-ಕಳೆದ ಮೂರುವರೆ ದಶಕಗಳಿಂದ ಚಿತ್ರರಂಗದಲ್ಲಿದ್ದೇನೆ. ಈಗ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ಹಾರುವ ಹಂಸಗಳು ಚಿತ್ರದಲ್ಲಿ ಒಂದು ಪುಟ್ಟಪಾತ್ರ ಕೂಡ ಮಾಡಿರುವೆ. ನಾನು ತುಂಬಾ ಇಷ್ಟಪಟ್ಟು ಮಾಡಿರುವ ಸಿನಿಮಾ ಇದು. ಯಾಕೆಂದರೆ ಈಗಿನ ಮಕ್ಕಳು ಮತ್ತು ಪೋಷಕರು ನೋಡಲೇಬೇಕಾದ ಚಿತ್ರ ಎನ್ನುವ ಕಾರಣಕ್ಕೆ.

-ಈ ಚಿತ್ರಕ್ಕೆ ಬಳಸಿಕೊಂಡಿರುವ ಕತೆ ನಾನು ಈಗಾಗಲೇ ಆತಂಕ ಹೆಸರಿನಲ್ಲಿ ಬರೆದಿರುವ ನಾಟಕದ್ದು. ಅದು ಇನ್ನೂ ಪ್ರಕಟಣೆಗೊಂಡಿಲ್ಲ. ಅದರ ಕತೆಯನ್ನು ಈ ಚಿತ್ರಕ್ಕೆ ಅಳವಡಿಸಿರುವೆ.

- ಮೊಬೈಲ್‌, ಮಕ್ಕಳು, ಗ್ರಾಮೀಣ ಜೀವನ, ದೂರವಾಗುತ್ತಿರುವ ಸಂಬಂಧಗಳು, ಪಟ್ಟಣ್ಣ ಮತ್ತು ಹಳ್ಳಿಯ ಶಾಲೆಯ ಮಕ್ಕಳ ಮುಖಾಮುಖಿಯೇ ಚಿತ್ರದ ಪ್ರಧಾನ ಅಂಶಗಳು.

- ಅಕ್ಟೋಬರ್‌ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಿ ಲಾಕ್‌ಡೌನ್‌ಗೂ ಮೊದಲೇ ಸೆನ್ಸಾರ್‌ ಕೂಡ ಆಗಿದೆ. 90 ನಿಮಿಷಗಳ ಅವಧಿಯ ಈ ಚಿತ್ರದಲ್ಲಿ ಒಂಭತ್ತು ಮಂದಿ ಶಾಲೆಯ ಮಕ್ಕಳ ಪಾತ್ರಗಳು, ಬೆಂಗಳೂರು ಹಾಗೂ ಮದ್ದೂರಿನ ಎರಡು ಶಾಲೆಗಳು, ಅಲ್ಲಿನ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಇಡೀ ಕತೆ ಸಾಗುತ್ತದೆ.

- ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಕೈಗೆ ಮೊಬೈಲ್‌ ಬರುತ್ತದೆ. ರಾತ್ರಿಯಾದರೂ ಅವರು ಮೊಬೈಲ್‌ ಕೆಳಗಿಡಲ್ಲ. ಈ ಮೊಬೈಲ್‌ನಿಂದ ಮಕ್ಕಳು ಹೇಗೆ ದಾರಿ ತಪ್ಪುತ್ತಿದ್ದಾರೆ. ಪೋಷಕರು ಕೂಡ ಅದೇ ಮೊಬೈಲ್‌ ಜಗತ್ತಿನಲ್ಲಿ ಮುಳುಗಿದ್ದರಿಂದ ಮಕ್ಕಳು ತಂದೊಡ್ಡುತ್ತಿರುವ ಆತಂಕಗಳು ಎಂಥವು ಎಂಬುದನ್ನು ನೆನಪಿಸಿಕೊಂಡು ನನಗೂ ಆತಂಕ ಶುರುವಾಯಿತು. ಆ ಒಂದು ಯೋಚನೆಯಲ್ಲಿ ಮೂಡಿದ್ದೇ ಹಾರುವ ಹಂಸಗಳು ಚಿತ್ರ.

