Asianet Suvarna News Asianet Suvarna News

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

*  ಮಂತ್ರಾಲಯಕ್ಕೆ ತೆರಳುವಾಗ ಬಳ್ಳಾರಿಯಲ್ಲಿಳಿದು ತೆರಳುತ್ತಿದ್ದ ಪುನೀತ್‌
*  ಅಗಲಿದ ಯುವರತ್ನ ಪುನೀತ್‌ಗೆ ಶ್ರದ್ದಾಂಜಲಿ
*  ಪವರ್‌ ಶೂಟಿಂಗ್‌ಗಾಗಿ ಸಂಡೂರಿಗೆ ಬಂದಿದ್ದ ಅಪ್ಪು
 

Puneeth Rajkumar Close Relationship with Ballari grg
Author
Bengaluru, First Published Oct 30, 2021, 11:20 AM IST
  • Facebook
  • Twitter
  • Whatsapp

ಬಳ್ಳಾರಿ(ಅ.30):  ನಟ ಪುನೀತ್‌ ರಾಜಕುಮಾರ್‌(Puneeth Rajkumar) ಬಳ್ಳಾರಿ(Ballari) ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಬಳ್ಳಾರಿಗೆ ಹತ್ತಾರು ಬಾರಿ ಪುನೀತ್‌ ಭೇಟಿ ನೀಡಿದ್ದರು. ತಂದೆ ಡಾ. ರಾಜಕುಮಾರ್‌(Dr Rajkumar) ಅವರ ಜತೆ ಮಂತ್ರಾಲಯಕ್ಕೆ ತೆರಳುವಾಗ ಬಳ್ಳಾರಿಯಲ್ಲಿಳಿದು ತೆರಳುತ್ತಿದ್ದ ಪುನೀತ್‌ ಅವರು ತಂದೆ ನಿಧನ ನಂತರವೂ ಬಳ್ಳಾರಿ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು.

"

ಇನ್ನು ಸಿನಿಮಾ ಚಿತ್ರೀಕರಣ(Film Shooting), ಆಡಿಯೋ ರಿಲೀಸ್‌ಗೆ(Audio Release) ಸಾಕಷ್ಟು ಬಾರಿ ಪುನೀತ್‌ ಬಳ್ಳಾರಿಗೆ ಭೇಟಿ ನೀಡಿದ್ದನ್ನು ಇಲ್ಲಿನ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಾರೆ. ಕಳೆದ ಮಾ. 23ರಂದು ‘ಯುವರತ್ನ’ ಸಿನಿಮಾ ಪ್ರಮೋಷನ್‌ಗೆ ಆಗಮಿಸಿದ್ದ ಪುನೀತ್‌ ರಾಜಕುಮಾರ್‌ ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ(Temple) ತೆರಳಿ ಪೂಜೆ ಸಲ್ಲಿಸಿ, ಬಳಿಕ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮನೆಗೆ ತೆರಳಿ ಊಟ ಮಾಡಿಕೊಂಡು ಚಿತ್ರದುರ್ಗಕ್ಕೆ ತೆರಳಿದ್ದರು. ಪುನೀತ್‌ ಬಳ್ಳಾರಿಗೆ ಭೇಟಿ ನೀಡಿದ್ದು ಇದೇ ಕೊನೆ ಎಂದು ಪುನೀತ್‌ ಅಭಿಮಾನಿ ಚಂದ್ರಶೇಖರ್‌ ಆಚಾರ್‌ ಕಪ್ಪಗಲ್‌ ಸ್ಮರಿಸಿಕೊಳ್ಳುತ್ತಾರೆ.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಪುನೀತ್‌ ರಾಜಕುಮಾರ್‌ ಅವರು ಬಳ್ಳಾರಿ ಸೇರಿದಂತೆ ಸುತ್ತಮುತ್ತಲ ಅನೇಕ ಪ್ರದೇಶಗಳಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ. 2016ರಲ್ಲಿ ‘ದೊಡ್ಮನೆ ಹುಡುಗ’ ಚಿತ್ರದ ಚಿತ್ರೀಕರಣ ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಬಳಿ ಜರುಗಿತ್ತು. ‘ಅಭಿಮಾನಿಗಳೇ ನಮ್ಮನೆ ದೇವರು’ ಎಂಬ ಹಾಡಿಗೆ ಪುನೀತ್‌ ನೃತ್ಯ ಮಾಡಿದ್ದರು. ಸಾವಿರಾರು ಅಭಿಮಾನಿಗಳು(Fans) ಜಮಾಯಿಸಿ, ಪುನೀತ್‌ರ ಡ್ಯಾನ್ಸ್‌ ವೀಕ್ಷಿಸಿ ಕಣ್ತುಂಬಿಕೊಂಡಿದ್ದರು. 2007ರಲ್ಲಿ ‘ಅರಸು’ ಚಿತ್ರದ ಆಡಿಯೋ ರಿಲೀಸ್‌ಗೆ ಪುನೀತ್‌ ರಾಜ್‌ಕುಮಾರ್‌ ಆಗಮಿಸಿದ್ದರು. 2014ರಲ್ಲಿ ‘ಪವರ್‌’ ಸಿನಿಮಾದ ಕೆಲವು ದೃಶ್ಯಗಳನ್ನು ಸಂಡೂರಿನ(Sandur) ಘೋರ್ಪಡೆ ಅವರ ಅರಮನೆಯಲ್ಲಿ ನಡೆಸಿದ್ದರು. ಡಾ. ರಾಜಕುಮಾರ್‌ ಉದ್ಯಾನವನ ಉದ್ಘಾಟನೆಗೆ ಪುನೀತ್‌ ರಾಜಕುಮಾರ್‌ ಸೇರಿದಂತೆ ರಾಘವೇಂದ್ರ ರಾಜಕುಮಾರ್‌, ಶಿವರಾಜಕುಮಾರ್‌ ಕುಟುಂಬ ಸದಸ್ಯರು ಭಾಗವಹಿಸಿದ್ದರು.

