೋಳ್ (rakkasa puradol )ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿರುವುದೂ ಕೂಡ ದಾಖಲೆ ಪುಟ ಸೇರಿದೆ.
30 ದಿನಗಳ ಚಿತ್ರೀಕರಣ
2017ರಲ್ಲಿ ಬಿಡುಗಡೆಗೊಂಡಿದ್ದ 'ಒಂದು ಮೊಟ್ಟೆಯ ಕಥೆ' ಯಾಗಲೀ, 2021ರ 'ಗರುಡ ಗಮನ ವೃಷಭ ವಾಹನ' ಸಿನಿಮಾ ಆಗಲೀ, 2023ರಲ್ಲಿ ಬಿಡುಗಡೆಗೊಂಡ 'ಟೋಬಿ' ಆಗಲಿ ಅಥವಾ ಅದೇ ಸಾಲಿನಲ್ಲಿ ಬಿಡುಗಡೆಯಾದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಆಗಲೀ ಎಲ್ಲವೂ ನಟನ ಪ್ರತಿಭೆಗೆ ಕನ್ನಡಿ ಹಿಡಿದಿದೆ. ಇದರ ನಡುವೆಯೇ, ಇಂಥದ್ದೇ ಸಿಂಪಲ್, ಸದಾ ಸೀದಾ ಚಿತ್ರವೊಂದು ದಾಖಲೆ ಬರೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವ ಪ್ರೇಮದ ಊರಲಿ ಸಿನಿಮಾ. ಇದರ ಬೆನ್ನಲ್ಲೇ, ಇದೀಗ ರಾಜ್ ಬಿ.ಶೆಟ್ಟಿ ಅವರು ಇಂಥದ್ದೇ ಇನ್ನೊಂದು ಸಿನಿಮಾ ಮಾಡಲು ಸಜ್ಜಾಗಿ ನಿಂತಿದ್ದಾರೆ. ಸದ್ದಿಲ್ಲದೆಯೇ ತಮ್ಮ ಮುಂದಿನ ಚಿತ್ರದ ನಿರ್ದೇಶನದ ಕೆಲಸವನ್ನು ಆರಂಭಿಸಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ, ಚಿತ್ರತಂಡವು ಮಂಗಳೂರಿನಲ್ಲಿ ಇನ್ನೂ ಹೆಸರು ಇಡದ ಈ ಚಿತ್ರದ ಚಿತ್ರೀಕರಣ ನಡೆಸಿದೆ. ಈಗಾಗಲೇ 30 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ.
ನಟನೆಯ ನಡುವೆಯೂ, ಹೊಸ ಕಥೆ ಬರೆಯುವುದರತ್ತ ಸಂಪೂರ್ಣ ಗಮನಹರಿಸಲು ಸಮಯ ಮೀಸಲಿಡುತ್ತಿರುವುದಾಗಿ ರಾಜ್ ಈ ಹಿಂದೆ 'ಸಿನಿಮಾ ಎಕ್ಸ್‌ಪ್ರೆಸ್' ಜೊತೆಗಿನ ಸಂಭಾಷಣೆಯಲ್ಲಿ ಆಗಾಗ್ಗೆ ಹೇಳುತ್ತಿದ್ದರು. ಇದೀಗ ತಮ್ಮ ಮಾತಿನಂತೆಯೇ, ಅವರು ಚಿತ್ರಕಥೆಯನ್ನು ಪರಿಪೂರ್ಣಗೊಳಿಸಲು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಯೋಜನೆಯು ಕರಾವಳಿ ಕರ್ನಾಟಕದ ವಿಶಿಷ್ಟ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.
ಪರಭಾಷೆಗಳಲ್ಲಿಯೂ ಬೇಡಿಕೆ
ರಾಜ್ ಬಿ.ಶೆಟ್ಟಿ ಅವರಿಗೆ ಈಗ ಪರಭಾಷೆಯಿಂದಲೂ ಬೇಡಿಕೆ ಹೆಚ್ಚು ಬರುತ್ತಿದೆ. 'ಬಂದರ್' ಚಿತ್ರದ ಮೂಲಕ ಜೊತೆ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿರೋ ರಾಜ್ ಅವರು, ಅರ್ಜುನ್ ಜನ್ಯ ನಿರ್ದೇಶನದ '45' ಚಿತ್ರದಲ್ಲಿಯೂ ನಟಿಸಿದರು. ಲ್ಯಾಂಡ್‌ಲಾರ್ಡ್ ಚಿತ್ರದಲ್ಲಿ ಖಳನಾಯಕನ ಪಾತ್ರ ಮತ್ತು ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಚಿತ್ರದಲ್ಲೂ ನಟಿಸಿದರು. ಇತ್ತೀಚೆಗೆ, ಗುರುದತ್ತ ಗಾಣಿಗ ಅವರ ಕರಾವಳಿ ಚಿತ್ರದಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಇದಲ್ಲದೆ ರಾಜ್ ಬಿ ಶೆಟ್ಟಿ ಅವರು ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ 'ಪಾಕೆಟ್ ನಾವೆಲ್' ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಮತ್ತೊಂದು ತಮಿಳು ಚಿತ್ರ 'ಸೆಯಾನ್' ಸೇರಿದಂತೆ ಇತರ ಕೆಲವು ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ.
ಇದೆಲ್ಲದರ ನಡುವೆಯು ರಾಜ್ ಬಿ ಶೆಟ್ಟಿ ಅವರು ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ವರದಿಗಳ ಪ್ರಕಾರ, ಈ ಚಿತ್ರದ ಚಿತ್ರೀಕರಣವು ವೇಗವಾಗಿ ಸಾಗುತ್ತಿದೆ. ಮುಖ್ಯ ಚಿತ್ರೀಕರಣ ಪೂರ್ಣಗೊಂಡ ನಂತರ, ಚಿತ್ರದ ಶೀರ್ಷಿಕೆ, ನಿರ್ಮಾಣದ ವಿವರಗಳು ಹಾಗೂ ಸಂಪೂರ್ಣ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಅಧಿಕೃತ ಘೋಷಣೆಯನ್ನು ಹೊರಡಿಸಲು ಚಿತ್ರತಂಡ ಯೋಜಿಸಿದೆ.


