Asianet Suvarna News Asianet Suvarna News

ಮಿನಿಸ್ಟರ್ ಮಾಧುಸ್ವಾಮಿ, ಹಾಗಂದ್ರೆ ಖಂಡಿತವಾದಿ, ಲೋಕ ವಿರೋಧಿ!

ರೈತ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಕರ್ನಾಟಕ ಸಚಿವ ಮಾಧಸ್ವಾಮಿಯವರು ಸದ್ಯದಲ್ಲಿ ಸುದ್ದಿಯಲ್ಲಿದ್ದಾರೆ. ಕರ್ನಾಟಕ ರಾಜಕೀಯದ ಹಾಟ್ ಟಾಪಿಕ್ ಇದು. ಮುಂದಿನ ವಿಸ್ತರಣೆ ವೇಳೆ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಸ್ವ ಪಕ್ಷೀಯರಿಂದಲೇ ಒತ್ತಡ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರ ನಿರ್ದೇಶಕ ಲಿಂಗದೇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು ಹೀಗೆ...
 

Minister Madhuswamy language and his personality a note by Kannada director BSL
Author
Bangalore, First Published May 23, 2020, 4:07 PM IST

-ಬಿ.ಎಸ್. ಲಿಂಗದೇವರು

Great leaders are genuine and authentic. That's why we follow them: 

ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖವಾಗಿ ಐದು ಅಂಶಗಳು ಪಾತ್ರ ವಹಿಸುತ್ತವೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಶಿವರಾಮ ಕಾರಂತರು ಹೇಳಿದ್ದಾರೆ.

1. ಬಹಿರ್ಮುಖತ್ವ ಅಂದರೆ ಸಾಮಾಜಿಕವಾಗಿ ಹೆಚ್ಚು ಹೆಚ್ಚು ಬೆರೆಯುವಿಕೆ, ಅವಿರತ ಚಟುವಟಿಕೆಯೊಂದಿಗೆ ಅಧಿಕವಾದ ಹೊಂದಾಣಿಕೆ.

2.ಚಂಚಲತ್ವ ಅಂದರೆ ಭಾವೋದ್ರೇಕ ಭಾವನೆಗಳಲ್ಲಿ ಸ್ಥಿರತೆ, 

3. ಮುಕ್ತತೆ ಅಂದರೆ ಅರಿಯುವ ಕುತೂಹಲದ ಮನಸ್ಸು ತೆರೆದುಕೊಳ್ಳುವುದು.

4. ಒಪ್ಪಿಕೊಳ್ಳುವಿಕೆ ಅಂದರೆ ಒಲ್ಲದ ಮನಸ್ಸಿನ ತ್ಯಾಗ, ನಂಬಿಕೆಗಳೊಂದಿಗಿನ ಹೊಂದಾಣಿಕೆ.

5. ಆತ್ಮಸಾಕ್ಷಿ ಅಂದರೆ ಸ್ವಯಂ ಶಿಸ್ತು, ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವುದು, ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳುವುದು. ಎಂಥ ಸಮಯದಲ್ಲೂ ತಾನು ಹೊಂದಾಣಿಕೆ ಮಾಡಿಕೊಳ್ಳದೆ ನಂಬಿದ ಸಿದ್ದಾಂತಗಳು, ನಿಷ್ಠೆಗಳಿಗೆ ಜೋತು ಬಿದ್ದು, ಕಾಯಕ ಕರ್ಮಾಚಾರಿಯಾಗಿರುವುದು. 