‘ಬಳ್ಳಾರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಪುನೀತ್‌ ಅಭಿಮಾನಿಗಳು ಇಲ್ಲಿಗೆ ಬಂದು ಫೋಟೊ ತೆಗೆಸಿಕೊಳ್ಳುತ್ತಿದ್ದರು. ನಮ್ಮ ಮನೆಯಲ್ಲಿ ಮಾಡಿದ ಜೋಳದ ರೊಟ್ಟಿ, ಪುಂಡಿ ಪಲ್ಲೆ, ಚಟ್ನಿ, ಮೊಸರು ಎಂದರೆ ಅವರಿಗೆ ಪಂಚಪ್ರಾಣ’ ನಮ್ಮ ಪತ್ನಿಯನ್ನು ತಂಗಿ ಎಂದೇ ಸಂಬೋಧಿಸುತ್ತಿದ್ದರು. ಮಕ್ಕಳ ಮದುವೆಗೆ ಆಹ್ವಾನಪತ್ರಿಕೆ ನೀಡಲು ಇಷ್ಟರಲ್ಲಿಯೇ ಬೆಂಗಳೂರಿಗೆ(Bengaluru) ತೆರಳಬೇಕಿತ್ತು. ಆದರೆ, ಇಂದು ಸಾವಿನ ಸುದ್ದಿ ಕೇಳಿ ಆಘಾತವಾಯಿತು’ ಎನ್ನುತ್ತಾರೆ ಡಾ. ರಾಜಕುಮಾರ್‌ ಕುಟುಂಬದ ಆಪ್ತ ಹಾಗೂ ಪುನೀತ್‌ ಅಭಿಮಾನಿ ‘ಬಳ್ಳಾರಿ ಮಂಜು’ (ಜೂ. ಶಿವರಾಜಕುಮಾರ್‌).