- ನಾಟಕವನ್ನು ಸಿನಿಮಾ ಮಾಡಲು ಹೊರಟಾಗ ನನಗೆ ಕಂಡಿದ್ದು ಇತ್ತೀಚೆಗೆ ಶಾಲೆಯ ಮಕ್ಕಳು ಅದ್ಯಾವುದೋ ಚಾಟ್‌ ರೂಮ್‌ ಮಾಡಿಕೊಂಡು ಅಶ್ಲೀಲ ಚಾಟಿಂಗ್‌ ಮಾಡುತ್ತ ದೊಡ್ಡ ಹಗರಣ ಮಾಡಿದ್ದು. ಇದನ್ನು ನೋಡಿದ ಮೇಲೆ ಮೊಬೈಲ್‌ ಜಗತ್ತು ಇಂದಿನ ಮಕ್ಕಳನ್ನು ಯಾವ ದಾರಿಗೆ ಎಳೆಯುತ್ತಿದ್ದೆ ಎನ್ನುವುದನ್ನು ಹೇಳಬೇಕು ಅನಿಸಿ ಈ ಸಿನಿಮಾ ಮಾಡಿದೆ.

ಕನ್ನಡದ ಮೊದಲ ವಿಡಿಯೋ ಬುಕ್;‌ ಲೈಫ್‌ ಈಸ್‌ ಬ್ಯೂಟಿಫುಲ್‌ 

- ಈ ಸಿನಿಮಾ ಮಾಡುವಾಗ ನನ್ನ ಬಾಲ್ಯವನ್ನು ನಾನು ಮತ್ತೊಮ್ಮೆ ಕಂಡಂತಾಯಿತು. ಚಿತ್ರದ ಮುಖ್ಯ ಪಾತ್ರದಲ್ಲಿ ಓಜಸ್‌ ದೀಪ್‌ ವಿ ನಟಿಸಿದ್ದಾನೆ. ಈತ ಚಿತ್ರದ ನಿರ್ಮಾಪಕ ಎಚ್‌ ವಾಸುಪ್ರಸಾದ್‌ ಅವರ ಪುತ್ರ. 12 ದಿನಗಳಲ್ಲಿ ಚಿತ್ರೀಕರಣ ಮುಗಿಸಿರುವೆ. ಬೆಂಗಳೂರಿನ ಬುಲ್‌ ಟೆಂಪಲ್‌ ರಸ್ತೆಯಲ್ಲಿರುವ ಪ್ರಜ್ಞಾ ಶಾಲೆಯನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿದ್ದೇನೆ.

- ಈ ಚಿತ್ರ ಮಾಡುವಾಗ ನನಗೆ ಒಳ್ಳೆಯ ತಾಂತ್ರಿಕ ತಂಡ ಜತೆ ಆಯ್ತು. ಸಂಗೀತಕ್ಕೆ ಶ್ರೀಸುರೇಶ್‌, ಉಪಾಸನಾ ಮೋಹನ್‌ ಹಾಗೂ ಡುಂಡಿರಾಜ್‌ ಬರೆದುಕೊಟ್ಟಹಾಡು, ಇಂಗ್ಲಿಷ್‌ ಕಾದಂಬರಿಕಾರನಾಗಿರುವ ಎಚ್‌ ವಾಸುಪ್ರದಾಸ್‌ ನಿರ್ಮಾಣ, ಪಿ ವಿ ಆರ್‌ ಸ್ವಾಮಿ, ಗೂಗಾರೆದೊಡ್ಡಿ ಛಾಯಾಗ್ರಾಹಣ ಇದ್ದಿದ್ದಕ್ಕೆ ಇಡೀ ಸಿನಿಮಾ ಚೆನ್ನಾಗಿ ಬಂದಿದ್ದು.

- ಶಿವಾನಂದ್‌, ಮಂಜುಳಮ್ಮ, ಪ್ರಣವಮೂರ್ತಿ, ಸೆಬಾಸ್ಟಿನ್‌, ವಾಸುದೇವಮೂರ್ತಿ,ಲಕ್ಷ್ಮಣ್‌, ಚಿನ್ಮಯ್‌, ರೂಪ, ದೀಪಿಕಾ ಚಿತ್ರದಲ್ಲಿ ನಟಿಸಿದ್ದಾರೆ. ಕೊರೋನಾ ಆತಂಕ ಮುಗಿದ ಮೇಲೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ.