Asianet Suvarna News Asianet Suvarna News

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

*  ಏಳುಕೇರಿ ಅಭಿಮಾನಿಗಳಿಗೆ ಫೋನಾಯಿಸಿ ಆಹ್ವಾನ ನೀಡುತ್ತಿದ್ದ ಪವರ್‌ ಸ್ಟಾರ್‌
*  ಬಿರಿಯಾನಿ ಬಲು ಇಷ್ಟ, ಕುರಿಗಾರರೊಂದಿಗೆ ಊಟ ಸವಿದಿದ್ದ ಪುನೀತ್‌
*  ಹೊಸಪೇಟೆಯಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ
 

Puneeth Rajkumar Loves Hampi Hosapete grg
Author
Bengaluru, First Published Oct 30, 2021, 9:17 AM IST

ಹೊಸಪೇಟೆ(ಅ.30): ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರಿಗೆ ಹಂಪಿ(Hampi), ಹೊಸಪೇಟೆ(Hosapete) ಎಂದರೆ ಪಂಚಪ್ರಾಣ. ಈ ಭಾಗದಲ್ಲಿ ಶೂಟಿಂಗ್‌(Shooting) ಇದ್ದರಂತೂ ಹೊಸಪೇಟೆಯ ಏಳುಕೇರಿಯ ತನ್ನ ಅಭಿಮಾನಿ ಬಳಗಕ್ಕೆ ಸ್ವತಃ ಫೋನ್‌ ಮಾಡಿ ಬರಮಾಡಿಕೊಳ್ಳುತ್ತಿದ್ದರು.

ವಿಜಯನಗರದ(Vijayanagara) ನೆಲಕ್ಕೂ ಪುನೀತ್‌ ರಾಜಕುಮಾರ(Puneeth Rajkumar) ಅವರಿಗೂ ಅವಿನಾಭಾವ ನಂಟಿದೆ. ರಣವಿಕ್ರಮ ಚಿತ್ರಕ್ಕೆ ಹಂಪಿಯ ತುಂಗಭದ್ರಾ ನದಿ(Tungabhadra River) ತಟದಲ್ಲಿ ಸೆಟ್‌ ನಿರ್ಮಿಸಿ ಶೂಟಿಂಗ್‌ ಮಾಡಲಾಗಿತ್ತು. ಅವರನ್ನು ಕಾಣಲು ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳು(Fans) ಆಗಮಿಸುತ್ತಿದ್ದರು. ಹೀಗಿದ್ದರೂ ಹೊಸಪೇಟೆ, ಹಂಪಿ, ಕಮಲಾಪುರ, ಕಂಪ್ಲಿ ಭಾಗದ ಅಭಿಮಾನಿಗಳು ಎಂದರೆ ಸಾಕು ಅವರನ್ನು ಹತ್ತಿರಕ್ಕೆ ಕರೆದು ಸೆಲ್ಫಿಗೆ ಅವಕಾಶ ಮಾಡಿಕೊಡುತ್ತಿದ್ದರು. ಜತೆಗೆ ಯೋಗಕ್ಷೇಮ ವಿಚಾರಿಸುತ್ತಿದ್ದರು.

"

ಪುನೀತ್‌ಗೆ ಲಿಂಗ ದೀಕ್ಷೆ ನೀಡಿದ್ದ ಹಾವೇರಿ ಸಿಂದಗಿ ಮಠದ ಶ್ರೀಗಳು

ಶೂಟಿಂಗ್‌ಗೆ ಬಂದರೆ ಕರೆ:

