ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.
ಕನ್ನಡ ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ. 'ತಾಜ್‌ಮಹಲ್' ಚಿತ್ರದ ಈ ಸೂಪರ್ ಹಿಟ್ ಮೆಲೋಡಿಯ ಮೂಲಕ ಕನ್ನಡಿಗರ ಮನಗೆದ್ದಿದ್ದ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲ ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಅಜಯ್ ರಾವ್ ಅಭಿನಯದ ಬಹುನಿರೀಕ್ಷಿತ 'ಪಾರ್ಟ್ನರ್' ಚಿತ್ರದ ಮೊದಲ ಸಿಂಗಲ್ 'ಅಮೋರಾ' ಹಾಡಿಗೆ ಕುನಾಲ್ ಗಾಂಜಾವಾಲ ತಮ್ಮ ಧ್ವನಿ ನೀಡಿದ್ದಾರೆ. ಜುಲೈ 27ರಂದು ಬಿಡುಗಡೆಯಾಗಲಿರುವ ಈ ಹಾಡು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಕುನಾಲ್ ಅವರ ವಿಶಿಷ್ಟ ಧ್ವನಿಯನ್ನು ಮತ್ತೆ ಕನ್ನಡ ರೊಮ್ಯಾಂಟಿಕ್ ಹಾಡಿನಲ್ಲಿ ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ.
2000ರ ದಶಕದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದ ಕುನಾಲ್ ಗಾಂಜಾವಾಲ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. 'ಆಕಾಶ್', 'ಐಶ್ವರ್ಯ', 'ಅರಸು', 'ಮುಂಗಾರು ಮಳೆ', 'ಚಾರ್ಮಿನಾರ್', 'ಅರಮನೆ', 'ಮಿಲನ', 'ಶೌರ್ಯ' ಹಾಗೂ 'ಚೆಲುವಿನ ಚಿತ್ತಾರ' ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಮೆಚ್ಚಿನವುಗಳಾಗಿವೆ.
ಕುನಾಲ್ ಅವರ ಭಾವಪೂರ್ಣ ಗಾಯನ ಶೈಲಿ ಮತ್ತು ಹಾಡಿನ ಭಾವನೆಗೆ ತಕ್ಕಂತೆ ಧ್ವನಿಯನ್ನು ಹೊಂದಿಸುವ ಸಾಮರ್ಥ್ಯ ಅವರನ್ನು ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನಕ್ಕೇರಿಸಿತ್ತು. ಹಲವು ಭಾರತೀಯ ಭಾಷೆಗಳಲ್ಲಿ ಹಾಡುತ್ತಾ ಬಂದಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಅವರ ಹಾಡುಗಳ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಅವರ ಈ ಮರಳುವಿಕೆ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.
ಹೊಸ ಸ್ಟೈಲಿಶ್ ಲುಕ್
'ಅಮೋರಾ' ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಪುದುಚೇರಿ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ಅಜಯ್ ರಾವ್ ಅವರನ್ನು ಹೊಸ ಸ್ಟೈಲಿಶ್ ಲುಕ್‌ನಲ್ಲಿ ತೋರಿಸಲಾಗಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ಹಾಡಿನ ದೃಶ್ಯ ವೈಭವದ ಮೇಲೆ ಚಿತ್ರತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
'ಧೈರ್ಯಂ' ಚಿತ್ರದ ಬಳಿಕ ನಿರ್ದೇಶಕ ಶಿವ ತೇಜಸ್ ಮತ್ತು ಅಜಯ್ ರಾವ್ ಅವರ ಎರಡನೇ ಸಹಯೋಗವಾಗಿರುವ 'ಪಾರ್ಟ್ನರ್' ಸಿನಿಮಾ ಆಧುನಿಕ ಸಂಬಂಧಗಳ ಕುರಿತಾದ ಕಥೆಯನ್ನು ಹೊಂದಿದೆ. ಪ್ರೀತಿ, ಬ್ರೇಕಪ್, ಲಿವ್-ಇನ್ ಸಂಬಂಧಗಳು ಹಾಗೂ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ನಂಬಿಕೆ ಮತ್ತು ಬದ್ಧತೆಯ ಮಹತ್ವವನ್ನು ಸಿನಿಮಾ ಹೇಳಲಿದೆ ಎಂದು ಚಿತ್ರತಂಡ ತಿಳಿಸಿದೆ.
ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕುನಾಲ್ ಗಾಂಜಾವಾಲ ಅವರ ಧ್ವನಿ ಹಾಗೂ ಅಜಯ್ ರಾವ್ ಅವರ ರೊಮ್ಯಾಂಟಿಕ್ ಇಮೇಜ್ ಮತ್ತೊಮ್ಮೆ ಒಂದಾಗುತ್ತಿರುವುದರಿಂದ 'ಪಾರ್ಟ್ನರ್' ಚಿತ್ರದ ಸಂಗೀತದ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.


