Save Sandalwood: ಕತೆ ಅಥವಾ ಸ್ಕ್ರಿಫ್ಟ್‌ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್‌ಗಳು ಬರಬೇಕು ಎಂದರು ಪ್ರಜ್ವಲ್ ದೇವರಾಜ್.

- ನನ್ನ ನಟನೆಯ ‘ಕರಾವಳಿ’ ಚಿತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ಜನ ನಮ್ಮನ್ನು ಕೈ ಬಿಡಲ್ಲ. ಇವತ್ತಿನ ಚಿತ್ರರಂಗದ ಪರಿಸ್ಥಿತಿಯಿಂದ ಆಚೆ ಬರಬೇಕು ಅಂದರೆ ನಾವೆಲ್ಲ ಮಾಡಬೇಕಿರುವೋದು ಒಳ್ಳೆಯ ಸಿನಿಮಾಗಳನ್ನು ಮಾತ್ರ.

- ನಾವು ಇಡೀ ಜಗತ್ತನ್ನು ಮೆಚ್ಚಿಸಬೇಕಿಲ್ಲ. ನಮ್ಮ ಪ್ರೇಕ್ಷಕರನ್ನು ಮೆಚ್ಚಿಸುವ ಕತೆಗಳನ್ನು ರೂಪಿಸಬೇಕು. ಇಡೀ ಭಾರತೀಯ ಚಿತ್ರರಂಗದ ಪೈಕಿ ಸೌತ್‌ ಇಂಡಿಯಾದಲ್ಲಿ ಸಿನಿಮಾ ಮತ್ತು ಸಿನಿಮಾ ಮಂದಿಯನ್ನು ಜನ ತುಂಬಾ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಅವರ ಬಾಂಡಿಂಗ್‌ ಜೊತೆಗೆ ಕನೆಕ್ಟ್‌ ಆಗುವ ಸಿನಿಮಾ ಮಾಡಬೇಕು.

- ನನ್ನ ಪ್ರಕಾರ ಪ್ರೀ- ಪ್ರೊಡಕ್ಷನ್‌ ಕೆಲಸಗಳು ಪರ್ಫೆಕ್ಟ್‌ ಆದರೆ ಚಿತ್ರೋದ್ಯಮದ ಅರ್ಥ ಸಮಸ್ಯೆಗಳು ತೀರಿದಂತೆ. ಈ ಪ್ರೀ- ಪ್ರೊಡಕ್ಷನ್‌ ಕೆಲಸಗಳು ಪಕ್ಕಾ ಪ್ಲಾನಿಂಗ್‌ ಮಾಡಿಕೊಂಡರೆ ಚಿತ್ರವೊಂದಕ್ಕೆ ಕೆಲಸ ಮಾಡುವ ಪ್ರತಿಯೊಬ್ಬರು ಅಕೌಂಟೇಬಲ್‌- ಜವಾಬ್ದಾರಿಗಳಾಗಿರುತ್ತಾರೆ. ಇದರಿಂದ ಶೂಟಿಂಗ್‌ ಡೇಟ್ಸ್‌ ಕಡಿಮೆ ಆಗುತ್ತದೆ, ಬಜೆಟ್‌ ಅನ್ನೋ ಭಾರ ಕೈ ಮೀರಲ್ಲ, ಅಂದುಕೊಂಡ ಸಮಯಕ್ಕೆ ಅಂದುಕೊಂಡಂತೆ ಸಿನಿಮಾ ತೆರೆಗೆ ಬರುತ್ತದೆ.

- ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕೆಂಬ ಮಾತು ತಪ್ಪಲ್ಲ. ಯಾಕೆಂದರೆ ಚಿತ್ರರಂಗ ಅನ್ನೋದು ಕುಟುಂಬ. ನಾವೆಲ್ಲ ಅದರ ಸದಸ್ಯರು. ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ, ಚಿತ್ರರಂಗಕ್ಕೆ ಹೊಸ ಚೈತನ್ಯ ಬರುತ್ತದೆ ಎಂದರೆ ಕಲಾವಿದರಾಗಿ ನಾವು ಸಂಭಾವನೆ ಕಡಿಮೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾನೇ ಬಹಳಷ್ಟು ಸಲ ಸಂಭಾವನೆ ಬಿಟ್ಟಿದ್ದೇನೆ. ಇತ್ತೀಚೆಗೆ ಹೀಗೆ ಬಿಟ್ಟುಕೊಟ್ಟ ಸಂಭಾವನೆ ರೂ.1.5 ಕೋಟಿಯಷ್ಟಿದೆ. ಆದರೆ, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಕಲಾವಿದರ ವಿಚಾರದಲ್ಲೂ ಅಷ್ಟೇ ಒಳ್ಳೆಯತನ, ಸೌಹಾರ್ದತೆ ತೋರಬೇಕಲ್ಲ! ‘ಕರಾವಳಿ’ ಚಿತ್ರದ ವಿವಾದದ ಹೊತ್ತಿನಲ್ಲಿ ನನ್ನ ಸಂಭಾವನೆ ವಿಚಾರವೂ ಹೊರಗೆ ಬಂತು. ಅಷ್ಟು ಸಂಭಾವನೆ ನಾನು ತೆಗೆದುಕೊಂಡಿರುವುದು ಒಂದು ಸಿನಿಮಾಗೆ ಅಂತಲ್ಲ, ಮೂರು ವರ್ಷ ಬೇರೆ ಯಾವುದೇ ಸಿನಿಮಾ ಮಾಡಬಾರದು ಅಂತ.

- ಇಷ್ಟು ವರ್ಷಗಳಲ್ಲಿ ಸಿನಿಮಾ ಕಾರಣಕ್ಕೆ ನಾನು ಯಾವುದೇ ವಿವಾದ ಮಾಡಿಕೊಂಡವಲ್ಲ. ‘ಕರಾವಳಿ’ ಚಿತ್ರದ ಘಟನೆಯನ್ನೂ ವಿವಾದ, ಗಲಾಟೆ ಅಂತ ಹೇಳಲ್ಲ. ನನ್ನ ಧ್ವನಿ ಇಲ್ಲ ಅನ್ನೋದು ಬೇಸರ ಬಿಟ್ಟರೆ ಬೇರೆ ಏನೂ ಇಲ್ಲ. ಸಿನಿಮಾ ನಮ್ಮೆಲ್ಲರಿಗಿಂತ ದೊಡ್ಡದು. ಅವತ್ತು ಹೇಳಿದ್ದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಆದರೆ, ಪಾಠ ಕಲಿತಿದ್ದೇನೆ. ಇನ್ನು ಮುಂದೆ ಅಗ್ರಿಮೆಂಟ್‌ ಇಲ್ಲದೆ ಸಿನಿಮಾ ಮಾಡಬಾರದು.

- ಕತೆ ಅಥವಾ ಸ್ಕ್ರಿಫ್ಟ್‌ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್‌ಗಳು ಬರಬೇಕು. ನಿರ್ದೇಶಕ ತಾನು ನರೇಟ್‌ ಮಾಡುವ ಕತೆಯನ್ನು ಹಾಗೆಯೇ ತೆರೆ ಮೇಲೆ ತರಬೇಕು, ಈ ಪ್ರಯಾಣಕ್ಕೆ ನಿರ್ಮಾಪಕ ಜೊತೆಯಾಗಿ ನಿಲ್ಲಬೇಕು. ಒಂದೇ ಮಾತಿನಲ್ಲಿ ಹೇಳೋದಾದರೆ ನಾವೆಲ್ಲ ಸ್ಕ್ರಿಪ್ಟ್‌ಗೆ ಶರಣಾದರೆ ಸಿನಿಮಾ ಎಲ್ಲರಿಗಿಂತ ದೊಡ್ಡದಾಗಿ ಕಾಣುತ್ತದೆ.

ನಾನೂ ನಿರ್ಮಾಪಕನಾಗುತ್ತಿದ್ದೇನೆ

ನಾನೂ ಕೂಡ ನಿರ್ಮಾಪಕ ಆಗುತ್ತಿದ್ದೇನೆ. ಅದರ ಪ್ರೀ ಪ್ರೊಡಕ್ಷನ್‌ ಕೆಲಸಗಳು ಸಾಗುತ್ತಿವೆ. ಸದ್ಯದಲ್ಲೇ ಈ ಬಗ್ಗೆ ಎಲ್ಲಾ ಮಾಹಿತಿಗಳೊಂದಿಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಪ್ರೀ- ಪ್ರೊಡಕ್ಷನ್‌ಗೆ ನಾನು ತುಂಬಾ ಮಹತ್ವ ಕೊಡುತ್ತಿದ್ದೇನೆ. ಕತೆನೇ ಹೀರೋ ಆಗಬೇಕು ಎಂದು ನನ್ನ ತಂಡಕ್ಕೆ ಹೇಳಿದ್ದೇನೆ.