ಕರ್ನಾಟಕ ಸಚಿವ ಮಾಧುಸ್ವಾಮಿಯವರು ಈ ಐದೂ ವ್ಯಕ್ತಿತ್ವಗಳ ಸಾಕಾರ ಪಡೆದವರು ಎಂದರೆ ಅವರನ್ನು ಹತ್ತಿರದಿಂದ ಬಲ್ಲವರು ಯಾರೂ ಅಲ್ಲ ಎನ್ನಲಾರರು. ರಾಜಕಾರಣಿಯಾಗಿ, ಮಂತ್ರಿಯಾಗಿ ಅವರು ಬಹಿರ್ಮುಖತ್ವ ವ್ಯಕ್ತಿತ್ವ ಹೊಂದಿದ್ದಾರೆ ಮತ್ತು ಅದು ಅನಿವಾರ್ಯ ಎಂದರೂ ತಪ್ಪಾಗಲಾರದು. 

Minister Madhuswamy language and his personality a note by Kannada director BSL

ಸಾಮಾನ್ಯವಾಗಿ ಚಂಚಲತ್ವ ಎನ್ನುವುದು ಮಾನವ ಸಹಜ ಗುಣ, ಈ ಗುಣವು ಎಲ್ಲರಲ್ಲೂ ಸಹ ಇದ್ದೇ ಇರುತ್ತದೆ. ಕಾಲ, ಸಂದರ್ಭ ಹಾಗೂ ಕೆಲವು ಸ್ಥಳಗಳಲ್ಲಿ ಈ ಚಂಚಲತ್ವ ನಮಗೆ ಅನಿವಾರ್ಯವೇ ಆಗುತ್ತದೆ. ಮಾಧುಸ್ವಾಮಿಯವರು ಅತ್ಯಂತ ಮುಕ್ತತೆಯ ಮನಸ್ಸನ್ನು ಹೊಂದಿರುವವರು. ಅವರ ಇಷ್ಟು ಕಾಲದ ರಾಜಕಾರಣ ಅಥವಾ ಸಾಮಾಜಿಕ ಜೀವನದಲ್ಲಿ ಅರಿಯುವ ಕಲಿಯುವ ಕುತೂಹಲದ ನಡೆಯನ್ನು ಅವರು ನಡೆದುಕೊಂಡು ಬಂದಿದ್ದಾರೆ. ತ್ಯಾಗ ನಂಬಿಕೆ ಹೊಂದಾಣಿಕೆಯ ಮೂಲಕ ಅವರ ಒಪ್ಪಿಕೊಳ್ಳುವ ಗುಣವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಇನ್ನು ಆತ್ಮಸಾಕ್ಷಿಗನುಗುಣವಾಗಿಯೂ ಮತ್ತು ಸ್ವಯಂಶಿಸ್ತಿನ ಪಾಠದ ವಿಚಾರಕ್ಕೆ ಬಂದರೆ ಮಾಧುಸ್ವಾಮಿಯವರಿಗೆ ಮಾಧುಸ್ವಾಮಿಯವರೇ ಸರಿ ಸಾಟಿ.