‘ಬಳ್ಳಾರಿ ನನ್ನ ನೆಚ್ಚಿನ ತಾಣ. ಅಪ್ಪನ ಜತೆ ಮಂತ್ರಾಲಯಕ್ಕೆ(Mantralaya) ಹೋಗುವಾಗಲೆಲ್ಲಾ ಬಳ್ಳಾರಿಯಲ್ಲಿ ಇಳಿದು ಹೋಗುತ್ತಿದ್ದೆವು. ಬಾಲ್ಯದಿಂದಲೂ ಈ ಊರಿನ ಜತೆ ನಂಟಿದೆ. ನಮ್ಮ ಕುಟುಂಬವನ್ನು ಪ್ರೀತಿಸುವ, ಅಭಿಮಾನಿಸುವ ದೊಡ್ಡ ಅಭಿಮಾನಿ ಬಳಗ ಬಳ್ಳಾರಿಯಲ್ಲಿದೆ’ ಎಂದು ಆಗಾಗ್ಗೆ ಹೇಳುತ್ತಿದ್ದರು ಎಂದು ಪುನೀತ್‌ ಅಭಿಮಾನಿ ವಿಜಯಕುಮಾರ್‌ ಸ್ಮರಿಸಿದರು.

ಬಳ್ಳಾರಿ ಮಂಜಣ್ಣ ಅವರ ಮನೆಯಲ್ಲಿ ಪುನೀತ್‌ ಅವರನ್ನು ಅನೇಕ ಬಾರಿ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದೇವೆ. ಅಭಿಮಾನಿಗಳು ಎಂದರೆ ಅವರ ಪ್ರಾಣ. ಅವರಿಗೆ ಮಂಜಣ್ಣ ಅವರ ಮೇಲೆ ಎಷ್ಟುಪ್ರೀತಿ ಇತ್ತು ಎಂದರೆ ‘ಪವರ್‌’ ಚಿತ್ರದಲ್ಲಿ ಮಂಜಣ್ಣನಿಗಾಗಿ ಒಂದು ದೃಶ್ಯವನ್ನು ಸಿದ್ಧ ಮಾಡಿಕೊಟ್ಟಿದ್ದರು. ಅವರ ಸಾವಿನ ಸುದ್ದಿ ನಿಜಕ್ಕೂ ಆಘಾತ ತಂದಿದೆ ಎಂದು ಪ್ರವೀಣ್‌ ಗಟ್ಟಿನ ಕಣ್ಣೀರಿಟ್ಟರು.

ಬಳ್ಳಾರಿಯ ಅಪ್ಪು ಸೇವಾ ಸಮಿತಿಯ ಕಚೇರಿ ಉದ್ಘಾಟನೆಗೆ ಆಹ್ವಾನಿಸಲು ಇಷ್ಟರಲ್ಲಿಯೇ ಬೆಂಗಳೂರಿಗೆ ತೆರಳಬೇಕಿತ್ತು. ಕಚೇರಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಇಂದು ಕೇಳಿದ ಸುದ್ದಿ ದೊಡ್ಡ ಆಘಾತ ನೀಡಿದೆ. ಈಗಲೂ ನಮಗೆ ಅಪ್ಪು ಸಾವಿಗೀಡಾಗಿದ್ದಾರೆ(Death) ಎಂದು ನಂಬಲಾಗುತ್ತಿಲ್ಲ ಎಂದು ಅಪ್ಪು ಸೇವಾ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಆಚಾರ್‌ ಕಪ್ಪಗಲ್‌ ತಿಳಿಸಿದ್ದಾರೆ. 

