ರಾಜ್‌ಕುಮಾರ್ ಪುಣ್ಯತಿಥಿ; ಮುತ್ತುರಾಜರ ಭಂಡಾರದಿಂದ ಮುತ್ತಿನ ಮಾತುಗಳು!
ಇಂದು ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರ 14ನೇ ಪುಣ್ಯತಿಥಿ. ನಾಡು ನುಡಿಗಳ ನೋವು ನಲಿವು, ಸಾಂಸ್ಕೃತಿಕ ಸಂಭ್ರಮ, ಬದುಕಿನ ಕಾತರ, ನಿರೀಕ್ಷೆ, ಆನಂದ, ಆತಂಕ... ಹೀಗೆ ಹಲವು ನಿರ್ಣಾಯಕ ಸಂದರ್ಭಗಳಲ್ಲೆಲ್ಲಾ ಡಾ. ರಾಜ್‌ಕುಮಾರ್ ಮತ್ತವರ ಚಲನಚಿತ್ರಗಳು, ಹಾಡುಗಳು, ಮಾತುಗಳು ಜೀವನಾಡಿಗಳಂತೆ ಮೂಡಿದ್ದನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ.
ಎಸ್ ಜಗನ್ನಾಥರಾವ್ ಬಹುಳೆ
ಇಂದಿನ ಸಂದರ್ಭದಲ್ಲಿಯಂತೂ ಅವರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ತಮ್ಮ ಹಾಲಿನಂಥ ಮನಸಿನಿಂದ ಕೊರೋನಾ ಹಾವಳಿ ಮತ್ತು ಜನತೆಯ ಆರೋಗ್ಯದ ಕಳಕಳಿಯ ಬಗ್ಗೆ ಬೆಣ್ಣೆಯಂತೆ ಮಾತನಾಡಿ ಯಶಸ್ವಿಯಾಗಿ ಅರಿವು ಮೂಡಿಸುತ್ತಿದ್ದರೇನೋ. ಈ ಲಾಕ್ ಡೌನ್ ಸಂದರ್ಭದಲ್ಲಿ ದೃಶ್ಯವಾಹಿನಿಗಳಿಂದ ಮೂಡಿಬರುತ್ತಿರುವ ಡಾ
ರಾಜ್ ಸರ್ವ ಶ್ರೇಷ್ಠ ಚಲನ ಚಿತ್ರಗಳನ್ನು ಮನಸ್ವಿ ಅಧ್ಯಯನಿಸುತ್ತಿರುವ ಜನತೆಯ ಮನಸ್ಥಿತಿ ಇದನ್ನು ಪುಷ್ಟೀಕರಿಸದಿರದು. ಡಾ. ರಾಜ್ ಕನ್ನಡಿಗರನ್ನು ಪ್ರತಿನಿಧಿಸಿದ ಶಕ್ತಿ ಅಂಥದ್ದು. ಈ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅವರ ‘ಮುತ್ತಿನ ನುಡಿ ಭಂಡಾರ’ದಿಂದ ಆಯ್ದ ಅವರ ಸಾಂದರ್ಭಿಕ ಮಾತಿನ ಮುತ್ತುಗಳನ್ನು ಅವರ ಸ್ಮರಣೆಯಲ್ಲಿ ಪ್ರಸ್ತುತ ಪಡಿಸಲಾಗಿದೆ.
ಸ್ಟೇಜ್ ಮೇಲೆ ಡಾ. ರಾಜ್ ಆಗ್ತಾರೆ ಈ ಕಲಾವಿದ; ಅವಕಾಶವಿಲ್ಲದೇ ಪರದಾಟ!
