ಸಾಮಾಜಿಕ ಜಾಲತಾಣದ ಕೆಲವು ಹುಳುಕು ಮನಸ್ಸಿನವರು ಬೆಂಗಳೂರಿನ ಪಾದರಾಯನಪುರದ ಘಟನೆಯನ್ನು ರಾಜಕೀಯವಾಗಿ ಬಳಸಿಕೊಂಡು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ರಾಜೀನಾಮೆ ಕೊಡಬೇಕು ಎನ್ನುವ ಒಂದು ಆಂದೋಲನವನ್ನೇ ಪ್ರಾರಂಭಿಸಿದ್ದಾರೆ.  ಹೀಗೆ ಮಾತನಾಡುವ ಜನರಿಗೆ ಪಾದರಾಯನಪುರದ ಕುತೂಹಲಕಾರಿ ಸುದ್ದಿಗಳು ಇವೆ ಓದಿ .

2016 ರಲ್ಲಿ ನಾನು ಅವನಲ್ಲ ಅವಳು ಚಿತ್ರಕ್ಕೆ ಪ್ರಶಸ್ತಿ ಬಂದಾಗ ಇದೇ ಪಾದರಾಯನಪುರದಲ್ಲಿ ನನಗೆ ಮತ್ತು ವಿಜಯ್ ಇಬ್ಬರಿಗೂ ಕನ್ನಡ ಪರ ಸಂಘಟನೆಗಳು ಸನ್ಮಾನಿಸಿದ್ದರು . ಈಗ ವಿಷಯ ಅದಲ್ಲ 1994 ಕರ್ನಾಟಕದ ಮನೆ ಮನೆಗಳಲ್ಲಿ ಟಿವಿ ಎನ್ನುವ ಕಾಲ ಘಟ್ಟ , ಅದಕ್ಕೂ ಮುಂಚೆ ಕೇವಲ ಶ್ರೀಮಂತರ ಮನೆಯಲ್ಲಿ ಮಾತ್ರ ಟಿವಿ ಇರ್ತಾ ಇದ್ದದ್ದು. ಅಂದಿಗೆ ಕನ್ನಡದಲ್ಲಿ ಧಾರಾವಾಹಿಗಳು ಆರಂಭವಾಗಿ ಸುಮಾರು 8 ವರ್ಷಗಳು ಕಳೆದಿದ್ದವು. 

ಪಾದರಾಯನಪುರ ಘಟನೆಯ ಸುದ್ದಿ ಗುಚ್ಛ

ನಾನು ಧಾರಾವಾಹಿಯಲ್ಲಿ ನಟನೆ ಮತ್ತು  ನಿರ್ಮಾಣ ಆರಂಭ ಮಾಡಿ ನಾಲ್ಕು ವರ್ಷ ಆಗಿತ್ತು. ನನ್ನ ನಟನೆ ಮತ್ತು ನಿರ್ಮಾಣದ  ನಾವೆಲ್ಲರೂ ಒಂದೇ , ಸ್ವರ ಸಂಪದ , ರೈತ ಯೋಧ  ಮುಂತಾದ ಧಾರಾವಾಹಿಗಳು ಯಶಸ್ವಿಯಾಗಿದ್ದವು. ಆಗ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿ ಅನೀಸ್ ಉಲ್ ಹಕ್ ಎಂಬುವವರು ಕಾರ್ಯ ನಿರ್ವಹಿಸುತ್ತಿರುತ್ತಾರೆ, ಮಾನ್ಯರ ಮನಸ್ಸಿನಲ್ಲಿ ಕರ್ನಾಟಕದಲ್ಲಿ ಉರ್ದು ವಾರ್ತೆ ಆರಂಭಿಸಬೇಕು ಎನ್ನುವುದು ಬಂದು ಅವರ ಹೃದಯದ ಬಡಿತ ಹೆಚ್ಚಾಗಿ ಉರ್ದು ವಾರ್ತೆ ಆರಂಭಿಸುತ್ತಾರೆ! 

