ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ತಾರಕಕ್ಕೇರಿರುವ ನಡುವೆಯೇ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್, ‘ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ’ ಎಂದು ಉತ್ತರಿಸಿದ್ದಾರೆ.
ಬೆಂಗಳೂರು (ಡಿ.24): ಸ್ಯಾಂಡಲ್‌ವುಡ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ನಡುವಿನ ಸ್ನೇಹ ಸಂಬಂಧ ಸರಿಯಾಗಿಲ್ಲ ಎಂಬ ವದಂತಿ ಜಗಜ್ಜಾಹೀರಾಗಿದೆ. ಹೀಗಿರುವಾಗ ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಬಗ್ಗೆ ‘ಯಾವಾಗಲೂ ಆವರಿಗೆ ಶುಭ ಹಾರೈಸುತ್ತೇನೆ’ (Always wish him the best.) ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೊರಗಡೆ ಒಂದು ಪಡೆಯಿದೆ, ಅದರ ವಿರುದ್ಧ ಯುದ್ಧಕ್ಕೆ ಸಿದ್ಧ ಎಂಬ ಮಾತನ್ನು ಹೇಳಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಡೆವಿಲ್ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ, ದರ್ಶನ್ ಬೆಂಗಳೂರಲ್ಲಿದ್ದಾಗ ಒಂದೂ ಮಾತನಾಡದವರು ಈಗ ಮಾತನಾಡುತ್ತಾರೆ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ಅವರಿಗೆ ಟಾಂಗ್ ಕೊಡುವ ಅರ್ಥದಲ್ಲಿಯೇ ಮಾತನಾಡಿದ್ದರು.
ಈ ಬಗ್ಗೆ ಸುದೀಪ್ ಅವರು ನಾನು ಪೈರಸಿ ಮಾಡುವವರ ಬಗ್ಗೆ ಈ ಹೇಳಿಕೆ ನೀಡಿದ್ದೆ. ಅವರ ವಿರುದ್ಧವೇ ಯುದ್ಧ ಮಾಡು ಸಿದ್ಧ ಎಂಬ ಅರ್ಥದಲ್ಲಿ ಮಾತನಾಡಿದ್ದಾಗಿ ಸ್ಪಷ್ಟೀಕರಣ ನೀಡಿದ್ದರು. ಆದರೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ನಡೆಯುತ್ತಿದೆ. ಡೆವಿಲ್ ಸಿನಿಮಾ ಮತ್ತು ಮಾರ್ಕ್ ಸಿನಿಮಾಗಳ ಬಗ್ಗೆ ಫ್ಯಾನ್ ವಾರ್ ನಡೆಯುತ್ತಿರುವಾಗಲೇ ನಟ ಕಿಚ್ಚ ಸುದೀಪ್ ತಮ್ಮ ಹಳೆಯ ಗೆಳೆಯನ ಬಗ್ಗೆ ಒಳ್ಳೆಯ ಅಭಿಪ್ರಾಯವೊಂದನ್ನು ಹಂಚಿಕೊಂಡು ಸಿನಿಮಾಗೆ ಶುಭ ಕೋರಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಬಗ್ಗೆ ಒಂದು ಮಾತು ಹೇಳಿ
ಸುದೀಪ್ ಅವರು ತಮ್ಮ ಸಿನಿಮಾ ಅಥವಾ ಕೆಲವು ಪ್ರಮುಖ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡುವಾಗ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಅಭಿಮಾನಿಗಳಿಂದ ಪ್ರಶ್ನೆಗಳೇನಿದ್ದರೂ ಕೇಳಿ ಎಂದು (#AskKichcha...) ಅವಕಾಶ ನೀಡುತ್ತಾರೆ. ಹೀಗೆ ನೀಡಿದ ಆಸ್ಕ್ ಕಿಚ್ಚ ಸಮಯದಲ್ಲಿ ಕಿರಾತಕ ಎನ್ನುವ ಖಾತೆಯಿಂದ ಒಬ್ಬರು ದರ್ಶನ್ ಮತ್ತು ಸುದೀಪ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡು, 'ದರ್ಶನ್ ಬಗ್ಗೆ ಒಂದು ಮಾತು ಹೇಳಿ' ಎಂದು ಕೇಳುತ್ತಾರೆ.
ಇದಕ್ಕೆ ಸಾಮಾಜಿಕ ಜಾಲತಾಣದಲ ಮೂಲಕ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಅವರು ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ ಎಂದು ಹೇಳಿದರು. ಈ ಮೂಲಕ ದರ್ಶನ್ ಜೊತೆಗೆ ತಾವಿರುವ ಫೋಟೋಗೆ ರಿಪ್ಲೈ ಮಾಡಿದ್ದರಿಂದ, ಅದು ಸಾಮಾಜಿಕ ಜಾಲತಾಣದಲ್ಲಿ ಪುನಃ ಶೇರ್ ಆಗಿದೆ. ದರ್ಶನ್ ಬಗ್ಗೆ ಶುಭ ಕೋರುತ್ತೇನೆ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಟರ ಫ್ಯಾನ್ಸ್ ವಾರ್‌ಗೆ ಫುಲ್ ಸ್ಟಾಪ್ ಇಡುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ಹೇಳಬಹುದು.


