ನಿರ್ದೇಶಕ ಪ್ರೇಮ್ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ನ ಹೊಸ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಬಿಡುಗಡೆಯನ್ನು ದಸರಾ ಹಬ್ಬದ ನಂತರಕ್ಕೆ ಮುಂದೂಡಲಾಗಿದೆ. ಅಲ್ಲದೆ, ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿಯುವುದಾಗಿ ಪ್ರೇಮ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ನ ‘ಶೋಮ್ಯಾನ್’ ಎಂದೇ ಖ್ಯಾತರಾಗಿರುವ ನಿರ್ದೇಶಕ ಪ್ರೇಮ್ (Director Prem) ಹಾಗೂ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಷನ್ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ‘ದಿ ವಿಲನ್’ ಚಿತ್ರದ ಬಳಿಕ ಈ ಜೋಡಿ ಮತ್ತೊಮ್ಮೆ ಕೈಜೋಡಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದರೆ, ಈ ಬಹುನಿರೀಕ್ಷಿತ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಫ್ಯಾನ್ಸ್ಗೆ ಚಿತ್ರತಂಡ ಸಣ್ಣ ನಿರಾಸೆ ಮೂಡಿಸಿದೆ.
ದಸರಾ ಹಬ್ಬದ ನಂತರವೇ ಕಿಚ್ಚ-ಪ್ರೇಮ್ ಧಮಾಕಾ!
ಅಕ್ಟೋಬರ್ 20 ರಂದು (ನಾಳೆ) ರಿಲೀಸ್ ಆಗಬೇಕಿದ್ದ ಸುದೀಪ್ ಮತ್ತು ಪ್ರೇಮ್ ಕಾಂಬಿನೇಷನ್ನ ಹೊಸ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಅನೌನ್ಸ್ಮೆಂಟ್ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಈ ಕುರಿತು ನಿರ್ದೇಶಕ ಪ್ರೇಮ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀಪ್ ಅವರೊಂದಿಗಿನ ಫೋಟೋ ಹಂಚಿಕೊಂಡು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
'ಎಲ್ಲರಿಗೂ ನಮಸ್ಕಾರ, ಅಕ್ಟೋಬರ್ 20 ರಂದು ನಡೆಯಬೇಕಿದ್ದ PREM'S & KICHCHA SUDEEP ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಅನೌನ್ಸ್ಮೆಂಟ್ ಅನ್ನು ಕಾರಣಾಂತರಗಳಿಂದ ದಸರಾ ಹಬ್ಬದ ನಂತರ ನಿಮ್ಮೆಲ್ಲರ ಮುಂದೆ ತರುತ್ತೇವೆ' ಎಂದು ಪೋಸ್ಟರ್ ಮೂಲಕ ತಿಳಿಸಿದ್ದಾರೆ. ಪೋಸ್ಟರ್ನಲ್ಲಿ 'A NEW WORLD, A NEW CHAPTER, A NEW BEGINNING' (ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ) ಎಂಬ ಅಡಿಬರಹ ನೀಡಲಾಗಿದ್ದು, ಇದು ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಕಥಾವಸ್ತುವಿನ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಹುಟ್ಟುಹಬ್ಬದ ಆಚರಣೆಗೂ ಪ್ರೇಮ್ ಬ್ರೇಕ್: ಮನೆಯಲ್ಲಿ ಸಿಗಲ್ಲ 'ಜೋಗಿ'!
ಇದೇ ವೇಳೆ ಅಕ್ಟೋಬರ್ 22 ರಂದು ನಿರ್ದೇಶಕ ಪ್ರೇಮ್ ಅವರ ಜನ್ಮದಿನವಿದ್ದು, ಈ ಬಾರಿ ಬರ್ತ್ಡೇ ಆಚರಣೆಯಿಂದ ದೂರ ಉಳಿಯುವುದಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 'ಅಲ್ಲದೆ, ನನ್ನ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 22 ರಂದು ನಾನು ಮನೆ ಮತ್ತು ಆಫೀಸ್ನಲ್ಲಿ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ನೀವಿದ್ದಲ್ಲೇ ನನಗೆ ಹಾಗೂ ನಮ್ಮ ಮುಂದಿನ ಚಿತ್ರಕ್ಕೆ ಆಶೀರ್ವದಿಸಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಅವರು 'ಬಿಲ್ಲಾ ರಂಗ ಬಾಶಾ (ಬಿಆರ್ಬಿ) ಹಾಗೂ ಕೃಷ್ಣದೇವರಾಯ' ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾಗಳ ಬಿಡುಗಡೆಗೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರೇಮ್ ನಿರ್ದೇಶನದ ಸಿನಿಮಾದ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ. ದಸರಾ ಹಬ್ಬ ಮುಗಿದ ಕೂಡಲೇ ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ.