ಅತೀ ವಿನಯ ತೋರುವವನ ಒಳ ಸಂಚು:
ಅತಿ ವಿನಯಂ ಧೂರ್ತ ಲಕ್ಷಣಂ ಎಂಬ ಮಾತಿದೆ. ಅತಿ ವಿನಯವನ್ನು ಪ್ರದರ್ಶಿಸುವ ಯಾವನೇ ಆಗಿರಲಿ ಅವನೊಳಗೆ ಏನೋ ಒಂದು ಒಳ ಸಂಚು ಇದೆ ಎಂದು ಭಾವಿಸುತ್ತಾರೆ. ಮೇಲಾಗಿ ಇಂಥ ಅತಿವಿನಯ ಎಲ್ಲಾ ಕಾಲದಲ್ಲೂ ಒಬ್ಬ ವ್ಯಕ್ತಿಯು ತೋರುತ್ತಾನೆ ಎಂದರೆ ಆತನನ್ನು ಧೂರ್ತನೆಂದೇ ಭಾವಿಸಬಹುದು. ಅಂದರೆ ಒಬ್ಬ ನಿಷ್ಠುರ ವ್ಯಕ್ತಿ, ಶಿಸ್ತು ಬದ್ಧ ವ್ಯಕ್ತಿ ಮತ್ತು ಸಾಮಾಜಿಕ ಕಳಕಳಿ ತೋರುವ ವ್ಯಕ್ತಿಗೆ ಅನೇಕ ಬಾರಿ ಅತಿ ವಿನಯವನ್ನು ಪ್ರದರ್ಶಿಸಲು ಸಾಧ್ಯವಾಗದು. ವಿನಯ ಇರಬಾರದು ಅಂತ ಇದರ ಅರ್ಥ ಅಲ್ಲ. ಎಲ್ಲಾ ಕಾಲದಲ್ಲೂ ಎಲ್ಲರೂ ಅತಿ ವಿನಯಿಗಳಾಗಿ ಇರಲು ಸಾಧ್ಯವೇ ಇಲ್ಲ ಎಂದು ಭಾವಿಸಲೇಬೇಕು.
ಮಾಧುಸ್ವಾಮಿಯವರು ಯಾವತ್ತೂ ಅತಿ ವಿನಯಶೀಲರಲ್ಲ. ವಸ್ತು ನಿಷ್ಠವಾಗಿ ಪ್ರಾಮಾಣಿಕವಾಗಿ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ ಮತ್ತು ತಮ್ಮ ನೇರ ನುಡಿಗಳಿಂದಲೇ ಈ ರಾಜ್ಯದ ಮಂತ್ರಿ ಸ್ಥಾನದ ವರೆಗೂ ಬಂದಿದ್ದಾರೆ ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ರಾಜಕಾರಣದಲ್ಲಿ ಅತ್ಯಂತ ವಿನಯದಿಂದ ನಡೆದು ಕೊಂಡರೆ ಮಾತ್ರ ಸಲ್ಲುವುದು ಇಲ್ಲವಾದರೆ ಭವಿಷ್ಯ ಇಲ್ಲ ಎನ್ನುತ್ತಾರೆ , ಅದನ್ನೂ ಇವರು ಸುಳ್ಳು ಮಾಡಿದ್ದಾರೆ.

"

ಮಾಧು ಸ್ವಾಮಿಯವರ ತಾಕತ್ತು , ಸಾಮಾರ್ಥ್ಯ ಮತ್ತು ದೌರ್ಬಲ್ಯ ಏನು ಎಂದರೆ ಅವರು ಯಾವಾಗಲೂ ನೇರವಾದಿ, ದಿಟ್ಟತನದಲ್ಲಿ ನಂಬಿಕೆ ಇಟ್ಟವರು, ಈ ನೇರ ಹಾಗೂ ದಿಟ್ಟತನವನ್ನು ನಿರಂತರವಾಗಿ ಜೀವನದಲ್ಲಿ ರೂಢಿಸಿಕೊಂಡವರು. ಅವರ ಮಾತುಗಳು ಯಾವಾಗಲೂ ಹರಿತವಾಗಿರುತ್ತವೆ, ಕೆಲವು ಬಾರಿ ಅವರ ಮಾತುಗಳು ನಮಗೆ ಆ ಕ್ಷಣಕ್ಕೆ ನಮ್ಮನ್ನು ಘಾಸಿಗೊಳಿಸುತ್ತವೆಯಾದರೂ ಸಹ ಅವರು ಎಂದಿಗೂ ಕಪಟ, ವಂಚನೆಗಳೊಡಗೂಡಿದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿಲ್ಲ. ಮೊದಲಿನಿಂದಲೂ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮತ್ತು ನಿರಂತರ ಜನಪರ ಚಿಂತನೆಗಳು ಮತ್ತು ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ವಿನಃ ಯಾವತ್ತೂ ಸೋಮಾರಿತನ ತೋರಿದವರಲ್ಲ. ಇದಕ್ಕೆ ಬಹಳಷ್ಟು ಉದಾಹರಣೆ ಇವೆ. 

