ದಶಕಗಳ ಹಿಂದೆ ಸೈಕಲ್‌, ಲೂನಾ ಹೊಂದಿದವನೇ ರಾಜ. ಅಲ್ಲೊಮ್ಮೆ ಇಲ್ಲೊಮ್ಮೆ ಅಪ್ಪ-ಅಣ್ಣನ ಸೈಕಲ್‌ ಸವಾರಿ ಮಾಡುವುದರಲ್ಲಿ ಸಿಗುತ್ತಿದ್ದ ಮಜಾ ಬೇರೆ ಯಾವುದರಲ್ಲೂ ಸಿಗುತ್ತಿರಲಿಲ್ಲ.  ಈಗ ಪೊಲೀಸರು ಸಿಗ್ನಲ್ ಜಂಪ್, ಹೆಲ್ಮೆಟ್‌ ಅಥವಾ ಡಾಕ್ಯೂಮೆಂಟ್ಸ್‌ ಇಲ್ಲವೆಂದು ಹಿಡಿಯೋದು ಸಾಮಾನ್ಯ. ಆದರೆ 80ರ ದಶಕದಲ್ಲಿ ಸೈಕಲ್ ಡೈನಮೋ ಲೈಟ್‌ ಇಲ್ಲ ಅಂತ ಸಿಕ್ಕಾಕಿಕೊಂಡ ಸ್ಯಾಂಡಲ್‌ವುಡ್ ನಿರ್ದೇಶಕರು ಬೆರೆದಿರುವ ಅನುಭವ ಕಥೆ ಇದು.....

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡಕ್ಕೆ ಸುಗ್ಗಿ!

ಡೈನಾಮೊ ಲೈಟ್ ಇರುವ ಸೈಕಲ್ ಯಾರು ಯಾರು ಓಡಿಸಿದ್ದೀರಿ?
ಆಗಿನ ವಿಶೇಷ ಸಂದರ್ಭಗಳು ಏನಾದರೂ ಇದೆಯಾ?

1985, ನಾನು ಆಗ 1st PUC,ಶೇಷಾದ್ರಿಪುರಂನಿಂದ ಬಸವೇಶ್ವರನಗರಕ್ಕೆ Physics And Maths ಟ್ಯೂಷನ್ ಹೋಗಬೇಕಿತ್ತು, ಬೆಂಗಳೂರು ಹೊಸದು ನನಗೆ. ಇಲ್ಲಿನ ಟ್ರಾಫಿಕ್ ಕಾರಣಗಳಿಂದ ಸೈಕಲ್ ಕೊಡಿಸಿರಲಿಲ್ಲ. ಆದರೆ ನಮ್ಮ ಅಂಗಡಿಯಲ್ಲಿ ತೆಂಗಿನಕಾಯಿ ಹಾಕ್ಕೊಂಡು ಹೋಗೊಕೆ ಒಂದು ಸೈಕಲ್ ಇತ್ತು . ಬೆಳಗ್ಗೆ ಹೋಟೆಲ್‌ಗಳಿಗೆ ತೆಂಗಿನಕಾಯಿ ಹಾಕಿ ಬಂದ ಮೇಲೆ ಸಂಜೆ ಹೊತ್ತು ಸ್ವಲ್ಪ ಫ್ರೀ ಆಗಿ ಇರೋದು ಸೈಕಲ್ . ನಮ್ಮ ಅಂಗಡಿ ಕೆಲಸ‌ ಮಾಡೋರು ತೆಂಗಿನಕಾಯಿ ಮೂಟೆ ಹಾಕಿಕೊಂಡು ಹೋಗಬೇಕಾದ್ದರಿಂದ, ತೊಂದರೆ ಆಗುತ್ತೆಂದು ಡೈನಾಮ್ ತೆಗೆದಿದ್ದರು.

ನಾನು ಟ್ಯೂಷನ್ ಹೋಗ ಬೇಕಾಗಿದ್ದು ಸಂಜೆ ಆಗಿದ್ದರಿಂದ ಹೇಗೋ ಮಾಡಿ, ನಮ್ಮಣ್ಣನಿಗೆ ಅಥವಾ ನಮ್ಮಪ್ಪನಿಗೆ ಮಸ್ಕಾ ಹೊಡೆದು ಸೈಕಲನ್ನು ಅಲ್ಲೊಂದು ಇಲ್ಲೊಂದು ದಿನ ಉಪಯೋಗಿಸುತ್ತಿದ್ದೆ.

ಮಲ್ಲೇಶ್ವರಂ , ರಾಜಾಜಿನಗರ ನಂತರ ಬಸವೇಶ್ವರ ನಗರ ನನ್ನ ರೂಟು. ಆಗ ಸ್ನೇಹಿತ ಇಕ್ಬಾಲ್ ಅಹಮದ್ ಮುನಿರೆಡ್ಡಿ ಪಾಳ್ಯದಿಂದ ನನ್ನ ಸೇರಿಕೊಳ್ಳೋನು. ಒಂದು ದಿನ ರಾಜಾಜಿನಗರ ಪೋಲೀಸ್ ಸ್ಟೇಷನ್ ಮುಂಭಾಗ ಪಾಸ್ ಆಗುತ್ತಿದ್ವಿ. ಆಗ ಅಲ್ಲಿ ಪೋಲೀಸ್ ಲೈಟ್ ಇಲ್ಲದೇ ಬರುವ ಸೈಕ‌ಲ್‌ನವರನ್ನು ಹಿಡಿತಾ ಇದ್ರು . ನಾನು ಹೇಗೋ ಪಾಸ್ ಆದೆ. ಆದರೆ ಹಿಂದೆ ಬರ್ತಾ ಇದ್ದ ಇಕ್ಬಾಲ್‌ನ ಹಿಡಿದುಬಿಟ್ರು. ನಾನು ಮುಂದೆ ಬಂದಿದ್ದವನು ಮತ್ತೆ ತಳ್ಕೋತಾ ಅವನ ಹತ್ತಿರ ಹೋದೆ .  ತಳ್ಕೊಂಡು  ಹೋದರೆ ನನ್ನ ಹಿಡಿಯುವುದಿಲ್ಲ ಎಂಬ ಭಾವನೆ ನನ್ನದು . ಇಕ್ಬಾಲ್ ಸೈಕಲ್ ಡೈನಾಮೋ ಇದ್ದರೂ, ಹಾಕಿರಲಿಲ್ಲ! ನನ್ನ ಸೈಕಲ್‌ಗೆ ಡೈನಾಮೊನೇ ಇರಲಿಲ್ಲ! ಇದನ್ನು ಗಮನಿಸಿದ ಪೋಲೀಸ್ ನನ್ನ ಸೈಕಲ್ ಹಿಡಿದು ಇಬ್ಬರೂ ಫೈನ್ ಕಟ್ಟಿ ಹೋಗಿ ಅನ್ನೋದಾ !! ನಾನು ತಳ್ಳಿಕೊಂಡು ಬರ್ತಾ ಇರೋನು ನಾನೇಕೆ ದಂಡ ಕಟ್ಟಬೇಕು ಎನ್ನುವುದು ನನ್ನ ವಾದ. ಆದರೆ ಇಬ್ಬರ ಸೈಕಲ್ ಪೋಲೀಸ್ ಸ್ಟೇಷನ್ ಒಳಗೆ ಹಾಕಿ ಬಿಟ್ಟರು. ಹೋಗಿ ದುಡ್ಡು‌ ತಗೊಂಡು ಬಂದು, ಬಿಡಿಸಿಕೊಂಡು ಹೋಗು ಅಂತ ಹೇಳಿ ನಮ್ಮನ್ನ ಸ್ಟೇಷನ್‌ನಿಂದ ಹೊರಗೂ ಹಾಕಿದ್ದರು. ಸ್ವಲ್ಪ ಹೊತ್ತು ಅಲ್ಲೇ ಇದ್ದು ರಿಕ್ವೆಸ್ಟ್ ಮಾಡಿದ್ರೆ ಬಿಡ್ತಾರೆ ಅಂತ ಒಡಾಡ್ತಾ ಇದ್ವಿ. ನಮ್ಮ ಸೈಕಲ್ ಜೊತೆ ಇನ್ನಷ್ಟು ಸೈಕಲ್ ಸೇರ್ಪಡೆ ಆಗಿ ಲಾಕ್ ಮಾಡಲು ಉಪಯೋಗಿಸುವ ಚೈನ್ ಉದ್ದ ಸಾಲದೆ ಲಾಕ್ ಮಾಡಲಿಲ್ಲ, ಇದೇ ಸಂದರ್ಭ ಇಕ್ಬಾಲ್ ಗಮನಿಸಿ ಸೀದಾ ಒಳಗೆ ಹೋಗಿ ಸೈಕಲ್ ಎತ್ಕೊಂಡು ಬಂದೇ ಬಿಟ್ಟ. ನನಗೆ ಕೈ ಕಾಲು ನಡುಕ ಶುರು ಆಯ್ತು.  ನನ್ನ ಸೈಕಲ್ ಸ್ಟೇಷನ್ ಒಳಗೇ ಇದೆ. ಇವನು ಹೀಗೆ ಎತ್ಕೊಂಡು ಬಂದು ಬಿಟ್ಟನಲ್ಲ, ಇನ್ನೂ ನನ್ನ ಗತಿ ಅಷ್ಟೇ ಅಂತ ಒಂದೇ‌ ಉಸಿರಿಗೆ ಓಡಿದ್ದೇ ಓಡಿದ್ದು ಮನೆವರೆಗೂ. ಮಾರನೇ ದಿನ ಅಂಗಡಿ ಹುಡುಗರನ್ನು ಜೊತೆ ಮಾಡಿ ದಂಡ ಕಟ್ಟಿಸಿ, ಸೈಕಲ್ ತರಿಸಿದ್ರು ನಮ್ಮಪ್ಪ . ದ್ವಿತೀಯ ಪಿಯುಸಿಗೆ ಸಿಂಗಲ್ ಸೀಟ್ ಲೂನಾ ಬಂತು. CNT 6200 ನಂಬರ್ . ಹುಳಿಯಾರಿನಲ್ಲಿ ನನ್ನ ಎರಡನೇ ಅಣ್ಣ ಚೀಟಿ ಹಾಕಿದ್ದರ ಫಲ ಈ ಲೂನಾ...' ಎಂದು ಲಿಂಗದೇವರು ಬರೆದುಕೊಂಡಿದ್ದಾರೆ.

ಭಾರತ ಲಾಕ್‌ಡೌನ್ ಆಗಿದ್ರಿಂದ ಮಂದಿ ಫ್ರೀಯಾಗಿದ್ದಾರೆ. ತಮ್ಮ ಹಳೇ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ. ಆ ಮೂಲಕ ತಮ್ಮ ಮೂಲವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ತಮ್ಮವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ನಿಮ್ಮ ಜೀವನದಲ್ಲಿ ಇಂಥ ಘಟನೆಗಳು ಆಗಿದ್ಯಾ? ನಿಮ್ಮೊಳಗಿನ ಸಿಹಿ ನೆನಪುಗಳು ಬರಲಿ ಹೊರಗೆ.