ಪವರ್‌ ಶೂಟಿಂಗ್‌ಗಾಗಿ ಸಂಡೂರಿಗೆ ಬಂದಿದ್ದ ಅಪ್ಪು

ಪುನೀತ್‌ ರಾಜಕುಮಾರ್‌ ಅವರಿಗೂ ಸಂಡೂರಿಗೂ ನಂಟಿದೆ. 2014ರಲ್ಲಿ ತಯಾರಾದ ಪುನೀತ್‌ ಅಭಿನಯದ ‘ಪವರ್‌’ ಪಟ್ಟಣದ ಶಿವಪುರ ಅರಮನೆ, ಜಿಂದಾಲ್‌ ಹಾಗೂ ಇಲ್ಲಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಶೂಟಿಂಗ್‌ ನಡೆದಿತ್ತು. ತಮ್ಮ ನೆಚ್ಚಿನ ನಟ ಬಂದಿದ್ದರಿಂದ ಅಂದು ಸಂಡೂರಿನ ಜನತೆ ಗುಂಪು ಗುಂಪಾಗಿ ತೆರಳಿ ಅವರನ್ನು ಕಣ್ತುಂಬಿಕೊಂಡಿದ್ದರು.

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ಇದಲ್ಲದೆ ರಣವಿಕ್ರಮ ಚಿತ್ರಕ್ಕೂ ತಮ್ಮ ಸ್ಟುಡಿಯೋದ ಕೆಲವು ಪರಿಕರಗಳನ್ನು ಬಳಸಿಕೊಂಡ ನೆನಪನ್ನು ಮೆಲುಕು ಹಾಕಿದ್ದಾರೆ ರಾಘವೇಂದ್ರ ಸ್ಟುಡಿಯೋದ ವಿನಯ್‌ಕುಮಾರ್‌. ಗಣಿಗಾರಿಕೆ ವಿಷಯಾಧಾರಿತ ಅಪ್ಪು ಜಿಲ್ಲಾಧಿಕಾರಿಯಾಗಿ ನಟಿಸಿದ್ದ ಪೃಥ್ವಿ ಚಿತ್ರವೂ ಸಂಡೂರಿನ ಮೈನಿಂಗ್‌ ಅಂಶಗಳನ್ನು ಒಳಗೊಂಡಿತ್ತು. ಒಬ್ಬ ಅದ್ಭುತ ನಟನನ್ನು ಕಳೆದುಕೊಂಡೆವು ಎಂದು ಜನ ಸಂತಾಪ(Condolences) ಸೂಚಿಸಿದರು.

ಅಗಲಿದ ಯುವರತ್ನ ಪುನೀತ್‌ಗೆ ಶ್ರದ್ದಾಂಜಲಿ

ಸಿರುಗುಪ್ಪ ನಗರದ ಕಂದಾಯ ಇಲಾಖೆಯ ವಸತಿಗೃಹಗಳ ಬಳಿ ಕನ್ನಡಪರ ಸಂಘಟನೆಗಳಿಂದ ಮರೆಯಾದ ನಟ ಪುನೀತ್‌ ಕುಮಾರ್‌ ಅವರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡಪರ ಸಂಘಟನೆಗಳ ಮುಖ್ಯಸ್ಥ ಕಂಬಳಿ ಮಲ್ಲಿಕಾರ್ಜುನ ಮಾತನಾಡಿದರು. ಅಭಿಮಾನಿಗಳಾದ ಮಂಡಿಗಿರಿ ದೇವ, ಪೂಜಾರಿ ಶ್ರೀನಿವಾಸ, ಚಂದ್ರಶೇಖರ್‌, ಪ್ರದೀಪ್‌, ರವಿ ಇತರರು ಇದ್ದರು.

ಪ್ರದರ್ಶನ ರದ್ದು:

ಭಜರಂಗಿ- 2 ಪ್ರದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಬಾಲಾಜಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮದಿಂದ ಅದ್ಧೂರಿಯಾಗಿ ಪ್ರದರ್ಶನ ಪ್ರಾರಂಭವಾಗಿ ಸಾಯಂಕಾಲ ಬಂದ್‌ ಮಾಡಿ ಚಲನಚಿತ್ರ ಮಂದಿರಗಳ ಸಿಬ್ಬಂದಿಯಿಂದಲೂ ಶ್ರದ್ದಾಂಜಲಿ ಸಲ್ಲಿಸಲಾಯಿತು.
 

Follow Us:
Download App:
  • android
  • ios