ಎನ್. ಆರ್. ರಮೇಶ್ ಬರೆದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಪುಸ್ತಕ ಬಿಡುಗಡೆಯಾಗಿದೆ. ಈ ಕೃತಿಯು ದಿವಂಗತ ನಟಿ ಲೀಲಾವತಿ, ಅವರ ಪತಿ ಮಹಾಲಿಂಗ ಭಾಗವತರ್ ಕುರಿತಾಗಿದ್ದು, ಡಾ. ರಾಜ್‌ಕುಮಾರ್ ಮೇಲಿನ ವಿವಾದಗಳಿಗೆ ಸ್ಫೋಟಕ ದಾಖಲೆಗಳ ಮೂಲಕ ಸ್ಪಷ್ಟನೆ ನೀಡುತ್ತದೆ.
ಬೆಂಗಳೂರು (ಜು.27): ದಿವಂಗತ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪತಿ ಮಹಾಲಿಂಗ ಭಾಗವತರ್ ಅವರ ಜೀವನ ವೃತ್ತಾಂತವನ್ನು ಒಳಗೊಂಡ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಎಂಬ ಹೊಸ ಪುಸ್ತಕ ಬಿಡುಗಡೆಯಾಗಿದೆ. ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಅವರು ಬರೆದಿರುವ ಈ ಕೃತಿಯಲ್ಲಿ ಹಲವು ಸ್ಫೋಟಕ ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ನಗರದ 'ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣ'ದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ಅನಾವರಣಗೊಳಿಸಲಾಯಿತು.
ಪುಸ್ತಕದಲ್ಲೇನಿದೆ?: ಸ್ಫೋಟಕ ವಿಚಾರಗಳ ಉಲ್ಲೇಖ!
ಈ ಪುಸ್ತಕದ ಕುರಿತು 'ವಿಶ್ವಮಾನವ ಡಾ. ರಾಜ್ ಕುಮಾರ್ ಫೌಂಡೇಶನ್' ಸಂಸ್ಥಾಪಕ ಅಧ್ಯಕ್ಷ ಬ.ನಾ. ಮು. ರಾಜು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿದ್ದು, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಸುತ್ತ ಇಷ್ಟು ವರ್ಷ ಸೃಷ್ಟಿಯಾಗಿದ್ದ ಹಲವಾರು ವಿವಾದಗಳಿಗೆ ಸೂಕ್ತ ಆಧಾರಗಳೊಂದಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ.
ವೃತ್ತಿಜೀವನ ಹಾಗೂ ವೈಯಕ್ತಿಕವಾಗಿ ಡಾ. ರಾಜ್‌ಕುಮಾರ್ ಅವರಿಗೆ ಎದುರಾಗಿದ್ದ ಅವಮಾನಗಳ ಕುರಿತೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ದಿವಂಗತ ನಟಿ ಲೀಲಾವತಿ, ಅವರ ಪತಿ ಮಹಾಲಿಂಗ ಭಾಗವತರ್ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವು ಅಪರೂಪದ ಮತ್ತು ಸ್ಫೋಟಕ ದಾಖಲೆಗಳನ್ನು ಲೇಖಕ ಹಾಗೂ ರಾಜಕಾರಣಿಯೂ ಆಗಿರುವ ಎನ್. ಆರ್. ರಮೇಶ್ ಅವರು ಈ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ರಾಜು ತಿಳಿಸಿದ್ದಾರೆ.
ಬ.ನಾ. ಮು. ರಾಜು ಅವರ ಫೇಸ್‌ಬುಕ್ ಬರಹ..
"ಇದು.., ಉತ್ತರ..., ಅಂದರೆ..,"
ಇದು ಸಮಸ್ತ ರಾಜಕುಮಾರ್ ಅಭಿಮಾನಿಗಳು, ಹೇಳುತ್ತಿರುವ ಮಾತು..
ಮೂರ್ನಾಲ್ಕು ದಶಕಗಳಿಂದ ವರನಟ ರಾಜಕುಮಾರ್ ಅವರ ಹೆಸರಿಗೆ ಕಳಂಕ ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು (ಹಲವಾರು ಜನ ಇಂದು ನಮ್ಮೊಂದಿಗಿಲ್ಲ) ಕಟ್ಟಿದ ಸುಳ್ಳಿನ ಕಥೆಗಳಿಗೆ ಇಂದು ಸಮರ್ಪಕವಾದ, ಸಾಕ್ಷಿ ಸಮೇತವಾದ ಉತ್ತರವನ್ನು "ಲೀಲಮ್ಮ ನಿನ್ನ ಗಂಡ ಯಾರಮ್ಮ?" ಕೃತಿಯ ಮೂಲಕ ನೀಡಿದಂತಾಗಿದೆ..