- ನಮ್ಮ ದೇಶದಲ್ಲಿ ಎಲ್ಲವೂ ಇದೆ. ರತ್ನಗರ್ಭಾ ವಸುಂಧರಾ ಎಂಬ ಮಾತು ಭಾರತಕ್ಕೆ ಅನ್ವರ್ಥವಾಗಿದೆ. ಇಲ್ಲಿಯ ಕೊರತೆ ಎಂದರೆ ಶಿಸ್ತಿನದು. ಅದನ್ನು ನಾವು ತುಂಬಿಕೊಂಡೆವಾದರೆ ನಮಗೆ ಎಣೆಯೇ ಇಲ್ಲ. ಶಿಸ್ತು ಮತ್ತು ಶಾಂತಿ ನಮ್ಮ ಆಶಯವಾಗಬೇಕು.
- ಯುವ ಪೀಳಿಗೆಯನ್ನು ಶಿಸ್ತುಬದ್ದ ಜೀವನದತ್ತ ಹೊರಳಿಸುವ ಕಾರ್ಯವನ್ನು ಪೋಷಕರೇ ಮಾಡಬೇಕಾಗಿದೆ. ನಮ್ಮ ನಂತರದ ಪೀಳಿಗೆಯಲ್ಲಿ ಶಿಸ್ತನ್ನು ಉದ್ದೀಪಿಸುವುದು ಎಂದರೆ, ಇಡೀ ದೇಶವನ್ನು ಶಿಸ್ತಿನ ಅಡಿಗೆ ತರುವುದು. ಈಗ ಈ ಕಾರ್ಯ ಅವಶ್ಯ ಆಗಬೇಕಾಗಿದೆ.
- ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅನಾಹುತಗಳ ಬಗ್ಗೆ ನೆನೆದರೆ ವಿಷಾದವಾಗುತ್ತದೆ. ಇದನ್ನೆಲ್ಲಾ ನೋಡಿದರೆ ನಾವೆಲ್ಲಿ ಹೋಗುತ್ತಿದ್ದೇವೆ ಎನ್ನುವುದೇ ಗೊತ್ತಾಗುತ್ತಿಲ್ಲ. ಆದರೆ ಕತ್ತಲು ಕಳೆದು ಬೆಳಕು ಮೂಡಲೇಬೇಕಲ್ಲ.
- ನಮ್ಮ ಮುಂದೆ ಯಾವುದೇ ನಿಶ್ಚಿತವಾದ ಗುರಿ ಎಂಬುದಿಲ್ಲ. ನಾಳೆಯದನ್ನು ಕಂಡವರು ಯಾರು? ಭಗವಂತನ ಮುಂದೆ ಕೈಯೊಡ್ಡಿ ನಿಂತಿರುವವರು ನಾವು. ಪ್ರತಿಫಲ ಎಂಬುದು ದೇವರ ಪ್ರಸಾದದಂತೆ. ಪ್ರಸಾದ ಕಡಿಮೆ ಎನಿಸಿದರೂ ಅದರ ಪ್ರಾಮುಖ್ಯ, ಮಹತ್ವ ಕಡಿಮೆಯಾಗುವುದಿಲ್ಲ. ಅವನ ಭಿಕ್ಷೆ ಆದೇಶವೇ ಶ್ರೀರಕ್ಷೆ.
ಬ್ಯಾನರ್ ಕಲಾವಿದನ ಸಂಕಷ್ಟಕ್ಕೆ ಸ್ಪಂದಿಸಿದ 'ರಾಜಕುಮಾರ'
- ಜೀವನದಲ್ಲಿ ಎಲ್ಲವೂ ಘಟಿಸುತ್ತಲೇ ಹೋಗುತ್ತದೆ. ಯಾವ್ಯಾವ್ದು ಯಾವ್ಯಾವಾಗ ನಡೆಯಬೇಕೋ ಆಗಾಗ ನಡೆದೇ ನಡೆಯುತ್ತದೆ.
- ನಾವು ಸಮಾಜ ಕೆಟ್ಟಿದೆ, ಕಾಲ ಕೆಟ್ಟಿದೆ ಎನ್ನುತ್ತೇವೆ. ಆದರೆ ಕೆಟ್ಟಿರುವುದು ನಮ್ಮ ಬುದ್ದಿ, ನೋಡುವ ನಮ್ಮ ಕಣ್ಣು. ಸಮಾಜ ನಮಗೆ ಪಾಠ ಕಲಿಸುತ್ತದೆ.
- ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ಮಾತ್ರ ದುಡಿಯಬಾರದು. ಅದು ತಪ್ಪು. ನಮ್ಮ ಕಾಯಕ ಮೊದಲು ನಮ್ಮ ಆತ್ಮಕ್ಕೆ ತೃಪ್ತಿ ಕೊಡುವಂತಿರಬೇಕು. ‘ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನ’ ಎಂದು ಭಗವದ್ಗೀತೆಯಲ್ಲಿ ಹೇಳಿಲ್ಲವೇ? ಕರ್ಮ ಮಾಡುವುದರ ಮೇಲೆ ಮಾತ್ರ ನಮ್ಮ ಅಧಿಕಾರ. ಫಲಾಫಲವೆಲ್ಲ ಅವನಿಗೆ ಸೇರಿದ್ದು.
- ಮನುಷ್ಯನಿಗೆ ಆಸೆ ದೊಡ್ಡದು. ಏನೆಲ್ಲಾ ಇದ್ದರೂ ಇನ್ನಷ್ಟುಬೇಕು ಎನಿಸುತ್ತದೆ. ಅದಕ್ಕಾಗಿ ಪರದಾಡುತ್ತೇವೆ. ಎಲ್ಲ ಇದ್ದು ನನ್ನದಲ್ಲ, ನನಗಲ್ಲ. ಇದೆಲ್ಲದರಿಂದ ನಾನು ಬೇರೆ ಎಂಬ ಭಾವ ತುಂಬಿಕೋ ಬೇಕು. ಹಾಗಿರಲು ಪ್ರಯತ್ನಿಸಬೇಕು
- ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು. ಮೊದಲು ಬೋಳಾದ ಮರಗಳು, ನಂತರ ಹಸಿರಾಗುವ ಪ್ರಕೃತಿ, ಮಾವಿನ ಚಿಗುರು, ಜೀವನೋತ್ಸಾಹ ತರುವ ಚೈತ್ರ... ಇದು ಜೀವನ.
ಈ ದೇಹವೇನೋ ಸುಖ ಬಯಸುತ್ತೆ ನಿಜ. ಆದರೆ ಅದಕ್ಕೆ ತಕ್ಕಂತೆ ದೇಹ ದಂಡಿಸುವ ಕೆಲಸವೂ ನಡೆಯಬೇಕು. ಮೈ ಕೈ ನೋಯಿಸಿದರೆ ಮನಸ್ಸು ಮೃದುವಾಗುತ್ತದೆ.
- ಯಾಂತ್ರೀಕೃತ ಬದುಕಿನ ಪರ್ಯಾಯ ಮಾರ್ಗವೇ ಪರಸ್ಪರ ಚರ್ಚೆಯಾಧಾರಿತ ದೃಷ್ಟಿಕೋನ ಮತ್ತು ನಿಲುವು.
ಅಣ್ಣಾವ್ರ ಮೇಣದ ಪ್ರತಿಮೆಗೆ ಆಗ್ರಹಿಸಿದ ಹರಿಪ್ರಿಯಾ..!
- ಸೋತವನು ಗೆದ್ದವನ ಸಂಭ್ರಮದಲ್ಲಿ ಭಾಗವಹಿಸುವುದರಲ್ಲಿ ಮಹದಾನಂದವಿದೆ.
