ಪವಿತ್ರಾ ಜೊತೆಗಿನ ಮದ್ವೆ ಬಗ್ಗೆ ಮೌನ ಮುರಿದ ನರೇಶ್ ಪುತ್ರ: ಮಕ್ಕಳು ಹೀಗೂ ಇರ್ತಾರಾ ಅಂದ ಫ್ಯಾನ್ಸ್!
ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಸಂಬಂಧದ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ ನರೇಶ್ ಅವರ ಮೊದಲ ಪತ್ನಿಯ ಮಗ. ಮಕ್ಕಳು ಹೀಗೂ ಇರ್ತಾರಾ ಎಂದು ಜನ ಅಚ್ಚರಿಪಡುತ್ತಿದ್ದಾರೆ.
ಕಳೆದೊಂದು ವರ್ಷದಿಂದ ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಸಕತ್ ಸುದ್ದಿಯಲ್ಲಿದ್ದಾರೆ. ಈ ಮದುವೆ 44 ವರ್ಷದ ಪವಿತ್ರಾ ಅವರ ಮೂರನೇ ಮದುವೆಯಾಗಿದೆ, 58 ವರ್ಷ ವಯಸ್ಸಿನ ನರೇಶ್ ನಾಲ್ಕನೇ ಬಾರಿಗೆ ವಿವಾಹವಾಗಿದೆ. ನರೇಶ್ ಈಗಾಗಲೇ ಇಬ್ಬರಿಗೆ ಡಿವೋರ್ಸ್ ನೀಡಿ 3ನೇ ಮದುವೆ ಆಗಿರುವ ನಡುವೆಯೇ, 3ನೇ ಪತ್ನಿ ರಮ್ಯಾ ರಘುಪತಿಯಿಂದಲೂ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ನಡುವೆಯೇ ಇವರು ಮತ್ತೆ ಮದುವೆ ಚಿತ್ರದ ಮೂಲಕ ಹಲ್ಚಲ್ ಸೃಷ್ಟಿಸಿದ್ದರು. ಪವಿತ್ರಾ ಮತ್ತು ನರೇಶ್ ಹೋಟೆಲ್‌ನಲ್ಲಿ ಒಟ್ಟಿಗೆ ಇದ್ದಾಗ, ನರೇಶ್ ಅವರ ಮೂರನೇ ಹೆಂಡತಿ ಬಂದು ಮಾಧ್ಯಮಗಳೊಂದಿಗೆ ಜಗಳವಾಡಿದಾಗ, ಅವರ ಸಂಬಂಧವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿಯಾಗಿತ್ತು. ನಂತರ ಇಬ್ಬರೂ ಮದುವೆಯಾಗುವುದಾಗಿ ಹೇಳಿ, ಆಮಂತ್ರಣ ಪತ್ರಿಕೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ನಂತರ ಅದು ಮತ್ತೆ ಮದುವೆ ಚಿತ್ರದ ಶೂಟಿಂಗ್ ಎಂದು ಹೇಳಿದ್ದೆಲ್ಲಾ ಈಗ ಇತಿಹಾಸ.
ಆದರೆ ಚಿತ್ರದ ವಿಷಯವೂ ಸುಖಾಂತ್ಯವಾಗಲಿಲ್ಲ. ತಮ್ಮನ್ನೇ ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ತಯಾರು ಮಾಡಿದ್ದಾರೆ ಎಂದು ರಮ್ಯಾ ರಘುಪತಿ (Ramya Raghupathi) ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದರು. ಆದರೆ ಅಲ್ಲಿ ಅರ್ಜಿ ಮಾನ್ಯ ಆಗಿರಲಿಲ್ಲ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಅವರ ಮನವಿ ಮೇರೆಗೆ ಓಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್-ಪವಿತ್ರಾ ಅವರಿಗೆ ಹಿನ್ನೆಡೆಯಾಗಿದೆ. ಇನ್ನು ನರೇಶ್ ತಮ್ಮದೇ ಜೀವನದ ಘಟನೆಗಳನ್ನು ಸೇರಿಸಿ 'ಮಳ್ಳಿ ಪೆಳ್ಳಿ' (ಮತ್ತೆ ಮದುವೆ) ಸಿನಿಮಾ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿತ್ತು. ಆದರೆ ರಮ್ಯಾ ರಘುಪತಿಯಿಂದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ.
