ಪರ್‌ಫೆಕ್ಟ್ ಜಂಟಲ್‌ಮೆನ್‌ ಪುನೀತ್‌: ಬಾಲನಟನಾಗಿ, ಹೀರೋ ಆಗಿ ಚಿತ್ರರಂಗ ಆಳಿದ ಅಪ್ಪು

*  6 ತಿಂಗಳ ಮಗುವಾಗಿದ್ದಾಗಲೇ ಮೊದಲ ಪಾತ್ರ
*   ಚೆನ್ನೈನಲ್ಲಿ ಹುಟ್ಟಿ ಕನ್ನಡ ನಾಡಿನಲ್ಲಿ ಬೆಳೆದ ಪವರ್‌ ಸ್ಟಾರ್‌
*   ದೊಡ್ಡ ದೊಡ್ಡ ಹಿಟ್‌ ಸಿನಿಮಾ ನೀಡಿದರೂ ಸರಳ ವ್ಯಕ್ತಿತ್ವ
 

Perfect Gentlemen Puneeth Rajkumar in Sandalwood grg

ಬೆಂಗಳೂರು(ಅ.30): ಪುನೀತ್‌(Puneeth Rajkumar) ಹುಟ್ಟಿದ್ದು ಮಾರ್ಚ್‌ 17, 1975ರ ಸೋಮವಾರ. ಚೆನ್ನೈಯಲ್ಲಿ(Chennai) ಹುಟ್ಟಿದ ಪುನೀತ್‌ ಬಾಲ್ಯವನ್ನೆಲ್ಲ ಅಲ್ಲೇ ಕಳೆದರು. ಅವರ ಮೂಲ ಹೆಸರು ಲೋಹಿತ್‌. ಬಾಲನಟನಾಗಿ ಲೋಹಿತ್‌ ಎಂದೇ ಹೆಸರಾಗಿದ್ದ ಅಪ್ಪು, ನಂತರ ಹೀರೋ ಆಗಿ ನಟಿಸುವ ಹೊತ್ತಿಗೆ ಪುನೀತ್‌ ಎಂದು ಹೆಸರು ಬದಲಾಯಿಸಿಕೊಂಡರು.

"

ಆತ್ಮೀಯರಿಗೆ ಅಪ್ಪು, ಅಭಿಮಾನಿಗಳಿಗೆ ಪವರ್‌ಸ್ಟಾರ್‌, ಚಿತ್ರರಂಗದ ಮಂದಿಗೆ ರಾಜಕುಮಾರ. ಪುನೀತ್‌ ಬಹುಮುಖ ಪ್ರತಿಭೆ. ಬಾಲನಟ, ಗಾಯಕ, ಟೆಲಿವಿಷನ್‌ ನಿರೂಪಕ, ನಿರ್ಮಾಪಕ, ಹಂಚಿಕೆದಾರ, ಉದ್ಯಮಿ- ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ಪ್ರಕಟಪಡಿಸಿಕೊಂಡ ಪುನೀತ್‌ ಬಾಲ್ಯದಲ್ಲೇ ತಮ್ಮ ಪ್ರತಿಭೆ ತೋರಿದವರು.

ಕನ್ನಡ ನಾಡು ಕಂಡ ಮೇರುನಟ ರಾಜ್‌ಕುಮಾರ್‌(Rajkumar) ಮಗನಾದ ಪುನೀತ್‌, ಥೇಟ್‌ ರಾಜಕುವರನಂತೆಯೇ ಬೆಳೆದರು. ಅಮ್ಮನ ಅಕ್ಕರೆ, ತಂದೆಯ ವಾತ್ಸಲ್ಯ ಮತ್ತು ಸೋದರರ ಪ್ರೀತಿಯನ್ನು ಉಂಡು ಬೆಳೆದ ಪುನೀತ್‌ ಆರು ವರ್ಷದವನಿದ್ದಾಗ ಕರ್ನಾಟಕಕ್ಕೆ(Karnataka) ಬಂದರು. ಹೀಗಾಗಿ ಪುನೀತ್‌ ತಮಿಳು(Tamil) ಮತ್ತು ಕನ್ನಡ(Kannada) ಎರಡನ್ನೂ ಲೀಲಾಜಾಲವಾಗಿ ಮಾತಾಡುವಂತಾಯಿತು.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

6 ತಿಂಗಳ ಮಗುವಾಗಿದ್ದಾಗಲೇ ಪಾತ್ರ:

ಪುನೀತ್‌ ಮತ್ತು ಸೋದರಿ ಪೂರ್ಣಿಮಾ ಅವರನ್ನು ರಾಜ್‌ಕುಮಾರ್‌ ಯಾವಾಗಲೂ ಸಿನಿಮಾ ಸೆಟ್ಟಿಗೆ ಕರೆತರುತ್ತಿದ್ದರು. ಹೀಗಾಗಿ ಪುನೀತ್‌ ಆರು ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ರಾಜ್‌ಕುಮಾರ್‌ ಸಿನಿಮಾದಲ್ಲಿ ಮಕ್ಕಳ(Children) ಪಾತ್ರ ಬಂದರೆ ಪುನೀತ್‌ ನಟಿಸುವುದು ಸಾಮಾನ್ಯವಾಯಿತು. ನಿರ್ದೇಶಕರ ಸೂಚನೆಗಳನ್ನು ಆ ವಯಸ್ಸಿನಲ್ಲೇ ಅರ್ಥಮಾಡಿಕೊಳ್ಳುತ್ತಿದ್ದ ಪುನೀತ್‌ ತಾನು ಹುಟ್ಟಾಕಲಾವಿದ ಅಂತ ತೋರಿಸಿಕೊಟ್ಟವರು.

‘ವಸಂತಗೀತ’ ಚಿತ್ರದ ಮೂಲಕ ಪುನೀತ್‌ 1980ರಲ್ಲಿ ಎಲ್ಲರ ಗಮನ ಸೆಳೆಯುವ ಪಾತ್ರ(Acting) ಮಾಡಿದರು. ಬಾಲನಟನಾಗಿ(Child Artist), ನಾಯಕನಾಗಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ(Movies) ನಟಿಸಿರುವ ಪುನೀತ್‌ 41 ವರ್ಷಗಳ ಕಾಲ ಸೋಲು, ಗೆಲುವು ಎರಡನ್ನೂ ನೋಡಿಕೊಂಡು ಬಂದರೂ, ನಟರಾಗಿ ಅವರು ಕನ್ನಡ ಚಿತ್ರರಂಗದ(Sandalwood) ಪಾಲಿಗೆ ಪವರ್‌ಸ್ಟಾರ್‌(Powerstar) ಆಗಿಯೇ ಇದ್ದರು.

ಬಾಲ ನಟರಾಗಿ ಚಿತ್ರರಂಗಕ್ಕೆ ಬಂದ ಪುನೀತ್‌ ರಾಜ್‌ಕುಮಾರ್‌ ಅವರು ತಂದೆ ರಾಜ್‌ಕುಮಾರ್‌ ಜತೆಗೆ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಸಂತಗೀತ, ಪ್ರೇಮದ ಕಾಣಿಕೆ, ಭಾಗ್ಯದಾತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ, ಯಾರಿವನು, ಭಕ್ತ ಪ್ರಹ್ಲಾದ ಮುಂತಾದ ಚಿತ್ರಗಳಲ್ಲಿ ಅಪ್ಪನ ಮುಂದೆಯೇ ನಟಿಸಿ ಸೈ ಎನಿಸಿಕೊಂಡವರು. ‘ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡದನು’ ಹಾಡು ನೆನಪಾದರೆ ಬಹುತೇಕರಿಗೆ ಈ ಗೀತೆಯನ್ನು ಒಳಗೊಂಡ ‘ಚಲಿಸುವ ಮೋಡಗಳು’ ಚಿತ್ರಕ್ಕಿಂತ ಮೊದಲು ನೆನಪಾಗುತ್ತಿದ್ದುದು ಪುನೀತ್‌ರಾಜ್‌ ಕುಮಾರ್‌ ಅವರ ಕಂಠವೇ. ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ರಾಜ್‌ಕುಮಾರ್‌ ಅವರು ಕಂಬ ಒಡೆಯುವಾಗ ಪುನೀತ್‌ ಅವರ ಮುಗ್ಧ ನಟನೆ ಯಾರಿಂದ ಮರೆಯಲು ಸಾಧ್ಯವಿಲ್ಲ. ಹೀಗೆ ಬಾಲ್ಯದಲ್ಲೇ ದೊಡ್ಡ ನಟ ಎನಿಸಿಕೊಂಡವರು ಪುನೀತ್‌ ರಾಜ್‌ಕುಮಾರ್‌.

