ಸ್ಟೇಜ್ ಮೇಲೆ ಡಾ. ರಾಜ್ ಆಗ್ತಾರೆ ಈ ಕಲಾವಿದ; ಅವಕಾಶವಿಲ್ಲದೇ ಪರದಾಟ!
ಕಲಾವಿದನಿಗೆ ಕಲೆಯೇ ಬದುಕು, ಉಸಿರು. ತಮ್ಮಲ್ಲಿರೋ ಪ್ರತಿಭೆಯನ್ನು ಪ್ರದರ್ಶಿಸಿ, ನಾಲ್ಕು ಜನರಿಂದ ಚಪ್ಪಾಳೆ ಗಿಟ್ಟಿಸಿ, ಹೊಟ್ಟೆ ತುಂಬಿಸಿಕೊಳ್ಳುವಷ್ಟು ಸಂಪಾದನೆಯಾದರೆ ಬದುಕು ಸಾರ್ಥಕ. ಅದೇ ಖುಷಿ. ಆದರೆ, ಕೆಲವೊಮ್ಮೆ ವಿಧಿ ಕೈ ಕೊಡುತ್ತೆ. ಹಾಗೆ ಕೈ ಕೊಟ್ಟಾಗ ಬದುಕು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ. ಅಂಥ ಕಲಾವಿದನ ಬದುಕು, ಬವಣೆಯ ಕಥೆ ವ್ಯಥೆ ಇದು...
ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಹೆಸರ ಕೇಳಿದರೆ ಸಾಕು, ಕನ್ನಡಿಗರು ರೋಮಾಂಚನಗೊಳ್ಳುತ್ತಾರೆ. ಕಲೆ, ವ್ಯಕ್ತಿತ್ವ, ಶರೀರ, ಶಾರೀರ...ಎಲ್ಲವೂ ಮೇಳೈಸಿದ ಅದ್ಭುತ ನಟ ಅವರೆಂದು ಎಲ್ಲರಿಗೂ ಗೊತ್ತಿರೋ ವಿಷಯ. ಅಂಥ ಮಹಾನ್ ನಟನನ್ನು ಅನುಕರಣೆ ಮಾಡಲೂ ಒಂದು ಗಟ್ಸ್ ಬೇಕು. ಅವರೂ ಅದ್ಭುತ ಕಲಾವಿದರೇ ಆಗಿರಬೇಕೆಂಬುದರಲ್ಲಿ ಅನುಮಾನವೇ ಇಲ್ಲ. ಅಂತ ಮಹಾನ್ ಮೇರು ಕಲಾವಿದನನ್ನೇ ಇಮಿಟೇಟ್ ಮಾಡುತ್ತಿದ್ದರು ಸುಂದರೇಶ್. ಅಲ್ಲಿ ಇಲ್ಲಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡು ತೃಪ್ತರಾಗಿದ್ದರು.
ನರಸಿಂಹ ಮೂರ್ತಿ ವಯಸ್ಸು ಎಪ್ಪತ್ತು, ಎಪಿಸೋಡು ಹತ್ತು ಸಾವಿರದ ಹತ್ತು!
ರಾಜ್‌ಕುಮಾರ್ ಅಭಿನಯದ 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಮನಸೋತು ಅವರಂತೆ ಆಗಲು ಬಯಸಿದವರು ಸುಂದರೇಶ್. ರಂಗಭೂಮಿಯತ್ತ ಒಲವು ಹೊರಳಿತ್ತು. ಒಂಬತ್ತು ಮಂದಿಯ ಒಡ ಹುಟ್ಟಿದವರಲ್ಲಿ ಒಬ್ಬರಾಗಿ ಹುಟ್ಟಿದ ಸುಂದರೇಶ್ ಕಲಾ ವಿಷಯದಲ್ಲಿ ಪದವಿಯನ್ನೂ ಪಡೆದಿದ್ದರು. ರಂಗಭೂಮಿಯ ಆಕರ್ಷಣೆ ಅವರನ್ನು ಅಲ್ಲಿಗೇ ಸೆಳೆಯಿತು.