ಹಂಪಿ, ಗಂಗಾವತಿ ಭಾಗದಲ್ಲಿ ಸಿನಿಮಾ ಶೂಟಿಂಗ್‌ ಇದೆ ಎಂದರೆ ಸಾಕು, ಹೊಸಪೇಟೆಯ ಏಳುಕೇರಿಯ ಕಿಚಿಡಿ ವಿಶ್ವ ಅವರಿಗೆ ಕರೆ ಮಾಡುತ್ತಿದ್ದರು. ಕಿಚಿಡಿ ವಿಶ್ವ ಹಾಗೂ ಜೋಗಿ ತಾಯಪ್ಪ ತಂಡ ಅವರ ಜತೆಗೆ ತೆರಳುತ್ತಿದ್ದರು.
ಹೊಸಪೇಟೆಯಲ್ಲಿ ದೊಡ್ಮನೆ ಹುಡುಗ ಹಾಡಿನ ಚಿತ್ರೀಕರಣ, ಹಂಪಿಯಲ್ಲಿ ರಣವಿಕ್ರಮ, ಕಮಲಾಪುರದ ಬಳಿಯ ರೆಸಾರ್ಟ್‌ವೊಂದರಲ್ಲಿ ಜೇಮ್ಸ್‌ ಚಿತ್ರದ ಶೂಟಿಂಗ್‌ಗೆ ಪುನೀತ್‌ ಆಗಮಿಸಿದ್ದರು. ಅಲ್ಲದೇ ಹೊಸಪೇಟೆಯ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ(Shivarajkumar) ಅಭಿನಯದ ಟಗರು ಚಿತ್ರದ ಆಡಿಯೋ ರಿಲೀಸ್‌ಗೂ ಆಗಮಿಸಿದ್ದರು. ಅಲ್ಲದೇ, ಹಂಪಿ ಉತ್ಸವಕ್ಕೆ ಸಚಿವ ಆನಂದ್‌ ಸಿಂಗ್‌ ಅವರ ಆಮಂತ್ರಣದ ಹಿನ್ನೆಲೆ ಆಗಮಿಸಿ ನೆರೆದಿದ್ದ ಸಹಸ್ರಾರು ಜನರನ್ನು ರಂಜಿಸಿದ್ದರು.

ಹೊಸಪೇಟೆ ಮೂಲದ ಕಿಶೋರ ಪತ್ತಿಕೊಂಡ ನಿರ್ಮಾಪಕರು ಆಗಿರುವ ಜೇಮ್ಸ್‌ ಚಿತ್ರದಲ್ಲಿ ಪುನೀತ್‌ ನಟಿಸಿದ್ದಾರೆ. ಈ ಚಿತ್ರ ಶೂಟಿಂಗ್‌ ಕೂಡ ಹಂಪಿ, ಜಮ್ಮು ಕಾಶ್ಮೀರ(Jammu and Kashmir) ಭಾಗದಲ್ಲಿ ನಡೆದಿದೆ.
ಹಂಪಿ ಭಾಗದಲ್ಲೇ ಇನ್ನೊಂದು ಚಿತ್ರದ ಶೂಟಿಂಗ್‌ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ವನ್ಯಜೀವಿ ಮೇಲೆ ಸಾಕ್ಷ್ಯಚಿತ್ರ ಮಾಡುವುದಕ್ಕಾಗಿ ಹಂಪಿ, ಆನೆಗೊಂದಿ, ದರೋಜಿ ಭಾಗದಲ್ಲಿ ಇತ್ತೀಚೆಗೆ ಪುನೀತ್‌ರಾಜಕುಮಾರ ಆಗಮಿಸಿದ್ದರು. ಇನ್ನೂ ಕುರಿಗಾರರ ಜತೆಗೆ ಊಟವನ್ನು ಸವಿದಿದ್ದರು. ರಣವಿಕ್ರಮ್‌, ಜೇಮ್ಸ್‌ ಚಿತ್ರದ ಶೂಟಿಂಗ್‌ ವೇಳೆ ಹಂಪಿ ಸ್ಮಾರಕಗಳನ್ನು ಹಾಗೂ ತುಂಗಭದ್ರಾ ಜಲಾಶಯವನ್ನು(Tungabhadra Dam) ಕಂಡು ಖುಷಿಪಟ್ಟಿದ್ದರು.

ಆನಂದ್‌ ಸಿಂಗ್‌ ಜತೆ ಸ್ನೇಹ:

ಸಚಿವ ಆನಂದ್‌ ಸಿಂಗ್‌(Anand Singh) ಅವರು ರಾಜಕಾರಣಕ್ಕೆ ಬರುವ ಮೊದಲೇ ಪುನೀತ್‌ ರಾಜಕುಮಾರ ಅವರು ಸಿಂಗ್‌ರ ಸಮಾಜಸೇವೆಗೆ ಒತ್ತಾಸೆಯಾಗಿದ್ದರು. ಜೇಮ್ಸ್‌ ಚಿತ್ರದ ಶೂಟಿಂಗ್‌ ವೇಳೆ ಆನಂದ್‌ ಸಿಂಗ್‌ರ ಹೊಸಪೇಟೆ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಬೆಳ್ಳಿಗದೆ ನೀಡಿ ಸಚಿವರು ಸನ್ಮಾನಿಸಿದ್ದರು.