ಕಾರಂತರು ಕಪಟಿಯಲ್ಲ...
ಶಿವರಾಮ ಕಾರಂತರನ್ನು ಬಲ್ಲವರು ಅವರನ್ನು ಯಾವತ್ತೂ ಸಿಡುಕ ಅಂತ ಭಾವಿಸರಲೇ ಇಲ್ಲ. ಕಾರಂತರು ಯಾವತ್ತೂ ಕಪಟಿಯಾಗಿರಲಿಲ್ಲ. ಯಕ್ಷಗಾನ ನಾಟ್ಯ ಕಲಿಸಲು ನಿಂತರೆ ಎದುರಿಗಿರುವ ಎಂಥಾ ಕಲಾವಿದನಿಗೂ ಅವರು ಬಿಡುತ್ತಿರಲಿಲ್ಲ. ಕೈ ಏರಿಸಿಕೊಂಡೆಯೇ ಹೋಗುತ್ತಿದ್ದರು. ಆದರೆ ಯಾರೊಬ್ಬರೂ ಅವರ ಶ್ರದ್ಧೆ, ನಿಷ್ಠೆ ಮತ್ತು ಆತ್ಮಸಾಕ್ಷಿಯ ನಿಲುವನ್ನು ಖಂಡಿಸಲಿಲ್ಲ ಹಾಗೂ ಖಂಡಿಸಲು ಸಾಧ್ಯವೂ ಆಗಲಿಲ್ಲ. ಕೆಲವು ಕಾರಂತರ ಅಭಿಮಾನಿಗಳು ಕಾರಂತರಿಂದ ಬೈಸಿಕೊಳ್ಳುವುದೇ ಶ್ರೇಷ್ಠ ಎಂದು ನಂಬಿದ್ದರು. ಕಾರಂತರ ಬಗ್ಗೆ ಕರಾವಳಿಯಲ್ಲಿ ನೂರಾರು ಇಂಥ ಉದಾಹರಣೆಗಳಿವೆ. ಕಾರಂತರು ಯಾರನ್ನೋ ಮೆಚ್ಚಿಸಲು ತನ್ನ ವ್ಯಕ್ತಿತ್ವದಲ್ಲಿ ಎಂದೂ ರಾಜಿ ಮಾಡಿಕೊಳ್ಳಲೇ ಇಲ್ಲ. ಶ್ರೇಷ್ಠ ವ್ಯಕ್ತಿಗಳು ಎಂದಿಗೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. 

ಕರ್ನಾಟಕ ಕಂಡಂತಹ ಒಬ್ಬ ಶ್ರೇಷ್ಠ ದಲಿತ ನಾಯಕರಾದ ಬಸವಲಿಂಗಪ್ಪ ಅವರು ಕರ್ನಾಟಕ ಕಂಡ ಅತ್ಯಂತ ನಿಷ್ಠುರ ರಾಜಕಾರಣಿ. ಅವರಲ್ಲಿಯ ಸಾಮಾಜಿಕವಾದ, ನ್ಯಾಯಕ್ಕಾಗಿ ಮಾಡಿದ ಹೋರಾಟವು ಅವರಲ್ಲಿನ ಧೀಮಂತ ನಾಯಕ ನಾಯಕತ್ವವನ್ನು ಓರೆಗೆ ಹಚ್ಚಿದ್ದವು. ಒಮ್ಮೆ ಮಂಗಳೂರಿನಲ್ಲಿನ ಸಭೆಯೊಂದರಲ್ಲಿ ಶಾಸಕರೊಬ್ಬರಿಗೆ ತಿಕ ಮುಚ್ಕೊಂಡು ಕೂತ್ಕೋ ಎಂದು ಹೇಳಿದ್ದರು. ಆದರೆ ಅದು ವಿವಾದವಾಗಲಿಲ್ಲ. ಬಸವಲಿಂಗಪ್ಪ ಅವರು ಮಾಡಿದ ಕೆಲಸಗಳ ಮುಂದೆ ಈ ಮಾತು ಅವರ ಮುಂದಿನ ಗುರಿಯ ಶ್ರೇಷ್ಠತೆಯ ಕುರುಹಾಗಿಯೇ ಇದ್ದವು. 