ಡಾ. ರಾಜ್ ಅವರ ಕಲೆಯೂ ಇವರಿಗೆ ಅಲ್ಪ ಸ್ವಲ್ಪ ಸಿದ್ಧಿಸಿತ್ತು. ಅದನ್ನೇ ಪೋಷಿಸಿ, ಜೂನಿಯರ್ ರಾಜ್‌ಕುಮಾರ್ ಎಂದು ಖ್ಯಾತರಾದರು. ಡಾ.ರಾಜ್ ಅವರ ಅಭಿಮಾನಿಗಳಿಂತೂ ಇವರಲ್ಲಿಯೇ ಅಣ್ಣಾವ್ರನ್ನು ಕಂಡರು. ಅಲ್ಲಿ ಇಲ್ಲಿ ಕೆಲವು ಅವಕಾಶಗಳೂ ಹುಡುಕಿಕೊಂಡು ಬಂದವು. 20 ರಂಗಭೂಮಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಕರ್ನಾಕಟದಾದ್ಯಂತ 200ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವುದು ಇವರ ಹೆಗ್ಗಳಿಕೆ. ಕಲೆಯೇ ಹೊಟ್ಟೆ ತುಂಬಿಸುತ್ತಿತ್ತು. ಬದುಕು ಹಾಗೆಯೇ ಸಾಗುತ್ತಿತ್ತು. ಆದರೆ, ವಿಧಿ ಬಿಡಬೇಕಲ್ಲ. ಅದ್ಯಾರ ಕಣ್ಣು ಬಿತ್ತು ಏನೋ, ಒಂದಲ್ಲ, ಎರಡಲ್ಲ ಒಟ್ಟು ಮೂರು ಬಾರಿ ಅಪಘಾತಗಳಾದವು.
ಮತ್ತೆ ಮತ್ತೆ ಬಿದ್ದ ಏಟಿನಿಂದ ಸುಧಾರಿಸಿಕೊಳ್ಳಲು ತುಸು ಸಮಯ ಹಿಡಿಯಿತು. ನಿಧಾನವಾಗಿ ಆರೋಗ್ಯ ಸುಧಾರಿಸಿಕೊಳ್ಳುವ ಹೊತ್ತಿಗೆ ವಯಸ್ಸೂ ಆಗುತ್ತಿತ್ತು. ಅವಕಾಶಗಳು ಮರೆಯಾದವು. ಹೊಟ್ಟೆಪಾಡಿಗೆ ಕಲೆ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಕಲಾ ಪ್ರದರ್ಶನಕ್ಕೆ ವೇದಿಕೆ ಸಿಗಲಿಲ್ಲ. ಆದರೆ, ಬದುಕು ಸಾಗಬೇಕಲ್ಲ? ಅಲ್ಲಿ ಇಲ್ಲಿ ಕೆಲವು ಕಚೇರಿಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಗಿಟ್ಟಿಸಿಕೊಂಡು, ಅಷ್ಟೋ , ಇಷ್ಟೋ ದುಡಿಯಲು ಆರಂಭಿಸಿದರು. ಆದರೆ, ಊಟಕ್ಕೆ ಸಾಕಾಗುವಷ್ಟು ಸಿಕ್ಕಿದರೆ ಸಿಕ್ಕೀತು. ಇಲ್ಲವೆಂದರೆ ತಣ್ಣೀರೇ ಗತಿ.
ಡಾ.ರಾಜ್ ಅವರೇ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಬಲ್ಲ ಸುಂದರೇಶ್ ಬದುಕು ಇದೀಗ ಬರಡಾಗಿದೆ. ದೇಹದಲ್ಲಿ ಶಕ್ತಿ ಕುಂದಿದೆ. ಆದರೆ, ಕೆಲೆಗೆಂಥ ವಯಸ್ಸಿನ ಹಂಗು? ವರ್ಷ 69 ಆಗಿದೆ. ಆದರೆ, ಇವರೊಳಗಿನ ಕಲಾವಿದ ಪರಪೂರ್ಣನಾಗಿದ್ದಾನೆ. ಪೂರ್ತಿ ಪಕ್ವಗೊಂಡಿದ್ದಾನೆ. ಇಂಥ ಮಹಾನ್ ಕಲಾವಿದನ ಜೊತೆ ಸುವರ್ಣನ್ಯೂಸ್.ಕಾಮ್ ನಡಿಸಿದ ಚಿಟ್ ಚಾಟ್....
