10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ!
* ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರ
* 10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ
* ನಮ್ಮ ಜೀವ ತೆಗೆದುಕೋ.. ಪುನೀತ್ ಉಳಿಸು ಎಂದು ಆಕ್ರಂದನ
* ಶನಿವಾರ ರಾತ್ರಿಯಾದರೂ ಕರಗದ ಜನಸ್ತೋಮ
* ತೆಲುಗು, ತಮಿಳು ಚಿತ್ರನಟರು ಸೇರಿ ಸಾವಿರಾರು ಗಣ್ಯರಿಂದ ಕೊನೆಯ ಬಾರಿಗೆ ಅಪ್ಪು ಮುಖದರ್ಶನ
ಬೆಂಗಳೂರು(ಅ.21): ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿಯನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ನೆಚ್ಚಿನ ತಾರೆ ಪುನೀತ್ ರಾಜಕುಮಾರ್ (Puneeth Rajkumar) ಅವರ ಅಂತಿಮ ದರುಶನಕ್ಕಾಗಿ ಕರುನಾಡಿನ ಮೂಲೆ ಮೂಲೆಯಿಂದ ಜನಸ್ತೋಮವೆದ್ದು ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ (Kaneerava Stadium) ಬಂದಿತ್ತು. ರಾತ್ರಿ ವೇಳೆಗೆ ಆ ಸಂಖ್ಯೆ 10 ಲಕ್ಷ ಮೀರಿತ್ತು!
ಅಲ್ಲಿ, ‘ನನ್ನ ಪ್ರಾಣ ಹೋಗಲಿ, ಪುನೀತ್ ಪ್ರಾಣ ಉಳಿಯಲಿ’ ಎಂದು ಎದೆ ಬಡಿದುಕೊಂಡು ದೇವರಿಗೆ ಹಿಡಿಶಾಪ ಹಾಕುತ್ತಿದ್ದ ಕಟ್ಟಾಅಭಿಮಾನಿಗಳಿದ್ದರು.. ಎರಡು ಕಾಲಿಲ್ಲದಿದ್ದರೂ ತೆವಳಿಕೊಂಡೇ ನೂಕು ನುಗ್ಗಲು ಭೇದಿಸಿ ಬಂದಿದ್ದ ಅಂಗವಿಕಲರಿದ್ದರು.. ‘ನಮ್ಮ ಮಕ್ಕಳು ಅಪ್ಪು ಅಭಿಮಾನಿಗಳು. ಕಡೆಯ ಬಾರಿ ನೋಡಿ ಬಿಡುತ್ತಾರೆ, ಜಾಗ ಬಿಡ್ರಪ್ಪ’ ಎಂದು ಪುಟ್ಟಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರಿದ್ದರು, ವೃದ್ಧರಿದ್ದರು, ಲವ್ ಯೂ ಅಪ್ಪು ಎನ್ನುತ್ತಿದ್ದ ಹೆಂಗಳೆಯರಿದ್ದರು. ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ ಶನಿವಾರ ರಾತ್ರಿ ವೇಳೆಗೆ 10 ಲಕ್ಷ ಮಂದಿ ಕಂಠೀರವದ ಹಾದಿ ಸವೆಸಿದ್ದರು.
ಮತ್ತೊಮ್ಮೆ ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ!
ಎತ್ತ ನೋಡಿದರೂ ಅಪ್ಪೂ.. ಅಪ್ಪೂ..:
ಕ್ರೀಡಾಂಗಣದ ಎತ್ತ ನೋಡಿದರೂ ಅಪ್ಪೂ, ಅಪ್ಪೂ ಎಂಬ ಆಕ್ರಂದನ. ‘ಒಮ್ಮೆ ಎದ್ದು ಬಾ ಅಪ್ಪು ಅಣ್ಣ. ದೇವರೇ ನೀನೆಷ್ಟುಕ್ರೂರಿ, ನಿನಗೆ ಸ್ವಲ್ಪವೂ ಕರುಣೆ, ದಯೆ ಅನ್ನೋದೇ ಇಲ್ವಾ? ಭಗವಂತ ನಮ್ಮ ಜೀವ ತೆಗೆದುಕೋ ನಮ್ಮ ಪುನೀತಣ್ಣನನ್ನು ರಕ್ಷಿಸಿಕೊಡು’ ಎಂದು ಕಣ್ಣೀರು ಸುರಿಸುತ್ತಲೇ ಅಂತಿಮ ದರ್ಶನ ಪಡೆದರು.
ಅನಿರೀಕ್ಷಿತ ಹೃದಯಾಘಾತದಿಂದ ಇಹಲೋಕ ತೊರೆದ ಡಾ.ರಾಜ್‌ಕುಮಾರ್ ಅವರ ಕೊನೆಯ ಕುಡಿ ಪುನೀತ್ ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಸರ್ಕಾರ ಶುಕ್ರವಾರ ಸಂಜೆಯಿಂದಲೇ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿತ್ತು. ಆ ಕ್ಷಣದಿಂದಲೇ ಹರಿದು ಬರಲಾರಂಭಿಸಿದ ಅಭಿಮಾನಿ ಸಾಗರ ಸಂಖ್ಯೆ ಶನಿವಾರ ರಾತ್ರಿವರೆಗೂ ಕಡಿಮೆಯಾಗಿರಲಿಲ್ಲ. ಶನಿವಾರವಂತೂ ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಬಂದಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಯಿತು.