ಪುನೀತ್‌ ರಾಜ್‌ಕುಮಾರ್ ಹಾಡಿದ ಟಾಪ್‌ 10 ಗೀತೆಗಳು

ಅಪ್ಪು ಚಿತ್ರದ ಮೂಲಕ ಹೀರೋ:

ಬಾಲ ನಟರಾಗಿ ಎಲ್ಲರ ಮೆಚ್ಚಿನ ಪುಟಾಣಿ ಎನಿಸಿಕೊಂಡ ಪುನೀತ್‌ ರಾಜ್‌ಕುಮರ್‌ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದರು. ಪುನೀತ್‌ ರಾಜ್‌ಕುಮಾರ್‌ ಹಾಗೂ ರಕ್ಷಿತಾ ಜೋಡಿಯ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. ಅಲ್ಲಿಂದ ಇತ್ತೀಚೆಗೆ ಬಂದ ‘ಯುವರತ್ನ’ ಚಿತ್ರದ ವರೆಗೂ 29 ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಡಬ್ಬಿಂಗ್‌ ಹಂತದಲ್ಲಿರುವ ‘ಜೇಮ್ಸ್‌’ ಚಿತ್ರ ಸೇರಿದರೆ ಇಲ್ಲಿವರೆಗೂ 30 ಚಿತ್ರಗಳಲ್ಲಿ ಹೀರೋ ಆಗಿರುವ ಪವರ್‌ ಸ್ಟಾರ್‌ಗೆ ಅಪ್ಪು, ಅಭಿ, ಆಕಾಶ್‌, ಅರಸು, ಮೌರ್ಯ, ಮಿಲನ, ರಾಮ್‌, ರಾಜ್‌ ದಿ ಶೋ ಮ್ಯಾನ್‌, ಜಾಕಿ, ಅಣ್ಣಾ ಬಾಂಡ್‌, ರಾಜಕುಮಾರ, ಯುವರತ್ನ ಮುಂತಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿವೆ. ಈ ಪೈಕಿ ‘ರಾಜಕುಮಾರ’ ಸಿನಿಮಾ ಬ್ಲಾಕ್‌ ಬಾಸ್ಟರ್‌ ಹಿಟ್‌ ಲೀಸ್ಟ್‌ಗೆ ಸೇರಿದೆ.

ಮಕ್ಕಳ ಮೆಚ್ಚಿನ ತಾರೆ:

ಹೀರೋ ಆದ ಮೇಲೂ ಮಕ್ಕಳ ಅಚ್ಚುಮೆಚ್ಚಿನ ನಟ ಎಂದರೆ ಅದು ಪುನೀತ್‌ ರಾಜ್‌ಕುಮಾರ್‌ ಮಾತ್ರ. ಅವರ ನಟನೆಯ ಚಿತ್ರಗಳ ಮೊದಲ ಪ್ರೇಕ್ಷಕರು ಕೂಡ ಮಕ್ಕಳೇ ಆಗಿದ್ದರು. ಮಕ್ಕಳು ಹಟ ಮಾಡಿ ಹೆತ್ತವರ ಜತೆ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ನೋಡಲು ಬರುತ್ತಿದ್ದರು. ಬಹುತೇಕ ಮಕ್ಕಳು ಅಪ್ಪು ಎಂದರೆ ‘ಚಲಿಸುವ ಮೋಡಗಳು’ ಚಿತ್ರದ ಹಾಡು ನೆನಪಿಸಿಕೊಳ್ಳುತ್ತಿದ್ದರು. ಆ ಮಟ್ಟಿಗೆ ಅಪ್ಪು, ಮಕ್ಕಳ ನೆಚ್ಚಿನ ತಾರೆ ಆಗಿದ್ದರು.

10ನೇ ವಯಸ್ಸಿಗೇ ರಾಷ್ಟ್ರಪ್ರಶಸ್ತಿ!