ರಂಗಭೂಮಿಯಲ್ಲಿ ವೃತ್ತಿ ಆರಂಭಿಸಿದ ನಿಮಗೆ ಡಾ.ರಾಜ್ ಅವರನ್ನೇ ಅನುಕರಣೆ ಮಾಡಬೇಕೆಂದು ಅನಿಸಿದ್ದು ಏಕೆ?
ಶಾಲಾ ಕಾಲೇಜು ದಿನಗಳಿಂದಲೂ ನನಗೆ ಕಲಾಸಕ್ತಿ ಇತ್ತು. ಯಾವಾಗಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದೆ. 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಅಣ್ಣಾವ್ರ ಅದ್ಭುತ ಅಭಿನಯ ನೋಡಿದ ಮೇಲಂತೂ ನಾನು ಅವರಿಂದ ಬಹಳ ಪ್ರಭಾವಿತನಾದೆ. ಇನ್ನೂ ಮೀಸೆ ಬಾರದ ಟೈಮಲ್ಲೇ ಮೀಸೆ ಬರೆದುಕೊಂಡು, ಅವರನ್ನು ಅನುಕರಿಸಲು ಯತ್ನಿಸುತ್ತಿದ್ದೆ. ನನಗೆ ಗೊತ್ತಿಲ್ಲದಂತೆಯೇ ಡಾ.ರಾಜ್‌ರ ಅಭಿನಯ ಕಲೆ ನನಗೆ ಒಲೆಯಲು ಶುರುವಾಯ್ತು.
'ಮಹಾದೇವಿ' ಧಾರಾವಾಹಿಯ ಶ್ರೀದತ್ತ ಸ್ಲಂ ಮಕ್ಕಳಿಗೆ ಟೀಚರ್!
ಬಿಎ ಮುಗಿದ ನಂತರ ನಟನೆಗೇ ಬದುಕನ್ನು ಮೀಸಲಿಟ್ಟಿ. 'ಸುಧಾ'ದಲ್ಲಿ ಡಾ.ರಾಜ್ ಕುಮಾರ್ ಅವರ ಬಗ್ಗೆಯೊಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ನಟ ಸಾರ್ವಭೌಮನ ರಂಗಭೂಮಿ ಹಿನ್ನಲೆ ಬಗ್ಗೆ ಉಲ್ಲೇಖಿಸಲಾಗಿತ್ತು. ಸರಿ, ರಂಗಭೂಮಿ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತು. ಸೇರಿಕೊಂಡೆ. ಹಾಗೆ ನನ್ನ ಕಲಾಭ್ಯಾಸ ನಡೆಯುತ್ತಿದ್ದಾಗ ಅಶೋಕ್ ಬರ್ತಿ ಎಂಬುವವರು ಡಾ.ರಾಜ್ ಅವರನ್ನು ಅನುಕರಿಸುವ ವಿಷಯ ಗೊತ್ತಾಯಿತು. ರಾಜ್‌ಕುಮಾರ್ ಅವರಂತೆ ಮಾತನಾಡುತ್ತಾ ಅವರು ಹಾಸ್ಯ ಮಾಡುತ್ತಿದ್ದರು. ಅವರನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅಷ್ಟೇ ಅದೇ ನನ್ನ ಕಾಯಕವಾಯಿತು. ನಿಧಾನವಾಗಿ ಡಾ.ರಾಜ್ ಅವರ ತದ್ರೂಪಿಯಂತೆ ಅಭಿನಯಿಸಲು ಆರಂಭಿಸಿದೆ.
ಡಾ. ರಾಜ್ ಅವರಂತೆ ವೇಷ ಧರಿಸಿ ವೃತ್ತಿ ಆಂಭವಾದದ್ದು ಯಾವಾಗ?
