ಬೆಂಗಳೂರು(ಏ.13): ಪುನೀತ್‌ರಾಜ್‌ಕುಮಾರ್‌ ಹಾಗೂ ಪವನ್‌ಕುಮಾರ್‌ ಜತೆಯಾಗಿದ್ದಾರೆ. ಇವರಿಬ್ಬರನ್ನು ಜತೆ ಮಾಡಿರುವುದು ನಿರ್ಮಾಪಕ ವಿಜಯ್‌ ಕಿರಗಂದೂರು. ಹೊಂಬಾಳೆ ಫಿಲಮ್ಸ್‌ ನಿರ್ಮಾಣದ 9ನೇ ಚಿತ್ರದ ಕಾಂಬಿನೇಷನ್‌ ಇದು.

ಈ ಸಿನಿಮಾ ಕುರಿತು ಪವನ್‌ ಹೇಳಿದ್ದು

1. ನಮ್ಮ ಈ ಸಿನಿಮಾ ಜುಲೈ ತಿಂಗಳಲ್ಲಿ ಸೆಟ್ಟೇರಲಿದೆ. ಈಗಾಗಲೇ ಚಿತ್ರದ ಕತೆ ಓಕೆ ಆಗಿದೆ. ಟೈಟಲ್‌ ಸದ್ಯದಲೇ ರಿವಿಲ್‌ ಮಾಡಲಿದ್ದೇವೆ. ಹೊಂಬಾಳೆ ಫಿಲಮ್ಸ್‌ನಂತಹ ದೊಡ್ಡ ಬ್ಯಾನರ್‌ ಜತೆಯಾಗಿರುವುದು ಸಿನಿಮಾ ನಮ್ಮ ನಿರೀಕ್ಷೆಯಂತೆ ಮೂಡಿ ಬರಲಿದೆ. ‘ಜೇಮ್ಸ್‌’ ಮುಗಿದ ಕೂಡಲೇ ನನ್ನ ಮತ್ತು ಪುನೀತ್‌ ಕಾಂಬಿನೇಷನ್‌ ಸಿನಿಮಾ ಶುರುವಾಗಲಿದೆ.

2. ನಾನು ಅಪ್ಪು ಅವರನ್ನು ಭೇಟಿಯಾಗಿ ಹತ್ತಿರದಿಂದ ನೋಡಿದ್ದು 2018ರಲ್ಲಿ. ಆಗ ‘ಲಗೋರಿ’ ಹೆಸರಿನ ಚಿತ್ರದ ಕತೆ ಹೇಳಲು ನಾನು ಮತ್ತು ಯೋಗರಾಜ್‌ ಭಟ್‌ ಅವರು ಪುನೀತ್‌ ಅವರನ್ನು ಭೇಟಿ ಮಾಡಿ ಬರುತ್ತಿದ್ವಿ. ನಮ್ಮನ್ನು ಕಂಡು ಅವರು ಮಾತನಾಡಿಸುತ್ತಿದ್ದ ರೀತಿ, ಸ್ಟಾರ್‌ ಎಂಬುದನ್ನು ಮರೆತು ಸರಳವಾಗಿ ನಡೆದುಕೊಳ್ಳುತ್ತಿದ್ದದ್ದು, ಸಿನಿಮಾಗಳ ಬಗ್ಗೆ ಅವರಿಗೆ ಇದ್ದ ತಿಳುವಳಿಕೆ ಇದನ್ನೆಲ್ಲ ನಾನು ಪುನೀತ್‌ ಅವರಲ್ಲಿ ನೋಡಲು ಆರಂಭಿಸಿದೆ.

3. ಲಗೋರಿ ಚಿತ್ರದ ಕತೆ ಹೇಳಲು ಹೋಗುತ್ತಿದ್ದಾಗಲೇ ನಾನು ಪುನೀತ್‌ ಅವರ ಜತೆಗೆ ಸಿನಿಮಾ ಮಾಡುವ ಕನಸು ಕಂಡಿದ್ದೆ. ಆದರೆ, ಆ ಹೊತ್ತಿಗೆ ನಾನು ಒಂದೇ ಒಂದು ಸಿನಿಮಾ ಕೂಡ ಮಾಡಿರಲಿಲ್ಲ. ಆಗಲೇ ಅಪ್ಪು ಜತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ.

 

 

4. ನನ್ನ ಚಿತ್ರಗಳನ್ನು ಪುನೀತ್‌ ನೋಡುತ್ತಾ ಬಂದಿದ್ದಾರೆ. ‘ಯೂ ಟರ್ನ್‌’ ಚಿತ್ರಕ್ಕೆ ಅವರೇ ಒಂದು ಸೆಲ್ಫಿ ವಿಡಿಯೋ ಮಾಡಿ ಪ್ರಚಾರ ಮಾಡಿದ್ದರು. ನನ್ನ ಕೆಲಸವನ್ನು ಹತ್ತಿರದಿಂದ ನೋಡಿದ್ದಾರೆ. ಈಗ ಇಬ್ಬರು ಜತೆಯಾಗಿದ್ದೇವೆ.

5. ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಏನೆಲ್ಲ ಆಸೆ ಪಡುತ್ತಾರೆ ಅದೇ ರೀತಿಯ ಕತೆ ನಾನು ಮಾಡಿಕೊಂಡಿದ್ದೇನೆ. ಯಾಕೆಂದರೆ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಒಳ್ಳೆಯ ಕತೆ ಇರುವ ಚಿತ್ರದಲ್ಲಿ ನಟಿಸಬೇಕು, ಅವರ ಪ್ರತಿಭೆ ಎಲ್ಲರಿಗೂ ಗೊತ್ತಾಗಬೇಕು ಎಂದೇ ಬಯಸುತ್ತಾರೆ. ನಾನೂ ಕೂಡ ಅಪ್ಪು ಅವರ ಪ್ರತಿಭೆಗೆ ಸೂಕ್ತ ಎನಿಸುವ ಕತೆ ಮಾಡಿಕೊಂಡಿದ್ದೇನೆ.

ಹಿರಿಯ ಕಲಾವಿದನಿಗೆ ಮನೆ ಕಟ್ಟಲು ನೆರವಾದ ಪುನೀತ್

6. ಜನ ಈಗ ಕತೆ ಕೇಳುತ್ತಾರೆ. ಸ್ಟಾರ್‌ ಹೀರೋ, ಹೊಸ ನಟ- ನಟಿ ಹೀಗೆ ಯಾರೇ ಮಾಡಿದರೂ ಒಳ್ಳೆಯ ಕತೆ ಇರಬೇಕು ಎಂದು ಬಯಸುತ್ತಾರೆ. ಕೊರೋನಾ ಸಮಯದಲ್ಲಿ ಸಮಯಲ್ಲಿ ಕೂತ್ತಿದ್ದ ಪ್ರೇಕ್ಷಕರು ನೋಡದ ಸಿನಿಮಾ ಇಲ್ಲ, ಕೇಳದ ಕತೆ ಇಲ್ಲ. ಹೀಗಾಗಿ ಸ್ಟಾರ್‌ಗಳ ಚಿತ್ರಗಳಲ್ಲೂ ಕತೆ ಇರಬೇಕು ಎಂದುಕೊಳ್ಳುತ್ತಾರೆ. ಜನರ ಬದಲಾದ ಈ ಅಭಿರುಚಿಯ ಅರಿವು ಇದೆ.

7. ನಾನು ಪುನೀತ್‌ ಅವರಿಗೆ ಚಿತ್ರಕಥೆ ಕಳುಹಿಸಿದಾಗ ಅವರು ಒಪ್ಪದೆ ಹೋದರೆ ಕೊನೇ ಪಕ್ಷ ನನ್ನ ಕತೆ ಓದಿ ಏನಾದರೂ ಅಭಿಪ್ರಾಯ ಹೇಳ್ಳುತ್ತಾರೆ ಎನ್ನುವ ಭಾವನೆಯಲ್ಲಿ ಅವರಿಗೆ ಕತೆ ಕಳುಹಿಸಿಕೊಟ್ಟಿದ್ದೆ. ‘ಬ್ರಿಲಿಯಂಟ್‌ ಸ್ಕಿ್ರಪ್ಟ್‌’ ಎಂದು ಎರಡೇ ವಾಕ್ಯದಲ್ಲಿ ಮೆಚ್ಚುಗೆ ಸೂಚಿಸಿದ್ದರು. ಅದೇ ಸಮಯಕ್ಕೆ ಹೊಂಬಾಳೆ ಫಿಲಮ್ಸ್‌ ಕೂಡ ಪುನೀತ್‌ ಅವರೊಂದಿಗೆ ಹೊಸ ರೀತಿಯ ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ಹೀಗೆ ನಾವು ಜತೆಯಾದ್ವಿ.

8. ಕನ್ನಡದ ಜತೆಗೆ ಈ ಚಿತ್ರವನ್ನು ಬೇರೆ ಭಾಷೆಗಳಿಗೂ ತೆಗೆದುಕೊಂಡು ಹೋಗುವ ಪ್ಲಾನ್‌ ಹೊಂಬಾಳೆ ಫಿಲಮ್ಸ್‌ಗೆ ಇದೆ. ಕತೆ ಕೂಡ ಅದೇ ರೀತಿ ಇದೆ. ‘ಕೆಜಿಎಫ್‌’ ಸಿನಿಮಾದಂತೆಯೇ ಬೇರೆ ಬೇರೆ ಭಾಷೆಗಳಿಗೆ ನಮ್ಮ ಸಿನಿಮಾ ಹೋಗಲಿದೆ.

ಭಾರೀ ಮೊತ್ತಕ್ಕೆ ಸೇಲ್ ಆದ ಯುವರತ್ನ 

9. ಪುನೀತ್‌ ಅವರ ಜತೆಗೆ ಮಾಡುತ್ತಿರುವುದು ನಿಕೋಟಿನ್‌ ಕತೆ ಅಲ್ಲ. ಇದು ಬೇರೆಯದ್ದೇ ಸಿನಿಮಾ. ನಿಕೋಟಿನ್‌ ಮುಂದೆ ಸೆಟ್ಟೇರಲಿದೆ. ಸದ್ಯಕ್ಕೆ ನನ್ನ ನಿರ್ದೇಶನದಲ್ಲಿ ತೆಲುಗಿನಲ್ಲಿ ವೆಬ್‌ ಸರಣಿ ಶೂಟಿಂಗ್‌ ಮುಗಿಸಿದ್ದು, ಅದು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ.

"