ನಮ್ಮ ಸಿನಿಮಾ ಟೀಮ್‌ನಲ್ಲಿ 11 ಮಂದಿ ಇದ್ದಾರೆ, ನಮ್ಮ ಎದುರಾಳಿಗಳು 33 ಮಂದಿ ಇದ್ದಾರೆ. ಆದರೂ ಪೈರಸಿ ವಿರುದ್ಧ ನಮ್ಮ ತೀವ್ರ ಹೋರಾಟ ನಡೆಸಿಯೇ ಸಿದ್ಧ. ಶೇ.80ರಷ್ಟಾದರೂ ಪೈರಸಿ ತಡೆಯುತ್ತೇವೆ ಎಂಬ ಮಾತನ್ನೂ ಸುದೀಪ್‌ ಹೇಳಿದರು.

‘ಮಾರ್ಕ್‌’ ಸಿನಿಮಾ ಪ್ರಚಾರದ ವೇಳೆ ‘ಯುದ್ಧಕ್ಕೆ ಸಿದ್ಧ’ ಎಂಬ ವೀರಾವೇಶದ ಮಾತನ್ನಾಡಿದ್ದ ಸುದೀಪ್‌ ಆ ಬಳಿಕ ತಾನು ಯುದ್ಧ ಸಾರಿದ್ದು ‘ಪೈರಸಿ’ ವಿರುದ್ಧ ಎಂದರು. ಇದೀಗ ನಡೆದ ಸುದ್ದಿಗೋಷ್ಠಿಯಲ್ಲಿ ‘ವೇದಿಕೆಯಲ್ಲೇ ಸ್ಪಷ್ಟವಾಗಿ ಪೈರಸಿಯ ವಿರುದ್ಧ ಯುದ್ಧ ಎನ್ನಬಹುದಿತ್ತಲ್ಲಾ’ ಎಂಬ ಪತ್ರಕರ್ತರ ಪ್ರಶ್ನೆಗೆ ‘ನನ್ನ ಮಾತಲ್ಲಿ ಪೈರಸಿ ಪದ ಬಳಸೋದು ಬಿಡೋದು ನನ್ನಿಷ್ಟ’ ಎಂಬ ಉತ್ತರವನ್ನು ನೀಡಿದ್ದಾರೆ.

ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಎಂದೂ ಯಾರ ಬಗ್ಗೆಯೂ ಹಗುರವಾದ ಮಾತು ಆಡಿಲ್ಲ. ಹಾಗಿರುವಾಗ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಅಂಥಾ ಮಾತಾಡ್ತೀನಾ. ಸಂಭ್ರಮದಿಂದ ಸಿನಿಮಾ ಪ್ರಿ ರಿಲೀಸ್‌ ಈವೆಂಟ್‌ನಲ್ಲಿ ಪಾಲ್ಗೊಳ್ಳಬೇಕು ಅಂತಿದ್ದಾಗ ನನ್ನ ಸಿನಿಮಾ ವಿರುದ್ಧ ಬಹುದೊಡ್ಡ ಪಡೆ ಪೈರಸಿಗೆ ನಿಂತಿರುವುದು ತಿಳಿಯಿತು. ಬಹಳ ನೋವಾಯಿತು. ನಾನು ಆ ವೇದಿಕೆಯಲ್ಲಿ ಆಡಿದ ಮಾತು ಪೈರಸಿ ಮಾಡುವ ಹುನ್ನಾರದಲ್ಲಿದ್ದವರಿಗೆ ತಾಗಿದೆ. ಅದೇ ನನಗೂ ಬೇಕಿತ್ತು. ಯಾರೋ ಬಾಲಿಶವಾಗಿ ಏನೋ ಹೇಳಿದ ಮಾತ್ರಕ್ಕೆ ಅದಕ್ಕೆಲ್ಲ ರಿಯಾಕ್ಟ್‌ ಮಾಡೋದಕ್ಕಾಗಲ್ಲ ಎಂದು ಸುದೀಪ್‌ ಹೇಳಿದರು.

ನಮ್ಮ ಸಿನಿಮಾ ಟೀಮ್‌ನಲ್ಲಿ 11 ಮಂದಿ ಇದ್ದಾರೆ, ನಮ್ಮ ಎದುರಾಳಿಗಳು 33 ಮಂದಿ ಇದ್ದಾರೆ. ಆದರೂ ಪೈರಸಿ ವಿರುದ್ಧ ನಮ್ಮ ತೀವ್ರ ಹೋರಾಟ ನಡೆಸಿಯೇ ಸಿದ್ಧ. ಶೇ.80ರಷ್ಟಾದರೂ ಪೈರಸಿ ತಡೆಯುತ್ತೇವೆ. ಇದು ಮುಂಬರುವ ಸಿನಿಮಾಗಳಿಗೂ ಸಹಾಯವಾಗುತ್ತದೆ ಎಂಬ ಮಾತನ್ನೂ ಸುದೀಪ್‌ ಈ ವೇಳೆ ಹೇಳಿದರು.

ಸ್ಟಾರ್‌ ವಾರ್‌ ನಡುವೆಯೇ ಜೈಲಿಗೆ ವಿಜಯಲಕ್ಷ್ಮಿ: ದರ್ಶನ್‌ ಜೊತೆ ಚರ್ಚೆ

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್‌ನನ್ನು ಮಂಗಳವಾರ, ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್‌ ತೂಗುದೀಪ ಅವರ ಭೇಟಿ ಮಾಡಿದ್ದಾರೆ. ಸ್ಟಾರ್ ವಾರ್ ನಡುವೆ ನಟ ದರ್ಶನ್‌ ಭೇಟಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್‌ ತೂಗುದೀಪ ಅವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಕೆಲಕಾಲ ದರ್ಶನ್‌ ಅವರ ಬಳಿ ಮಾತನಾಡಿದ್ದಾರೆ. ಈ ವೇಳೆ ಸ್ಟಾರ್ ವಾರ್ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನಂತರ ಜೈಲಿನಿಂದ ಹೊರ ಬಂದ ಅವರು ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.