Gandhada Gudi Release Date: ಪ್ರೀತಿಯ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಅಪ್ಪು ಫ್ಯಾನ್ಸ್‌ಗೆ ಈಗ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.
ಬೆಂಗಳೂರು (ಜು. 15): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ (Gandhada Gudi) ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೀತಿಯ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಅಪ್ಪು ಫ್ಯಾನ್ಸ್‌ಗೆ ಈಗ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ವನ್ಯಜೀವಿ ಸಿನಿಮಾ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ.
ಗಂಧದಗುಡಿ ಸಿನಿಮಾ ಬಹುಭಾಷೆಯಲ್ಲಿ ತೆರೆಗೆ ಬರಲಿದ್ದು, ಸಿನಿಮಾದುದ್ದಕ್ಕೂ ವನ್ಯಜೀವಿ ಛಾಯಾಗ್ರಹಕ ಅಮೋಘವರ್ಷ ಪುನೀತ್ ಜೊತೆಯಾಗಿದ್ದಾರೆ. ಗಂಧದಗುಡಿ ಚಿತ್ರದಲ್ಲಿ ಕರ್ನಾಟಕದ ಕಾಡು, ನದಿ, ಸಮುದ್ರ ಹಾಗೂ ವನ್ಯಜೀವಿ ತಾಣವನ್ನ ಒಟ್ಟಿಗೆ ಸೆರೆ ಹಿಡಿಯಲಾಗಿದೆ.
"ಈ ವರ್ಷದ ನಾಡಹಬ್ಬ ರಾಜ್ಯೋತ್ಸವವನ್ನು ಅಪ್ಪುವಿನ ಗಂಧದಗುಡಿಯೊಂದಿಗೆ ಆಚರಿಸೋಣ, ಕನ್ನಡ ರಾಜ್ಯೋತ್ಸವದ ವಾರದಲ್ಲಿ 28 ಆಕ್ಟೋಬರ್, 2022 ರಂದು ಗಂಧದಗುಡಿ ಬಿಡುಗಡೆಯಾಗುತ್ತಿದೆ, ಅಪ್ಪು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ರಾಷ್ಟ್ರ ಪ್ರಶಸ್ತಿ ಪಡೆದ ವನ್ಯಜೀವಿ ಚಿತ್ರ ನಿರ್ದೇಶಕ ಆಮೋಘವರ್ಷ ಅವರ ಸಾಂಗತ್ಯದ, ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ನೋಡಬಹುದಾದ ಮಹಾನ್ ಚಲನಚಿತ್ರ, ಬನ್ನಿ ಕನ್ನಡ ಹಬ್ಬವನ್ನು ಅಪ್ಪು ಹಬ್ಬವನ್ನು ನಾವೆಲ್ಲರೂ ಆಚರಿಸೋಣ" ಎಂದು ಚಿತ್ರತಂಡ ಹೇಳಿದೆ
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಟ್ವಿಟರ್ ಅವಮಾನ ಮಾಡಿತೇ? ಬ್ಲ್ಯೂ ಟಿಕ್‌ಗೆ ಏನಿದೆ ನಿಯಮ
ಕರ್ನಾಟಕದ ಬಗ್ಗೆ ಡಾಕ್ಯುಮೆಂಟರಿ ‘ಗಂಧದ ಗುಡಿ’: ಗಂಧದ ಗುಡಿ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ ಮಾಡಿದ್ದ ಅಮೋಘವರ್ಷ ಜತೆ ಸೇರಿ ಪುನೀತ್ ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ಧಪಡಿಸಲಾಗಿತ್ತು. ಮುಖ್ಯವಾಗಿ ಕಾಳಿನದಿ, ನಾಗರಹೊಳೆ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಈ ಸಾಕ್ಷ್ಯಚಿತ್ರ ಪುನೀತ್ ರಾಜ್‌ಕುಮಾರ್‌ರವರ ಕನಸಿನ ಸಾಕ್ಷ್ಯಚಿತ್ರವಾಗಿತ್ತು. ಇದನ್ನು ನೋಡುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದರು. ಈ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಅಕ್ಟೋಬರ್ 28ರಂದು ಚಿತ್ರ ರಿಲೀಸ್ ಆಗಲಿದೆ.
