ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ: ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ರಾಘಣ್ಣ
ಮನುಷ್ಯ ಇದ್ದಾಗ ಎಷ್ಟು ಜನರ ಪ್ರೀತಿ ಗಳಿಸಿರುತ್ತಾರೋ ಆ ವ್ಯಕ್ತಿ ಮೃತಪಟ್ಟ ಮೇಲೆ ಆ ಪ್ರೀತಿ ದುಪ್ಪಟ್ಟು ಮಾಡಿ ಕೊಂಡಿರೋ ರಾಜ್ಯದ ಏಕೈಕ ವ್ಯಕ್ತಿ ಡಾ. ಪುನೀತ್ ರಾಜ್‌ಕುಮಾರ್ ಅಂದ್ರೇ, ತಪ್ಪಾಗಲಿಕ್ಕಿಲ್ಲ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷಿಯಾನೆಟ್ ಸುವರ್ಣ ನ್ಯೂಸ್, ವಿಜಯನಗರ
ವಿಜಯನಗರ (ಜೂ.06): ಮನುಷ್ಯ ಇದ್ದಾಗ ಎಷ್ಟು ಜನರ ಪ್ರೀತಿ ಗಳಿಸಿರುತ್ತಾರೋ ಆ ವ್ಯಕ್ತಿ ಮೃತಪಟ್ಟ ಮೇಲೆ ಆ ಪ್ರೀತಿ ದುಪ್ಪಟ್ಟು ಮಾಡಿ ಕೊಂಡಿರೋ ರಾಜ್ಯದ ಏಕೈಕ ವ್ಯಕ್ತಿ ಡಾ. ಪುನೀತ್ ರಾಜ್‌ಕುಮಾರ್ ಅಂದ್ರೇ, ತಪ್ಪಾಗಲಿಕ್ಕಿಲ್ಲ. ಯಾಕಂದ್ರೇ ಮನುಷ್ಯ ಮೃತಪಟ್ಟ ಮೇಲೆ ದೇವರಾಗ್ತಾರೆ ಅನ್ನೋ ಮಾತಿನಂತೆ ಪುನೀತ್ ಇದೀಗ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ. ಅದಕ್ಕೆ ಸಾಕ್ಷಿ ಹೊಸಪೇಟೆಯ ಈ ಜನರು. ಹೌದು! ಪುನೀತ್ ಮೇಲಿನ ಪ್ರೀತಿಗೆ ಹೊಸಪೇಟೆಯ ಅವರ ಅಭಿಮಾನಿಗಳು ಎಳುವರೆ ಅಡಿ ಎತ್ತರದ ಪುತ್ತಳಿಯನ್ನು ಅನಾವರಗೊಳಿಸಿದ್ದಾರೆ.
ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಪುತ್ತಳಿ ಅನಾವರಣ: ಹೌದು! ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯಲ್ಲಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 7.4 ಅಡಿ ಎತ್ತರದ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಪುನೀತ್ ರಾಜಕುಮಾರ ನಮ್ಮನ್ನು ಬಿಟ್ಟು ಹೆಚ್ಚು ಕಡಿಮೆ ಏಳು ತಿಂಗಳುಗಳೇ ಕಳೆದಿವೆ. ಆದ್ರೇ, ಅವರ ಮೇಲಿನ ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೊಸಪೇಟೆಯಲ್ಲಿ ರಾಜ್ ಕುಟುಂಬಕ್ಕೆ ಅದರಲ್ಲೂ ಪುನೀತ್ ಬಗ್ಗೆ ಅತಿ ಹೆಚ್ಚು ಅಭಿಮಾನಗಳಿದ್ದಾರೆ ಎಂದು ದೊಡ್ಡ ಮನೆಯವರು ಹೇಳುತ್ತಿದ್ರು. ಅದರಲ್ಲೂ ಯಾರೇ ಕೈಬಿಟ್ಟರು ಹೊಸಪೇಟೆ ಜನರು ನಮ್ಮ ಕೈಬಿಡಲ್ಲ ಎಂದು ಪುನೀತ್ ಹೊಸಪೇಟೆಯಲ್ಲಿ ಘಂಟಾಘೋಷವಾಗಿ ಹೇಳಿದ್ರು.
ಕುಟುಂಬದ ಜೊತೆ ಪುನೀತ್ ರಾಜ್‌ಕುಮಾರ್ ಪಾರ್ಟಿ; ಹಳೆ ವಿಡಿಯೋ ವೈರಲ್!
