ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್‌ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದಾರೆ.

ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್‌ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದು, 'ಬಿಗ್ ಬಾಸ್ ಕನ್ನಡ' ಸೀಸನ್‌ 10ರ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸುಮುಖ ಹಾಗೂ ಶ್ರುತಿ ಹರಿಹರನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಇನ್ನೂ ಅಧಿಕೃತ ಶೀರ್ಷಿಕೆ ಘೋಷಣೆಯಾಗಿಲ್ಲ. ಆದರೆ, ಚಿತ್ರತಂಡ ಈಗಾಗಲೇ ಮಾರಿಷಸ್‌ನಲ್ಲಿ ಒಂದು ತಿಂಗಳ ಕಾಲ ನಡೆದ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎನ್ನಲಾಗಿದೆ. ಇನ್ನೂ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ಅದರಿಗಾಗಿ ಮತ್ತೊಂದು ವಿದೇಶಿ ಲೊಕೇಶನ್ ಹುಡುಕುವ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಅಂತಿಮ ಹಂತದ ಚಿತ್ರೀಕರಣ ಮುಗಿದ ಬಳಿಕ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಸಿನಿಮಾ ಕನ್ನಡ ಚಿತ್ರರಂಗದ ವಿಭಿನ್ನ ತಲೆಮಾರಿನ ಕಲಾವಿದರನ್ನು ಒಂದೇ ವೇದಿಕೆಗೆ ತರುತ್ತಿದೆ. ಹಲವು ವರ್ಷಗಳ ಬಳಿಕ ಪಾರುಲ್ ಯಾದವ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ಪಾರುಲ್, ಬಳಿಕ 'ಬಚ್ಚನ್', 'ಕಿಲ್ಲಿಂಗ್ ವೀರಪ್ಪನ್', 'ಉಪ್ಪಿ 2', 'ಜೆಸ್ಸಿ' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರ ಕೊನೆಯ ಬಿಡುಗಡೆಯಾದ ಸಿನಿಮಾ 'ಸೀಜರ್'. ಅದರ ನಂತರ ಹೊಸ ಕನ್ನಡ ಚಿತ್ರವನ್ನು ಅವರು ಒಪ್ಪಿಕೊಂಡಿರಲಿಲ್ಲ.

ಇನ್ನೊಂದೆಡೆ, 'ಕ್ವೀನ್' ಚಿತ್ರದ ಕನ್ನಡ ರಿಮೇಕ್ ಆಗಿರುವ 'ಬಟರ್‌ಫ್ಲೈ' ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಉತ್ತಮ ಕಥೆಯ ನಿರೀಕ್ಷೆಯಲ್ಲಿದ್ದ ಪಾರುಲ್, ಇದೀಗ ಪನ್ನಗಾಭರಣ ಅವರ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ನಟಿ ಶ್ರುತಿ ಹರಿಹರನ್ ಕೂಡ ಆಯ್ದ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದು, 'ನಿದ್ರಾದೇವಿ ನೆಕ್ಸ್ಟ್ ಡೋರ್' ನಂತರ ಕೆಲವು ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ಸುಮುಖ, ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಬಳಿಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಮಿಡಿ ಮನರಂಜನಾ ಶೈಲಿ

'ಬಿಗ್ ಬಾಸ್ ಕನ್ನಡ' ಸೀಸನ್‌ 10ರ ವಿಜೇತ ಕಾರ್ತಿಕ್ ಮಹೇಶ್ ಕೂಡ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಜರ್ನಿಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಚಿತ್ರದ ಜೊತೆಗೆ ಕೀರ್ತಿ ಕೃಷ್ಣ ನಿರ್ದೇಶನದ 'ಸೀತಾ ರಾಮ ರಾಜು' ಚಿತ್ರವೂ ಅವರ ಕೈಯಲ್ಲಿದೆ. ಪನ್ನಗಾಭರಣ ಈ ಚಿತ್ರವನ್ನು ಸಂಪೂರ್ಣ ಕಾಮಿಡಿ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಡುತ್ತಿದ್ದು, ಉಳಿದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರದ ಶೀರ್ಷಿಕೆ, ನಿರ್ಮಾಣ ಸಂಸ್ಥೆ, ತಾಂತ್ರಿಕ ಬಳಗ ಹಾಗೂ ಉಳಿದ ಕಲಾವಿದರ ವಿವರಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದಾರೆ.

ಇನ್ನು ಪಾರುಲ್ ಯಾದವ್ ಅವರ ಕಂಬ್ಯಾಕ್, ಕಾರ್ತಿಕ್ ಮಹೇಶ್ ಅವರ ಹೊಸ ಪಾತ್ರ, ಶ್ರುತಿ ಹರಿಹರನ್ ಮತ್ತು ಸುಮುಖ ಅವರ ಅಭಿನಯ, ಜೊತೆಗೆ ಪನ್ನಗಾಭರಣ ಅವರ ಕಾಮಿಡಿ ಶೈಲಿಯ ನಿರ್ದೇಶನ-ಈ ಎಲ್ಲ ಕಾರಣಗಳಿಂದ ಈ ಸಿನಿಮಾ ಈಗಾಗಲೇ ಕನ್ನಡ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.