ಕರ್ನಾಟಕದಲ್ಲಿ ಉರ್ದು ವಾರ್ತೆ ಪ್ರಸಾರದ ವಿರುದ್ಧ ಅನೇಕ ಕನ್ನಡ ಪರ ಸಂಘಟನೆಗಳು , ಕನ್ನಡ ನಾಡಿನ ಪ್ರಜ್ಞಾವಂತರು ಧ್ವನಿ ಎತ್ತುತ್ತಾರೆ , ದೊಡ್ಡ ಹೋರಾಟ ಆರಂಭ ಆಗುತ್ತದೆ. ಹಲವಾರು ಕಡೆ ಅಹಿತಕರ ಘಟನೆಗಳು ನಡೆದವು ಕೂಡ. ಹೋರಾಟದ ಬಗ್ಗೆ ಹೆಚ್ಚು ವಿವರಗಳಿಗೆ ಹೋಗದೆ ನೇರವಾಗಿ ವಿಷಯಕ್ಕೆ ಬರುವುದಾದರೆ ಈಗ ಸುದ್ದಿಯಲ್ಲಿ ಇರುವ ಪಾದರಾಯನಪುರದಲ್ಲಿ ಆಗಿನ ಸಂದರ್ಭದಲ್ಲಿ ಒಂದೇ ದಿನ ಸುಮಾರು 13ಕೊಲೆ ಆಗುತ್ತವೆ ಮತ್ತು ಪೋಲಿಸ್ ನವರ ಕೈ ಕತ್ತರಿಸುತ್ತಾರೆ !! 

ಭಾಗಶಃ ದಕ್ಷಿಣ ಭಾರತದಲ್ಲಿನ ಒಂದು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ ಅತ್ಯಂತ ಹೆಚ್ಚು ಕೊಲೆಗಳಾದ ಸ್ಥಳ ಪಾದರಾಯನಪುರ ! ಅದೇ ಕಾಲಘಟ್ಟದ ಮತ್ತೊಂದು ಘಟನೆಯಲ್ಲಿ ಸದರಿ ಠಾಣೆಯ ಪೋಲಿಸ್ ಅಧಿಕಾರಿಯ ಮೇಲೆ ಮಾರಣಾಂತಿಕ ದಾಳಿ ಆಗುತ್ತೆ , ದಾಳಿ ಮಾಡಿದವರನ್ನ ಹಿಡಿದು ಠಾಣೆಗೆ ತಂದಾಗ ಸುಮಾರು 3000 ಕ್ಕೂ ಹೆಚ್ಚು ಜನ ಠಾಣೆ ಮುಂದೆ ಜಮಾಯಿಸಿ ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತಾರೆ.! 

ಆಗಿನ ಶಾಸಕರು ಕೂಡ ಒತ್ತಡ ಹಾಕುತ್ತಾರೆ ಆದರೆ ಖಡಕ್ ಅಧಿಕಾರಿ ಎಂದು ಹೆಸರು ಪಡೆದಿರುವ ಶಂಕರ್ ಬಿದರಿಯವರು ಠಾಣೆಯ ಇನ್ಸ್‌ಪೆಕ್ಟರ್ ಪರವಾಗಿ ನಿಲ್ಲುತ್ತಾರೆ ಆ ಕ್ರಿಮಿನಲ್ ಗಳ ಬಿಡುಗಡೆ ಆಗಲ್ಲ .

2004 ರ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಾದರಾಯನಪುರದಲ್ಲಿ ಪ್ರಚಾರಕ್ಕೆ ಹೋದಾಗ ಅಲ್ತಾಫ್ ಮತ್ತು ಆರೀಫ್ ಎಂಬುವವರ ಎರಡು ಗುಂಪುಗಳು  ಮಚ್ಚು ಲಾಂಗ್ ಹಿಡಿದು ದಾಳಿ ಮಾಡಿದ್ದ ಸ್ವರೂಪಕ್ಕೆ ರಕ್ಷಣೆ ಜವಾಬ್ದಾರಿ ಹೊತ್ತಿದ್ದ ಹಲವು ಪೋಲಿಸ್ ನವರು ಜ್ಞಾನ ತಪ್ಪಿ ಬೀಳ್ತಾರೆ ! ಆ ದಿನ ಎರಡು ಕೊಲೆ ಆಗುತ್ತದೆ ಮತ್ತು ಕಾನೂನು ಸುವ್ಯವಸ್ಥೆಗೆ  ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಆಗುತ್ತೆ. 

ಒಬ್ಬ ಹಿರಿಯ ಪೋಲಿಸ್ ಅಧಿಕಾರಿ ಹೇಳುವ ಪ್ರಕಾರ ಪಾದರಾಯನಪುರದ ಅರಾಫತ್ ನಗರದಲ್ಲಿ ಯಾವುದೇ ದಾಖಲೆಗಳಿಲ್ಲದೆ, ಯಾರು ಬೇಕಾದರೂ ಬಂದು ವಾರಕ್ಕೆ , ತಿಂಗಳಿಗೆ ಇದ್ದು ಹೋಗುವ ಸೌಕರ್ಯ ಇಂದಿಗೂ ಇದ್ದು, ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರು ಆಶ್ರಯ ಪಡೆಯುತ್ತಾರೆ ! ಒಟ್ಟಾರೆ ಹೇಳುವುದಾದರೆ ಬೆಂಗಳೂರಿನ ಕೆಲವು ಕ್ರಿಮಿನಲ್ ಗಳಿಗೆ ಆಶ್ರಯತಾಣ ಈ ಪಾದರಾಯನಪುರ. 

ಪಾದರಾಯನಪುರ ಹಿನ್ನೆಲೆ : 
ಅಲ್ಲಿನ ಅರಳಿಕಟ್ಟೆಯಲ್ಲಿರುವ ನಾಲ್ಕು ಅಡಿ ಎತ್ತರದ ಪಾದರಾಯಸ್ವಾಮಿ ದೇಗುಲ  .ಆಂಜನೇಯನ ಪಾದ ಇದ್ದ ಗುರುತಿಗೆ ಅಲ್ಲಿನವರು ಗುಡಿಕಟ್ಟಿದ್ದರು, ಆಗ ಅಲ್ಲಿ ಹಿಂದುಗಳೇ ಜಾಸ್ತಿ . ಪಾದರಾಯನಪುರ ಹೆಸರಿನ ಹಿನ್ನೆಲೆ ಇದು.  

ಇನ್ನೂ ಮುಂದೆ ನೋಡುತ್ತಾ , ಕನ್ನಡದ ಧ್ವನಿ ವಾಟಾಳ್ ನಾಗರಾಜ್ ಮತ್ತು ನಾರಾಯಣ್ ಕುಮಾರ್ ಹಾಗು ಪೌರಕಾರ್ಮಿಕರ ಪರ ಹೋರಾಟಗಾರ ಪಿ ಐ ಡಿ ಸಾಲಪ್ಪನವರು ಶಾಸಕರಾಗಿ ಆಯ್ಕೆಯಾಗಿದ್ದು ಈ ಕ್ಷೇತ್ರದಿಂದ ( ಬಿನ್ನಿ ಪೇಟೆ). ಸಾವಿರಾರು ಬಟ್ಟೆ ಮಗ್ಗಗಳಿದ್ದ ಜಾಗ ಈಗ ನಾಲ್ಕೋ ಐದಕ್ಕೆ ಬಂದು ನಿಂತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು ತಮಿಳರೇ ಜಾಸ್ತಿ ಇದ್ದ ಪ್ರದೇಶ ಪಾದರಾಯನಪುರ. ಹಿಂದುಗಳ ಜಾಗ , ಮನೆ ಖರೀದಿಸಿ ರಿಜಿಸ್ಟ್ರೇಶನ್ ಖರ್ಚು ನಮ್ಮದು ಎಂದು ಮಸೀದಿಗಳಲ್ಲಿ ಒಳ ಸಂದೇಶ ಕೊಟ್ಟಿದ್ದರ ಪರಿಣಾಮ ಪಾದರಾಯನಪುರ ಈಗ ಮುಸ್ಲಿಂ ಸಮುದಾಯದ ಹಿಡಿತಕ್ಕೆ ಬಂದಿದೆ ಎನ್ನುವವರು ಇದ್ದಾರೆ. 

ಈ ಹಿನ್ನೆಲೆಯಲ್ಲಿ ಘಟನೆ ನೋಡಿದಾಗ.
ಪೋಲಿಸ್ ನವರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅದು ಅವರ ಕರ್ತವ್ಯ. ಒಂದು ಪ್ರದೇಶದಲ್ಲಿ ಗೂಂಡಾಗಳು , ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರು ಇದ್ದರೆ ಅವರನ್ನು ಮಟ್ಟ ಹಾಕಬೇಕಾದ ಜವಾಬ್ದಾರಿ ಆ ಪ್ರದೇಶದ ಪೋಲಿಸ್ ರದ್ದು. ಒಂದು ಸಮುದಾಯದವರು ಕೋವಿಡ್ - 19 ರ ಈ ಸಂದರ್ಭದಲ್ಲಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ ಎನ್ನುವುದು ನಮ್ಮ ರಾಜ್ಯ ಮತ್ತು ದೇಶದ ಇತರೆ ಭಾಗಗಳಲ್ಲಿ ಮತ್ತೆ ಮತ್ತೆ ದೃಢಪಟ್ಟಿದೆ. ಪಾದರಾಯನಪುರ ಅತ್ಯಂತ ಸೂಕ್ಷ್ಮ ಪ್ರದೇಶ ಎನ್ನುವುದು ಇತಿಹಾಸ ಹೇಳುತ್ತದೆ , ಹಾಗಿದ್ದೂ ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ತೆಗೆದುಕೊಂಡಿಲ್ಲ ?

ಆ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯವೇ  ಕಾರಣ ಎಂದರೂ ತಪ್ಪಾಗಲಾರದು. ಒಂದು ಕೋಮಿನ ಜನರನ್ನು ನೋಡುವ ದೃಷ್ಟಿಕೋನವೇ  ಬದಲಾಗುತ್ತಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಪೂರ್ವ ಯೋಜನೆ ಇಲ್ಲದಿರುವುದು ಈಗಾಗಲೇ ಇರುವುದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟ ಹಾಗೆ, ಸಮಾಜದಲ್ಲಿ ಮತ್ತಷ್ಟು ಒಡಕಾಗುತ್ತದೆ ಎನ್ನುವ ಚಿಂತನೆ ಇಲ್ಲ. ಪೋಲಿಸ್ ಅಥವಾ  ಯಾವುದೇ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದಾಗ ಪ್ರೋತ್ಸಾಹ ಮಾಡಲಿ ಹಾಗೆಯೇ ಈ ರೀತಿಯ ಕೆಲಸ ಮಾಡಿದಾಗ ಸಮಾಜ ಕಠಿಣ ಶಬ್ದಗಳಿಂದ ಖಂಡಿಸಲಿ. 

ನನ್ನ ಕೋರಿಕೆ.
ಕೆಲವು ಅಧಿಕಾರಿಗಳನ್ನು ತಕ್ಷಣ ತೆಗೆಯಬೇಕು, ದಕ್ಷ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳು ನಿಯೋಜನೆಗೊಳ್ಳಲಿ. ಜನರು ಸರ್ಕಾರದಲ್ಲಿ ಇನ್ನೂ ಹೆಚ್ಚು ವಿಶ್ವಾಸ ನಂಬಿಕೆ ಬರುವಂತಾಗಲಿ ಮತ್ತು ಷಡ್ಯಂತರ ಮಾಡುವವರಿಗೆ ಈ ಸರ್ಕಾರ ಕಠಿಣ ಕ್ರಮಗಳಿಗೆ ಸಿದ್ಧ ಎಂಬ  ಸಂದೇಶ ಹೋಗಲಿ . 

ಕೊನೆಯದಾಗಿ ಹೇಳುವುದೇನೆಂದರೆ University of Social Media ದ ಕೆಲವು ಪಂಡಿತರು ಅವಲೋಕನ ಮಾಡಿ, ನಂತರ ರಾಜಕೀಯ ನಿರ್ಧಾರದ ಮಾತುಗಳನ್ನು ಆಡಬೇಕು ಎಂದು ವಿನಂತಿ.

ಬಿ ಎಸ್ ಲಿಂಗದೇವರು