ಯಶ್‌ ಅಮ್ಮ ಅಂತ ಕರೆಸಿಕೊಳ್ಳೋದಕ್ಕಿಂತಲೂ ಡ್ರೈವರ್‌ ಹೆಂಡ್ತಿ ಅಂತ ಗುರುತಿಸಿಕೊಳ್ಳೋದೇ ನನಗೆ ಇಷ್ಟ. ನಾನು ಓದಿದ್ದು ಐದನೇ ಕ್ಲಾಸ್‌, ಕನ್ನಡ ಮೀಡಿಯಂ. ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್‌ ಅವರ ಮಾತುಗಳಿವು.

‘ರಾಕಿಂಗ್‌ ಸ್ಟಾರ್‌ ಯಶ್‌ ಅಮ್ಮ ಅಂತ ಕರೆಸಿಕೊಳ್ಳೋದಕ್ಕಿಂತಲೂ ಡ್ರೈವರ್‌ ಹೆಂಡ್ತಿ ಅಂತ ಗುರುತಿಸಿಕೊಳ್ಳೋದೇ ನನಗೆ ಇಷ್ಟ. ನಾನು ಓದಿದ್ದು ಐದನೇ ಕ್ಲಾಸ್‌, ಕನ್ನಡ ಮೀಡಿಯಂ. ಯಶ್‌ ಹೇಳ್ತಾನೆ, ಜೀವನ ಓದಿದ್ದೀಯ ಬಿಡಮ್ಮ ಸಾಕು ಅಂತ.’ -‘ಕೊತ್ತಲವಾಡಿ’ ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್‌ ಅವರ ಮಾತುಗಳಿವು. ಆಗಸ್ಟ್‌ 1ಕ್ಕೆ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಅವರು ಆಯ್ದ ಪತ್ರಕರ್ತರೊಂದಿಗೆ ಬದುಕು, ಸಿನಿಮಾ ಪ್ರೀತಿ ಬಗ್ಗೆ ಮಾತನಾಡಿದರು.

‘ಸಿನಿಮಾ ಬಿಟ್ಟರೆ ಕೃಷಿ, ಅಡುಗೆ ಮನೆ, ಮನೆಗೆಲಸ ಬಹಳ ಪ್ರೀತಿ. ಎಲ್ಲಾ ಸೌಕರ್ಯ ಇದ್ದರೂ ಇವತ್ತಿಗೂ ನನ್ನ ಮನೆ ಕೆಲಸ ನಾನೇ ಮಾಡ್ತೀನಿ. ಹಾಸನದಲ್ಲಿ ನೂರು ಎಕರೆಗೂ ಹೆಚ್ಚು ಜಮೀನಿದೆ. ಅಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ತೀನಿ. ಮೊಮ್ಮಕ್ಕಳಲ್ಲಿ ಕೃಷಿ ಪ್ರೀತಿ ಬೆಳೆಸಬೇಕು ಅಂತ ಅವರಿಗಾಗಿ ಕೆಲವು ಗಿಡ ನೆಟ್ಟಿದ್ದೀನಿ. ಸಿನಿಮಾ ನಿರ್ಮಾಣ ನನ್ನ ಕನಸು. ಇದರಲ್ಲಿ ಎತ್ತರಕ್ಕೆ ಬೆಳೆಯುವ ಆಸೆ ಇದೆ. ನಾನು ಯಾವ ಲೆವೆಲ್‌ ತನಕ ಹೋಗಬೇಕು ಅಂದ್ಕೊಂಡಿದ್ದೀನಿ ಅನ್ನೋದನ್ನು ಮಾಡಿ ತೋರಿಸ್ತೀನಿ, ಮಾಡೋ ಮೊದಲೇ ಆ ಬಗ್ಗೆ ಹೇಳೋದು ಮೂರ್ಖತನ ಆಗುತ್ತೆ. ನಿರ್ಮಾಣಕ್ಕಿಳಿದ ಮೇಲೆ ಸಿನಿಮಾ ಸೋತರೂ ತಾಳಿಕೊಳ್ಳುವ ಸಾಮರ್ಥ್ಯ ಬೇಕು. ಅದಕ್ಕಾಗಿ ಆ ಶಕ್ತಿ ಬಂದಮೇಲೇ ನಿರ್ಮಾಣಕ್ಕಿಳಿದಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಕೊತ್ತಲವಾಡಿ ನನ್ನ ಸಿನಿಮಾ ಜರ್ನಿಯಲ್ಲಿ ಮೊದಲ ಹೆಜ್ಜೆ. ಇದಾಗಿ ಶರಣ್‌ ಜೊತೆಗೆ ಹೊಸ ಸಿನಿಮಾ ಮಾಡುತ್ತೇನೆ. ಸದ್ಯಕ್ಕಂತೂ ದೊಡ್ಡ ಬಜೆಟ್‌ ಚಿತ್ರ ಮಾಡುವಷ್ಟು ಚೈತನ್ಯ ಬಂದಿಲ್ಲ’ ಎಂದರು. ‘ಯಶ್‌ ಹಾಗೂ ನನ್ನ ನಡುವೆ ಇರುವುದು ತಾಯಿ ಮಗನ ಸಂಬಂಧ ಮಾತ್ರ. ಈ ಸಿನಿಮಾದಲ್ಲಿ ಆತನ ಕೊಡುಗೆ ಇಲ್ಲ. ಆತ ಸಿನಿಮಾ ಕ್ಷೇತ್ರಕ್ಕೆ ಬಂದಾಗಲೂ ನಾನೆಲ್ಲೂ ಮೂಗು ತೂರಿಸಿಲ್ಲ. ತಾಯಿಯಾಗಿ ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ, ಮಗನನ್ನು ಸರಿಯಾಗಿ ಬೆಳೆಸಿದ ಹೆಮ್ಮೆ ಇದೆ. ಅವನು ಪ್ರೇಮದಲ್ಲಿ ಬಿದ್ದಾಗಲೂ ಖಡಕ್ಕಾಗಿ ಎಚ್ಚರಿಕೆಯ ಮಾತು ಹೇಳಿದ್ದೆ. ಇವತ್ತಿಗೂ ಯಶ್‌ ನನಗೆ ಎದುರಾಡುವುದಿಲ್ಲ. ಅಮ್ಮನ ಭಯ ಇದ್ದೇ ಇದೆ’ ಎಂದು ಹೇಳಿದ್ದಾರೆ.