'ಮತ್ತೆ ಮದುವೆ' ಫೇಲ್: ಗನ್ ಬೇಕೆಂದು ಪೊಲೀಸರಲ್ಲಿ ಕೋರಿಕೊಂಡ ನಟ ನರೇಶ್
ಇದೀಗ ನರೇಶ್ ಅವರ ಮೊದಲ ಪತ್ನಿ ಮಗ ನವೀನ್ ತೆಲಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಅಪ್ಪ ಮತ್ತು ಪವಿತ್ರಾ ಅವರ ಸಂಬಂಧದ ಕುರಿತು ಮೌನ ಮುರಿದಿದ್ದಾರೆ. ನರೇಶ್- ಪವಿತ್ರಾ (Naresh-Pavitra) ಜೋಡಿ ಮಾತ್ರ ಹೀಗೆ ಮಾಡಿದ್ದಲ್ಲ. ಹಾಗೆ ಮಾಡಿದವರು ಅನೇಕರಿದ್ದಾರೆ. ಇದರಲ್ಲಿ ಯಾವುದೇ ಸಾಮಾಜಿಕ ಸಂದೇಶವಿಲ್ಲ. ಜೀವನದ ಕೊನೆಯವರೆಗೂ ಶಾಂತಿ, ನೆಮ್ಮದಿಯಿಂದ ಬಾಳುವುದೇ ಪ್ರತಿಯೊಬ್ಬರ ಗುರಿ. ನಮ್ಮ ಕುಟುಂಬದಲ್ಲಿ ಯಾರಿಗೆ ಏನೇ ಅನ್ನಿಸಿದರೂ ಅದನ್ನು ಮಾಡುತ್ತಾರೆ. ಯಾರ ಮೇಲೂ ಡಿಪೆಂಡ್ ಆಗೋದಿಲ್ಲ. ಮೊದಲಿನಿಂದ ನಮ್ಮ ಕುಟುಂಬ ಹೀಗೆ. ಪವಿತ್ರಾ ಲೋಕೇಶ್ ಕೂಡ ನನಗೆ ತುಂಬಾ ದಿನಗಳಿಂದ ಗೊತ್ತು. ಅವರು ಒಳ್ಳೆಯವರು, ನಾನು ಅವರನ್ನು ಪವಿತ್ರಾ ಅವರೇ ಎಂದು ಕರೆಯುತ್ತೇನೆ. ಏನೋ ಒಂದು ಸಮಯದಲ್ಲಿ ಕೆಲ ತಪ್ಪಾಗಳಾಗಿದೆ. ನಮ್ಮ ಅಪ್ಪ ಕೂಡ ತಪ್ಪು ಮಾಡಿದ್ದಾರೆ. ಅದೇನು ದೊಡ್ಡ ವಿಷಯವಲ್ಲ ಎಂದಿದ್ದಾರೆ.
'ಯಾರಾದರೂ ಏನು ಯೋಚಿಸುತ್ತಾರೆ ಎಂದು ನಾವು ಹೆದರುತ್ತಿದ್ದರೆ ನಾವು ಸಂತೋಷವಾಗಿರಲು ಸಾಧ್ಯವಿಲ್ಲ. ನನ್ನ ಅಜ್ಜಿ ನಮಗೆ ಇದನ್ನು ಮಾಡು ಅಥವಾ ಹೀಗೆ ಮಾಡು ಎಂದು ಎಂದಿಗೂ ಹೇಳಲಿಲ್ಲ. ನಮಗೆ ಇಷ್ಟ ಬಂದಂತೆ ಬದುಕಲು ಸ್ವಾತಂತ್ರ್ಯ ನೀಡಲಾಗಿದೆ. ಅದನ್ನೇ ನನ್ನ ತಂದೆ ಅನುಸರಿಸುತ್ತಾರೆ. ಯಾರ ಬಗ್ಗೆಯೂ ನಾನು ತಪ್ಪಾಗಿ ಭಾವಿಸುವುದಿಲ್ಲ. ಜನ ನಮ್ಮ ಫ್ಯಾಮಿಲಿ ಬಗ್ಗೆ ಏನು ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಇಷ್ಟವಾಗುವಂತೆ ನಾವು ಬದುಕಲು ಸಾಧ್ಯ ಇಲ್ಲ ಅಲ್ಲವೇ? ಅಪ್ಪ ಯಾವುದೇ ನಿರ್ಧಾರ ಕೈಗೊಂಡರು ನಾನು ಗೌರವಿಸುತ್ತೇನೆ ಎಂದಿದ್ದಾರೆ ನವೀನ್. ನಾನೊಬ್ಬ ಮಗನಾಗಿ ಅವರು ಸಂತೋಷವಾಗಿರಲಿ ಎಂದು ಬಯಸುತ್ತೇನೆ. ಏನು ಮಾಡಬೇಕೆಂದು ತಂದೆಗೆ ತಿಳಿದಿದೆ, ನಾವು ಇಷ್ಟಪಡುವದನ್ನು ಮಾಡುವುದು ಸರಿಯಾದ ಕೆಲಸ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಸಂದರ್ಶನ ಹಲವರ ಅಚ್ಚರಿಗೆ ಕಾರಣವಾಗಿದ್ದು, ಮಕ್ಕಳು ಹೀಗೂ ಇರ್ತಾರಾ ಎಂದು ಪ್ರಶ್ನಿಸಿದ್ದಾರೆ.
Phd ಪ್ರವೇಶ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್!