Billa Ranga Baashaa: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಚಿತ್ರೀಕರಣ ಮತ್ತೆ ವೇಗ ಪಡೆದುಕೊಂಡಿದೆ. ಮೊದಲ ಶೆಡ್ಯೂಲ್ ಬಳಿಕ ಕೆಲ ತಿಂಗಳ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ.

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಚಿತ್ರೀಕರಣ ಮತ್ತೆ ವೇಗ ಪಡೆದುಕೊಂಡಿದೆ. ಮೊದಲ ಶೆಡ್ಯೂಲ್ ಬಳಿಕ ಕೆಲ ತಿಂಗಳ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ, ಇದೀಗ ಎರಡನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಚಿತ್ರದ ಶೂಟಿಂಗ್ ಮತ್ತು ಬಿಡುಗಡೆ ಕುರಿತಂತೆ ನಿರ್ಮಾಪಕ ನಿರಂಜನ್ ರೆಡ್ಡಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಶೆಡ್ಯೂಲ್ ಪೂರ್ಣಗೊಂಡ ಬಳಿಕ ಚಿತ್ರದ ಒಟ್ಟು ಶೇಕಡಾ 40ರಷ್ಟು ಚಿತ್ರೀಕರಣ ಮುಗಿಯಲಿದೆ ಎಂದು ಅವರು ತಿಳಿಸಿದ್ದಾರೆ. ಉಳಿದ ಭಾಗದ ಚಿತ್ರೀಕರಣವನ್ನು ಇದೇ ವರ್ಷದ ಡಿಸೆಂಬರ್ ಅಥವಾ 2027ರ ಜನವರಿಯೊಳಗೆ ಪೂರ್ಣಗೊಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಚಿತ್ರೀಕರಣ ಮುಗಿದ ನಂತರ ಚಿತ್ರವು ದೀರ್ಘ ಪೋಸ್ಟ್-ಪ್ರೊಡಕ್ಷನ್ ಹಂತವನ್ನು ಪ್ರವೇಶಿಸಲಿದೆ. ಚಿತ್ರದಲ್ಲಿ ಸುಮಾರು 90 ಶೇಕಡಾ ಸಿಜಿಐ (CGI) ಮತ್ತು ವಿಎಫ್‌ಎಕ್ಸ್ (VFX) ಬಳಕೆಯಾಗುತ್ತಿರುವುದರಿಂದ ದೃಶ್ಯ ಪರಿಣಾಮಗಳ ಕೆಲಸಕ್ಕೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ದೃಶ್ಯ ಅನುಭವ ನೀಡುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ವಿಶ್ವದಾದ್ಯಂತ ಬಿಡುಗಡೆ ಮಾಡುವ ಉದ್ದೇಶ

ಸದ್ಯದ ಯೋಜನೆಯಂತೆ 2027ರ ಅಕ್ಟೋಬರ್‌ನಲ್ಲಿ 'ಬಿಲ್ಲ ರಂಗ ಭಾಷಾ' ಚಿತ್ರವನ್ನು ಅದ್ದೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದಾಗಿದೆ. ಆದರೆ, ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಪ್ರಗತಿಯನ್ನು ಅವಲಂಬಿಸಿ ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.

ಇನ್ನು 'ವಿಕ್ರಾಂತ್ ರೋಣ' ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಮತ್ತೊಮ್ಮೆ ಕೈಜೋಡಿಸಿರುವ ಈ ಫ್ಯಾಂಟಸಿ ಸಾಹಸ ಚಿತ್ರ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಭವ್ಯ ತಾಂತ್ರಿಕತೆ, ವಿಭಿನ್ನ ಕಥಾಹಂದರ ಮತ್ತು ಸುದೀಪ್ ಅವರ ಹೊಸ ಅವತಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.