ಪಿಡಿ ಸತೀಶ್ಚಂದ್ರ

ಮೊದಲು ಓದುವ ಪುಸ್ತಕ ಇತ್ತು. ಓದುವುದಾದರೆ ಕಷ್ಟ, ಕೇಳುವುದು ಸುಲಭ ಎಂದಾದಾಗ ಆಡಿಯೋ ಬುಕ್‌ ಬಂತು. ಇದೀಗ ಓಟಿಟಿ ಪ್ಲಾಟ್‌ಫಾರ್ಮುಗಳಲ್ಲಿ ಸಿನಿಮಾ, ವೆಬ್‌ ಸೀರೀಸ್‌ ನೋಡುತ್ತಾ ಖುಷಿ ಪಡುವವರಿಗೆ ಪುಸ್ತಕ ತಲುಪಿಸುವ ಹೊಸತೊಂದು ಪ್ರಯತ್ನ ಮಾಡಿರುವುದು ಹೋಮ್‌ ಥಿಯೇಟರ್‌ ತಂಡ. ಈ ತಂಡ ಕನ್ನಡದ ಮೊದಲ ವಿಡಿಯೋ ಬುಕ್‌ ತಂದಿದೆ. ಈ ಮೊದಲ ವಿಡಿಯೋ ಬುಕ್‌ ಹೆಸರು ‘ಲೈಫ್‌ ಈಸ್‌ ಬ್ಯೂಟಿಫುಲ್‌’. ಬರೆದಿರುವುದು ಜೋಗಿ. ಓದಿರುವುದು 51 ಮಂದಿ ಪ್ರತಿಭಾವಂತರು.

ಈ ವಿಡಿಯೋ ಬುಕ್‌ ಆಗಿದ್ದು ಹೇಗೆ?

ಲಾಕ್‌ಡೌನ್‌ನಿಂದ ಆಗಿರುವ ಅನೇಕ ಒಳ್ಳೆಯ ಕೆಲಸಗಳಲ್ಲಿ ಹೋಮ್‌ ಥಿಯೇಟರ್‌ ತಂಡ ಪ್ರಸ್ತುತ ಪಡಿಸಿರುವ ಈ ವಿಡಿಯೋ ಕೂಡ ಒಂದು. ಲಾಕ್‌ಡೌನ್‌ ಶುರುವಾದ ಮೇಲೆ ನಾಟಕ ಪ್ರದರ್ಶನಗಳೆಲ್ಲಾ ನಿಂತುಹೋದವು. ರಂಗಕರ್ಮಿ, ನಟ, ಅತ್ಯುತ್ಸಾಹಿ ಪಿಡಿ ಸತೀಶ್ಚಂದ್ರ ಮನೆಯಲ್ಲೇ ಉಳಿಯುವಂತಾಯಿತು. ಆ ಹೊತ್ತಲ್ಲಿ ಒಂದು ಯೋಚನೆ ಬಂತು. ಎಲ್ಲರೂ ಮನೆಯಲ್ಲೇ ಇರುವಾಗ ಅವರ ಮನೆಯ ಲಿವಿಂಗ್‌ ರೂಮಲ್ಲಿ ಕುಳಿತು ನೋಡುವಂತಹ ಕಾರ್ಯಕ್ರಮವೇನಾದರೂ ರೂಪಿಸಬೇಕು ಎಂದುಕೊಂಡರು. ನಾಟಕ ಮಾಡೋಣ ಎಂದುಕೊಂಡರು, ಹಾಡು ಕಾರ್ಯಕ್ರಮ ಎಂದು ಪ್ಲಾನ್‌ ಮಾಡಿದರು. ಯಾವುದೂ ಸರಿ ಹೋಗಲಿಲ್ಲ. ಕಡೆಗೆ ಹೊಳೆದಿದ್ದೇ ವಿಡಿಯೋ ಬುಕ್‌. ಆಸಕ್ತಿಕರ ಪುಸ್ತಕವೊಂದನ್ನು ಹೊಸ ರೂಪದಲ್ಲಿ ನೀಡಬೇಕು ಎಂದುಕೊಂಡರು. ಆಗ ಹೊಳೆದಿದ್ದೇ ಈ ವಿಡಿಯೋ ಬುಕ್‌ ಐಡಿಯಾ.

ಮೈ ಲ್ಯಾಂಗ್‌ ಬುಕ್ಸ್‌- ಇದು ಚರಿತ್ರೆ ಸೃಷ್ಟಿಸೋ ಪ್ರಯತ್ನ! 

ಜೋಗಿಯವರ ಪುಸ್ತಕ ಆರಿಸಿಕೊಂಡರು. ತಮ್ಮ ಸರ್ಕಲ್ಲಿನಲ್ಲಿ ಈ ವಿಚಾರ ಹಂಚಿಕೊಂಡರು. ರಿಷಬ್‌ ಶೆಟ್ಟಿ, ವಸಿಷ್ಠ ಸಿಂಹ ಸೇರಿದಂತೆ 50 ಹೆಸರುಗಳು ಫೈನಲ್‌ ಆದವು. ಅವರೆಲ್ಲಾ ಮನೆಯಲ್ಲೇ ಕುಳಿತು ಐವತ್ತು ಅಧ್ಯಾಯಗಳನ್ನು ಓದಿ ಕಳುಹಿಸಿದರು. ಜೋಗಿಯವರು ಮುನ್ನುಡಿ ಓದಿದರು. ಒಂದು ವಿಡಿಯೋ ಪುಸ್ತಕ ರೆಡಿ ಆಯಿತು.