ರಾಜ್ ಕುಮಾರ್ ಅವರ ಕಟ್ಟಾಭಿಮಾನಿ ಹಾಗೂ ಜನಪ್ರಿಯ ನಾಯಕ ಶ್ರೀಯುತ ಎನ್. ಆರ್. ರಮೇಶ್ ಅವರು ರಚನೆಯ ಹಾಗೂ ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸ್ನೇಹ ಬುಕ್ ಹೌಸ್ ಪ್ರಕಟಣೆಯ ಈ ಕೃತಿ ಲೋಕಾರ್ಪಣೆಯಾಗಿದೆ.
ಈ ಪುಸ್ತಕವನ್ನು ಹಿಡಿದು ಓದಲು ಆರಂಭಿಸಿದರೆ ನಿಮ್ಮ ಕಣ್ಣಲ್ಲಿ ನೀರೂರುತ್ತದೆ.. ಹಾಗೆ ಓದುತ್ತಾ ಹೋದಂತೆ ನಿಮ್ಮ ಕಣ್ಣೀರು ಇನ್ನೂ ಹೆಚ್ಚಾಗುತ್ತದೆ..., ಅದು ಈಗಲಾದರೂ ಉತ್ತರ ಸಿಕ್ಕಿತಲ್ಲ ಎನ್ನುವ ಸಮಾಧಾನದಿಂದ.., ತೃಪ್ತಿ ಭಾವದಿಂದ ಆನಂದಭಾಷ್ಪ ಆಗಿರುತ್ತದೆ....
ಲೇಖಕರು ಅಧ್ಯಾಯಗಳ ರೂಪದಲ್ಲಿ
"ಅಖಾಡಕ್ಕೆ ಇಳಿಯುವ ಮುನ್ನ" ದಲ್ಲಿ ವರನಟರ ಸಾಧನೆ, ಸರಳತೆ, ಸಂಯಮಗಳಂತಹ ವಿಚಾರವನ್ನು ತಿಳಿಸಿ,
"ಸೋದರಿಯ ಜಟಕಾಸಾಬಿ"
"ಕಲ್ಯಾಣ ಕಾಲದಲ್ಲಿ ಕುರ್ಚಿ ಎಳೆದ ಕಥೆ!"
."ಸುಡುಬಿಸಿಲು ಬರಿಗಾಲಲ್ಲಿ ನಡೆದುಬಂದ 'ಜಕಣಾಚಾರಿ'"
."ಮಂತ್ರಾಲಯ ಮಹಾತ್ಮೆ: ಹೆಂಡ ಇಳಿಸುವವನು ರಾಯರ ಪಾತ್ರ ಮಾಡುವುದೇ!"
"ಶತಮಾನದ ಚಿತ್ರವನ್ನು 'ಅತಿ ಕೆಟ್ಟ ಫಿಲಂ' ಅಂದಿದ್ದರು ಪುಟ್ಟಣ್ಣ!"
"'ಗಂಧದಗುಡಿ'ಗೆ ರಾಜ್ ಕುಮಾರ್ ಏಕೆ ಬೇಕಿತ್ತು?"
"ಕಲ್ಯಾಣ್ ಕುಮಾರ್ ಸನ್ಮಾನ: ರಾಜ್ ಸಭಾಧ್ಯಕ್ಷರು: ನಡೆದದ್ದೇ ಬೇರೆ!"
"'ಕವಿರತ್ನ ಕಾಳಿದಾಸ' 'ಮಾಣಿಕ್ಯ ವೀಣಾ!' ರಾಜ್ ಕುಮಾರ್ ಹಾಡಬಾರದು!"
ಅಧ್ಯಾಯಗಳ ಮೂಲಕ ವರನಟರಿಗೆ ಆದ ಅವಮಾನ, ಅಪಹಾಸ್ಯ ಆ ಸಮಯದಲ್ಲಿ ರಾಜ್ ತಮ್ಮ ಸಂಯಮದಿಂದಲೇ ನಿರ್ಲಿಪ್ತ ಭಾವದಿಂದ ಇದ್ದ ದಿನಗಳು ಹೀಗೆ ಎಲ್ಲವನ್ನೂ ವಿವರಿಸಿ
'ಲೀಲಮ್ಮನ ಆತ್ಮಚರಿತ್ರೆಯೋ?! ಬೆಳೆಗೆರೆಯವರ ಆತ್ಮಪ್ರಲಾಪವೋ?!
ಅಧ್ಯಾಯದ ಮೂಲಕ ರಾಜ್ ಭೌತಿಕವಾಗಿ ಅಗಲಿದ ನಂತರವೂ ಕೆಲವರು ಮನದಲ್ಲಿ ಬೇರೂರಿದ್ದ ಈರ್ಷ್ಯೆಯ ಮನಸ್ಥಿತಿಯನ್ನು ವಿವರಿಸಿ..
"ದಿ ಅಲ್ಟಿಮೇಟ್ ಪೋಸ್ಟ್ ಮಾರ್ಟ೦"
"ನೀವೆಲ್ಲೂ ನೋಡಿರದ ಸ್ಫೋಟಕ ದಾಖಲೆಗಳು"
ಅಧ್ಯಾಯಗಳ ಮೂಲಕ ಸಮರ್ಪಕವಾದ ಉತ್ತರ ನೀಡಿದ್ದಾರೆ.
"ಈಗ ಕಳಂಕ ಹೊತ್ತವರೂ ಇಲ್ಲ.. ಹೊರಿಸಿದ್ದವರೂ ಇಲ್ಲ.. ಆ ಸಮಯದಲ್ಲಿ ಬಾಳಿದ್ದ ಹಲವರಲ್ಲಿ ಯಾರೂ ಇಲ್ಲ.. " ಇಂತಹ ಸಂದರ್ಭದಲ್ಲಿ ಈ ಕೃತಿಯ ಅವಶ್ಯಕತೆ ಇತ್ತೇ? ಎನ್ನುವುದು ಕೆಲವರ ಪ್ರಶ್ನೆ ..
ಅದಕ್ಕೆ ಉತ್ತರ...
ನಮ್ಮ ಪೂರ್ವಜರ ಬಗ್ಗೆ ಯಾರಾದರೂ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಅಲ್ಲವೇ..?
ನಮ್ಮ ನಂಬಿಕೆ ಆಚಾರ ವಿಚಾರಗಳ ಬಗ್ಗೆ ಯಾರಾದರೂ ಕೇವಲವಾಗಿ ಮಾತನಾಡಿದರೆ ಸಾಕ್ಷಿ ಸಮೇತವಾಗಿ ಉತ್ತರ (ಕಡೆಗೆ ಕೋರ್ಟ್ ಮೆಟ್ಟಿಲು ಏರಿಯಾದರೂ ಸರಿ) ನೀಡುತ್ತೇವೆ ಅಲ್ಲವೇ?
ಹಾಗಿರುವಾಗ ಕನ್ನಡ ನಾಡು ನುಡಿ ಸಂಸ್ಕೃತಿಯ ಪ್ರತೀಕವಾದ ರಾಜ್ ಎನ್ನುವ ಹೆಸರಿಗೆ ಕಳಂಕ ತರುವ ಉದ್ದೇಶ ಹೊಂದಿದ ಮನಸ್ಥಿತಿ ಗಳಿಂದ ಆಗಿರುವ, ಆಗುತ್ತಿರುವ ಅಪಪ್ರಚಾರಗಳಿಗೆ ಉತ್ತರ ನೀಡದೆ ಹೋಗಿದ್ದರೆ.., ಮುಂದಿನ ದಿನಗಳಲ್ಲಿ ಅದೇ ಸತ್ಯ ಎನ್ನುವ ಅಪಾಯ ಎದುರಾಗುತ್ತದೆ... ಎನ್ನುವ ಸ್ಪಷ್ಟತೆ ನಮಗಿರಬೇಕು ಅಲ್ಲವೇ?
ಇಂತಹ ದಾಖಲೆಪೂರಕವಾದ, ಸಂಗ್ರಹಯೋಗ್ಯವಾದ ಕೃತಿ ಬಿಡುಗಡೆಯಾದ ಎರಡೇ ತಾಸುಗಳಲ್ಲಿ ಎರಡು ಮುದ್ರಣಗಳ ಪ್ರತಿಗಳು ಸಂಪೂರ್ಣ ಮಾರಟವಾಗಿ, ಮೂರನೆಯ ಮುದ್ರಣಕ್ಕೆ ಕಾಲಿಟ್ಟು ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಶ್ರೀಯುತ ಎನ್ ಆರ್ ರಮೇಶ್ ಸರ್ ಅವರಿಗೆ ಹಾಗೂ ಸ್ನೇಹ ಬುಕ್ ಹೌಸ್ ನ ಮಾಲೀಕರಾದ ಶ್ರೀಯುತ ಕೆ. ಪರಶಿವಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.