ಅಂತಿಮ ದರ್ಶನಕ್ಕೆ ಬಂದಿದ್ದ ಯುವಕನೊಬ್ಬ ಎದೆ ಬಡಿದುಕೊಂಡು ‘ಓ ದೇವರೇ ಈಗಲೂ ನನ್ನ ಪ್ರಾಣ ತೆಗೆದುಕೊ, ನನ್ನ ಅಪ್ಪು ಅಣ್ಣನನ್ನು ಕರುನಾಡಿಗೆ ಮರಳಿ ಕೊಡು’ ಎಂದು ಗೋಗರೆದಿದ್ದು ಆ ಭಗವಂತನಿಗೆ ಕೇಳಿಸಲೇ ಇಲ್ಲ. ವೃದ್ಧೆಯೊಬ್ಬರು, ‘ಆ ದೇವರಿಗೆ ಕಣ್ಣಿಲ್ಲ. ವಯಸ್ಸಾದ ನನ್ನನ್ನೇ ಕರೆದುಕೊಂಡು ಪುನೀತ್ ಅವರನ್ನು ಆ ದೇವರು ರಕ್ಷಿಸಬಾರದಿತ್ತಾ?’ ಎಂದು ಗೋಗರೆದಿದ್ದು ಕಂಡುಬಂತು.
ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ
ಎರಡೂ ಕಾಲಿನ ಅಂಗವೈಕಲ್ಯತೆಯಿಂದ ತೆವಳಿಕೊಂಡೇ ದರ್ಶನಕ್ಕೆ ಮಂಡ್ಯದಿಂದ ಬಂದಿದ್ದ ಯುವಕನೊಬ್ಬ ಕಣ್ಣೀರು ಸುರಿಸುತ್ತಲೇ, ‘ನನ್ನ ಈ ಜೀವ ತೆಗೆದುಕೊಂಡು ಅಪ್ಪುವನ್ನು ಬದುಕಿಸು ದೇವರೇ..’ ಎಂದು ಕೇಳುತ್ತಿದ್ದ ದೃಶ್ಯ ಎಲ್ಲರ ಮನಕರಗಿಸಿತು.
ಎಷ್ಟುಬೇಗ ಪುನೀತ್ ರಾಜ್‌ಕುಮಾರ್ ಅವರ ಮುಖ ನೋಡುತ್ತೇವೋ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತೇವೋ ಎಂಬ ಧಾವಂತಲ್ಲೇ ಗಂಟೆಗಳ ಕಾಲ ಸರತಿಯಲ್ಲಿ ನಿಂತು ನೆಚ್ಚಿನ ನಟನಿಗೆ ಕಣ್ಣೀರ ವಿಧಾಯ ಹೇಳಿದರು. ಬಹುತೇಕ ಮಂದಿ ಮೂಕವಿಸ್ಮಿತರಾಗಿ, ಕಣ್ಣೀರು ಸುರಿಸುತ್ತಾ ಬಂದು ಅಂತಿಮ ದರ್ಶನ ಪಡೆದರು.
10 ಲಕ್ಷ ಮಂದಿ ಅಂತಿಮ ದರ್ಶನ:
ಶನಿವಾರ ಬೆಳಗ್ಗೆ 10 ಗಂಟೆ ವೇಳೆಗೇ ಸುಮಾರು 6 ಲಕ್ಷ ಮಂದಿ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದಾಗಿ ಗೃಹ ಇಲಾಖೆ ಅಂದಾಜಿಸಿದೆ ಎನ್ನಲಾಗಿದೆ. ಅಲ್ಲದೆ, ಶನಿವಾರ ರಾತ್ರಿ ವೇಳೆಗೆ ಈ ಸಂಖ್ಯೆ 10 ಲಕ್ಷ ದಾಟಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಭಿಮಾನಿಗಳನ್ನು ಬಹಳ ಎಚ್ಚರಿಕೆಯಿಂದಲೇ ನಿಭಾಯಿಸುವಲ್ಲಿ ಯಶಸ್ವಿಯಾದರು.
ಪುನೀತ್ ಹಿರಿಯ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರರಾದ ವಿನಯ್ ರಾಜ್‌ಕುಮಾರ್, ಯುವರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ವರ್ಗ ಇಡೀ ರಾತ್ರಿ, ದಿನವಿಡೀ ಪಾರ್ಥಿವ ಶರೀರದ ಪಕ್ಕದಲ್ಲೇ ಕೂತು ಕ್ಷಣಕ್ಷಣಕ್ಕೂ ಉಮ್ಮಳಿಸುತ್ತಿದ್ದ ದುಃಖದ ನಡುವೆಯೇ ಹರಿದು ಬಂದ ಅಭಿಮಾನಿಗಳಿಗೆ ಪುನೀತ್ ಅವರ ಅಂತಿಮ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿತು. ಈ ವೇಳೆ ಶಾಸಕ ರಾಜೂಗೌಡ ಹಾಗೂ ಚಿತ್ರರಂಗದ ಹಲವರು ಸಾಥ್ ನೀಡಿದರು.