ಅಣ್ಣಾವ್ರರಂತೆ ಅಭಿನಯಿಸುವುದು ಬಹಳ ಬೇಗ ಸಿದ್ಧಿಸಿತ್ತು. ಅಲ್ಲಿ ಇಲ್ಲಿ ಅವಕಾಶಗಳು ಸಿಕ್ಕವು. ಆದರೆ, ಅದನ್ನೇ ವೃತ್ತಿಯನ್ನಾಗಿ ಆರಂಭಿಸಿದ ನನಗೆ 45 ವರ್ಷವಾಯ್ತು.
ರಾಜಣ್ಣನಂತೆ ಕಲೆ ವೃದ್ಧಿಸಿದ ನಿಮಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಸಿಗಲಿಲ್ಲವೇ?
ಸ್ಥಿತಿವಂತರ ಕುಟುಂಬ ನಮ್ಮದಲ್ಲ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದೂ ಅಷ್ಟು ಸುಲಭದ ಮಾತಾಗಿರಲಿಲ್ಲ. ನಂತರ ಕಲೆಯನ್ನೇ ಬದುಕಾಗಿಸಿಕೊಂಡು, ವೃತ್ತಿ ಜೀವನ ಆರಂಭಿಸಿದಾಗಲೂ ಯಾವುದೇ ನಿರ್ದೇಶಕರನ್ನಾಗಲಿ ಅಥವಾ ನಿರ್ಮಾಪಕರನ್ನಾಗಲಿ ಭೇಟಿ ಆಗಲೂ ಸಾಧ್ಯವಾಗಲಿಲ್ಲ. ಚಿತ್ರರಂಗ ಎನ್ನುವುದು ನಿಜವಾಗಲೂ ನನಗೆ ಬಣ್ಣದ ಕನಸಾಯಿತು.
ಆದರೆ, ಆಯಾ ದಿನ ಹೊಟ್ಟೆ ತುಂಬಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿರಲಿಲ್ಲ. ಕೈ ತುಂಬಾ ದುಡಿಯದೇ ಹೋದರೂ ಕಷ್ಟ ಪಟ್ಟಾದರೂ ಹೊಟ್ಟೆ ತುಂಬಿಸಿಕೊಳ್ಳುವಷ್ಟು ಸಂಪಾದಿಸುತ್ತಿದ್ದೆ. ಜೀವನದಲ್ಲಿ ನಡೆದ ಕೆಲವು ದುರ್ಘಟನೆಗಳು ಜೀವನಕ್ಕೊಂದು ದಿಕ್ಕಿಲ್ಲದಂತೆ ಮಾಡಿದವು. ಈಗಲಾದರೂ ಅವಕಾಶ ಸಿಗಬಹುದೆಂಬ ಭರವಸೆ ಇದೆ. ಆ ದಿನ ಯಾವಾಗ ಬರುತ್ತೋ ಗೊತ್ತಿಲ್ಲ. ಬಸ್‌ಸ್ಟ್ಯಾಂಡಿನಲ್ಲಿ ಮಲಗುತ್ತಿದ್ದ ಯಶ್ ಎಂಬ ಪ್ರತಿಭಾನ್ವಿತ ನಟನೇ ನನಗೆ ಸ್ಫೂರ್ತಿ. ಅಂಥದ್ದೊಂದು ಒಳ್ಳೇ ದಿನ ನನಗೂ ಬರಬಹುದೆಂಬ ಆಸೆ ನನ್ನದು.
ನೀವು ನೀಡಿದ ಕಾರ್ಯಕ್ರಮಗಳ ಬಗ್ಗೆ ಒಂದಿಷ್ಟು ಹೇಳಿ...
ಸುಮಾರು 10,000 ನಾಟಕಗಳಲ್ಲಿ ನಟಿಸಿದ್ದೇನೆ. ರಾಜ್‌ಕುಮಾರ್ ಅವರನ್ನು ಅನುಕರಣೆ ಮಾಡಿ 4,000 ಸಾವಿರಕ್ಕೂ ಹೆಚ್ಚು ಶೋಗಳನ್ನು ನೀಡಿದ್ದೇನೆ. 70 ಆರ್ಕೆಸ್ಟ್ರಾ ಟೀಂನೊಂದಿಗೆ ಸುಮಾರು ಸಾವಿರ ಕಾರ್ಯಕ್ರಮಗಳಲ್ಲಿ ನನ್ನ ಕಲಾಭಿವ್ಯಕ್ತಿಗೆ ಅವಕಾಶಗಳು ಸಿಕ್ಕಿದ್ದವು. ಅಲ್ಲದೇ ಕಾರ್ಯಕ್ರಮದಲ್ಲಿ ಯಾರಾದರೂ ಕನ್ನಡ ಬಾರದವರು ಇದ್ದರೆ ಅವರನ್ನು ವೇದಿಕೆ ಮೇಲೆ ಕರೆಯಿಸಿ, ಹಾಡು ಹಾಡಿಸುವ ಕಲೆಯೂ ನನಗೆ ಸಿದ್ಧಿಸಿದೆ. ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಎಂಬ ಭಾವ ಮೂಡಿಸ ಬಲ್ಲೆ. ಇದು ನನ್ನ ಶಕ್ತಿ. ಇದು ಬೇರೆಯವನ್ನು ಆಕರ್ಷಿಸುವುದಲ್ಲದೇ, ನನಗೂ ಬಹಳ ತೃಪ್ತಿ ನೀಡುತ್ತದೆ.
ರಾಜ್ ಕುಟುಂಬದೊಂದಿಗೆ ಸಂಪರ್ಕ ಇದ್ಯಾ?
ಕನ್ನಡದ ಈ ಧೀಮಂತ ನಟನನ್ನು ಅವರ ಮನೆಯಲ್ಲಿಯೇ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅಷ್ಟೇ ಅಲ್ಲ ಅವರೊಟ್ಟಿಗೆ ಊಟವನ್ನೂ ಮಾಡಿದ್ದೇನೆ. ತಾವೊಬ್ಬ ಸಾಮಾನ್ಯ ವ್ಯಕ್ತಿಯಂತೆ ನನ್ನ ಜೊತೆ ಮಾತನಾಡಿದ್ದರು. ಆದರೆ ಅವರ ಮಕ್ಕಳಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿಲ್ಲ.
ಇದ್ದಕ್ಕಿದ್ದಂತೆ ಅವಕಾಶಗಳೇಕೆ ಕಡಿಮೆಯಾದವು?
ನಾನು ಯಾವತ್ತೂ ನನ್ನ ವಯಸ್ಸಿನ ಬಗ್ಗೆ ಯೋಚಿಸಿದವನೇ ಅಲ್ಲ. ಅಷ್ಟಕ್ಕೂ ಕಲೆಗೆಲ್ಲಿಯ ವಯಸ್ಸಿನ ಹಂಗು ಹೇಳಿ? ಉತ್ಸಾಹದಿಂದಲೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಅವತ್ತೊಂದಿನ ಕಾರ್ಯಕ್ರಮವೊಂದನ್ನು ಮುಗಿಸಿ, ಸಿಗ್ನಲ್‌ನಲ್ಲಿ ಕಾಯುತ್ತಿದೆ. ಯಮಸದೃಶಿ ಕಾರೊಂದು ರಾಂಗ್ ಸೈಡಿನಿಂದ ಬಂದು ಡಿಕ್ಕಿ ಹೊಡೆಯಿತು. ಇದು ನನ್ನ ಜೀವನದ ಅತೀ ದೊಡ್ಡ ಪೆಟ್ಟು. ನಿಂತು ಕಾರ್ಯಕ್ರಮ ಕೊಡಲೂ ಆಗದಷ್ಟು ನೋವು ನನ್ನನ್ನು ಕಾಡಿತ್ತು.