ಅದು ಇಂದು ಸಾಬೀತಾಗಿದೆ. ಪುನೀತ್ ಅವರು ಮೃತಪಟ್ಟ ಬಳಿಕ ಅವರ ಅಭಿಮಾನಿಗಳು ಹೊಸಪೇಟೆಯ ವೃತ್ತವೊಂದಕ್ಕೆ ಮತ್ತು ಇಲ್ಲಿಯ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ಹೆಸರನ್ನು ಇಟ್ಟಿದ್ರು ಇದೀಗ ಮುಂದುವರೆದ ಭಾಗವಾಗಿ ಪುನೀತ್ ವೃತ್ತದಲ್ಲಿ ಅಭಿಮಾನಿಗಳ ಇಚ್ಛಾಶಕ್ತಿ ಮೇಲೆ ಮೇಲೆ ಸಚಿವ ಆನಂದ ಸಿಂಗ್ ಮತ್ತವರ ಪುತ್ರ ಸಿದ್ದಾರ್ಥ್ ಸಿಂಗ್ ಸಹಕಾರದೊಂದಿಗೆ 7.4 ಎತ್ತರದ ಕಂಚಿನ ಪ್ರತಿಮೆ ಮಾಡಿ ಇಂದು ಅನಾವರಣಗೊಳಿಸಿದ್ರು. ಪುತ್ಥಳಿ ಉದ್ಘಾಟನೆ ಮಾಡಿದ ರಾಘವೇಂದ್ರ ರಾಜಕುಮಾರ ಶಾರೀರಿಕವಾಗಿ ಪುನೀತ್ ನಮ್ಮಿಂದ ದೂರವಿರಬಹುದು ಆದ್ರೇ, ಅಂತರಿಕವಾಗಿ ಅಭಿಮಾನಿಗಳ ಹೃದಯದಲ್ಲಿ ಪುನೀತ್ ಅಜರಾಮರ ಎಂದ್ರು. ಅಲ್ಲದೇ ಪುನೀತ್ ಆದರ್ಶವನ್ನು ಪ್ರತಿಯೊಬ್ಬ ಅಭಿಮಾನಿಗಳು ಪಾಲಿಸಬೇಕೆಂದ ಅವರು ಗೊಂಬೆ ಹೇಳುತೈತೆ ಹಾಡನ್ನು ಹಾಡೋ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ್ರು ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳ ಕಣ್ಣಿರು ಹಾಕಿದ್ರು.
ದೊಡ್ಡ ಮನೆಯ ಕೈಬಿಡದ ಹೊಸಪೇಟೆ ಅಭಿಮಾನಿಗಳು: ದೊಡ್ಡ ಮನೆ ಕುಟುಂಬಕ್ಕೂ ಹೊಸಪೇಟೆಗೂ ಅವಿನಾವಭಾವ ಸಂಬಂಧ ಇದೆ. ಯಾಕಂದ್ರೇ ಈಗಲೂ ರಾಜ್ ಕುಟುಂಬದ ಸಿನಿಮಾಗಳು ಹೊಸಪೇಟೆಯಲ್ಲಿ ಮೊದಲು ಪ್ರದರ್ಶನ ಕಂಡ್ರೆ ಅದು ಯಶಸ್ವಿಯಾ ಗುತ್ತದೆ ಅನ್ನೋ ನಂಬಿಕೆ ಈಗಲೂ ಇದೆ. ಹೀಗಾಗಿ ಬಹುನಿರೀಕ್ಷಿತ ಶಿವಣ್ಣ ಮತ್ತು ಪುನೀತ್ ಅವರ ಸಿನಿಮಾಗಳು ರಿಲೀಸ್ ದಿನದ ಹಿಂದಿನ ರಾತ್ರಿಯೇ ಬಿಡುಗಡೆಯಾಗಿವೆ. ಪುನೀತ್ ಅವರ ಎರಡು ಯಶಸ್ವಿ ಸಿನಿಮಾ ನಿರ್ದೇಶನ ಮಾಡಿದ ಸಂತೋಷ ಆನಂದ ರಾಮ್ ಕೂಡ ಪುನೀತ್ ರಾಜ್‌ಕುಮಾರ್ ಅವರನ್ನು ಹೊಸಪೇಟೆ ಅಭಿಮಾನಿಗಳು ದೇವರನ್ನಾಗಿಸಿದ್ದಾರೆ ಅದಕ್ಕೆ ಸಾಕ್ಷಿಯೇ ಈ ಪುತ್ಥಳಿ ಎಂದ್ರು. ಇನ್ನೂ ಹೊಸಪೇಟೆ ನೆಲದ ನಟ ಅಜೇಯ್ ಕೂಡ ಭಾವನಾತ್ಮಕವಾಗಿ ಮಾತನಾಡಿ ನಾನು ನಟ ಎನ್ನುವದಕ್ಕಿಂತ ಹೊಸಪೇಟೆಯ ಪುನೀತ್ ಅವರ ಅಭಿಮಾನಿ ಎನ್ನುವದೇ ನನಗೆ ಹೆಮ್ಮೆ ಎಂದ್ರು.
ಡ್ಯಾನ್ಸಿಂಗ್ ಚಾಂಪಿಯನ್ 'ಅಪ್ಪು' ಟ್ರೋಫಿ ಪಡೆದ ಅದಿತ್ಯ,ಅನ್ಮೋಲ್; ಕೈ ಸೇರಿದ ಹಣ ಎಷ್ಟು?
ಹೊಸಪೇಟೆಯಲ್ಲಿ ಹಬ್ಬದ ವಾತವರಣ: ಇನ್ನೂ ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯ ವಡಕರಾಯ ದೇವಸ್ಥಾನದಿಂದ ಮೆರವಣಿಗೆಯನ್ನು ಮಾಡಲಾಯಿತು. ಜೊತೆಗೆ ಗುರುಕಿರಣ್ ಸಂಗೀತ ರಸಮಂಜರಿ ಕಾರ್ಯಕ್ರಮದ ಜೊತೆ ಸ್ಥಳೀಯ ಅಪ್ಪು ಅಭಿಮಾನಿಗಳಿಗೆ ಹಾಡು ಹಾಡಲು ಮತ್ತು ನೃತ್ಯ ಮಾಡಲು ಕೂಡ ವೇದಿಕೆಯಲ್ಲಿ ಅವಕಾಶ ಮಾಡಲಾಗಿತ್ತು. ಅದೇನೇ ಇರಲಿ ಪುನೀತ್ ನಮ್ಮಂದಿಗೆ ಇದ್ದಾರೆ ಅನ್ನೋದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು.