Asianet Suvarna News Asianet Suvarna News

ಪುನೀತ್‌ ರಾಜ್‌ಕುಮಾರ್‌ಗೆ ಟ್ವಿಟರ್‌ ಅವಮಾನ ಮಾಡಿತೇ? ಬ್ಲ್ಯೂ ಟಿಕ್‌ಗೆ ಏನಿದೆ ನಿಯಮ

ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟ್ಟರ್‌ ಖಾತೆಯ ಬ್ಲ್ಯೂ ಟಿಕ್‌ ಅನ್ನು ತೆಗೆದು ಹಾಕಿರುವ ಕಾರಣಕ್ಕೆ ಕರ್ನಾಟಕದ ಜನತೆ ಸೋಷಿಯಲ್‌ ಮೀಡಿಯಾ ದೈತ್ಯ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್ ಅನ್ನು ತೆಗೆಯುವ ನಿಯಮ ಅದರ ನಿರ್ವಹಣಾ ವ್ಯವಸ್ಥೆಯಲ್ಲಿಯೇ ಇದೆ ಹಾಗೂ ಅದಕ್ಕೆ ಸ್ಪಷ್ಟ ಕಾರಣವೂ ಇದೆ.
 

Puneeth Rajkumar Twitter account Blue tick removed what is the reason san
Author
Bengaluru, First Published Jul 13, 2022, 11:25 PM IST | Last Updated Jul 13, 2022, 11:26 PM IST

ಬೆಂಗಳೂರು (ಜುಲೈ 13): ಕೆಲವೊಂದು ತಿಂಗಳು ಕಳೆದರೆ, ಕನ್ನಡಿಗರ ಪಾಲಿನ ಆರಾಧ್ಯದೈವ ಎನಿಸಿಕೊಂಡಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅಗಲಿ ಒಂದು ವರ್ಷ ಕಳೆಯಲಿದೆ. ಕಳೆದ ವರ್ಷದ ಅಕ್ಟೋಬರ್‌ 29 ರಂದು ಇಡೀ ಕರ್ನಾಟಕಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿದ್ದು ಪುನೀತ್‌ ರಾಜ್‌ ಕುಮಾರ್‌ ತಮ್ಮ 46ನೇ ವಯಸ್ಸಿನಲ್ಲಿಯೇ ನಿಧನರಾದ ಸುದ್ದಿ. ಇಂದಿಗೂ ಕರ್ನಾಟಕದ ಜನತೆ ಈ ಒಂದು ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ನಡುವೆ ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟರ್‌ ಖಾತೆಗೆ ಇದ್ದ ಬ್ಲ್ಯೂ ಟಿಕ್‌ ಅನ್ನು ಟ್ವಿಟರ್‌ ತೆಗೆದುಹಾಕಿದೆ. ವೆರಿಫೈಡ್‌ ಖಾತೆ ಅಥವಾ ಇದು ಆಯಾ ವ್ಯಕ್ತಿ ನಿರ್ವಹಣೆ ಮಾಡುತ್ತಿರುವ ಖಾತೆ ಎನ್ನುವ ಸಲುವಾಗಿ ಟ್ವಿಟರ್‌ ಬ್ಲ್ಯೂ ಟಿಕ್‌ಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಬ್ಲ್ಯೂ ಟಿಕ್‌ ಖಾತೆಗಳ ಮೂಲಕ ಬರುವ ಸಂದೇಶಗಳು ಅಧಿಕೃತ ಎಂದೇ ನಂಬಲಾಗುತ್ತದೆ. ಹಾಗಾಗಿ ಬ್ಲ್ಯೂ ಟಿಕ್‌ ಎನ್ನುವುದು ಟ್ವಿಟರ್‌ ಸೇರಿದಂತೆ ಕೆಲವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಮುಖವಾಗಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಖಾತೆಗೂ ಟ್ವಿಟರ್‌ ಈ ಹಿಂದೆ ಬ್ಲ್ಯೂ ಟಿಕ್‌ ನೀಡಿತ್ತು. ಆದರೆ, ಇತ್ತೀಚೆಗೆ ಅದು ಕಾಣುತ್ತಿಲ್ಲ. ಬ್ಲ್ಯೂ ಟಿಕ್‌ ಅನ್ನು ತೆಗೆದುಹಾಕಿರುವ ಸಲುವಾಗಿ ಕರ್ನಾಟಕದ ಅಭಿಮಾನಿಗಳು ಟ್ವಿಟರ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಟ್ವಿಟರ್‌ ಬಳಕೆ ಮಾಡಲು ಆರಂಭಿಸಿದ್ದು ಕೂಡ ಬಹಳ ಇತ್ತೀಚೆಗೆ, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಬೇಕು, ಚಿತ್ರದ ಕುರಿತಾಗಿ, ವಿಶೇಷ ಸಂದರ್ಭಗಳ ಕುರಿತಾಗಿ ತಮ್ಮ ಸಂದೇಶವನ್ನು ಹೇಳಲು ಟ್ವಿಟರ್‌ಅನ್ನು (Twitter) ಬಳಸುತ್ತಿದ್ದರು. ಟ್ವಿಟರ್ ಖಾತೆ ಆರಂಭಿಸಿದ ಕೆಲ ದಿನಗಳಲ್ಲಿಯೇ ಪುನೀತ್‌ ರಾಜ್‌ ಕುಮಾರ್‌ ಅವರ ಖಾತೆಗೆ ಟ್ವಿಟರ್‌ ಬ್ಲ್ಯೂ ಟಿಕ್‌ (Blue Tick) ಕೂಡ ನೀಡಿತ್ತು. 2021ರ ಅಕ್ಟೋಬರ್‌ 29ರಂದು ಭಜರಂಗಿ-2 ವಿಶ್‌ ಮಾಡಿ ಅವರು ಟ್ವೀಟ್‌ ಮಾಡಿದ್ದೇ ಕೊನೆ. ಆ ಬಳಿಕ ಅವರ ಖಾತೆ ನಿಷ್ಕ್ರಿಯವಾಗಿದೆ. ಹಾಗಿದ್ದರೂ ಅವರ ಖಾತೆಗೆ 380.7K ಫಾಲೋವರ್‌ಗಳಿದ್ದಾರೆ.