ಒಂದು ರಾಷ್ಟ್ರ ಪ್ರಶಸ್ತಿ(National Award), ನಾಲ್ಕು ರಾಜ್ಯ ಪ್ರಶಸ್ತಿಗಳು(State Award) ಸೇರಿದಂತೆ ಹಲವು ಪ್ರಶಸ್ತಿಗಳು ಪುನೀತ್‌ ರಾಜ್‌ಕುಮಾರ್‌ ಅವರ ಮುಡಿಗೇರಿವೆ. 1985ರಲ್ಲಿ ಬಂದ ‘ಬೆಟ್ಟದ ಹೂವು’ ಚಿತ್ರಕ್ಕಾಗಿ 10 ವರ್ಷದ ಪುನೀತ್‌ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡವರು. ‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಚಲಿಸುವ ಮೋಡಗಳು ಹಾಗೂ ಎರಡು ನಕ್ಷತ್ರಗಳು ಚಿತ್ರಗಳ ನಟನೆಗಾಗಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ(Award) ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಾಯಕನಾದ ಮೇಲೆ ಮಿಲನ ಹಾಗೂ ಜಾಕಿ ಚಿತ್ರಗಳಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ಪ್ರತಿಭಾವಂತ ನಟ.

ಹುಡುಗರು, ಯಾರೇ ಕೂಗಾಡಲಿ, ರಣ ವಿಕ್ರಮ, ರಾಜಕುಮಾರ ಚಿತ್ರಗಳಿಗಾಗಿ ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವೀ ಅವಾರ್ಡ್‌ ಹಾಗೂ ಐದು ಬಾರಿ ಫಿಲಮ್‌ ಫೇರ್‌ ಅವಾರ್ಡ್‌, ಮೂರು ಬಾರಿ ಸುವರ್ಣ ವಾಹಿನಿ ನೀಡುವ ಸುವರ್ಣ ಫಿಲಮ್‌ ಅವಾರ್ಡ್‌, ಎರಡು ಬಾರಿ ಸೌತ್‌ ಸ್ಕೋಪ್‌ ಅವಾರ್ಡ್‌ಗಳಿಗೆ ಪಾತ್ರರಾದವರು ಪುನೀತ್‌ ರಾಜ್‌ಕುಮಾರ್‌. ಗಾಯಕನಾಗಿಯೂ ಐಫಾ ಉತ್ಸವದಿಂದ ‘ನನ್ನ ನಿನ್ನ ಪ್ರೇಮ ಕತೆ’ ಹಾಗೂ ‘ರನ್‌ ಆಂಟೋನಿ’ ಚಿತ್ರಗಳಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ವಿವಿಧ ವಾಹಿನಿ, ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಆರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಡಾ.ರಾಜ್‌, 3 ಮಕ್ಕಳಿಗೂ ಹೃದಯ ಸಮಸ್ಯೆ!

ಕಾರು, ಸೈಕಲ್‌, ಜಿಮ್‌ ಅಂದರೆ ಪ್ರಾಣ

ಸಿನಿಮಾ ಆಚೆಗೂ ಪುನೀತ್‌ ಅವರಿಗೆ ಕಾರು, ಸೈಕಲ್‌, ಜಿಮ್‌ ಅತ್ಯಂತ ಪ್ರೀತಿಯ ಸಂಗತಿಗಳಾಗಿದ್ದವು. ಸಿನಿಮಾ ಶೂಟಿಂಗ್‌ ಇಲ್ಲದೆ ಹೋದರೆ ಅಥವಾ ಚಿತ್ರೀಕರಣದ ನಡುವೆ ಬಿಡುವು ಸಿಕ್ಕರೆ ಸೈಕಲ್‌ ಹತ್ತಿಕೊಂಡು ಒಬ್ಬರೇ ಹೋಗುವುದು ಅವರ ಅಭ್ಯಾಸ. ಸೈಕಲ್‌(Cycle) ಏರಿದರೆ ತಾವೊಬ್ಬ ಸ್ಟಾರ್‌ ನಟ ಎಂಬುದನ್ನೂ ಕೂಡ ಮರೆಯುತ್ತಿದ್ದರು. ಅಲ್ಲದೆ ಇಷ್ಟದ ಕಾರಿನಲ್ಲಿ ಶಿವಣ್ಣ ಅವರ ಜತೆಗೆ ಲಾಂಗ್‌ ಡ್ರೈವ್‌ ಹೋಗುವುದು ಎಂದರೆ ಅಪ್ಪು ಅವರಿಗೆ ಬಲು ಇಷ್ಟದ ಕೆಲಸವಾಗಿತ್ತು. ಜಿಮ್‌ನಲ್ಲಿ ದೇಹ ದಂಡಿಸುವುದನ್ನು ಯಾವತ್ತೂ ಮರೆತವರಲ್ಲ. ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಳ್ಳುವುದರ ಬಗ್ಗೆ ತುಂಬಾ ಆಸಕ್ತಿ ತೋರುತ್ತಿದ್ದರು. ಫಿಟ್‌ನೆಸ್‌(Fitness) ಚಾಲೆಂಜ್‌ ಮೂಲಕ ತಮ್ಮ ಅಭಿಮಾನಿಗಳಲ್ಲೂ ಆರೋಗ್ಯ, ವ್ಯಾಯಮದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಓಡುವುದು, ದೇಹವನ್ನು ಸುರುಳಿಯಂತೆ ಸುತ್ತಿಕೊಂಡು ಜಂಪ್‌ ಮಾಡುವುದು ಎಂದರೆ ಪುನೀತ್‌ ಅವರಿಗೆ ಇಷ್ಟವಾಗಿತ್ತು.

