ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ, ಬಾದ್‌ಷಾ ಕಿಚ್ಚ ಸುದೀಪ್‌ ಅವರ ಸಿನಿ ಪಯಣದಲ್ಲಿ ಜುಲೈ 6 ವಿಶೇಷ ಸ್ಥಾನ ಹೊಂದಿದೆ. ಅವರ ಸಿನಿ ಪಯಣಕ್ಕೆ ಹೊಸ ತಿರುವು ನೀಡಿದ 'ಹುಚ್ಚ' ಚಿತ್ರಕ್ಕೆ 25 ವರ್ಷಗಳು ಪೂರ್ಣಗೊಂಡಿದೆ.

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ, ಬಾದ್‌ಷಾ ಕಿಚ್ಚ ಸುದೀಪ್ ಅವರ ಸಿನಿ ಪಯಣದಲ್ಲಿ ಜುಲೈ 6 ವಿಶೇಷ ಸ್ಥಾನ ಹೊಂದಿದೆ. ಅವರ ಸಿನಿ ಪಯಣಕ್ಕೆ ಹೊಸ ತಿರುವು ನೀಡಿದ 'ಹುಚ್ಚ' ಚಿತ್ರಕ್ಕೆ 25 ವರ್ಷಗಳು ಪೂರ್ಣಗೊಂಡಿದ್ದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ಗುರುತನ್ನು ತಂದುಕೊಟ್ಟ 'ಈಗ' ಸಿನಿಮಾ ಬಿಡುಗಡೆಯಾಗಿ 14 ವರ್ಷಗಳು ಕಳೆದಿವೆ. ಈ ಅಪರೂಪದ ಕ್ಷಣವನ್ನು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ನೆನೆದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಶೇಷ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, "ಈ ಎರಡು ಮರೆಯಲಾಗದ ರತ್ನಗಳನ್ನು ನನಗೆ ಉಡುಗೊರೆಯಾಗಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅವು ನನ್ನ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಿನಿತಾರೆಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

1997ರಲ್ಲಿ 'ತಾಯವ್ವ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುದೀಪ್, ಆರಂಭದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ, 2000ರಲ್ಲಿ ಬಿಡುಗಡೆಯಾದ 'ಸ್ಪರ್ಶ' ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡರು. ಆದರೆ ಅವರನ್ನು ಸ್ಟಾರ್ ನಟನನ್ನಾಗಿ ರೂಪಿಸಿದ ಸಿನಿಮಾ ಎಂದರೆ 2001ರ ಜುಲೈ 6ರಂದು ಬಿಡುಗಡೆಯಾದ 'ಹುಚ್ಚ'. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಜಿಂಕೆಮರಿ ರೇಖಾ ವೇದವ್ಯಾಸ್ ನಾಯಕಿಯಾಗಿ ನಟಿಸಿದ್ದು, ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಯಶಸ್ಸು ದಾಖಲಿಸಿ ಸುದೀಪ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತು.

'ಹುಚ್ಚ' ಬಳಿಕ ಸುದೀಪ್ ಹಿಂದಿರುಗಿ ನೋಡಲೇ ಇಲ್ಲ. 'ನಂದಿ', 'ಕಿಚ್ಚ', 'ಸ್ವಾತಿ ಮುತ್ತು', 'ಮೈ ಆಟೋಗ್ರಾಫ್', 'ಮುಸ್ಸಂಜೆ ಮಾತು', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ವಿಷ್ಣುವರ್ಧನ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಅಗ್ರ ನಟರಾಗಿ ಬೆಳೆದರು. ಅದೇ ಯಶಸ್ಸು ಅವರನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಳಿಗೂ ಕರೆದೊಯ್ದಿತು. 2012ರ ಜುಲೈ 6ರಂದು ಬಿಡುಗಡೆಯಾದ 'ಈಗ' ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ಅಬ್ಬರಿಸಿದ್ದು, ಅವರ ಅಭಿನಯ ರಾಷ್ಟ್ರಮಟ್ಟದಲ್ಲಿ ಭಾರೀ ಮೆಚ್ಚುಗೆ ಗಳಿಸಿತು.

ಭಾವನಾತ್ಮಕ ಅಧ್ಯಾಯ

ಈ ಸಿನಿಮಾ ಅವರ ಪ್ಯಾನ್ ಇಂಡಿಯಾ ಜನಪ್ರಿಯತೆಗೆ ಭದ್ರ ಅಡಿಪಾಯ ಹಾಕಿದ ಚಿತ್ರವಾಗಿ ಇಂದಿಗೂ ನೆನಪಾಗುತ್ತದೆ. ಹೀಗಾಗಿ ಜುಲೈ 6 ಎಂಬ ದಿನ ಕಿಚ್ಚ ಸುದೀಪ್ ಅವರ ಸಿನಿ ಬದುಕಿನಲ್ಲಿ ಕೇವಲ ಒಂದು ದಿನಾಂಕವಲ್ಲ; ಅದು ಎರಡು ಐತಿಹಾಸಿಕ ಮೈಲಿಗಲ್ಲುಗಳನ್ನು ನೆನಪಿಸುವ ಭಾವನಾತ್ಮಕ ಅಧ್ಯಾಯ. ಒಂದೆಡೆ ಅವರನ್ನು ಕನ್ನಡದ ಸ್ಟಾರ್ ಆಗಿ ರೂಪಿಸಿದ 'ಹುಚ್ಚ', ಮತ್ತೊಂದೆಡೆ ದೇಶಾದ್ಯಂತ ಗುರುತಿಸಿಕೊಂಡ ನಟನನ್ನಾಗಿ ಮಾಡಿದ 'ಈಗ', ಈ ಎರಡೂ ಸಿನಿಮಾಗಳು ಅವರ ಸಿನಿ ಪಯಣದ ಅಮೂಲ್ಯ ಅಧ್ಯಾಯಗಳಾಗಿ ಉಳಿದಿವೆ.