ಆ ದಿನಗಳನ್ನು ನೆನಪಿಸಿದ "ಈ ದಿನ" ದ ಪಾದರಾಯನಪುರದ ಘಟನೆ

ಆಯಾ ಪ್ರದೇಶಕ್ಕೆ ಅನುಗುಣವಾಗಿ ಕೆಲವು ಪದಗಳು ರೂಢಿಯಲ್ಲಿದೆ. ಸಾಮಾನ್ಯವಾಗಿ ತನಗಿಂತ ಕಿರಿಯರ ಜೊತೆ ಸಂವಾದ ಆಗುವಾಗ ಇವನ್ ಅವ್ನ್ , ಬೋಸುಡಿಮಗನೆ ಎಂಬ ಮಾತುಗಳು ಉತ್ತರ ಕರ್ನಾಟಕದಲ್ಲಿ ಸುಲಭವಾಗಿ ಬಳಸುತ್ತಾರೆ . ಎಷ್ಟರಮಟ್ಟಿಗೆ ಎಂದರೆ ಒಬ್ಬ ಸ್ಟಾರ್ ನಟರೊಬ್ಬರ ಸಿನಿಮಾ ನೋಡ್ಕೊಂಡು ಆಚೆ ಬಂದು ಆ ಸೂಳೆಮಗ ಎಂತಾ ಆಕ್ಟಿಂಗ್ ಮಾಡವ್ನೆ ಲೇ . ಈ ರೀತಿಯ ಭಾಷೆಯನ್ನ ನಾವು ಕರಾವಳಿ ಪ್ರದೇಶದಲ್ಲಿ ನಿರೀಕ್ಷೆ ಮಾಡಲು ಆಗಲ್ಲ ಅಲ್ಲಿ ತುಂಬಾ ಪರಿಚಯದವರನ್ನೂ ಏಕವಚನದಲ್ಲಿ ಕರೆಯಲು ಸಾಧ್ಯವಿಲ್ಲ. ಮೊನ್ನೆ ಕರಾವಳಿಯ ಸ್ನೇಹಿತರೊಬ್ಬರು ಹೇಳುತ್ತಿದ್ದರು. ನಮ್ಮ ಊರಲ್ಲಿ ಸಾರ್ವಜನಿಕವಾಗಿ ಯಾರೂ ಯಾರನ್ನೂ ಏಕವಚನದಲ್ಲಿ ಸಂಬೋಧಿಸುವುದಿಲ್ಲ. ಎಷ್ಟೇ ಸ್ನೇಹಿತರಾದರೂ ಭಾಷಣಕ್ಕೆ ಮೈಕ್ ಮುಂದೆ ನಿಂತಾಗಲಾದರೂ ಬಹುವಚನದಲ್ಲೇ ಸಂಬೋಧಿಸುತ್ತಾರೆ ಎಂದು.