- ನಮ್ಮ ಜನಪ್ರಿಯತೆ, ಹೆಸರು, ಪ್ರತಿಭೆ ಎಲ್ಲವೂ ನಮ್ಮದಲ್ಲ. ಆ ಭಗವಂತನದು. ಇದೆಲ್ಲಾ ಅವನಿಗೆ ಸಲ್ಲಬೇಕು. ನಮ್ಮದೆನ್ನುವುದು ಅವನು ನಮಗೆ ಕೊಟ್ಟಿರುವ ದೇಹ ಮಾತ್ರ. ಇದನ್ನು ಸಂರಕ್ಷಿಸಿಕೊಂಡು ಮಿಕ್ಕೆಲ್ಲ ಎರವಲು ಭಾಗ್ಯಗಳನ್ನು ಜನಸೇವೆಗಾಗಿ ಬಳಸುವುದೇ ಜೀವನ ಸೂತ್ರ. ಅದನ್ನೆಲ್ಲ ಹಿಂದಿರುಗಿಸುವ ಕಾಲ ಬಂದೇ ಬರುತ್ತದೆ.
- ಯಾರನ್ನೇ ಆದರೂ ಕೇವಲ ಮೇಲ್ನೋಟದಿಂದ ಅಳೆಯಬಾರದು. ಅವರ ಅಂತರಂಗವನ್ನು ಹೊಕ್ಕು ನೋಡಬೇಕು. ನಿಮಗೆ ಆಗದವರಲ್ಲಿಯೂ ನೀವು ಆಗ ಏನಾದರೂ ಒಳ್ಳೆಯದನ್ನು ಕಾಣಲು ಸಾಧ್ಯ. ಆ ಒಳ್ಳೆಯದನ್ನು ಒಪ್ಪಿಕೊಳ್ಳಬೇಕು.
- ನೋವು ಪ್ರತಿಯೊಬ್ಬರಿಗೂ ಇರುವಂಥಾದ್ದೇ. ಅದಕ್ಕೆ ಹೆಚ್ಚಿನ ಬೆಲೆ ಕೊಡದೆ ಪ್ರೀತಿಧಾರೆ ಎರೆಯುವುದೇ ಉತ್ತಮವಾದ ಜೀವನದ ಲಕ್ಷಣ.
- ನಾವೆಲ್ಲ ಸಾಮಾನ್ಯವಾಗಿ ಯಾವ ಕೆಲಸ ಮಾಡಬೇಕಾದರೂ ಅದರಿಂದ ನಮಗೇನು ಲಾಭ ಸಿಗುತ್ತದೆ, ಎಷ್ಟುಹಣ ಸಿಗುತ್ತದೆ, ಎಷ್ಟುಕೀರ್ತಿ ಸಿಗುತ್ತದೆ ಅನ್ನೋದನ್ನ ಚಿಂತೆ ಮಾಡುವ ಬದಲು, ಶ್ರದ್ದೆಯಿಂದ ಆ ಕೆಲಸ ಮಾಡಿದ್ದೇ ಆದರೆ ಇದೆಲ್ಲವೂ ತಾನೇ ತಾನಾಗಿ ಹಿಂಬಾಲಿಸಿಕೊಂಡು ಬರುತ್ತದೆ. ಶ್ರದ್ಧೆ ಅನ್ನುವ ಪದಕ್ಕೆ ಮಿತಿಯೇ ಇಲ್ಲ. ನಾವು ಪ್ರಯತ್ನಪಟ್ಟಷ್ಟೂಇನ್ನೂ ಹೆಚ್ಚಿನ ಶ್ರದ್ಧೆಯಿಂದ ಆ ಕೆಲಸವನ್ನು ಮಾಡಬಹುದು.
ಅಣ್ಣಾವ್ರ ಮೇಣದ ಪ್ರತಿಮೆಗೆ ಆಗ್ರಹಿಸಿದ ಹರಿಪ್ರಿಯಾ..!
- ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವುದೇ ಧ್ಯಾನವಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಧ್ಯಾನವಾಗಿ ಪರಿವರ್ತಿಸಬಹುದು. ನಮ್ಮ ಕಸುಬೇ ತೆಗೆದುಕೊಳ್ಳಿ. ಅಭಿನಯವೇ ಧ್ಯಾನ ಅಂತೇನೆ ನಾನು. ನಿರಪೇಕ್ಷೆಯಿಂದ ಶ್ರದ್ಧೆಯಿಂದ ತಲ್ಲೀನನಾಗಿ ಅಭಿನಯಿಸುವುದು, ನಿಮ್ಮ ನಿಮ್ಮ ಕ್ಷೇತ್ರಗಳ ಸೇವೆಯಲ್ಲಿ ನಿಮ್ಮನ್ನು ತನ್ಮಯರಾಗಿ ತೊಡಗಿಸಿಕೊಳ್ಳುವುದು ಧ್ಯಾನ ಏಕಾಗಬಾರದು?