ಏನಿದೆ ಟ್ವಿಟರ್‌ನ ನಿಯಮ: ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್‌ ನೀಡಲು ನಿಯಮಗಳಿದ್ದರೆ, ಬ್ಲ್ಯೂ ಟಿಕ್‌ ತೆಗೆಯುವುದು ಸಾಮಾನ್ಯವಾಗಿ ಅಲ್ಗೋರಿದಮ್‌ ಅಲ್ಲಿ ನಡೆಸಲಾಗುತ್ತದೆ. ಅದರೆ, ಅದರ ಸ್ವಯಂ ನಿರ್ವಹಣಾ ವ್ಯವಸ್ಥೆ ಈ ಕೆಲಸವನ್ನು ಮಾಡುತ್ತದೆ. ಬ್ಲ್ಯೂ ಟಿಕ್‌ ಹೊಂದಿರುವ ಖಾತೆ ಬಹಳ ದಿನಗಳ ಕಾಲ ನಿಷ್ಕ್ರಿಯವಾಗಿದ್ದರೆ, ಅದು ತನ್ನ ಬ್ಲ್ಯೂ ಟಿಕ್‌ ಅನ್ನು ಕಳೆದುಕೊಳ್ಳುತ್ತದೆ. ಟ್ವೀಟ್‌ ಮಾಡದಿದ್ದರೂ, ಫ್ರೋಫೈಲ್‌ ಫೋಟೋ ಅಥವಾ ಬ್ಯಾನರ್‌ಗಳನ್ನಾದರೂ ಬದಲಿಸುತ್ತಿರಬೇಕು. ಇಲ್ಲದೇ ಇದ್ದಲ್ಲಿ ಇದು ನಿಷ್ಕ್ರಿಯ ಎಂದು ಟ್ವಿಟರ್‌ ನಿರ್ಧರಿಸಿ ಟಿಕ್‌ ಅನ್ನು ತೆಗೆದುಹಾಕಿತ್ತದೆ. ಸುಶಾಂತ್‌ ಸಿಂಗ್‌ ರಜಪೂತ್‌ ಖಾತೆಯ ವಿಚಾರದಲ್ಲಿ ಅವರ ಖಾತೆಯನ್ನು ನಿರ್ವಹಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿಯೇ ಅವರ ಕುಟುಂಬಸ್ಥರು ಕೆಲಸ ಮಾಡಿದ್ದರಿಂದ ಇಂದಿಗೂ ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್‌ ಉಳಿದುಕೊಂಡಿದೆ. 

ಇದನ್ನೂ ಓದಿ: ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿದ್ದಾರೆ ರಾಜ್ ಕುಮಾರ್, ಪುನೀತ್

ಈ ಹಿಂದೆ ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ (MS Dhoni) ವಿಚಾರದಲ್ಲೂ ಇದೇ ರೀತಿಯಾಗಿತ್ತು. ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರ ವಿಚಾರದಲ್ಲೂ ಇದೇ ರೀತಿಯಾದಾಗ ಟ್ವಿಟರ್‌ ವಿರುದ್ಧ ಆಕ್ರೋಶ ಹೊರಹಾಕಲಾಗಿತ್ತು. ಕೊನಗೆ ಸ್ವತಃ ಟ್ವಿಟರ್‌ ಈ ಕುರಿತಾಗಿ ಮಾಹಿತಿ ನೀಡಿತ್ತು. ಕೊನೆಗೆ ಸೂಕ್ತ ಮಾಹಿತಿಗಳನ್ನು ನೀಡಿ ಖಾತೆ ಅಪ್‌ ಡೇಟ್‌ ಮಾಡಿದ ಬಳಿಕ ಬ್ಲ್ಯೂ ಟಿಕ್‌ ವಾಪಸಾಗಿತ್ತು.

 

ಇದನ್ನೂ ಓದಿ: ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

ಟ್ವಿಟರ್‌ ಹೇಳೋದೇನು: ಟ್ವಿಟರ್‌ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸೂಚನೆ ನೀಡದೇ ಖಾತೆಯ ಬ್ಲ್ಯೂ ವೆರಿಫೈಡ್‌ ಬ್ಯಾಡ್ಜ್ ಮತ್ತು ಪರಿಶೀಲಿಸಿದ ಸ್ಥಿತಿಯನ್ನು ತೆಗೆದುಹಾಕಬಹುದು. ಜನರು ತಮ್ಮ ಖಾತೆಯ ಹೆಸರನ್ನು (@ಹ್ಯಾಂಡಲ್) ಬದಲಾಯಿಸಿದರೆ, ಖಾತೆಯು ನಿಷ್ಕ್ರಿಯಗೊಂಡರೆ ಅಥವಾ ಅಪೂರ್ಣವಾಗಿದ್ದರೆ ಅಥವಾ ನೀವು ಆರಂಭದಲ್ಲಿ ಪರಿಶೀಲಿಸಿದ ಸ್ಥಾನದಲ್ಲಿ ಅವರು ಇನ್ನು ಮುಂದೆ ಇಲ್ಲದಿದ್ದರೆ, ಅರ್ಥಾತ್ ಚುನಾಯಿತ ಸರ್ಕಾರಿ ಅಧಿಕಾರಿ ಅದೇ ಸ್ಥಾನದಲ್ಲಿ ಮುಂದುವರಿಯದೇ ಇದ್ದಲ್ಲಿ ಅಂಥ ಖಾತೆಯ ಬ್ಲ್ಯೂ ಟಿಕ್‌ ಕಳೆದುಕೊಳ್ಳುತ್ತದೆ. 

 

Latest Videos
Follow Us:
Download App:
  • android
  • ios