ಸತತ ಮೂರು ಸೋಲು ಯಾವುದೇ ರಾಜಕಾರಣಿಯನ್ನು ಕಂಗೆಡಿಸುವುದು ಸಹಜ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿಗೂ ಅದೇ ಆಗಿದೆ. ಚನ್ನಪಟ್ಟಣದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ನಿಖಿಲ್‌ ಪಾಲಿಗೆ ಕುರುಕ್ಷೇತ್ರದ ಶಾಪ ಮುಂದುವರಿದಿದೆ.

ಬೆಂಗಳೂರು (ನ.23): ಒಂದು ಸೋಲು ಯಾವೆಲ್ಲಾ ರೀತಿಯ ಚರ್ಚೆಗೆ ಆಸ್ಪದ ನೀಡಬಹುದು ಅನ್ನೋದಕ್ಕೆ ಇದು ಉದಾಹರಣೆ. ಐದು ವರ್ಷದ ಹಿಂದಿನ ಕುರುಕ್ಷೇತ್ರ ಸಿನಿಮಾಕ್ಕೂ ಚನ್ನಪಟ್ಟಣದಲ್ಲಿ ನಿಖಿಲ್‌ ಸೋಲಿಗೂ ಜನ ಲಿಂಕ್‌ ಕಲ್ಪಿಸುತ್ತಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್‌ ನಟನೆ ಮಾಡಿದ್ದೇ, ಅವರ ರಾಜಕೀಯದ ದುರಾದೃಷ್ಟಕ್ಕೆ ಕಾರಣ ಎಂದೇ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಹಿಂದೆ ಸಾಕಷ್ಟು ಬಾರಿ ಚರ್ಚೆಯಾಗಿದ್ದರೂ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ವಿರುದ್ಧದ ಸೋಲಿನ ಬಳಿಕ ಈ ಚರ್ಚೆ ಮತ್ತಷ್ಟು ಮುನ್ನಲೆಗೆ ಬಂದಿದೆ. ಹೌದು 5 ವರ್ಷd ಹಿಂದೆ ನಾಗಣ್ಣ ನಿರ್ದೇಶನದ ಮುನಿರತ್ನ ಕುರುಕ್ಷೇತ್ರ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ನಟಿಸಿದ ಪಾತ್ರಧಾರಿಗಳಿಗೆ ಅಂದಿನಿಂದ ಇಂದಿನಿವರೆಗೂ ಒಂದಲ್ಲಾ ಒಂದು ಹಿನ್ನಡೆಗಳು ಆಗುತ್ತಲೇ ಇದೆ. ದರ್ಶನ್‌ ಹಾಗೂ ಮುನಿರತ್ನ ಜೈಲು ಪಾಲಾದಾಗಲೂ ಇದರ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ನಡೆದಿದ್ದವು. ಆಗೆಲ್ಲಾ ಇದು ಕಾಕತಾಳೀಯ ಎಂದೇ ಹೇಳಲಾಗುತ್ತಿತ್ತು. ಆದರೆ, ನಿಖಿಲ್ ಸೋಲಿನ ಬಳಿಕ ಇಂಥ ಶಾಪ, ಅದೃಷ್ಟಗಳನ್ನು ನಂಬುವ ರಾಜಕೀಯ ವಲಯದಲ್ಲೂ ಇದರ ಚರ್ಚೆ ಜೋರಾಗಿದೆ.

ನಿಖಿಲ್‌ ಕುಮಾರಸ್ವಾಮಿ 'ಮುನಿರತ್ನ ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದರು. ಆದರೆ, ಅಂದಿನಿಂದಲೂ ನಿಖಿಲ್‌ಗೆ ರಾಜಕೀಯ ಅನ್ನೋದು ಚಕ್ರವ್ಯೂಹವೇ ಆಗಿ ಪರಿಣಮಿಸಿದೆ. ಸೋಲಿನ ಚಕ್ರವ್ಯೂಹದಿಂದ ಎದ್ದು ಬರುವುದು ಅವರಿಗೆ ಸಾಧ್ಯವಾಗುತ್ತಲೇ ಇಲ್ಲ. ಮಂಡ್ಯ ಸಂಸತ್‌ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ಎದುರು ಸೋಲು ಕಂಡಿದ್ದ ನಿಖಿಲ್‌ ಕುಮಾರಸ್ವಾಮಿ, ಆ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸ್ಪರ್ಧೆ ಅಲ್ಲಿಯೂ ಸೋಲು ಕಂಡಿದ್ದರು. ಈಗ ಚನ್ನಪಟ್ಟಣದಲ್ಲೂ ಸೋಲು ಕಂಡಿದ್ದಾರೆ. ಕುರುಕ್ಷೇತ್ರದ ಶಾಪ ಅವರಿಗೆ ತಟ್ಟಿರುವುದು ನಿಜವಂತೆ ಕಾಣುತ್ತಿದ್ದು, ಅಭಿಮನ್ಯುವಿನ ರೀತಿ ಗೆಲುವು ಸಿಗುತ್ತಲೇ ಇಲ್ಲ.

ಇದೇ ಸಿನಿಮಾದಲ್ಲಿ ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದ ದರ್ಶನ್‌ ತೂಗುದೀಪ ಈಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಗಿದ್ದಾರೆ. ಈ ಕೇಸ್‌ನಲ್ಲಿ ಅವರ ಭವಿಷ್ಯ ಏನಾಗಲಿದೆ ಅನ್ನೋದು ಎಲ್ಲರಲ್ಲಿಯೂ ಇರುವು ಕುತೂಹಲ. ಆ ಬಳಿಕ ಈ ಸಿನಿಮಾದ ನಿರ್ಮಾಪಕರಾಗಿದ್ದ ಮುನಿರತ್ನ, ಜಾತಿನಿಂದನೆ ಹಾಗೂ ರೇಪ್‌ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಜಾಮೀನಿನ ಮೇಲೆ ಅವರು ಹೊರಬಂದಿದ್ದರೂ, ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಂತೂ ಬಿದ್ದಂತಾಗಿದೆ.

ಇನ್ನು ನಿರ್ದೇಶಕ ನಾಗಣ್ಣ, 2019ರಲ್ಲಿ ಮಾಡಿದ ಕುರುಕ್ಷೇತ್ರ ಸಿನಿಮಾವೇ ಕೊನೆ. ಅದಾದ ಬಳಿಕ ಅವರು ನಿರ್ದೇಶನದಿಂದ ದೂರ ಉಳಿದುಕೊಂಡು ಬಿಟ್ಟಿದ್ದಾರೆ. ಯಾವುದೇ ಹೊಸ ಪ್ರಾಜೆಕ್ಟ್‌ಗಳೂ ಅವರ ಕೈಯಲ್ಲಿಲ್ಲ. ಗಣೇಶ್‌ ಜೊತೆ 2019ರ ಮಾಡಿದ ಗಿಮಿಕ್‌ ಸಿನಿಮಾದೊಂದಿಗೆ ಅವರ ನಿರ್ದೇಶನ ಕೂಡ ಹೆಚ್ಚೂ ಕಡಿಮೆ ಅಂತ್ಯವಾಗಿದೆ.

ಜಾರ್ಖಂಡ್‌ನಲ್ಲಿ ಹೇಮಂತ್‌ ಕೈಹಿಡಿದ INDIA ಮಹಿಳೆಯರು, ವರ್ಕ್‌ ಆಗದ ಬಿಜೆಪಿಯ ಮಾಟಿ, ಬೇಟಿ, ರೋಟಿ!

ಅಂಬರೀಷ್‌ ಈ ಸಿನಿಮಾದಲ್ಲಿ ಭೀಷ್ಮನ ಪಾತ್ರದಲ್ಲಿ ನಟಿಸಿದ್ದರು. ಬಾಣದ ಹಾಸಿಗೆಯ ಮೇಲೆ ಮಲಗುವ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿತ್ತು. ಆದರೆ, ಈ ಸಿನಿಮಾ ತೆರೆಗೆ ಬರುವ ಮುನ್ನವೇ ಅಂಬರೀಷ್‌ ಇಹಲೋಕ ತ್ಯಜಿಸಿದರು. ಕೃಷ್ಣನ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್‌ ಪಾಲಿಗೆ ಕುರುಕ್ಷೇತ್ರದ ಬಳಿಕ ಯಶಸ್ಸೇ ಸಿಕ್ಕಿಲ್ಲ. ಮಾಡಿದ ಎಲ್ಲಾ ಸಿನಿಮಾಗಳೂ ಫ್ಲಾಪ್‌. ಹೆಚ್ಚಾಗಿ ಅವರು ಕಿರುತೆರೆಯ ಡಾನ್ಸ್‌ ಶೋ, ಕಾಮಿಡಿ ಶೋಗಳ ಜಡ್ಜ್‌ ಸ್ಥಾನಗಳಿಗೆ ಸೀಮಿತವಾಗಿದ್ದಾರೆ. ಈ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಿದ್ದ ಅರ್ಜುನ್‌ ಸರ್ಜಾ ಮೇಲೆ ಮೀ ಟೂ ಆರೋಪ ಕೇಳಿ ಬಂದಿತ್ತು. 

ಏಕ್‌ನಾಥ್‌ ಶಿಂಧೆ-ದೇವೇಂದ್ರ ಫಡ್ನವಿಸ್‌, ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ?

ದುರ್ಯೋಧನನ ಪತ್ನಿ ಭಾನುಮತಿ ಪಾತ್ರದಲ್ಲಿ ನಟಿಸಿದ್ದ ನಟಿ ಮೇಘನಾ ರಾಜ್‌ ಜೀವನ ಕೂಡ ಈ ಸಿನಿಮಾದಂತೆಯೇ ಆಯಿತು. ಕುರುಕ್ಷೇತ್ರದಲ್ಲಿ ಗಂಡನನ್ನು ಕಳೆದುಕೊಂಡಂತೆ, ನಿಜ ಜೀವನದಲ್ಲೂ ಅವರ ಪತಿ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ತುತ್ತಾದರು.