ಈ ವಿಡಿಯೋ ಬುಕ್‌ ಹೇಗಿದೆ, ಎಲ್ಲಿದೆ?

ಲೈಫ್‌ ಈಸ್‌ ಬ್ಯೂಟಿಫುಲ್‌ ಪುಸ್ತಕದ 50 ಅಧ್ಯಾಯಗಳನ್ನು 50 ಮಂದಿ ಓದಿದ್ದಾರೆ. ಟಿಎನ್‌ ಸೀತಾರಾಮ್‌, ಭಾವನಾ, ಸುಮನ್‌ ನಗರ್‌ಕರ್‌, ರಿಷಿ, ಮಂಡ್ಯ ರಮೇಶ್‌ ಹೀಗೆ ದೊಡ್ಡ ದೊಡ್ಡವರೇ ಓದಿದ್ದಾರೆ. ಅವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಎಡಿಟ್‌ ಮಾಡಿ ಚೆಂದ ಮಾಡಿದ್ದು ನಿರ್ದೇಶಕ ಕರಣ್‌ ಅನಂತ್‌. ಮನೆಯಲ್ಲೇ ಇದ್ದು ಇದೆಲ್ಲಾ ಸಾಧ್ಯವಾಗುವಂತೆ ಮಾಡಿದ್ದು ಪಿಡಿ ಸತೀಶ್ಚಂದ್ರ. ಈಗ 3 ಗಂಟೆ 40 ನಿಮಿಷಗಳ ಈ ವಿಡಿಯೋ www.youtube.com/pdschandra ಯೂಟ್ಯೂಬ್‌ ಚಾನಲ್ಲಿನಲ್ಲಿ ಲಭ್ಯವಿದೆ. ಯಾರು ಬೇಕಾದರೂ ನೋಡಬಹುದು. ಈಗಾಗಲೇ ಸುಮಾರು ನಾಲ್ಕೂವರೆ ಸಾವಿರ ಮಂದಿ ಈ ವಿಡಿಯೋ ನೋಡಿದ್ದಾರೆ. ಹಾಗಾಗಿ ಇದೊಂದು ಅಪರೂಪದ ದಾಖಲೆಯೇ ಸರಿ.

 

ಇನ್ನೂ ಅನೇಕ ವಿಡಿಯೋ ಬುಕ್‌ಗಳು ಬರಲಿವೆ

ಹೊಸ ರೂಪದಲ್ಲಿ ಪುಸ್ತಕವನ್ನು ಅರ್ಪಿಸಿರುವ ಸತೀಶ್ಚಂದ್ರ ಖುಷಿಯಾಗಿದ್ದಾರೆ. ಅವರ ಪ್ರಯತ್ನಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ‘ಪುಸ್ತಕವನ್ನು ಹೊಸ ರೂಪದಲ್ಲಿ ಓದುಗರಿಗೆ ತಲುಪಿಸುವ ಆಸೆ ಇತ್ತು. ಅದು ಈಗ ನೆರವೇರಿದೆ. ಈ ಪ್ರಯತ್ನ ಬೇರೆಲ್ಲೂ ನಡೆದ ಕುರಿತು ಮಾಹಿತಿ ಇಲ್ಲ. ನಮ್ಮ ಶ್ರಮಕ್ಕೆ ತಕ್ಕ ಮೆಚ್ಚುಗೆ ಕೂಡ ದೊರೆತಿದೆ. ಹಾಗಾಗಿ ಇನ್ನೂ ಒಂದಷ್ಟುಪುಸ್ತಕಗಳನ್ನು ವಿಡಿಯೋ ಪುಸ್ತಕ ಮಾಡುವ ಯತ್ನ ನಡೆಯುತ್ತಿದೆ’ ಎನ್ನುತ್ತಾರೆ.

ಪ್ರವಾಸ ಹೋಗದಿದ್ದರೇನಂತೆ ಮನೆಯಲ್ಲಿದ್ದೇ ಜಗತ್ತು ಸುತ್ತಿ ಬನ್ನಿ!

ಎರಡನೇ ಪ್ರಯತ್ನವಾಗಿ ಕೇಶವ ಮಳಗಿಯವರು ‘ಅಂಗದ ಧರೆ’ ಪುಸ್ತಕ ಸಿದ್ಧವಾಗುತ್ತಿದೆ. ಈ ಪುಸ್ತಕವನ್ನು ಪ್ರದೀಪ್‌ ಸಂಕಲನ ಮಾಡಿದ್ದಾರೆ. ಸಂತೋಷ್‌ ತುಮನೂರು ಸಂಗೀತ ನೀಡಿದ್ದಾರೆ. ಆಸಕ್ತಿ ಇರುವವರು ಸತೀಶ್ಚಂದ್ರ ಯೂಟ್ಯೂಬ್‌ ಫಾಲೋ ಮಾಡಿ.