ನಾಯಕ ಪೃಥ್ವಿ ಅಂಬಾರ್‌, ‘ಯಶ್‌ ತಾಯಿ ಈ ಸಿನಿಮಾ ನಿರ್ಮಿಸುತ್ತಿರುವ ಸುದ್ದಿ ಗೊತ್ತಾದದ್ದು ಕೊನೆಯ ಹಂತದಲ್ಲಿ. ನನಗೆ ಮೊದಲಿಂದಲೂ ಎಮೋಶನಲ್‌ ಸಿನಿಮಾಕ್ಕಿಂತಲೂ ಆ್ಯಕ್ಷನ್‌ ಸಿನಿಮಾ ಹೆಚ್ಚು ಇಷ್ಟ. ಕರಾವಳಿ ಹಿನ್ನೆಲೆಯ ನಾನು ಈ ಚಿತ್ರದಲ್ಲಿ ಮಂಡ್ಯ ಸೊಗಡಿನಲ್ಲಿ ಮಾತನಾಡಿದ್ದೇನೆ. ನನ್ನ ಪಾತ್ರಕ್ಕಿಂತಲೂ ಗೋಪಾಲಕೃಷ್ಣ ದೇಶಪಾಂಡೆ ಪಾತ್ರ ಹೆಚ್ಚು ಕಾಡುವಂತಿದೆ. ನಾನು ಅವರ ಫ್ಯಾನ್‌’ ಎಂದರು. ನಿರ್ದೇಶಕ ಶ್ರೀರಾಜ್‌, ‘ಇದು ಒಂದೂರಿನ ಹಲವು ಮುಖಗಳನ್ನು ತೆರೆದಿಡುವ ಕಥಾಹಂದರ. ರಾಜಕೀಯ, ಪ್ರೀತಿ, ದ್ವೇಷ ಎಲ್ಲದರ ಎರಕ ಈ ಚಿತ್ರದಲ್ಲಿದೆ’ ಎಂದರು. ನಾಯಕಿ ಕಾವ್ಯಾ, ‘ನನ್ನ ಪಾತ್ರಕ್ಕೆ ಮಹತ್ವ ಇರುವುದನ್ನು ಮನಗಂಡು ಸಿನಿಮಾದಲ್ಲಿ ನಟಿಸಲು ಒಪ್ಪಿದೆ’ ಎಂದರು.