- ಜೀವನದಲ್ಲಿ ನಾವು ಎಲ್ಲಾ ವ್ಯಕ್ತಿಗಳನ್ನು ಒಂದು ಅಳತೆಗೆ ತೂಕ ಮಾಡುತ್ತೇವೆ. ಇವನು ಇಂಥವನು, ಅವನು ಅಂಥವನು, ಇವನ ಗುಣ ಹೀಗೆ, ಅವನ ಗುಣ ಹಾಗೆ, ಅವನು ಕೋಪಿಷ್ಟ, ಇವನು ದುಡುಕು ಸ್ವಭಾವದವನು ಹೀಗೆಲ್ಲ. ಕನ್ನಡಿಯಲ್ಲಿ ನಾವು ಮುಖ ನೋಡಿದಷ್ಟೇ ಸ್ಪಷ್ಟವಾಗಿ ಮಾತನಾಡುತ್ತೇವೆ. ಹಾಗಾದರೆ ನಾನು ಯಾರು? ನಾನು ಏಕೆ ಹೀಗಿದ್ದೀನಿ? ಈ ಪ್ರಶ್ನೆಗಳಿಂದ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ ಹೋಗುವುದೇ ಯೋಗ ಎನ್ನಬಹುದು.
- ಮನುಷ್ಯ ಯಾರಿಂದಲೂ ಸಹಾಯ ಬಯಸದೇ ಅಥವಾ ಸುಲಭವಾಗಿ ಸಿಗುವಂಥ ಹಣಕ್ಕೆ ಆಸೆ ಪಡದೆ ಚೆನ್ನಾಗಿ ದುಡಿಯಬೇಕು. ಸಹಾಯ ಮಾಡೋಕೆ ಹೋಗಿ ಕೆಲವರು ನಿಷ್ೊ್ರಯೋಜಕ ಪ್ರಜೆಗಳಾಗೋಕೆ ನಾವೇ ಕಾರಣವಾಗಿದ್ದೇವೇನೋ ಅಂತ ಅನಿಸುತ್ತದೆ. ಯಾರಿಗೂ ದುಡ್ಡು ಕೊಡೋದು ಮುಖ್ಯವಲ್ಲ. ಆತನನ್ನು ದುಡಿಯೋ ಹಾಗೆ ಪ್ರೇರೇಪಿಸುವುದು ಬಹಳ ಮುಖ್ಯ. ಇಲ್ಲಾಂದ್ರೆ ದುಡ್ಡು ಖಾಲಿಯಾದೊಡನೆ ಮತ್ತೆ ಅವನಿಗೆ ದುಡ್ಡಿಗಾಗಿ ಕೈ ಚಾಚುವುದು ಅನಿವಾರ್ಯವಾಗುತ್ತೆ.
- ವ್ಯಕ್ತಿತ್ವದಲ್ಲಿ ವಿಕಾರಗಳಿರಬಹುದು ಆದರೆ ಅವುಗಳನ್ನು ಮೀರಿ ನಿಲ್ಲುವುದಕ್ಕೆ ಪ್ರಯತ್ನ ಪಡಬೇಕಾದ್ದು ಮುಖ್ಯ. ಆದರೆ ಅದಕ್ಕೆ ಹುಡುಕಾಟದ ವಿದ್ಯಾರ್ಥಿ ಎಂಬ ಭಾವನೆ ಇದ್ದರಷ್ಟೇ ಖಚಿತ ಫಲಿತಾಂಶ.