ಮಾಜಿ ಪ್ರಧಾನಿಯಿಂದಲೂ ಅವಾಚ್ಯ ಪದ ಬಳಕೆ..
ದೇವೇಗೌಡರು ಯಡಿಯೂರಪ್ಪ ನವರಿಗೆ ಬಾಸ್ಠರ್ಡ ಎಂಬ ಪದ ಬಳಕೆ ಮಾಡಿದ್ದು ನಮ್ಮಲ್ಲಿ ಇನ್ನೂ ಹಸಿರಾಗಿದೆ. ಮಾನ್ಯ ಸಿದ್ದರಾಮಯ್ಯನವರು ದೇಶದ ಪ್ರಧಾನಿಯವರನ್ನು FOOL ಎಂದು ಕರೆದಿದ್ದರು !, ಮತ್ತೊಮ್ಮೆ ಸಿದ್ಧರಾಮಯ್ಯ ಅವರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರಾವಳಿಗೆ ಹೋಗಿದ್ದಾಗ ದಲಿತ ಶಾಸಕರನ್ನು ಉದ್ದೇಶಿಸಿ ಏನಯ್ಯಾ ಎಮ್ಮೆಲ್ಲೆ ಸ್ವಲ್ಪ ಎದ್ದು ನಿಂತುಕೋ ನೋಡೋಣಾ ಅಂದರು. ಆಮೇಲೆ ಏಯ್ ಎಮ್ಮೆಲ್ಲೇ, ನಾನು ಈಗ ಭಾಷಣದಲ್ಲಿ ಹೇಳಿದ ವಿಚಾರಗಳನ್ನು ನೀನು ಪ್ರಚಾರ ಮಾಡುತ್ತೀಯಾ ತಾನೇ ಎಂದರು. ಸಿದ್ಧರಾಮಯ್ಯನವರ ಭಾಷಣ ಕೇಳಿದ ಕರಾವಳಿಯ ಜನ ಅವಕ್ಕಾದರು. ಶಾಸಕರೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುವುದೇ ! ಅದೂ ಸಾರ್ವಜನಿಕವಾಗಿ ? ಎಂದು ಗುಸುಗುಸು ಮಾತನಾಡಿದರು. ಆದರೆ ಯಾರೊಬ್ಬರೂ ಅದನ್ನು ವಿವಾದ ಮಾಡಲಿಲ್ಲ. ಪಾಪ ಅವರಿಗೆ ಈ ಊರಿನ ಶಿಷ್ಟಾಚಾರ ಗೊತ್ತಿಲ್ಲಾಂತ ಕಾಣುತ್ತೆ ಎಂದು ಸುಮ್ಮನಾದರು. ಕೆ ಎಸ್ ಈಶ್ವರಪ್ಪನವರು , ಕುಮಾರಸ್ವಾಮಿಗಳು ಹೀಗೆ ಹಲವಾರು ರಾಜಕಾರಣಿಗಳು ಅನೇಕ ಸಂದರ್ಭಗಳಲ್ಲಿ ಕೆಟ್ಟ ಪದಗಳ ಪ್ರಯೋಗ ಮಾಡಿದ್ದಾರೆ. ಅನೇಕ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಕಿರಿಯ ಅಧಿಕಾರಿಗಳಿಗೆ ಬಳಸುವ ಪದಗಳ ಪರಿಚಯ ನಾ ಮತ್ತೆ ಇಲ್ಲಿ ಹೇಳಬೇಕಾಗಿಲ್ಲ ! ವಿಶೇಷವಾಗಿ ಪೋಲಿಸ್ ಇಲಾಖೆಯ ಭಾಷೆ ಪ್ರಯೋಗ ನಾವು ಕೇಳಿಯೇ ಆನಂದಿಸಬಹುದು.

ಒಮ್ಮೆ ಮಾಯಾವತಿಯವರು ಸಮಾಜವಾದಿ ಪಕ್ಷದ ಕಾರ್ಯ ಕರ್ತರ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಾನಿದ್ದು ಮನೆಯ ಬಾಗಿಲು ಹಾಕಿಕೊಂಡು ಬಲಾತ್ಕಾರ ಮಾಡುತ್ತಾರೆ ಎಂಬ ಭಯದಿಂದ ನಾನು ಮನೆಯ ಬಾಗಿಲು ಹಾಕಿಕೊಂಡಿದ್ದು ಎಂದಾಗ ಉತ್ತರ ಪ್ರದೇಶದ ಶಾಸಕರೊಬ್ಬರು ಮನೆಯ ಬಾಗಿಲು ಹಾಕಿಕೊಂಡದ್ದನ್ನು ಹಿಜಡಗಳಿಗಿಂತ ಕೀಳುಮಟ್ಟದ್ದು ಎಂದು ಹೇಳಿಕೆ ನೀಡಿದ್ದರು ನಂತರ ಅವರನ್ನು ನೋಡಿದರೆ ಯಾರಿಗಾದರೂ ಬಲಾತ್ಕಾರ ಮಾಡಲು ಮನಸ್ಸು ಬರುತ್ತದೆಯೆ ಎಂಬ ಮಾತುಗಳನ್ನು ಆಡಿದ್ದಾರೆ.