ಪ್ರವಾಸ ಪ್ರಿಯ ಅಪ್ಪು

ಮಂತ್ರಾಲಯ(Mantralaya), ಉತ್ತರ ಕರ್ನಾಟಕದ(North Karnataka) ಪವಾಡ ಮಹಿಮರ ಮಠಗಳು ಅವರ ಆಧ್ಯಾತ್ಮಿಕ ತಾಣಗಳಾದರೆ, ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಕುಟುಂಬ ಸಮೇತರಾಗಿ ಒಂದೊಂದು ದೇಶಕ್ಕೆ ಹೋಗುತ್ತಿದ್ದರು. ಅಮೆರಿಕ, ಲಂಡನ್‌, ಯೂರೋಪ್‌ ದೇಶಗಳಿಗೆ ಹೋಗಿ ಬರುತ್ತಿದ್ದರು. ಕೊರೋನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿದೇಶ ಸುತ್ತಾಟಕ್ಕೆ ಬ್ರೇಕ್‌ ಹಾಕಿದ್ದರು. ಶೂಟಿಂಗ್‌ ಮುಗಿದ ಕೂಡಲೇ ತಾವು ಚಿತ್ರೀಕರಣ ಮಾಡುವ ಸ್ಥಳದ ಸುತ್ತಮುತ್ತ ಏನಾದರೂ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಮಾಹಿತಿ ಇದ್ದರೆ ಸ್ನೇಹಿತರ ಜತೆ ಅಲ್ಲಿಗೆ ಹೋಗಿ ಬರುತ್ತಿದ್ದರು. ಆ ಮೂಲಕ ಪ್ರವಾಸ ಪ್ರಿಯ ನಟ ಎನಿಸಿಕೊಂಡಿದ್ದರು.

ಪರ್‌ಫೆಕ್ಟ್ ಫ್ಯಾಮಿಲಿ ಮ್ಯಾನ್‌

ಡಿಸೆಂಬರ್‌ 1, 1999ರಲ್ಲಿ ಚಿಕ್ಕಮಗಳೂರಿನ ಅಶ್ವಿನಿ ರೇವಂತ್‌ ಅವರನ್ನು ಪ್ರೇಮ ವಿವಾಹ ಆದವರು ಪುನೀತ್‌ ರಾಜ್‌ಕುಮಾರ್‌. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದವರು. ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ಪೋಷಕರ ಒಪ್ಪಿಗೆ ಮೇರೆಗೆ ಮದುವೆ ಆದ ಜೋಡಿ ಇವರದ್ದು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು ಧೃತಿ ಹಾಗೂ ವಂದಿತಾ. ನಟನೆ, ಸಿನಿಮಾ, ನಿರ್ಮಾಣ, ಉದ್ಯಮ ಹೀಗೆ ಎಷ್ಟೇ ಬ್ಯುಸಿ ಇದ್ದರೂ ಕುಟುಂಬವನ್ನು ಯಾವತ್ತೂ ಮರೆತವರಲ್ಲ. ಕುಟುಂಬದ ಜತೆಗೆ ವಿದೇಶ ಪ್ರವಾಸ ಹೋಗುವುದನ್ನು ತಪ್ಪಿಸಿದವರಲ್ಲ. ಯಾವತ್ತೂ ಒಬ್ಬರೇ ದೇಶ- ವಿದೇಶ ಸುತ್ತಿದವರಲ್ಲ. ಆ ಮಟ್ಟಿಗೆ ಪವರ್‌ಸ್ಟಾರ್‌ ಪರ್‌ಫೆಕ್ಟ್ ಫ್ಯಾಮಿಲಿ ಮ್ಯಾನ್‌ ಆಗಿದ್ದವರು.
 

Latest Videos
Follow Us:
Download App:
  • android
  • ios