ಇನ್ನೇನು ಸುಧಾರಿಸಿಕೊಳ್ಳುತ್ತಿದ್ದೆ. ನಿಧಾನವಾಗಿ ಫುಟ್‌ಪಾತಿನಲ್ಲಿ ನಡೆದುಕೊಂಡು ಹೋಗುವಷ್ಟು ಶಕ್ತಿ ಬಂದಿತ್ತು. ಅದೇನು ಗ್ರಹಾಚಾರವೋ ಏನೋ, ಮತ್ತದೇ ರಾಂಗ್ ಸೈಡಲ್ಲಿ ಬಂದ ಗಾಡಿಯೊಂದು ಬಂದು ಗುದ್ದಿತು. ಆಗ ಕತ್ತು ತಿರುಗಿಸಲೂ ಕಷ್ಟವಾಗುವಷ್ಟು ಪೆಟ್ಟು ಬಿತ್ತು. ಯಾವುದೋ ಒಂದು ಆ್ಯಂಗಲ್‌ನಲ್ಲಿ ಮಾತ್ರ ಅಣ್ಣನಂತೆ ನಟಿಸುವಂತಾದೆ. ದೈಹಿಕವಾಗಿ ಶಕ್ತಿ ಬರಲೇ ಇಲ್ಲ. ಆದರೂ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಕಲಾ ಪ್ರದರ್ಶನಕ್ಕೊಂದು ವೇದಿಕೆ ಸಿಕ್ಕಾಗ ಕಲಾವಿದ ತನ್ನೆಲ್ಲಾ ನೋವನ್ನೂ ಮರೆಯುತ್ತಾನೆ. ಹಾಗೆಯೇ ನನಗೂ ಆಗುತ್ತಿತ್ತು. ಒಳಗಿನ ಕಲೆ ಅನಾವರಣಗೊಂಡಾಗ ನಿರಾಳವಾಗುತ್ತಿದ್ದೆ. ಹೊಟ್ಟೆ ತುಂಬುವಷ್ಟು ಊಟಕ್ಕೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆ. ಈಗಲೂ ಗುಬ್ಬಿ ಕಂಪನಿಯಲ್ಲಿ ಒಂದೊಂದು ಅವಕಾಶಗಳು ಸಿಗುತ್ತವೆ. ಖುಷಿಯಾಗಿ ನಟಿಸುತ್ತೇನೆ. ಆದರೆ, ಹೊಟ್ಟೆಪಾಡಿಗಾಗುವಷ್ಟು ಅವಕಾಶಗಳು ಸದಾ ಸಿಗೋಲ್ಲ ಎನ್ನುವ ನೋವು ನನಗೆ.
ಕನ್ನಡಿಗರು, ಸರಕಾರ, ಚಿತ್ರರಂಗದಿಂದ ಏನು ನಿರೀಕ್ಷಿಸುತ್ತೀರಿ?
ನನ್ನಲ್ಲಿರುವ ಕಲಾಭಿವ್ಯಕ್ತಿಗೆ ಮತ್ತಷ್ಟು ಒಳ್ಳೆ ವೇದಿಕೆಗಳು ಸಿಕ್ಕರೆ ಸಾಕು. ನನ್ನ ಕೈಲಾದಷ್ಟು ಜನರನ್ನು ಮನೋರಂಜಿಸುತ್ತಾ ಖುಷ್ ಖುಷಿಯಾಗಿರುತ್ತೇನೆ. ಅಭಿನಯನದಲ್ಲಿಯೇ ಮೋಡಿ ಮಾಡೋ ಕಲೆ ನನಗಿದೆ. ಅದರಿಂದಲೇ ಜನರನ್ನು ರಂಜಿಸಿ, ನಾನು ಖುಷಿಯಾಗುತ್ತೇನೆ. ವೃದ್ಧ ಕಲಾವಿದರಿಗೆ ನೀಡುವ ಮಾಸಾಶನವೂ ನನಗೆ ಸಿಗುತ್ತಿಲ್ಲ. ಅದೂ ಸಿಕ್ಕರೆ ದಿನಾ ಹೊಟ್ಟೆ ತುಂಬಾ ಊಟ ಮಾಡವಂತಾಗುತ್ತದೆ. ಒಟ್ಟಿನಲ್ಲಿ ಕಲಾವಿದನಿಗೆ ಅವಕಾಶಗಳು ಬೇಕು. ಅದು ಸಿಕ್ಕರೆ ಬದುಕು ಸಾರ್ಥಕ.....
ಸುಂದರೇಶ್ ಜೂನಿಯರ್ ರಾಜ್‌ಕುಮಾರ್ ಸಂಪರ್ಕಿಸಲು: 9845760336,9901934122