ಟ್ರಾಫಿಕ್ ಪೊಲೀಸ್ ಹತ್ರ ಸಿಕ್ಕಾಕ್ಕೊಂಡ ಲಿಂಗದೇವರು; ಇದೊಂದು ಸೈಕಲ್ ಕಥೆ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳುವುದಾದರೆ ಒಮ್ಮೆ ಅಮೇರಿಕಾದ ಉಪ ರಾಷ್ಟ್ರಪತಿಗಳಾದ ಡಿಕ್ ಚೆನೇ ಮತ್ತು ಸೆನೆಟರ್ ಪಾಟ್ರಿಕ್ ಲೇ ಮದ್ಯೆ ವಾಗ್ವಾದ ಆದಾಗ " F**k yourself " ಎಂಬ ಪದ ಪ್ರಯೋಗ ಆಗಿ ತುಂಬಾ ಚರ್ಚೆ ಆಗಿದ್ದು ನಾನು ಗೂಗಲ್ ಮಾಡಿದಾಗ ಸಿಕ್ಕ ಮಾಹಿತಿ. 

ರೈತಸಂಘದ ಹೋರಾಟಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಹೋರಾಟದ ಹಾಡುಗಳ ಕ್ಯಾಸೆಟ್ಟುಗಳಲ್ಲಿ 'ಎಲ್ಯವನೆಲ್ಯವನೇ ನಮ್ಮ ಬತ್ತ ರಾಗಿ ತಿಂದ ಕತ್ತೆ ಸೂಳೇಮಗ' ಎಂಬ ಹಾಡು ಈಗಲೂ ಕೆಲವರಿಗೆ ಜ್ಞಾನಪಕ ಇರಬಹುದು.

ಸದರಿ ಘಟನೆಯಲ್ಲಿ ಮಾದುಸ್ವಾಮಿ ಮತ್ತು ಕೋಲಾರದ ಆ ಮಹಿಳೆಯ ಜೊತೆ ಆಗಿರುವ ಸಂವಾದದಲ್ಲಿ ಕೆಲವು ನಿಮಿಷಗಳು ಮಾದುಸ್ವಾಮಿಯವರು ಮೌನವಾಗಿಯೇ ಆಲಿಸಿರುವುದು ಗೊತ್ತಾಗುತ್ತದೆ ನಂತರವಷ್ಟೇ ಅವರಿಂದ ಆ ಮಾತುಗಳು ಬಂದಿವೆ. ಅಂದರೆ ಕ್ರಿಯೆಗೆ ಪ್ರತಿಕ್ರಿಯೆ ಇದೆ ಎಂಬುದು ನಿಚ್ಛಳವಾಗಿದೆ. ನಂತರ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೇಳಿರುವುದು ಮಾದುಸ್ವಾಮಿಯವರ ಗೌರವ, ಘನತೆಯನ್ನು ಹೆಚ್ಚಿಸಿದೆ. ಮನುಷ್ಯ ಮನೆಮನೆಯಲ್ಲೂ ಜನಿಸುತ್ತಾನೆ ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ. 

Great leaders are genuine and authentic. That's why we follow them ಎಂಬ ಮಾತನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ.

Follow Us:
Download App:
  • android
  • ios