ಡಾ.ರಾಜ್‌, 3 ಮಕ್ಕಳಿಗೂ ಹೃದಯ ಸಮಸ್ಯೆ!

ಬಿರಿಯಾನಿ ಪ್ರಿಯ:

ಗಂಗಾವತಿ, ಸಂಡೂರು ಭಾಗದಲ್ಲಿ ಶೂಟಿಂಗ್‌ ಇದ್ದರೆ ಸಾಕು, ಹೊಸಪೇಟೆಯ ಖಾದರ್‌ ಎಂಬವರು ತಯಾರಿಸುತ್ತಿದ್ದ ಹೈದರಾಬಾದಿ ಬಿರಿಯಾನಿ(Hyderabadi Biryani) ಸವಿಯುತ್ತಿದ್ದರು. ಪಾರ್ಸೆಲ್‌ ತರಿಸಿ ಊಟ(Food) ಮಾಡುತ್ತಿದ್ದರು.

ಹೊಸಪೇಟೆ, ಕಂಪ್ಲಿ ಭಾಗದ ಪ್ರತಿಭೆಗಳನ್ನು ಗುರುತಿಸಿ ಬೆಳೆಸುತ್ತಿದ್ದರು. ಅದರಲ್ಲೂ ಈ ಭಾಗದ ಮಕ್ಕಳು ಎಂದರೆ ಬಲುಪ್ರೀತಿ. ಡ್ಯಾನ್ಸ್‌ ಮಾಡುವ ಹುಡುಗರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೊಸಪೇಟೆಯಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಹಿನ್ನೆಲೆ ನಗರದ ನಾಲ್ಕು ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಯುವರತ್ನ ಚಿತ್ರ ತೆರೆಕಂಡು ದಾಖಲೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪುನೀತ್‌ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಕನ್ನಡ ಚಿತ್ರರಂಗ ಹಾಗೂ ರಾಜ್ಯಕ್ಕೆ ದೊಡ್ಡನಷ್ಟ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಅಂತ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ.  

ಪುನೀತ್‌ರಾಜಕುಮಾರ ಅವರು ಹೊಸಪೇಟೆ, ಗಂಗಾವತಿ ಭಾಗಕ್ಕೆ ಬಂದರೆ ಕರೆ ಮಾಡುತ್ತಿದ್ದರು. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ನಮ್ಮನ್ನು ಬೆಳೆಸಿದ್ದಾರೆ. ನಮ್ಮ ಮನೆಗೂ ಬಂದು ಹೋಗಿದ್ದಾರೆ. ಅವರಿಲ್ಲದೇ ನನ್ನಲ್ಲಿ ಶೂನ್ಯ ಆವರಿಸಿದೆ. ದೇವರು ಅವರ ಬದಲಿಗೆ ನಮ್ಮಂಥ ಅಭಿಮಾನಿಗಳನ್ನು ತೆಗೆದುಕೊಂಡು ಹೋಗಬೇಕಿತ್ತು ಎಂದು ಹೊಸಪೇಟೆ ಪುನೀತ್‌ ರಾಜಕುಮಾರ ಅಭಿಮಾನಿ ಕಿಚಿಡಿ ವಿಶ್ವ ಹೇಳಿದ್ದಾರೆ.  

ದೇವರು ದೊಡ್ಡ ಮೋಸಗಾರ. ದೇವರಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪುನೀತ್‌ ರಾಜಕುಮಾರ ಅಭಿಮಾನಿಗಳ ಆರಾಧ್ಯ ದೈವ ಆಗಿದ್ದರು. ಹೊಸಪೇಟೆಯ ಅಭಿಮಾನಿಗಳು, ಬಾಲಪ್ರತಿಭೆಗಳು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಎಂದು ಹೊಸಪೇಟೆ ಪುನೀತ್‌ ರಾಜಕುಮಾರ ಅಭಿಮಾನಿ ಜೋಗಿ ತಾಯಪ್ಪ ತಿಳಿಸಿದ್ದಾರೆ. 
 

Follow Us:
Download App:
  • android
  • ios